Wednesday, 9th October 2024

ಆ್ಯಪಲ್ ಟಿವಿಯ ಹೊಸ ಸಾಹಸ

ಅಜಯ್ ಅಂಚೆಪಾಳ್ಯ

ಇಂದು ಮನರಂಜನಾ ಕ್ಷೇತ್ರದಲ್ಲಿ ಹೊಸ ಸ್ವರೂಪದ ಕ್ರಾಂತಿ ನಡೆಯುತ್ತಿದೆ. ಮನೆಯಲ್ಲೇ ಕುಳಿತು ವಿಶ್ವದ ನಾನಾ ಭಾಗಗಳ
ಸಿನಿಮಾ, ಕಥೆ, ನೃತ್ಯಗಳನ್ನು ನೋಡಲು ಜನರು ಇಷ್ಟಪಡುತ್ತಿದ್ದಾರೆ.

ಬದಲಾದ ಜನರ ಅಭಿರುಚಿಗೆ ತಕ್ಕಂತೆ, ಉತ್ತಮ ಮನರಂಜನೆಯನ್ನು ಒದಗಿಸಲು ವಿಶ್ವದ ದೈತ್ಯ ಸಂಸ್ಥೆೆಗಳು ಕಟಿಬದ್ಧವಾಗಿವೆ.
ಅಮೆರಿಕದ ಟೆಕ್ ದೈತ್ಯ ಆ್ಯಪಲ್ ಸಂಸ್ಥೆಯ ಸಹವರ್ತಿಯು ಇತ್ತೀಚೆಗೆ ಸುಡಾನ್ ದೇಶದ ಒಂದು ಸಿನಿಮಾವನ್ನು ಖರೀದಿಸಿತು. ವಿಶೇಷವೆಂದರೆ ಈ ಖರೀದಿ ಬೆಲೆಯು ಒಂದು ವಿಶ್ವದಾಖಲೆ ಎನಿಸಿದೆ. ಸುಡನೀಸ್ ಸಿನಿಮಾ ‘ಕೋಡಾ’ (ಚಿರ್ಲ್ಡನ್ ಆಫ್ ಡೆಡ್ ಅಡಲ್‌ಸ್ಟ್‌) ವನ್ನು ಸುಮಾರು 25 ಮಿಲಿಯ ಡಾಲರ್ ಮೊತ್ತಕ್ಕೆ ಆ್ಯಪಲ್ ಟಿವಿ ಖರೀದಿಸಿದೆ.

ಈ ಹಿಂದಿನ ದಾಖಲೆಯಾದ ‘ಪಾಮ್ ಸ್ಪ್ರಿಂಗ್ಸ್ ’ ಸಿನಿಮಾವು 2020ರಲ್ಲಿ 22.5 ಮಿಲಿಯ ಡಾಲರುಗಳಿಗೆ ಬಿಕರಿಯಾಗಿತ್ತು.
‘ಕೋಡಾ’ ಸಿನಿಮಾದ ಈ ಭಾರೀ ಮೊತ್ತದ ಖರೀದಿಗೆ ಮುಖ್ಯ ಕಾರಣವೆಂದರೆ ಅಮೆಜಾನ್ ಪ್ರೈಮ್ ನಡುವಿನ ಸ್ಪರ್ಧೆ. ಈ ಸಿನಿಮಾವನ್ನು ಅಮೆಜಾನ್ ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌‌‌ಗಳು ಖರೀದಿಸಲು ಆಸಕ್ತಿ ತೋರಿದ್ದವು. 2021ರಲ್ಲಿ ಬಿಡುಗಡೆಗೆ ಕಾದಿರುವ ಸಾಕಷ್ಟು ಸಿನಿಮಾಗಳ ಹಿನ್ನೆಲೆಯಲ್ಲಿ, ಅಮೆಜಾನ್ ಸಂಸ್ಥೆಯು ‘ಕೋಡಾ’ ಸಿನಿಮಾವನ್ನು ಆ್ಯಪಲ್ ಗೆ ಬಿಟ್ಟುಕೊಟ್ಟಿರಬಹುದು ಎಂದಿದ್ದಾರೆ ಮನರಂಜನಾ ಕ್ಷೇತ್ರದ ಪಂಡಿತರು.

‘ಕೋಡಾ’ ಚಿತ್ರ ತಯಾರಿಯಲ್ಲಿ ತೊಡಗಿಕೊಂಡಿರುವ ಸಿಯಾನ್ ಹೇಡರ್, ಈಗಾಗಲೇ ಆ್ಯಪಲ್ ಹೊರತಂದಿರುವ ‘ಲಿಟಲ್ ಅಮೆರಿಕಾ’ದ ಕಾರ್ಯನಿರ್ವಾಹಕ ನಿರ್ಮಾಪಕಿ ಎನಿಸಿದ್ದು, ನೆಟ್‌ಫ್ಲಿಕ್ಸ್‌‌ನ ಸಿನಿಮಾಗಳಲ್ಲೂ ಆಕೆ ತೊಡಗಿಕೊಂಡಿದ್ದಾರೆ. ಆಕೆಯ ಎಲ್ಲಾ ಸಿನಿಮಾಗಳೂ ವಿಮರ್ಶಕರ ಮೆಚ್ಚುಗೆ ಗಳಿಸಿದ್ದು, ‘ಕೋಡಾ’ ಸಹ ಸಾಕಷ್ಟು ಪ್ರಸಿದ್ಧಿಯನ್ನು ಪಡೆಯಬಹುದೆಂಬ ನಿರೀಕ್ಷೆ ಯಲ್ಲೇ ಆ್ಯಪಲ್ ಈ ಭಾರೀ ಮೊತ್ತದ ವ್ಯವಹಾರಕ್ಕೆ ಕೈಹಾಕಿದೆ.

ವಿಭಿನ್ನ ಸೆಟಿಂಗ್‌ನಲ್ಲಿ ರೂಪುಗೊಂಡಿರುವ ಈ ಸಿನಿಮಾದ ವಿಷಯ ಕುತೂಹಲಕಾರಿ. ಮೀನುಗಾರರ ಕುಟುಂಬವೊಂದರಲ್ಲಿ, ಅಧ್ಯಾಪಕಿಯಾಗಿರುವ ಕಥಾನಾಯಕಿಗೆ ಮಾತ್ರ ಕಿವಿ ಕೇಳುವ ಅದೃಷ್ಟ. ಆ ಕುಟುಂಬದ ಇತರ ಸದಸ್ಯರಿಗೆ ಆ ಭಾಗ್ಯ ಇಲ್ಲ. ಕಿವಿ ಕೇಳಿಸದೇ ಇರುವ ಆ ಕುಟುಂಬದ ಪಾತ್ರಗಳನ್ನು ಅಂತಹ ನಟರೇ ನಿರ್ವಹಿಸಿದ್ದು, ಆ ಕುಟುಂಬದ ಜವಾಬ್ದಾರಿಯನ್ನು ನೋಡಿ ಕೊಳ್ಳುವ ಮತ್ತು ಸಂಗೀತದಲ್ಲಿ ತನಗಿರುವ ಕನಸುಗಳನ್ನು ನನಸಾಗಿಸಿಕೊಳ್ಳುವ ಆಯ್ಕೆಯನ್ನು ಕಥಾನಾಯಕಿ ಮಾಡಬೇಕು.

ಈ ಸಿನಿಮಾವೂ ವಿಮರ್ಶಕರ ಗಮನ ಸೆಳೆಯುವ ಸಾಧ್ಯತೆ ಇದೆ. ತನ್ನ ವೇದಿಕೆಯಲ್ಲಿ ಬಿಡುಗಡೆಯಾಗುವ ‘ಕೋಡಾ’ ದಂತಹ ಸಿನಿಮಾಗಳಿಗೆ ಪ್ರಶಸ್ತಿಗಳು ಬಂದರೆ, ಅದರಿಂದಾಗಿ ಆ್ಯಪಲ್ ಟಿವಿಗೆ ಪ್ರಚಾರ ದೊರೆತು, ಇತರ ಪ್ರತಿಸ್ಪರ್ಧಿಗಳಿಗೆ ತುರುಸಿನ ಸ್ಪರ್ಧೆ ನೀಡಬಹುದು ಎಂಬ ಇರಾದೆ ಆ್ಯಪಲ್‌ನದ್ದು.