Wednesday, 11th December 2024

ಬಾಂಡೀಲು ಹುಲಿಗುಹೆ

ಕಾಡಿನ ನಡುವೆ ಇರುವ ಗುಹೆಗಳಲ್ಲಿ ಹಿಂದೆ ಹುಲಿಗಳು ವಾಸಿಸುತ್ತಿದ್ದವು. ಹುಲಿಗಳ ಸಂಖ್ಯೆ ಕ್ರಮೇಣ ಕಡಿಮೆ ಯಾದಂತೆಲ್ಲಾ, ಆ ಗುಹೆಗಳನ್ನು ಮುಳ್ಳು ಹಂದಿಗಳು ತಮ್ಮ ಮನೆಯನ್ನಾಗಿ ಮಾಡಿಕೊಂಡಿವೆ!

ಡಾ.ಕಾರ್ತಿಕ ಜೆ. ಎಸ್ ಸುರತ್ಕಲ್

ಕನ್ನಡ ಸಾರಸ್ವತ ಲೋಕಕ್ಕೆ ಮೃಗಯಾ ಸಾಹಿತ್ಯ ಪರಿಚಯಿಸಿದ ಕೆದಂಬಾಡಿ ಜತ್ತಪ್ಪ ರೈ ಬರೆದ ‘ಬೇಟೆಯ ನೆನಪುಗಳು’ ಎಂಬ
ಪುಸ್ತಕವನ್ನು ಓದಿದಾಗ ಮನಸ್ಸು ಹುಲಿಗುಹೆಗಳಿರುವ ಕಾಡಿನತ್ತ ಹೊರಳಿತು. ಹಿರಿಯರಲ್ಲಿ ಇದರ ಬಗ್ಗೆ ವಿಚಾರಿಸಿದಾಗ ಸಿಕ್ಕ ಸುಳಿವಿನಂತೆ, ಇಂದಿಗೂ ಕಾಣಸಿಗುವ ನಮ್ಮೂರ ಹುಲಿಗುಹೆಯತ್ತ ನಮ್ಮ ಪಯಣ ಸಾಗಿತು.

ಗಡಿನಾಡು ಕಾಸರಗೋಡು ಜಿಲ್ಲೆಯ ನೀರ್ಚಾಲು – ಮುಂಡಿತ್ತಡ್ಕ ದಾರಿಯಲ್ಲಿ ಐದು ಕಿ.ಮೀ. ಸಂಚರಿಸಿದಾಗ ಪಾಡ್ಲಡ್ಕ ಎಂಬ ಬಸ್ ನಿಲುಗಡೆ ಸ್ಥಳ ಕಾಣ ಸಿಗುತ್ತದೆ. ಅಲ್ಲಿಂದ ಕಾಕುಂಜೆ ರಕ್ತೇಶ್ವರಿ ದೈವಸ್ಥಾನದ ಗುಡಿಗೆ ತೆರಳುವ ಕಾಲು ದಾರಿಯಲ್ಲಿ ಐನೂರು ಮೀಟರ್ ಸಾಗಿದಾಗ ಕುರುಚಲು ಗಿಡಗಳಿಂದ ಆವೃತವಾದ ಕಾಡು ಸಿಗುತ್ತದೆ. ಹೊರಗಿನಿಂದ ನೋಡಿದಾಗ ಬಯಲು ಪ್ರದೇಶ ದಂತಿದ್ದರೂ, ಅಡ್ಡಾದಿಡ್ಡಿಯಾಗಿ ಬೆಳೆದಿರುವ ಗಿಡಗಳ ಸಮೀಪ ಹೋದಾಗ ವಿಶಾಲವಾದ ಬಂಡೆಯ ಅಡಿ  ಭಾಗದಲ್ಲಿರುವ ‘ಬಾಂಡೀಲು’ ಅಥವಾ ಹುಲಿಗುಹೆ ಗೋಚರಿಸುತ್ತದೆ.

ಹುಲಿ ವಾಸಿಸಿದ ಗುಹೆ
ಗುಹೆಯ ಪ್ರವೇಶ ದ್ವಾರ ಹತ್ತು ಮೀಟರ್ ನಷ್ಟು ಅಗಲವಾಗಿದ್ದು, ಒಳಗೆ ಐವತ್ತು ಮಂದಿ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇದೆ. ಹಿಂದೆ ಈ ಪ್ರದೇಶದಲ್ಲಿ ಹುಲಿ, ಚಿರತೆ, ಕತ್ತೆ ಕಿರುಬಗಳು ಸಂಚರಿಸುತ್ತಿದ್ದವು. ಮೇಯುವ ಜಾನುವಾರುಗಳ ರಕ್ಷಣೆಗೋಸ್ಕರ ಶಿಕಾರಿದಾರರು ಹತ್ತಿರದಲ್ಲಿರುವ ಮರಗಳನ್ನೇರಿ ಕಾದು ಕುಳಿತು, ಕೋವಿ ಬಳಸಿ ಹುಲಿ ಬೇಟೆ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.

ವಿಶಾಲವಾದ ಈ ಗುಹೆಯು ಹಗಲಿನಲ್ಲೂ ಕತ್ತಲಿನಿಂದ ಕೂಡಿದ್ದು, ಇಂದು ಮುಳ್ಳುಹಂದಿ, ಬಾವಲಿಗಳ ಆವಾಸಸ್ಥಾನವಾಗಿದೆ. ಗುಹೆಯ ಮುಂಭಾಗದಲ್ಲಿ ಅಲ್ಲಲ್ಲಿ ಮಣ್ಣು ಜರಿದಿದ್ದರೂ, ಗುಹೆಯ ಸ್ವರೂಪಕ್ಕೆ ಕುಂದು ಬಂದಿಲ್ಲ. ಈ ಗುಹೆಯ ಪಕ್ಕದಲ್ಲಿ ಇನ್ನೂ ಕೆಲವು ಸಣ್ಣ ಗುಹೆಗಳು ಇದ್ದಂತಹ ಕುರುಹುಗಳು ಕಾಣಸಿಗುತ್ತವೆ. ಗುಹೆಯ ಸುತ್ತಮುತ್ತಲಿನ ಪ್ರದೇಶವು ಪ್ರಶಾಂತ ವಾಗಿದ್ದು, ಹಸಿರಿನಿಂದ ಕೂಡಿದೆ. ಕಾಡು ಗಿಡ, ಕುರುಚಲು ಕಾಡು, ಹುಲ್ಲು ಬೆಳೆದ ಜಾಗ, ಅಲ್ಲಲ್ಲಿ ದೊಡ್ಡ ಮರಗಳು ಇಲ್ಲಿನ ಪ್ರಕೃತಿಯ ನೋಟಕ್ಕೆ ಮೆರುಗು ನೀಡಿವೆ. ಇಲ್ಲಿನ ಬಂಡೆಯು ಜಾರುವ ಮೇಲ್ಮೈ ಹೊಂದಿರುವುದರಿಂದ, ಅನುಭವಿ ಸ್ಥಳೀಯರ ಜತೆ ಈ ಗುಹೆಯನ್ನು ನೋಡಲು ಹೋಗುವುದು ಅತ್ಯಗತ್ಯ.

ಬಾಂಡೀಲು ವೀಕ್ಷಿಸಿ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುವಾಗ ‘ಹುಲಿ ಗುಹೆ’ ನೋಡಿದ ಸಾರ್ಥಕ ಭಾವ ಉಂಟಾಯಿತು. ಇಂತಹ ಅನೇಕ ಹುಲಿ ಗುಹೆಗಳು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿದ್ದು, ಹಲವು ಪ್ರಚಾರದಿಂದ ದೂರವಿವೆ, ಕೆಲವು ದಟ್ಟ ಕಾನನದ ನಡುವೆ ಮರೆಯಾಗಿವೆ.

ಎಲ್ಲಿದೆ?
ಕಾಸರಗೋಡು ಜಿಲ್ಲೆಯ ನೀರ್ಚಾಲು ಗ್ರಾಮದ ಪಾಡ್ಲಡ್ಕದ ಬಳಿ ಕಾಡಿನಲ್ಲಿದೆ. ಗುಹೆಯನ್ನು ನೋಡುವವರು, ಅಗತ್ಯವಾಗಿ ವೈಯಕ್ತಿಕ  ಸುರಕ್ಷತತೆಯನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯರ ಮಾರ್ಗದರ್ಶನದಲ್ಲಿ ಹೋಗುವುದು ಅತ್ಯಗತ್ಯ.