Wednesday, 11th December 2024

ರೆಟ್ರೋ ಲುಕ್‌ನಲ್ಲಿ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ ಅದ್ವಿತಿ ಶೆಟ್ಟಿ

ಪ್ರಶಾಂತ್‌ ಟಿ.ಆರ್‌

ಕಿರುತೆರೆಯಲ್ಲಿ ಕಂಡ ಎರಡು ಕನಸಿನಲ್ಲಿ ಡಾಕ್ಟರ್ ಆಗಿ ಮಿಂಚಿ, ಅಜ್ಜಿಯ ಕನಸು ಈಡೇರಿಸಿದ ಕರಾವಳಿ ಬೆಡಗಿ ಅದ್ವಿತಿ ಶೆಟ್ಟಿ, ಈಗ ರೆಟ್ರೋ ಲುಕ್‌ನಲ್ಲಿ ಎಂಟ್ರಿಕೊಡಲು ರೆಡಿಯಾಗಿದ್ದಾರೆ. ಜತೆಗೆ ಐರಾವನ್ ರಾಣಿಯಾಗಿಯೂ ಬೆಳ್ಳಿತೆರೆಯಲ್ಲಿ ರಾರಾಜಿಸಲು ಸಜ್ಜಾಗಿದ್ದಾರೆ. ಇವೆಲ್ಲದರ ಜತೆಗೆ ನಿಗೂಢತೆಯನ್ನು ಬೆನ್ನಟ್ಟಿ ಅದನ್ನು ಭೇಧಿಸಲು ಕಂಕಣತೊಟ್ಟಿದ್ದಾರೆ.

ಕಾರ್ಮೋಡ ಸರಿದು ಚಿತ್ರದಲ್ಲಿ ಸೋಲೋ ನಾಯಕಿಯಾಗಿ ನಟನೆಯ ಮೂಲಕವೇ ಗಮನಸೆಳೆದ ಅದ್ವಿತಿ ಶೆಟ್ಟಿ, ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಎಂತಹ ಪಾತ್ರಗಳನ್ನು ನೀಡಿದರೂ ಒಲ್ಲೆ ಎನ್ನದೆ ಪಾತ್ರಕ್ಕೆ ಜೀವತುಂಬುವ ಅದ್ವಿತಿ, ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹಿರಿತೆರೆಯ ಜತೆಗೆ ಕಿರುಚಿತ್ರಗಳಲ್ಲಿಯೂ
ನಟಿಸಿರುವ ಅದ್ವಿತಿ ಶೆಟ್ಟಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಾಲೇಜು ಕಥೆಯಲ್ಲಿ ಕರಾವಳಿ ಬೆಡಗಿ ಅದ್ವಿತಿ ಶೆಟ್ಟಿ ಸದ್ಯ ಕ್ಯಾಡ್ಬರಿಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕ್ಯಾಡ್ಬರಿಸ್ 1980ರ ಕಾಲ ಘಟ್ಟದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ಅದ್ವಿತಿ ಕಾಲೇಜು ಹುಡುಗಿಯಾಗಿ, ಕೆಲಸಕ್ಕೆ ಅರಸುವ ಯುವತಿಯಾಗಿ ಹೀಗೆ ಎರಡು ಶೇಡ್‌ನಲ್ಲಿ ಮಿಂಚಿದ್ದಾರೆ. ಚಿತ್ರದ ಶೀರ್ಷಿಕೆಯಂತೆಯೇ ಒಳ್ಳೆಯ ಪ್ರೇಮ ಕಥೆಯೂ ಚಿತ್ರದಲ್ಲಿದೆ. ರೆಟ್ರೋ ಸ್ಟೈಲ್ ನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ವೇಷಭೂಷಣವೇ ಹೆಚ್ಚು ಗಮನ ಸೆಳೆದಿದೆಯಂತೆ.

ಅಂದಿನ ಕಾಲಘಟ್ಟದಲ್ಲಿ ಇದ್ದಂತೆ ಪಡ್ಡೆ ಹುಡುಗರ ಹುಡುಗಾಟ. ಲುಕ್, ಲೊಕೇಷನ್ ಹೀಗೆ ಎಲ್ಲವೂ ಚಿತ್ರದಲ್ಲಿದ್ದು, ಹಳೆಯ ಸೊಬಗನ್ನು ತಂದುಕೊಡಲಿದೆಯಂತೆ. ಈ ಚಿತ್ರದ ಕಥೆ ನನಗೆ ಬಲು ಮೆಚ್ಚುಗೆಯಾಗಿದೆ. ಹಾಗಾಗಿ ಕ್ಯಾಡ್ಬರಿಸ್ ನನ್ನ ವೃತ್ತಿ ಯಲ್ಲಿಯೇ ಮೆಚ್ಚುಗೆಯಾದ ಚಿತ್ರ ಎನ್ನುತ್ತಾರೆ ಅದ್ವಿತಿ.

ಐರಾವನ್‌ನ ರಾಣಿ ಅದ್ವಿತಿ
ಕನ್ನಡ ಚಿತ್ರರಂಗದಲ್ಲಿ ಬಹುನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಐರಾವನ್ ಕೂಡ ಒಂದು. ಟೈಟಲ್‌ನಲ್ಲೇ ಚಿತ್ರ ಕುತೂಹಲ ಕೆರಳಿಸಿದೆ. ಅಂತೆಯೇ ಕಥೆಯೂ ಕೂಡ ಗಟ್ಟಿಯಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನ ಈ ಚಿತ್ರದಲ್ಲಿ ಅದ್ವಿತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ತ್ರಿಕೋನ ಪ್ರೇಮ ಕಥೆಯ ಚಿತ್ರವಾಗಿದ್ದು, ಜೆಕೆ ಹಾಗೂ ವಿವೇಕ್ ಇಬ್ಬರಿಗೂ ಜೋಡಿಯಾಗಿ ಅದ್ವಿತಿ ನಟಿಸಿದ್ದಾರೆ. ಸಮಾಜಮುಖಿ ಕಾಯಕದಲ್ಲೇ ಗಮನಹರಿಸುವ ಯುವತಿಯಾಗಿ ಗಮನಸೆಳೆಯುತ್ತಾರೆ. ಜತೆಗೆ ಗ್ಲಾಮರ್ ಬೊಂಬೆ ಯಾಗಿಯೂ ಕಂಗೊಳಿಸುತ್ತಾರೆ. ಐರಾವನ್ ನನಗೆ ಮೆಚ್ಚುಗೆಯಾದ ಚಿತ್ರ, ಸಿನಿಮಾವನ್ನು ನಾನು ಕಣ್ತುಂಬಿಕೊಳ್ಳಲು ಕಾಯು ತ್ತಿದ್ದೇನೆ. ಈ ಚಿತ್ರ ನನಗೆ ದೊಡ್ಡ ಬ್ರೇಕ್ ನೀಡುವ ವಿಶ್ವಾಸವಿದೆ ಎಂದು ಸಂತಸದಿಂದಲೇ ನುಡಿಯುತ್ತಾರೆ ಅದ್ವಿತಿ.

ನಿಗೂಢತೆ ಭೇದಿಸಲು ಬಂದ ವೈದ್ಯೆ
ಇನ್ನು ಡಾ.ಅಭಿ ೦೦೭ ಚಿತ್ರದಲ್ಲಿಯೂ ಅದ್ವಿತಿ ಮುಖ್ಯ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಸೈಟಿಫಿಕ್ ಥ್ರಿಲ್ಲರ್ ಸಿನಿಮಾವಾಗಿದ್ದು, ಸಮಾಜದಲ್ಲಿ ಎದುರಾಗುವ ಸವಾಲು ಹಾಗೂ ಕಾಡುವ ನಿಗೂಢತೆಯನ್ನು ಭೇಽಸುವ ಪಾತ್ರದಲ್ಲಿ ವೈದ್ಯೆಯಾಗಿ ಅಭಿನಯಿಸಿದ್ದಾರೆ.

ಇದರ ಜತೆಗೆ ಧೀರ ಸಾಮ್ರಾಟ ಚಿತ್ರದಲ್ಲಿಯೂ ಅದ್ವಿತಿ ಅಭಿನಯಿಸುತ್ತಿದ್ದಾರೆ. ಇದು ಆಕ್ಷನ್ ಚಿತ್ರವಾಗಿದ್ದು, ಅದ್ವಿತಿ ಪಾತ್ರ ಏನು ಎಂಬುದನ್ನು ಬಹಿರಂಗಪಡಿಸಿಲ್ಲ. ಇನ್ನು ಪರಭಾಷೆಯ ಚಿತ್ರಗಳಲ್ಲೂ ಅದ್ವಿತಿಗೆ ಅವಕಾಶಗಳು ಬರುತ್ತಿವೆ. ಆದರೆ ಸದ್ಯ ಕನ್ನಡದ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿರುವ ಅದ್ವಿತಿ, ಒಪ್ಪಿಕೊಂಡಿರುವ ಚಿತ್ರಗಳ ಚಿತ್ರೀಕರಣ ಮುಗಿಸಿ ಬಳಿಕ ಪರಭಾಷಾ ಚಿತ್ರ ಗಳತ್ತ ಗಮನಹರಿಸುವುದಾಗಿ ಹೇಳುತ್ತಾರೆ.

ಐತಿಹಾಸಿಕ ಪಾತ್ರಗಳೇ ನನಗಿಷ್ಟ
ವಿಭಿನ್ನ ಪಾತ್ರಗಳಲ್ಲಿ ಮಿಂಚಿರುವ ಅದ್ವಿತಿ ಶೆಟ್ಟಿಗೆ ಐತಿಹಾಸಿಕ ಪಾತ್ರಗಳಲ್ಲಿ ಬಣ್ಣಹಚ್ಚಬೇಕು ಎಂಬ ಆಸೆಯಿದೆ. ಈ ಹಿಂದೆ ಮಹಾನ್ ಹುತಾತ್ಮ ಕಿರುಚಿತ್ರದಲ್ಲಿ ದುರ್ಗಾ ಬಾಬಿಯಾಗಿ ಬಣ್ಣಹಚ್ಚಿದ್ದ ಇವರಿಗೆ ಅಂತಹ ಪಾತ್ರಗಳ ಮೂಲಕ ಹಿರಿತೆರೆ ಯಲ್ಲಿಯೂ ಕಾಣಿಸಿಕೊಳ್ಳಬೇಕು ಎಂಬ ಮಹದಾಸೆಯಿದೆ.

ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಇದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡುವ ಮೂಲಕ ಜನರಲ್ಲಿ ಕರೋನಾ ಜಾಗೃತಿ ಮೂಡಿಸುತ್ತಿದ್ದೇನೆ. ಜತೆಗೆ ಮಾಸಿಕ ಸ್ಥೈರ್ಯ ಹೆಚ್ಚಿಸಿಕೊಳ್ಳಲು, ಯೋಗ, ವ್ಯಾಯಾಮ ಮಾಡುತ್ತಿದ್ದೇನೆ. ಪುಸ್ತಕಗಳನ್ನು ಓದುವ, ಸಿನಿಮಾಗಳನ್ನು ನೋಡುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಿ ಕೊಳ್ಳು ತ್ತಿದ್ದೇನೆ. ಜತೆಗೆ ನಟನೆಯತ್ತಲೂ ಹೆಚ್ಚು ಆಸಕ್ತಿ ತಳೆದಿದ್ದೇನೆ.