Friday, 13th December 2024

ನಮ್ಮನ್ನೇ ನಾವು ಅರಿಯುವುದು

ಬೇಲೂರು ರಾಮಮೂರ್ತಿ

ಮನುಷ್ಯ ತನ್ನನ್ನು ಎಷ್ಟೇ ಗಟ್ಟಿ, ಹಣವಂತ, ಗುಣವಂತ, ಮಾನವಂತ, ಅಂತ ಏನೇನೆಲ್ಲ ಅಂದುಕೊಂಡರೂ ಒಂದು ವಿಚಾರದಲ್ಲಿ ಮಾತ್ರ ಅವನು ಅಸಹಾಯಕ ಮತ್ತು ಅಶಕ್ತ. ಅದು ಸಾವು. ಅದೊಂದನ್ನು ಮನುಷ್ಯ ಇನ್ನೂ ಅರಿತಿಲ್ಲ. ಕೂತವರು ಕೂತ ಹಾಗೇ, ನಿಂತವರು ನಿಂತ ಹಾಗೇ, ಊಟ
ಮಾಡುತ್ತಿದ್ದವರು ಊಟ ಮಾಡುತ್ತಿದ್ದ ಹಾಗೆ ಇಹಲೋಕ ಯಾತ್ರೆಯನ್ನು ಮುಗಿಸಿದ ಕಥೆಗಳನ್ನು ನಾವು ನೀವೆಲ್ಲ ಕೇಳಿದ್ದೀವಿ.

‘ಅನ್ಯಥಾ ಶರಣಂ ನಾಸ್ತಿ ತ್ವಮೇವ
ಶರಣಂ ಮಮ’ ಎನ್ನುವ ಶರಣಾರ್ಥಿ ಭಾವ ನಮ್ಮಲ್ಲಿರಬೇಕು.

ಏಕೆಂದರೆ ಎಲ್ಲರಿಗಿಂತ ಮೇಲೆ ಅವನೊಬ್ಬನಿದ್ದಾನೆ. ಅವನು ಎಲ್ಲರನ್ನೂ, ಎಲ್ಲವನ್ನೂ ನೋಡುತ್ತಿದ್ದಾನೆ ಎನ್ನುವ ಅರಿವು ನಮ್ಮಲ್ಲಿರಬೇಕು. ಪರೀಕ್ಷೆಯಲ್ಲಿ ಉತ್ತರ ಬರೆಯಲು ಕುಳಿತ ವಿದ್ಯಾರ್ಥಿಗೆ ನನ್ನನ್ನು ಒಬ್ಬರು ಗಮನಿಸುತ್ತಿದ್ದಾರೆ ಎನ್ನುವ ಭಯ ಇರುವುದಲ್ಲವೇ, ಹಾಗೆ. ಭಯ ಇರುವು ದರಿಂದ ಅವನು ಕಾಪಿ ಹೊಡೆಯುವುದಿಲ್ಲ. ಹಾಗೆಯೇ ನಮ್ಮಲ್ಲಿಯೂ ಭಯ ಇದ್ದರೆ ಕೆಟ್ಟ ಕೆಲಸಗಳನ್ನು, ಕೆಟ್ಟ ಆಲೋಚನೆಗಳನ್ನು ಮಾಡುವು ದಿಲ್ಲ. ಭಗವಂತನಿಗೆ ನಮ್ಮ ಸಮರ್ಪಣಾ ಮನೋಭಾವವನ್ನು ಸದಾ ನಾವು ಇರಿಸಿ ಕೊಂಡಿರಬೇಕು. ಇದನ್ನು ಡಿವಿಜಿಯವರು ಕೇತಕೀವನ ಕೃತಿ ಯಲ್ಲಿ ಬಹಳ ಮಾರ್ಮಿಕವಾಗಿ ಸಾರಿದ್ದಾರೆ

ಒಂದು ಚಣ ಮುಂದಿಲ್ಲ
ಒಂದು ಚಣ ಹಿಂದಿಲ್ಲ
ತಂದೆ, ನೀ ಪೇಳ್ದ ದಿನ ಬದುಕಿ
ಒಂದಗಳು ಹೆಚ್ಚಿಿಲ್ಲ
ಒಂದಗುಳು ಕೊರೆಯಿಲ್ಲ
ತಂದೆ, ನೀನುಟ್ಟೂಟವುಂಡು
ಒಂದುಸಿರು ಮೇಲಿಲ್ಲ
ಒಂದುಸಿರು ಕೀಳಿಲ್ಲ
ತಂದೆ, ನೀಂ ಕೊಟ್ಟುಸಿರನುಸಿರಿ
ಎಂದು ನೀಂ ಕರೆವೆ ನಾ
ನಂದು ಬಹೆನಾದರದಿ
ತಂದೆ, ನಿನ್ನಡಿಯೆನ್ನ ನೆಲಸು.
ಇದೇ ಅಲ್ಲವೇ ಬದುಕಿನ ಸಾರ. ನಾವು ಯಾವುದು ನಮ್ಮದು ಎಂದು ಬೀಗುತ್ತೀವೋ ಅವೆಲ್ಲವೋ ಎರವಲು. ಆ ಎರವಲು ಕೊಟ್ಟವನಿಗೆ ನಿರಂತರ ನಮಸಿಸುವುದು ನಮ್ಮ ಆದ್ಯ ಕರ್ತವ್ಯ.