Friday, 13th December 2024

ವಯಸ್ಸು ಎಂಬತ್ತು ಆದರೇನು ! ಸಾಧನೆಗೆ ಆಗಲಿಲ್ಲ ತೊಡಕು

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಬಹಳ ಜನರ ಮನಸ್ಸಿನಲ್ಲಿರುತ್ತದೆ. ಆದರೆ ಬಹುಪಾಲು ಜನರಲ್ಲಿ ಅದು ಕನಸಿನ ಮಟ್ಟದಲ್ಲೇ ಉಳಿದುಬಿಡುತ್ತದೆ. ಏನೇನೋ ನೆಪ ಹೇಳಿ, ಹೆಚ್ಚಿನ ಪರಿಶ್ರಮ ಹಾಕಲು ಹಿಂಜರಿ ಯುವವರೇ ನಮ್ಮ ಸುತ್ತಲೂ ಇದ್ದಾರೆ. ಅಂತಹವರು ಈ ಹಿರಿಯ ಮಹಿಳೆಯ ಸಾಧನೆಯನ್ನು ನೋಡಬೇಕು. ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ಸಾಕಷ್ಟು ಅಧ್ಯಯನ ನಡೆಸಿ, ಪಿಎಚ್‌ಡಿ ಪದವಿ ಪಡೆದ ಇವರ ಸಾಧನೆ ಎಲ್ಲರಲ್ಲೂ ಸ್ಫೂರ್ತಿ ತುಂಬಲಿ.

ಸುರೇಶ ಗುದಗನವರ

ದಿನನಿತ್ಯದ ಜೀವನದಲ್ಲಿ ಅನೇಕರು ಅದೇನೋ ಕಾರಣದಿಂದ ಉತ್ಸಾಹ ಕಳೆದುಕೊಳ್ಳುವ ಸಂದರ್ಭ ಬರಬಹುದು. ಆ ರೀತಿ ಬೇಸರಗೊಳ್ಳಲು ಕಾರಣಗಳೂ ಇರಬಹುದು. ‘ನಮಗೆ ವಯಸ್ಸಾಯಿತು. ಇನ್ನೆಲ್ಲಿಯ ಉತ್ಸಾಹ’ ಎಂದು ಕೊರಗುತ್ತಿರುತ್ತಾರೆ. ನಾವು ಮಾಡುವ ಕೆಲಸದಲ್ಲಿ ಉತ್ಸಾಹವಿದ್ದರೆ ವಯಸ್ಸು ಅನ್ನೋದು ಲೆಕ್ಕಕ್ಕೆ ಬರೋದಿಲ್ಲ ಎಂದು ಹಿರಿಯರು ಹೇಳುತ್ತಾರೆ.

ಕಲಿಯೋಕೆ ವಯಸ್ಸಿನ ಹಂಗಿಲ್ಲ ಮತ್ತು ಕಲಿಕೆ ಎನ್ನುವುದು ಸಮುದ್ರದಂತೆ. ಅದಕ್ಕೆ ಕೊನೆಯೇ ಇಲ್ಲ ಎನ್ನುವ ಮಾತುಗಳನ್ನು ಅಕ್ಷರಶಃ ನಿಜ ಮಾಡಿ, ತಮ್ಮ ಎಂಭತ್ತನೇ ವಯಸ್ಸಿನಲ್ಲಿ ಪಿಎಚ್.ಡಿ ಪಡೆದು ಅಚ್ಚರಿ ಮೂಡಿಸಿದ್ದಾರೆ. ಅವರೆ ಉಜ್ಜಯಿನಿಯ ಶಶಿಕಲಾ ರಾವಲ್.

ಮೂಲತಃ ಉತ್ತರಪ್ರದೇಶದ ಉಜ್ಜಯಿನಿಯವರಾದ ಶಶಿಕಲಾ ರಾವಲ್ ಅವರು ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು. ಅವರು ನಿವೃತ್ತಿಯಾದ ನಂತರವೂ ತಮ್ಮ ಕಲಿಕೆಯನ್ನು ಮುಂದುವರೆಸಿದರು. ಈ ಹಿಂದೆ 2009ರಿಂದ 2011ರವರೆಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದು ಕೆಲವರನ್ನು ಬೆರಗುಗೊಳಿಸಿದ್ದರು. ಈಗ ಅವರು
ಪಡೆದಿರುವ ಪಿಎಚ್.ಡಿ. ಪದವೀಧರ ಎಂದರೆ ಅದೊಂದು ಗೌರವ. ಶಶಿಕಲಾರವರು ತಮ್ಮ ಅಧ್ಯಯನವನ್ನು ಮುಂದುವರೆಸಿ, ವರಹಮಿಹಿರ ಅವರ ಜ್ಯೋತಿಷ್ಯಶಾಸ್ತ್ರದ ಗ್ರಂಥವಾದ ಬೃಹತ್ ಸಂಹಿತಾ ಹಿನ್ನೆೆಲೆಯಲ್ಲಿ ಸಾಮಾಜಿಕ ಜೀವನ ಕುರಿತು ಸಂಸ್ಕೃತ ದಲ್ಲಿ ಪಿಎಚ್.ಡಿ. ಮಾಡಲು ಆರಂಭಿಸಿದರು. ಆ ಕುರಿತು ಸಾಕಷ್ಟು ಶ್ರಮ, ಅಧ್ಯಯನ ಮಾಡಿದರು.

ಅಗತ್ಯ ಎನಿಸುವ ಅಧ್ಯಯನ ನಡೆಸಿ, ತಮ್ಮ ಪ್ರಬಂಧ ಸಿದ್ಧಪಡಿಸಿದರು. ಕೊನೆಗೂ, ಅವರ ಪರಿಶ್ರಮಕ್ಕೆ ತಕ್ಕ ಫಲ ದೊರಕಿತು. ಅವರು 2019ರಲ್ಲಿ ವಿಕ್ರಮ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಪೂರ್ಣಗೊಳಿಸಿದರು. ಮಹರ್ಷಿ ಪಾಣಿನಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮಿಥಿಲಾ ಪ್ರಸಾದ ತ್ರಿಪಾಠಿ ಶಶಿಕಲಾ ಅವರಿಗೆ ಪಿಹೆಚ್.ಡಿ. ಮಾರ್ಗದರ್ಶಕರಾಗಿದ್ದಾರೆ.

ವಿಶ್ವದಲ್ಲೇ ವಿರಳ
ವಿಕ್ರಮ್ ವಿಶ್ವವಿದ್ಯಾಲಯದ 24ನೆಯ ಸಮ್ಮೇಳನದ ಸಮಾರಂಭದಲ್ಲಿ 80ನೆಯ ವಯಸ್ಸಿಗೆ ಸಂಸ್ಕೃತದಲ್ಲಿ ಪಿಹೆಚ್.ಡಿ. ಪದವಿ
ಪಡೆದ ಶಶಿಕಲಾ ರಾವಲ್ ಅವರನ್ನು ಮಧ್ಯಪ್ರದೇಶ ಗವರ್ನರ್ ಆನಂದಿಬೆನ್ ಪಟೇಲ್ ಅವರು ಡಾಕ್ಟರೇಟ್ ಪದವಿ ಪ್ರಧಾನ
ಮಾಡಿ ಗೌರವಿಸಿದರು. ಎಂಭತ್ತರ ವಯಸ್ಸಿನಲ್ಲಿ ಕಠಿಣ ಪರಿಶ್ರಮದಿಂದ ನೀವು ಪದವಿ ಪಡೆದುಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾದರಿಯಾಗಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ಲದೇ ಉಪಕುಲಪತಿ ಪ್ರೊ. ಅಖಿಲೇಶ್ ಕುಮಾರ ಪಾಂಡೆ, ಉನ್ನತ ಶಿಕ್ಷಣ ಸಚಿವ ಡಾ.ಯಾದವ, ವಿಶ್ವವಿದ್ಯಾಲಯ ಧನ
ಸಹಾಯ ಆಯೋಗದ ಅಧ್ಯಕ್ಷ ಡಿ.ಪಿ.ಸಿಂಗ್ ಶಶಿಕಲಾರವರ ಸಾಧನೆಯನ್ನು ಶ್ಲಾಘಿಸಿದರು. ಈ ಸಮ್ಮೇಳನದಲ್ಲಿ ಒಟ್ಟು 342 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲ್ಲದೇ 239 ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪ್ರಧಾನ ಮಾಡಲಾಯಿತು. ಅದರಲ್ಲಿ ವಿಶೇಷ ಎಂದರೆ, ಡಾ.ಶಶಿಕಲಾ ರಾವಲ್ ಅವರು. ಎಂಬತ್ತನೆಯ ವಯಸ್ಸಿನಲ್ಲಿ ಅಧ್ಯಯನಕ್ಕೆ ತೊಡಗಿಸಿಕೊಂಡು, ಪ್ರಬಂಧ ಸಿದ್ಧಪಡಿಸಿ, ಪಿಎಚ್.ಡಿ. ಪಡೆದವರು ವಿಶ್ವದಲ್ಲೇ ವಿರಳ.

‘ಹೆಚ್ಚಿನ ಜನರು ನಿವೃತ್ತರಾದ ನಂತರ, ತಮ್ಮ ಜೀವನದಲ್ಲಿ ಒಂದು ನೆಲೆ ಕಂಡುಕೊಂಡು, ವಿಶ್ರಾಂತಿ ಪಡೆಯಲು ಬಯಸುವ ವಯಸ್ಸಿನಲ್ಲಿ ನೀವ್ಯಾಕೆ ಪಿಎಚ್.ಡಿ. ಮಾಡೋಕೆ ಬಯಸಿದ್ದಿರಿ?’ ಎನ್ನುವ ಪ್ರಶ್ನೆಗೆ, ‘ನನಗೆ ಯಾವಗಲೂ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ. ಜ್ಯೋತಿಷ್ಯ ನನ್ನ ಇಷ್ಟದ ವಿಷಯ. ಹೀಗಾಗಿಯೇ ನಾನು ಜ್ಯೋತಿಷ್ಯದಲ್ಲಿ ಎಂ.ಎ. ಮಾಡಿದ್ದೇನೆ. ಇದಾದ ಮೇಲೆ ಮತ್ತಷ್ಟು ಓದಬೇಕು ಎನಿಸಿತು. ಹೀಗಾಗಿ ಪಿಎಚ್.ಡಿ. ಮಾಡಿದೆ’ ಎನ್ನುತ್ತಾರೆ ಶಶಿಕಲಾ.

ಜ್ಯೋತಿಷ್ಯಶಾಸ್ತ್ರ ಓದಿದ್ದರಿಂದ ಅವರ ಆಲೋಚನಾ ಲಹರಿ ಬೇರೆಯದೇ ರೀತಿಯಲ್ಲಿ ತೆರೆದುಕೊಂಡಿದೆ ಎನ್ನುತ್ತಾರೆ ಅವರು. ಅಲ್ಲದೇ ನಕ್ಷೆಯ ಮುಖಾಂತರ ನಾವು ಹೇಗೆ ನಮ್ಮ ಪ್ರಯಾಣದ ಗುರಿಯನ್ನು ಬೇಗ ಮುಟ್ಟಬಹುದೋ, ಜ್ಯೋತಿಷ್ಯಶಾಸ್ತ್ರ ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಪ್ರಾಮುಖ್ಯತೆ ಪಡೆದಿದೆ ಎನ್ನುತ್ತಾರೆ ಶಶಿಕಲಾ ರಾವಲ್. ಅಲ್ಲದೇ ಮುಂದಿನ ದಿನಗಳಲ್ಲಿ ತಮ್ಮ ಜ್ಞಾನವನ್ನು ಸಾರ್ವಜನಿಕ ಹಿತಾಸಕ್ತಿಗೆ ಬಳಸುತ್ತೇನೆ ಎಂದಿದ್ದಾರೆ.

ವಯಸ್ಸು ಒಂದು ತೊಡಕಲ್ಲ
ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲವೆಂದು ಮತ್ತು ವಯಸ್ಸಾಯ್ತು ಏನೂ ಮಾಡೋಕೆ ಆಗೋದಿಲ್ಲ ಎಂದು ಕೈಕಟ್ಟಿ ಕುಳಿತು ಕೊಳ್ಳುವವರಿಗೆ, ಮನಸ್ಸಿದ್ದರೆ ಮಾರ್ಗವಿದೆ ಎಂದು ಎಂಭತ್ತರ ಇಳಿ ವಯಸ್ಸಿನ ಶಶಿಕಲಾ ರಾವಲ್ ತೋರಿಸಿಕೊಟ್ಟಿದ್ದಾರೆ. ಅವರ ಜೀವನ ಶೈಲಿಯನ್ನು ನೋಡಿದ್ರೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು, ಸ್ಫೂರ್ತಿ ಪಡೆಯಬೇಕು.

ಯಾವುದಾದರೂ ಒಳ್ಳೆಯ ಕೆಲಸ ಮಾಡಲು ನೆಪ ಹುಡುಕಬಾರದು, ವಯಸ್ಸಾಯಿತು, ಸಮಯವಿಲ್ಲ, ಶ್ರಮವಾಗುತ್ತದೆ, ಮನೆಯ ಕೆಲಸವೇ ಜಾಸ್ತಿ ಇದೆ, ಹೆಚ್ಚು ಶ್ರಮ ವಹಿಸಿದರೆ ಆರೋಗ್ಯ ಕಡುತ್ತದೆ ಎಂಬ ಸಣ್ಣ ಸಣ್ಣ ಕಾರಣ ಹುಡುಕಿ, ನಮ್ಮಲ್ಲಿ ಕೆಲವು ಹೆಚ್ಚು ಶ್ರಮವಹಿಸಲು, ಏನಾದರೂ ಸಾಧನೆ ಮಾಡಲು ಹಿಂಜರಿಯುತ್ತಾರೆ. ಅಂತಹವರಿಗೆ, ಎಂಬತ್ತನೆಯ ವಯಸ್ಸಿನಲ್ಲಿ ಪಿಎಚ್‌ಡಿ ಪಡೆದ ಈ ಹಿರಿಯ ಮಹಿಳೆ ಮಾದರಿಯಾಗಬೇಕು. ಶಶಿಕಲಾ ರಾವಲ್ ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗಲಿ.

ಕ್ಷಣ ಕ್ಷಣದ ಸುದ್ದಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್ ಲೈಕ್‌ ಮಾಡಿ.

https://www.facebook.com/Vishwavanidaily