Saturday, 5th October 2024

ಗಜಾನನ ಗ್ಯಾಂಗ್ ಜತೆ ಅಭಿಷೇಕ್‌ ಶೆಟ್ಟಿ

ಪ್ರಶಾಂತ್‌ ಟಿ.ಆರ್‌

ವಿ.ಸಿ : ಏನಿದು ಗಜಾನನ ಗ್ಯಾಂಗ್ ? ಇದು ಭೂಗತ ಜಗತ್ತಿನ ಸುತ್ತಲಿನ ಕಥೆಯೇ?
ಅಭಿಷೇಕ್ ಶೆಟ್ಟಿ : ಶೀರ್ಷಿಕೆ ಕೇಳದಾಕ್ಷಣ ಎಲ್ಲರೂ ಹೀಗೆ ಅಂದುಕೊಳ್ಳುತ್ತಾರೆ. ಚಿತ್ರದಲ್ಲಿ ಭೂಗತ ಲೋಕದ ಕಥೆ ಇಲ್ಲ. ಲಾಂಗ್ ಮಚ್ಚುಗಳ ಅಬ್ಬರವೂ ಇಲ್ಲಿಲ್ಲ. ಈ ಚಿತ್ರ ಎರಡು ಕಾಲಘಟ್ಟದಲ್ಲಿ ಸಾಗುತ್ತದೆ. ಕಾಲೇಜು ಜೀವನ ತೆರೆಯಲ್ಲಿ ಹಾದು ಹೋಗುತ್ತದೆ. ಅಲ್ಲಿ ಬರುವ ಸ್ನೇಹಿತರು, ರಾಜಕೀಯ, ರೌಡಿಗಳ ನಂಟು ಹೀಗೆ ಕಾಲೇಜಿನಲ್ಲಿ ಕಾಣುವ ಎಲ್ಲಾ ಅಂಶಗಳು ಚಿತ್ರದ ಕಥೆಯಲ್ಲಿ ಅಡಕವಾಗಿದೆ. ಇದರ ಜತೆಗೆ ಚಿತ್ರದ ನಾಯಕ ಗಜಾನನ, ಆಗಷ್ಟೇ ಕಾಲೇಜು ಮುಗಿಸಿದ ಯುವಕ. ಆತ ಹುಡುಗಾಟ ಮರೆತು ಮುಂದಿನ ಜೀವನವನ್ನು ಕಟ್ಟಿಕೊಳ್ಳಲು ಹೇಗೆಲ್ಲ ಶ್ರಮಿಸುತ್ತಾನೆ. ಉತ್ತಮ ಜೀವನ ರೂಪಿಸಿಕೊಳ್ಳಲು ಆತ ಕಂಡುಕೊಳ್ಳುವ ಮಾರ್ಗ ಯಾವುದು ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ.

ವಿ.ಸಿ : ಕಾಲೇಜು ಕಥೆಗಷ್ಟೇ ಸಿನಿಮಾ ಸೀಮಿತವಾಗಿದೆಯೇ ?

ಅಭಿಷೇಕ್ : ಖಂಡಿತಾ ಇಲ್ಲ. ಕಾಲೇಜು ಕಥೆಯ ಜತೆಗೆ ಕೌಟುಂಬಿಕ ಕಥೆಯೂ ಚಿತ್ರದಲ್ಲಿದೆ. ಇಂದಿನ ಯುವ ಪೀಳಿಗೆ ಹುಡುಗಾಟ ಮರೆತು, ತಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು, ಸಮಾಜದಲ್ಲಿ ಹೇಗೆ ಮಾದರಿ ವ್ಯಕ್ತಿಯಾಗಬೇಕು ಎಂಬ ಸಂದೇಶವನ್ನು ಸಾರುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ನಿಜವಾಗಿಯೂ ಹೇಳಬೇಕಾದರೆ ನೈಜತೆಗೆ , ಕಾಲ್ಪನಿಕತೆಯ ಸ್ಪರ್ಶ ನೀಡಲಾಗಿದೆ. ಚಿತ್ರ ನೋಡುತ್ತಿದ್ದರೆ, ನಾವು ಕಳೆದ ಕಾಲೇಜು ಜೀವನ ಮತ್ತೆ ನೆನಪಾಗು ತ್ತದೆ.

ವಿ.ಸಿ : ಗಜಾನನ ಗ್ಯಾಂಗ್‌ನ ಕಥೆ ಹುಟ್ಟಿದ್ದು ಹೇಗೆ ?
ಅಭಿಷೇಕ್ : ಪ್ರತಿಯೊಬ್ಬರಿಗೂ ಕಾಲೇಜು ಜೀವನ ಗೋಲ್ಡನ್ ಡೇಸ್ ಅಂತ ಹೇಳಬಹುದು. ಅಂತೆಯೇ ನನಗೂ ಕಾಲೇಜು ಜೀವನ ಅಚ್ಚುಮೆಚ್ಚು. ಕಾಲೇಜಿನಲ್ಲಿ ನಮ್ಮದು ಒಂದು ತಂಡವಿತ್ತು. ಎಲ್ಲರೂ ಪ್ರತಿದಿನ ಒಟ್ಟಿಗೆ ಸೇರುತ್ತಿದ್ದವು. ಹೊಸ ಹೊಸ ವಿಚಾರಗಳನ್ನು ಚರ್ಚಿಸುತ್ತಿದ್ದೆವು. ಕಾಲೇಜು ವ್ಯಾಸಾಂಗ ಪೂರ್ಣಗೊಂಡ ಮೇಲು ನಮ್ಮ ಸ್ನೇಹಿತರ ಬಳಗ ಹೀಗೆ ಇರುತ್ತದೆ ಎಂಬ ಆಸೆ ನಮ್ಮಲ್ಲಿತ್ತು.

ಕಾಲೇಜು ಮುಗಿಸಿದ ಮೇಲೆ ಪ್ರತಿಯೊಬ್ಬರಿಗೂ ಅವರವರ ಜವಾಬ್ದಾರಿಯ ಅರಿವಾಯಿತು. ಹಾಗಾಗಿ ಎಲ್ಲರೂ ಕೆಲಸಗಳಲ್ಲಿ ಬ್ಯುಸಿಯಾದರು, ಹಾಗಾಗಿ ಸಂಬಂಧಗಳೇ ಮರೆತೆವು. ಇದೆಲ್ಲವನ್ನು ಗಮನಿಸಿದ ನಾನು ಇಂತಹ ಅಂಶಗಳನ್ನು ಹೆಣೆದು ಯಾಕೆ ಚಿತ್ರ ನಿರ್ದೇಶನ ಮಾಡಬಾರದು ಎಂದುಕೊಂಡೆ.
ಅಂತೆಯೇ ಕಥೆ ಬರೆದೆ, ಅಂದುಕೊಂಡಂತೆ ಚಿತ್ರವೂ ಸಿದ್ಧವಾಗಿದೆ, ಕೆಲವೇ ದಿನಗಳಲ್ಲಿ ತೆರೆಗೂ ಬರಲಿದೆ.

ವಿ.ಸಿ : ಚಿತ್ರದ ತಾರಾಗಣದ ಬಗ್ಗೆ ಹೇಳುವುದಾದರೆ ?
ಅಭಿಷೇಕ್ : ನಾನು ಕೂಡ ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿದ್ದೇನೆ. ಅದಿತಿ ಪ್ರಭುದೇವ ನಾಯಕಿ ಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿಗ್‌ಬಾಸ್ ಖ್ಯಾತಿಯ ರಘು ವೈನ್ ಸ್ಟೋರ್, ಬ್ರೋ ಗೌಡ ರಘು ರಾಮನಕೊಪ್ಪ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಮಂಗಳೂರು, ತೀರ್ಥ ಹಳ್ಳಿಯ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮುಗಿಸಿದ್ದೇವೆ. ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಸಿದೆವು. ಅಂದುಕೊಂಡಂತೆ ಚಿತ್ರ ಮೂಡಿ ಬಂದಿದೆ.

ವಿ.ಸಿ : ಚಿತ್ರದ ಬಿಡುಗಡೆ ಯಾವಾಗ ? 
ಅಭಿಷೇಕ್ : ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರಬೇಕು ಎಂದುಕೊಂಡಿದ್ದೇವೆ. ಈಗಾಗಲೇ ಚಿತ್ರೀಕರಣವೂ ಮುಗಿದಿದೆ. ಮುಂದಿನ ತಿಂಗಳು ಸೆನ್ಸಾರ್ ಆಗಲಿದೆ ಆ ಬಳಿಕ ರಿಲೀಸ್ ದಿನಾಂಕ ಘೋಷಿಸಲಿದ್ದೇವೆ.