Friday, 13th December 2024

ಕನಸುಗಾರ ಈಗ ಅಪ್ಪಟ ಕನ್ನಡಿಗ

ಪ್ರಶಾಂತ್ ಟಿ.ಆರ್‌.

ಲಿಪಿಕಾರ ಗುಣಭದ್ರನಾದ ರವಿಮಾಮ

ಈಗೇನಿದ್ದರೂ ಐತಿಹಾಸಿಕ ಕಥಾಹಂದರದ ಚಿತ್ರಗಳೇ ಹೆಚ್ಚಾಗಿ ತೆರೆಗೆ ಬರುತ್ತಿವೆ. ಪ್ರೇಕ್ಷಕರು ಕೂಡ ಅಂತಹ ಚಿತ್ರಗಳನ್ನೇ ನಿರೀಕ್ಷಿ ಸುತ್ತಿದ್ದಾರೆ. ಮೆಚ್ಚುತ್ತಿದ್ದಾರೆ. ಈಗ ಚಂದನವನದಲ್ಲೂ ಐತಿಹಾಸಿಕ ಕಥೆಯನ್ನು ಒಳಗೊಂಡ ಕನ್ನಡಿಗ ತೆರೆಗೆ ಬರಲು ಸಿದ್ಧವಾ ಗುತ್ತಿದೆ. ಈಗಾಗಲೇ ಚಿತ್ರವೂ ಕೂಡ ಸೆಟ್ಟೇರಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ರವಿಮಾಮ ಮೊದಲ ಬಾರಿಗೆ ಐತಿಹಾಸಿಕ ಪಾತ್ರ ದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಲಿಪಿಕಾರ ಗುಣಭದ್ರನಾಗಿ ಬಣ್ಣಹಚ್ಚಿದ್ದಾರೆ. ಹಾಗಾಗಿ ಈ ಚಿತ್ರ ತೆರೆಗೂ ಮುನ್ನವೇ ನಿರೀಕ್ಷೆ ಮೂಡಿಸಿದೆ. ಕುತೂಹಲ ಹೆಚ್ಚಿಸಿದೆ.

ಸಾಮಾನ್ಯವಾಗಿ ನಾಡನ್ನು ಆಳಿದ ರಾಜ-ರಾಣಿಯರ ಕಥೆಗಳು ಎಲ್ಲೆಡೆ ದಾಖಲಾಗಿರುತ್ತವೆ. ಶಾಸನದಲ್ಲಿ ಉಲ್ಲೇಖವಾಗಿರುತ್ತವೆ. ಆದರೆ ಸಾಮಾನ್ಯ ಪ್ರಜೆಗಳ ಕೊಡುಗೆಗಳು ನೆನಪಿಗೆ ಬರುವುದಿಲ್ಲ. ಈ ನಾಡಿನ ಇತಿಹಾಸವನ್ನು ದಾಖಲಿಸುವಲ್ಲಿ ಲಿಪಿಕಾರರ ವಶಂದ ಕೊಡುಗೆ ಅಪಾರ. ಅದರಿಂದಲೇ ನಮಗೆಲ್ಲರಿಗೂ ಇತಿಹಾಸ ತಿಳಿದಿರುವುದು.

ಹೀಗೆ ಸಾಮಾನ್ಯ ಲಿಪಿಕಾರರಾಗಿ ಶಾಸನ ಬರೆದ ಮಹಾನ್ ವ್ಯಕ್ತಿಗಳ ಕುರಿತು ಚಿತ್ರದ ಕಥೆ ಸಾಗುತ್ತದೆ. ಇದರ ಜತೆಗೆ 1858ರ ನಂತರದ ಕಾಲಘಟ್ಟವನ್ನು ಕನ್ನಡಿಗನೊಂದಿಗೆ ಮರುಸೃಷ್ಟಿಸಲಾಗು ತ್ತಿದೆ. ಇಲ್ಲಿ ರವಿಚಂದ್ರನ್ ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಪಾವನಾ ನಟಿಸುತ್ತಿದ್ದಾರೆ.

ಸಂಕಮ್ಮಬ್ಬೆಯಾಗಿ ಸ್ವಾತಿ ಚಂದ್ರಶೇಖರ್, ಕಿಟ್ಟಲ್ ಪಾತ್ರಕ್ಕೆ ಜೆಮಿ ವಾಲ್ಟರ್ ಅವರನ್ನು ಕರೆತರಲಾಗುತ್ತಿದೆ. ಕಮರೀಲ ಭಟ್ಟನಾಗಿ ಚಿ.ಗುರುದತ್, ಮಲ್ಲಿನಾಥನಾಗಿ ಬಾಲಾಜಿ ಮನೋಹರ್, ಮಠದ ಸ್ವಾಮಿಯ ಪಾತ್ರದಲ್ಲಿ ದತ್ತಣ್ಣ ಮತ್ತು ಹರಿಗೋಪಾಲನಾಗಿ ಅಚ್ಯುತ್ ಕುಮಾರ್ ಪಾತ್ರ ನಿರ್ವಹಿಸುತ್ತಿದ್ದಾರೆ. ರಾಣಿ ಚಿನ್ನಭೈರಾದೇವಿ ಎನ್ನುವ ಪ್ರಮುಖ ಪಾತ್ರದಲ್ಲಿ ಸುಮಲತಾ ಅಂಬರೀಶ್ ಕಾಣಿಸಿಕೊಳ್ಳಲಿದ್ದಾರೆ.

ಸವಾಲಿನ ಕೆಲಸ
ಈ ಸಿನಿಮಾದ ಪ್ರಾಕಾರ, ಚಿತ್ರತಂಡ ಎಲ್ಲವೂ ನನಗೆ ಹೊಸದು. ಪ್ರತೀ ಸಿನಿಮಾ ಕೂಡ ನನಗೆ ಹೊಸದೇ. ಈಗ ಕನ್ನಡಿಗನಾಗಿ
ಕಾಣಿಸಿಕೊಳ್ಳುತ್ತಿರುವುದು ನನಗೆ ನಿಜಕ್ಕೂ ಸವಾಲಿನ ಕೆಲಸವೇ ಆಗಿದೆ. ಜತೆಗೆ ಸಂತಸವೂ ಇದೆ ಎನ್ನುತ್ತಾರೆ ಕ್ರೇಜಿಸ್ಟಾರ್. ಗಟ್ಟಿ ಗಿತ್ತಿಯ ಪಾತ್ರದಲ್ಲಿ ನಟಿ ಪಾವನಾ ಬಣ್ಣಹಚ್ಚಿದ್ದಾರೆ. ಗಿರಿರಾಜ್ ಅವರ ಈ ಹಿಂದಿನ ಸಿನಿಮಾಗಳಲ್ಲೂ ನಟಿಸಿದ್ದೇನೆ. ನನಗಾಗಿ ಈ ಚಿತ್ರದಲ್ಲೂ ಪಾತ್ರ ಸೃಷ್ಟಿಸಿರುವುದು ಸಂತಸ ತಂದಿದೆ ಎಂದು ಖುಷಿಯಿಂದಲೇ ನುಡಿಯುತ್ತಾರೆ ಪಾವನಾ. ಕನ್ನಡ ಮಾತ್ರವಲ್ಲ, ಸಿನಿಮಾ ಪ್ರಪಂಚದ ಅದ್ಭುತ ತಂತ್ರಜ್ಞ ರವಿಚಂದ್ರನ್. ಕನ್ನಡಿಗ ಸಿನಿಮಾದ ಮೂಲಕ ಮೊದಲ ಬಾರಿಗೆ ಅವರೊಂದಿಗೆ ಬಣ್ಣ ಹಚ್ಚುತ್ತಿದ್ದೇನೆ. ಅವರ ತಮ್ಮನ ಪಾತ್ರ ನನಗೆ ಸಿಕ್ಕಿರುವುದು ನನ್ನ ಪಾಲಿನ ಹೆಮ್ಮೆ ಎನ್ನುತ್ತಾರೆ ಬಾಲಾಜಿ ಮನೋಹರ್.

ಸಿದ್ಧವಾಗಿದೆ ಅದ್ಧೂರಿ ಸೆಟ್
ನೂರೈವತ್ತು ವರ್ಷಕ್ಕೂ ಹಿಂದಿನ ಕಥೆ ಕನ್ನಡಿಗನದ್ದಾಗಿದ್ದು, ಪಾತ್ರಗಳ ಜತೆಗೆ ಅಂದಿನ ಪರಿಸರ, ಕಟ್ಟಡಗಳನ್ನು ಮರುಸೃಷ್ಟಿ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ ಮತ್ತು ಚಿತ್ರತಂಡ ಸಾಕಷ್ಟು ಜನ ಇತಿಹಾಸಕಾರರನ್ನು ಸಂಪರ್ಕಿಸಿ, ಹಲವಾರು ಕೃತಿಗಳನ್ನು ಪರಾಮರ್ಶಿಸಿ ಸೆಟ್‌ಗಳನ್ನು ರೂಪಿಸುತ್ತಿದ್ದಾರೆ.
ಸಾಗರ, ಚಿಕ್ಕಮಗಳೂರಿನ ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಹಾಗೆಯೇ ಬಳಸಿಕೊಳ್ಳಲಾಗುತ್ತಿದೆ. ನವೆಂಬರ್‌ನಲ್ಲಿ ಮೂವತ್ತು ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

ಕಥೆಹುಟ್ಟಿದ್ದು ಹೀಗೆ
ಈ ಹಿಂದೆ ಜಟ್ಟ, ಮೈತ್ರಿ, ಅಮರಾವತಿ ಯಂತಹ ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ಬಿ.ಎಂ. ಗಿರಿರಾಜ್ ನಿರ್ದೇಶನ ದಲ್ಲಿ, ಐತಿಹಾಸಿಕ ಕಥಾಹಂದರ ಹೊಂದಿರುವ, ಕನ್ನಡಿಗ ಮೂಡಿಬರುತ್ತಿದೆ. ಈಗಾಗಲೇ ಚಿತ್ರೀಕರಣಕ್ಕೆ ಚಾಲನೆ ದೊರೆತಿದೆ. ಶಿವರಾಜ್ ಕುಮಾರ್ ಆರಂಭ ಫಲಕ ತೋರಿ, ರಾಘವೇಂದ್ರ ರಾಜ್ ಕುಮಾರ್ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ
ಕನ್ನಡಿಗನಿಗೆ ಚಾಲನೆ ನೀಡಿದ್ದಾರೆ. ನಿರ್ದೇಶಕ ಗಿರಿರಾಜ್ ಹಲವು ದಿನಗಳ ಹಿಂದೆಯೇ ಈ ಸುಂದರ ಐತಿಹಾಸಿಕ ಕಥೆಯನ್ನು
ಸಿದ್ಧಪಡಿಸಿಕೊಂ ಡಿದ್ದರು. ಚಿತ್ರವನ್ನು ತೆರೆಗೆ ತರುವ ನಿಟ್ಟಿನಲ್ಲಿ ನಿರ್ಮಾಪಕರ ಹುಟುಕಾಟದ ಲ್ಲಿದ್ದರು. ಆಗಲೇ ಜಟ್ಟ ಮತ್ತು ಮೈತ್ರಿ ಎಂಬ ಎರಡು ಸಿನಿಮಾಗಳನ್ನು ನಿರ್ಮಿಸಿದ್ದ ಎನ್.ಎಸ್.ರಾಜ್ ಕುಮಾರ್ ಅವರನ್ನು ಗಿರಿರಾಜ್ ಭೇಟಿ ಯಾಗಿ ಕಥೆಯನ್ನೂ ಹೇಳಿದ್ದಾರೆ.

ಕಥೆಯ ಒಂದು ಎಳೆಯನ್ನು ಕೇಳಿದ ರಾಜ್ ಕುಮಾರ್ ಇಷ್ಟಪಟ್ಟು, ಈ ಚಿತ್ರವನ್ನು ನಾನೇ ನಿರ್ಮಿಸುತ್ತೇನೆ ಎಂದು ಒಪ್ಪಿದ್ದಾರೆ.
ದಶಕಗಳ ಹಿಂದಿನ ಶೀರ್ಷಿಕೆ ಮೂವತ್ತು ವರ್ಷಗಳ ಹಿಂದೆಯೇ ರವಿಚಂದ್ರನ್, ಕನ್ನಡಿಗ ಶೀರ್ಷಿಕೆಯನ್ನು ನೊಂದಾಯಿಸಿದ್ದರು. ಅದಾಗಿ ಇಪ್ಪತ್ತು ವರ್ಷಗಳ ನಂತರ ಇದೇ ಎನ್.ಎಸ್.ರಾಜ್ ಕುಮಾರ್ ರವಿಚಂದ್ರನ್ ಅವರ ಬಳಿ ಹೋಗಿ ಕನ್ನಡಿಗ ಶೀರ್ಷಿಕೆಯನ್ನು ನನ್ನ ಸಂಸ್ಥೆಗೆ ಬಿಟ್ಟು ಕೊಡುವಂತೆ ವಿನಂತಿಸಿಕೊಂಡಿದ್ದಾರೆ. ಆದರೆ, ರವಿಚಂದ್ರನ್ ಕನ್ನಡಿಗ ಶೀರ್ಷಿಕೆಯನ್ನು ಬಹಳ ವರ್ಷಗಳಿಂದಲೂ ಕಾಪಾಡಿಕೊಂಡು ಬಂದಿದ್ದೀನಿ. ಆ ಟೈಟಲ್ಲಿನ ಸಿನಿಮಾದಲ್ಲಿ ನಾನೇ ನಟಿಸಬೇಕು. ಹಾಗಾಗಿ ಶೀರ್ಷಿಕೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇದರಿಂದ ಬೇಸರಗೊಳ್ಳದ ರಾಜ್‌ಕುಮಾರ್ ವೀರಕನ್ನಡಿಗ ಹೆಸರಿನಲ್ಲಿ ಚಿತ್ರ ನಿರ್ಮಾಣ ಮಾಡಿದ್ದರು. ಈಗ ವರುಷಗಳು ಉರುಳಿವೆ. ಕನ್ನಡಿಗ ಶೀರ್ಷಿಕೆಯಲ್ಲಿಯೇ ಚಿತ್ರ ಸೆಟ್ಟೇರಿದೆ. ರವಿಮಾಮನೇ ಚಿತ್ರದ ನಾಯಕನಾಗಿದ್ದಾರೆ. ಇದೇ ಎನ್.ಎಸ್.ರಾಜ್ ‌ಕುಮಾರ್ ಅವರೇ ಚಿತ್ರಕ್ಕೆ ಬಂಡವಾಳ ಹೂಡಿದ್ದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ರವಿಚಂದ್ರನ್ ಕನ್ನಡ
ಚಿತ್ರರಂಗದ ಅಪ್ರತಿಮ ಕನಸುಗಾರ. ದಶಕಗಳು ಉರುಳಿದರೂ ಅವರ ಕಲ್ಪನೆ ಮಾಸುವುದಿಲ್ಲ ಅನ್ನುವುದಕ್ಕೆ ಇದೂ ಕೂಡ ಒಂದು ನಿದರ್ಶನ.

ರವಿಮಾಮನ ಆಗಮನ
ನಾಯಕನ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು. ಅಪಾರ ಘನತೆ ಹೊಂದಿರುವ ಈ ಪಾತ್ರಕ್ಕೆ ಅಷ್ಟೇ ಪ್ರಮುಖ ಕಲಾವಿದನೇ ಬೇಕು ಎಂದು ಆಲೋಚಿಸುತ್ತಿದ್ದಾಗ ಗಿರಿರಾಜ್ ಅವರಿಗೆ ಮೊದಲಿಗೆ ನೆನಪಾಗಿದ್ದೇ ಕ್ರೇಜಿಸ್ಟಾರ್. ರವಿಚಂದ್ರನ್ ಅವರು ಈ ಪಾತ್ರಕ್ಕೆ ಹೇಳಿಮಾಡಿಸಿದಂತಹ ವ್ಯಕ್ತಿ. ಒಂದು ಬಾರಿ ಕೇಳಿಬಿಡೋಣ ಎಂದು ಗಿರಿರಾಜ್, ರವಿಮಾಮನನ್ನು
ಸಂಪರ್ಕಿಸಿ ಸ್ಟೋರಿ ಹೇಳಿದ್ದಾರೆ. ಪೂರ್ತಿ ಕಥೆ ಕೇಳಿದ ರವಿಚಂದ್ರನ್, ಸಿನಿಮಾದಲ್ಲಿ ನಟಿಸಲು ಸಂತಸದಿಂದಲೇ ಒಪ್ಪಿದ್ದಾರೆ. ಆ ಮೂಲಕ ಕನ್ನಡಿಗನ ಪಾತ್ರಕ್ಕೆ ರವಿಮಾಮನ ಆಗಮನವಾಗಿದೆ.