Friday, 13th December 2024

ಪ್ರಕೃತಿಯಲ್ಲಿ ಅಕ್ಕನ ದೈವೀ ಪ್ರಜ್ಞೆ

ಶಾರದಾ ಕೌದಿ, ಧಾರವಾಡ

ಪ್ರಕೃತಿಯಲ್ಲಿ ದೈವೀಶಕ್ತಿಯನ್ನು ಕಂಡು, ಪ್ರಕೃತಿಯನ್ನು ಬಹುವಾಗಿ ಹಾಡಿದ ಅಕ್ಕಮಹಾದೇವಿಯು,
ಪ್ರಕೃತಿಯ ಮಹತ್ವವನ್ನು ತೋರಿಸಿಕೊಟ್ಟಿದ್ದಾಳೆ.

ವನವೆಲ್ಲ ಕಲ್ಪತರು, ಗಿಡವೆಲ್ಲ ಮರುಜವಣಿ, ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ, ಜಲವೆಲ್ಲ ನಿರ್ಜರಾಮೃತ, ಮೃಗವೆಲ್ಲ ಪುರುಷ ಮೃಗ, ಎಡಹುವ ಹರಳೆಲ್ಲ ಚಿಂತಾಮಣಿ, ಚೆನ್ನಮಲ್ಲಿಕಾರ್ಜುನಯ್ಯ ನೆಚ್ಚಿನ ಗಿರಿಯ ಸುತ್ತಿ, ನೋಡುತ್ತ ಬಂದು ಕದಳಿಯ ಬನವ ಕಂಡೆ ನಾನು.

ತನ್ನ ಮನದೊಡೆಯ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತಾ ಕಲ್ಯಾಣದಿಂದ ಶ್ರೀಶೈಲದತ್ತ ಹೊರಟು, ಶ್ರೀಶೈಲ ಗಿರಿಯನ್ನು ಸುತ್ತಿದಾಗ, ಅಲ್ಲಿಯ ಪ್ರಕೃತಿ ಸೌಂದರ್ಯವನ್ನು ಕಂಡು ವಿಸ್ಮಿತಳಾದ ಅಕ್ಕನ ಮನದಾಳ ದಿಂದ ಮೂಡಿ ಬಂದ ನುಡಿಗಳಿವು. ಈ ವಚನದಲ್ಲಿ ಅವಳ ಆತ್ಮಸಂಗಾತಿ ಚೆನ್ನಮಲ್ಲಿಕಾರ್ಜುನನಿರುವ ತಾಣದ ಒಂದೊಂದು ಗಿಡ-ಮರ-ಬಳ್ಳಿ ಎಲ್ಲವೂ ಅವಳಿಗೆ ಪ್ರಿಯವೇ.

ಬೇಡಿದ್ದನ್ನು ಕೊಡುಗೆಯ ರೂಪದಲ್ಲಿ ನೀಡುವ ಕಲ್ಪತರು. ನಡೆಯುವ ಹಾದಿಯಲ್ಲಿ, ಕಾಲಿಗೆ ಚುಚ್ಚುವ ಸಣ್ಣ-ಸಣ್ಣ ಕಲ್ಲಿನ ಹರಳುಗಳು ಚಿಂತಾಮಣಿಗಳಂತೆ. ಹರಿಯುವ ನೀರು ತೊರೆಗಳೆಲ್ಲವೂ ಅಮೃತದ ಒರತೆ ಯಂತೆ. ಗಿಡ-ಮರ-ಬಳ್ಳಿಗಳು ಪುನರ್ಜನ್ಮ ನೀಡುವ ಸಂಜೀವಿನಿ ಯಂತೆ. ಹಸಿರು ವನಸಿರಿ, ಮೆಲ್ಲಗೆ ಬೀಸುವ ಕುಳಿರ್ಗಾಳಿ, ಗಿರಿ-ಶಿಖರಗಳಿಂದಾವೃತವಾದ ಈ ಸುಂದರ ತಾಣವೇ ತಾನು ಹೆಜ್ಜೆಯಿರಿಸಿದ ಪರಮ-ಪಾವನ ಪುಣ್ಯಕ್ಷೇತ್ರ, ಶ್ರೀಶೈಲ ಇರಬಹುದೆಂಬ ಭಾವನೆ ಮೂಡಿತು.

ಇಂಥ ಅದ್ಭುತ ಗಿರಿಯನ್ನು ಸೃಷ್ಟಿಯಕರ್ತೃನಾದ ಆ ಭಗವಂತನೇ ನಿರ್ಮಿಸಿ, ತನ್ನ ಆರಾಧ್ಯ ದೈವವಾದ
ಚನ್ನಮಲ್ಲಿಕಾರ್ಜುನನೇ ಈ ವನದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆಯೇ ಅಕ್ಕನ ಮನಸ್ಸಿಗೆ ಮುದ ನೀಡಿತು. ಪ್ರಕೃತಿಯ ಅಣು ರೇಣುವಿನಲ್ಲೂ ದೇವನ ಇರುವಿಕೆಯನ್ನೆ ಕಾಣುವ ಅಕ್ಕನ ದೈವೀಪ್ರಜ್ಞೆ ಅದ್ಭುತ. ಅಕ್ಕ ಜನಿಸಿದ್ದು ಮಲೆನಾಡಿನ ಅಂಚಿನ ಉಡುತಡಿಯಲ್ಲಿ. ಅಲ್ಲಿಯ ಕಾಡು, ಗುಡ್ಡ ಮತ್ತು ನದಿಗಳು ನೈಸರ್ಗಿಕ
ಸೌಂದರ್ಯ ಹೆಚ್ಚಿಸುವ ನದಿ ತೊರೆಗಳು ಕಣ್ಮನ ಸೆಳೆಯುವಂತಹವು.

ಇಂತಹ ಪ್ರಕೃತಿಯ ನಾಡಲ್ಲಿ ಜನಿಸಿ ಅವುಗಳ ಸಾಂಗತ್ಯದಲ್ಲಿ ಆಡಿ ಬೆಳೆದ ಮಹಾದೇವಿಗೆ ಸಹಜವಾಗೆ
ಪ್ರಕೃತಿಯ ಬಗ್ಗೆ ಪ್ರೀತಿ, ಒಲವು. ಅವುಗಳ ಕುರಿತು ಅವಳಿಗೆ ವಿಶೇಷ ಒಲವಿದ್ದುದರಿಂದ ಮತ್ತು ಒಡನಾಡಿ ಯಾಗಿ ಅವುಗಳ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದುದರಿಂದ ಪರಿಸರದ ಬಗ್ಗೆ ಅಪಾರ ಜ್ಞಾನ ಹೊಂದಿದ್ದು ಸಹಜ. ಹಾಗಾಗಿ ತನ್ನ ವಚನಗಳಲ್ಲಿ ಕೆರೆ, ಹಳ್ಳ, ನದಿ, ಗಿಡ, ಬಳ್ಳಿ, ಬೆಟ್ಟ, ಕಣಿವೆ ಹೀಗೆ ಪ್ರಕೃತಿಯ ಪ್ರತಿ ಅಂಶಗಳನ್ನು ಉಪಮಾನ-ಉಪಮೇಯಗಳಾಗಿ ಉಪಯೋಗಿಸಿರುವದನ್ನು ಕಾಣುತ್ತೇವೆ.

ಪ್ರಕೃತಿಯಲ್ಲಿ ದೈವೀಪ್ರಜ್ಞೆ ಕಂಡ ಅಕ್ಕನ ಇನ್ನೊಂದು ವಚನ- ಈಳೆ ನಿಂಬೆ ಮಾವು ಮಾದಲ ಮರಕೆ ಹುಳಿ
ನೀರೆದವರಾರಯ್ಯ? ಕಬ್ಬು ಬಾಳೆ ಹಲಸು ಗರಿಕೇಳಕೆ ಸಿಹಿ ನೀರೆರದವರಾರಯ್ಯ? ಹೀಗೆ ಕಿತ್ತಳೆ, ನಿಂಬೆ, ಮಾವು ಮುಂತಾದ ಫಲಗಳಿಗೆ ಒಗರು ರುಚಿ, ಕಬ್ಬು, ಹಲಸು ಬಾಳೆ ಮುಂತಾದವಕ್ಕೆ ಜೇನ ಸಿಹಿ ತುಂಬಿದವರಾರು ಎಂದು ಅಕ್ಕ ಅಚ್ಚರಿ ಪಡುತ್ತಾರೆ. ಮನದಲ್ಲಿ ಮೂಡಿದ ಪ್ರಶ್ನೆಗಳಿಗೆ ಮತ್ತು ಪ್ರಕೃತಿಯ ಈ ವಿಸ್ಮಯಗಳಿಗೆ ಜಗದೊಡೆಯ ಚನ್ನಮಲ್ಲಿಕಾರ್ಜುನನೇ ಕಾರಣ ಎಂಬ ನಿರ್ಣಯಕ್ಕೆ ಬರುತ್ತಾರೆ.

ಪ್ರಕೃತಿಯ ವಿಸ್ಮಯತೆಯನ್ನು ತಿಳಿಸುತ್ತಾ ಪ್ರಕೃತಿಯ ಸಮತೋಲನ ಕಾಯುವಲ್ಲಿ ದೇವರ ಇರುವಿಕೆಯನ್ನು ಧೃಢಿಕರಿಸುತ್ತಾರೆ. ಅವಳದೊಂದು ಸುಪ್ರಸಿದ್ಧ ವಚನ, ವನವೆಲ್ಲ ನೀನೆ ವನದೊಳಗಣ ದೇವ ನೀನೆ ತರುವೆಲ್ಲ ನೀನೆ ತರುವಿನಳೊಗಾಡುವ ಖಗಮೃಗವೆಲ್ಲ ನೀನೆ ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ ನನಗೇಕೆ ಮುಖದೋರೆ? ವನದಲ್ಲಿ, ವನದಲ್ಲಿರುವ ಪ್ರತಿ ಗಿಡ ಮರ ತರು ಲತೆಗಳಲ್ಲಿ, ಕಾನನದಲ್ಲಿರುವ ಖಗಮೃಗಗಳಲ್ಲಿ ಪಕ್ಷಿಗಳಲ್ಲಿ ಹೀಗೆ ಪ್ರಕೃತಿಯ ಪ್ರತಿ ಜೀವ ಜಂತುಗಳಲ್ಲಿ ನಿರಾಕಾರ ಸ್ವರೂಪದಲ್ಲಿರುವ ದೇವ ನೀನು ನನಗೆ ನಿನ್ನ ನಿಜ ಸ್ವರೂಪದ ದರ್ಶನ ತೋರು, ಎಂದು ಪರಿತಪಿಸುವ ಪ್ರಕೃತಿಯಲ್ಲಿಯ ಅವಳ ಅಚಲ ದೈವೀಪ್ರಜ್ಞೆ ಅನನ್ಯ.

ಚಿಲಿಪಿಲಿ ಎಂದೋದುವ ಗಿಳಿಗಳಿರಾ, ಸರವೆತ್ತಿ ಪಾಡುವ ಕೋಗಿಲೆಗಳಿರಾ ಗಿರಿ ಗಂವ್ಹರದೊಳಗಾಡುವ ನವಿಲುಗಳಿರಾ ಕೊಳದೊಳಾಡುವ ಹಂಸಗಳಿರಾ ನೀವು ಕಾಣಿರೆ ನೀವು ಕಾಣಿರೆ ಎನ್ನೊಡೆಯ ಚೆನ್ನಮಲ್ಲಿ ಕಾರ್ಜುನನೆಲ್ಲಿಜ್ಞಾನೆಂದು ಹೇಳೀರೆ. ಎನ್ನುವ ಅಕ್ಕನ ಅತ್ಯಂತ ಅಪ್ಯಾಯಮಾನ ವಚನವಿದು.

ಅಕ್ಕನ ಕಾವ್ಯ ಕರ್ತತ್ವ ಶಕ್ತಿಗೆ ಮೇಲಿನ ವಚನವೆ ಸಾಕ್ಷಿ. ಅವಳ ವಚನಗಳು ಭಾವಗೀತಾತ್ಮವಾಗಿವೆ. ಪ್ರಕೃತಿಯ ಮಡಿಲಲ್ಲಿ ಈ ಎಲ್ಲ ಪ್ರಾಣಿ ಪಕ್ಷಿಗಳು ಇಷ್ಟು ಸ್ವತಂತ್ರವಾಗಿ ಸಂತಸದಿಂದ ಇರಲು ಕಾರಣ ಚೆನ್ನಮಲ್ಲಿಕಾ ರ್ಜುನನ ಇರುವಿಕೆ ಎಂದು ನಂಬಿದ ಅಕ್ಕ ಪ್ರಾಣಿಪಕ್ಷಿಗಳಲ್ಲಿ ದೈನ್ಯತೆಯಿಂದ ಬೇಡಿಕೊಳ್ಳುವಲ್ಲಿ ಅವಳು ಪ್ರಕೃತಿಯಲ್ಲಿ ದೇವರನ್ನು ಕಾಣುತ್ತಿದ್ದಾಳೆ ಎನ್ನುವದು ಸರ್ವವಿದಿತ.

ಪಕ್ಷಿ ಸಂಕುಲದಲ್ಲಿ ಮೊರೆ ಇಡುವ ಅವಳ ವಚನ: ಅಳಿಸಂಕುಲವೆ, ಮಾಮರವೆ ಬೆಳದಿಂಗಳೆ ಕೋಗಿಲೆಯೆ ನಿಮ್ಮನೆಲ್ಲರನ್ನು ಒಂದ ಬೇಡುವೆನು ಎನ್ನೊಡೆಯ ಚೆನ್ನಮಲ್ಲಿಕಾರ್ಜುನನ ಕಂಡಡೆ ಕರೆದು
ತೋರಿರೆ ಹೀಗೆ ತನ್ನಮನದೊಡೆಯ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ದಟ್ಟಾರಣ್ಯ, ಕಾಡ್ಗತ್ತಲು ಕದಳಿಯ ಪ್ರವೇಶ ಮಾಡುವ ಅಕ್ಕ, ಕದಳಿಯಬನದಲ್ಲಿ ತನ್ನ ಭವಹರನ ಕಂಡು ಚೆನ್ನಮಲ್ಲಿಕಾರ್ಜನನ ಹೃದಯಕಮಲದಲ್ಲಿ ಅಡಗುವವರೆಗೆ ಪ್ರಕೃತಿಯೊಂದಿಗಿನ ಅವಳ ಒಡನಾಟ ಹಾಗೂ ಅಲ್ಲಿಯ
ಪ್ರತಿಯೊಂದರಲ್ಲೂ ಅವನ ಉಪಸ್ಥಿತಿ ಕಾಣುವ ಅಕ್ಕನ ದೈವೀಪ್ರಜ್ಞೆಯನ್ನು ಶಬ್ದಗಳಲ್ಲಿ ಹಿಡಿದಿಡಲಾಗದು. ಏರು ಜವ್ವನೆ, ಚನ್ನಮಲ್ಲಿಕಾರ್ಜುನನ್ನರಸುತ್ತ ಯಾವ ಭಾವವಿಕಾರಗಳಿಲ್ಲದೆ ಕಾಡಿನಲ್ಲಿ ಒಂಟಿಯಾಗಿ ಸಂಚರಿಸುವ ಅಕ್ಕನ ಭಕ್ತ-ಶೃದ್ಧೆಗಳಿಗೆ ಅಕ್ಕನೇ ಸಾಟಿ.

ಪ್ರಕೃತಿ ಪೂಜೆ
ಮೊದಲಿನಿಂದಲೂ ಪ್ರಕೃತಿಯನ್ನು, ಭೂಮಿಯನ್ನು ಮಾತೆ ಎಂದು ಗೌರವಿಸಿ ಪೂಜಿಸಿದ್ದಾರೆ. ಔಷಧಯುಕ್ತ ಗಿಡಮರಗಳಿಂದ, ಎಷ್ಟೊಂದು ಪ್ರಯೋಜನ. ಅರಣ್ಯ ಇದ್ದರೆ ಮಳೆ ಬೆಳೆ ಮಾನವನ ಬದುಕು ಹಸನಾಗುತ್ತದೆ. ವಿಪರ್ಯಾಸದ ಸಂಗತಿಯೆಂದರೆ, ಜನರಿಗೆ ಪ್ರಕೃತಿಯನ್ನು ದೈವೀ ಭಾವ ದಿಂದ ಕಾಣುವ ಮನಸ್ಥಿತಿ ಕಡಿಮೆ ಯಾಗುತ್ತಿದೆ. ಮಾನವ ತನ್ನ ಸೌಲಭ್ಯಗಳಿಗೆ, ಐಷಾರಾಮಿ ಬದುಕಿಗೆ ಮರಗಿಡ ಕಡಿಯುತ್ತ ಪ್ರಕೃತಿಯ ನಾಶಕ್ಕೆ ಕಾರಣನಾಗುತ್ತಿದ್ದಾನೆ.

ನದಿಗಳು ಕಲುಷಿತಗೊಳ್ಳುತ್ತಿವೆ. ಪ್ರಾಣಿ ಪಕ್ಷಿಗಳಿಗೆ ನೆಲೆ ಇಲ್ಲ ದಂತಾಗಿ ಅವುಗಳ ಸಂತತಿ ನಾಶವಾಗುತ್ತಿದೆ. ಪ್ರಕೃತಿ ಮುಂದೆ ಮಾನವ ತೃಣ ಸಮಾನ ಅನ್ನುವದನ್ನು ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಸುನಾಮಿ, ವೈರಾಣು ಮುಂತಾದವುಗಳಿಂದ ಪ್ರಕೃತಿಯೇ ಸಾಬೀತುಪಡಿಸಿದೆ. ನಾವಿಂದು ಅದರ ವಿಕೋಪಕ್ಕೆ ಬಲಿಯಾಗು ತ್ತಿದ್ದೇವೆ. ಈ ನಿಟ್ಟಿನಲ್ಲಿ ಅಕ್ಕನ ಅರ್ಥಗರ್ಭಿತ ಒಂದು ವಚನ:

ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು
ಗಿಡುಗಿಡುದಪ್ಪನೆ ಬೇಡೆದೆನ್ನೆನಂಗಕ್ಕೆಂದು
ಅವು ನೀಡಿದವು ತಮ್ಮಲಿಂಗಕ್ಕೆಂದು
ಆನು ಬೇಡಿ ಭವಿಯಾದೆನು,
ಅವು ನೀಡಿ ಭಕ್ತರಾದವು
ಇನ್ನು ಬೇಡಿದೆನಾದಡೆ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮಾಣೆ.

ಪ್ರಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯಪ್ರವೃತ್ತರಾಗಬೇಕಿದೆ. ನಕಾರಾತ್ಮಕ ವಿಚಾರ ಗಳಿಂದ ಹೊರಬಂದು ಪ್ರಕೃತಿಯಲ್ಲಿ ದೈವೀ ಪ್ರಜ್ಞೆ ಬೆಳೆಸಿ ಮನುಕುಲ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೈಜೋಡಿಸಬೇಕು. ಆರೋಗ್ಯಪೂರ್ಣ ಜೀವನಕ್ಕೆ ಪ್ರಕೃತಿಯ ಜೊತೆ ಹೊಂದಾಣಿಕೆ ಅತ್ಯಗತ್ಯ. ಪ್ರಕೃತಿಯನ್ನು ದೈವ ಎಂದು ಕಂಡು, ಗೌರವ ನೀಡಿ ಪೂಜಿಸಿದಾಗ, ಪರೋಕ್ಷವಾಗಿ ಮನುಷ್ಯನು ಪ್ರಕೃತಿಯನ್ನು ರಕ್ಷಿಸಿ, ಆ ಮೂಲಕ ತನ್ನ ಮುಂದಿನ ಪೀಳಿಗೆಯನ್ನು ಸಲಹಿದಂತಾಗುತ್ತದೆ.