Saturday, 14th December 2024

ಸದಾ ನನ್ನ ಜತೆಗಿರು ಗೆಳೆಯ…

ವೀಚಿ

ನಡುಗುವ ಕೈಯಲ್ಲಿ ನನ್ನ ಹಣೆಗೆ ಸಿಂಧೂರವಿಟ್ಟ ಆ ದಿನ ಸ್ಪಷ್ಟವಾಗಿ ನೆನಪಿದೆ. ಕುಂಕುಮದ ಬಟ್ಟಲನ್ನು ನಿನ್ನ ಎದುರು ಹಿಡಿದು ಏನೊಂದೂ ಮಾತನಾಡದೇ ಕಣ್ಣಲ್ಲೇ ನಿವೇದನೆ ಇಟ್ಟಾಗ ಅದೆಷ್ಟು ಬೇಗ ಸ್ಪಂದಿಸಿಬಿಟ್ಟೆ !

ಮತ್ತೊಂದು ಗಳಿಗೆಯೂ ತಡ ಮಾಡದೇ ಚಿಟಿಕೆ ತುಂಬ ಕುಂಕುಮ ಹಿಡಿದು ಬೊಟ್ಟಿಟ್ಟಾಗ ನನ್ನ ಜೀವದಲ್ಲಿ ಉತ್ಸವ. ಆಗ ನಿನ್ನ ಕೈ ಹಗುರವಾಗಿ ನಡುಗಿದ್ದು ಮದುವೆಗೂ ಮೊದಲೇ ಹೆಣ್ಣೊಬ್ಬಳ ಹಣೆಗೆ ಮೊದಲ ಬಾರಿ ಕುಂಕುಮವಿಡುತ್ತಿದ್ದ ನವಿರಾದ ಆಘಾತಕ್ಕೋ ಅಥವಾ ಇನ್ನು ಮೇಲೆ ಈ ಹೆಣ್ಣು ನನ್ನವಳು ಎಂಬ ಉದ್ವೇಗಕ್ಕೋ ತಿಳಿಯಲಿಲ್ಲ. ಆ ದಿನ ನನ್ನೊಳಗೆದ್ದ ಆಮೋದದ ಅಲೆಗಳಿಗೆ ಮಿತಿಯೆನ್ನುವುದಿತ್ತೇ? ಪದೇ ಪದೇ ಕನ್ನಡಿ ನೋಡುತ್ತಾ ಬೈತಲೆಯ ನಟ್ಟ ನಡುವೆ ಗುಂಡಗೆ ಕೂತ ಕುಂಕುಮದ ಹುಡಿಯಲ್ಲಿ ನಿನ್ನ ಕಣ್ಣ ಹೊಳಪನ್ನು ಹುಡುಕುತ್ತಿದ್ದೆ.

ಹುಡುಕಿ ನಸು ನಾಚುತ್ತಿದ್ದೆ. ಹೆಣ್ಣಿನ ಬದುಕು ಮಗ್ಗಲು ಬದಲಿಸುವ ಕ್ಷಣಗಳವು. ತೊಟ್ಟ ಬಳೆಯ ಗಲಗುಟ್ಟುವಿಕೆಯಲ್ಲಿ, ಗೆಜ್ಜೆಯ ಕಿಣಿ ಕಿಣಿ ನಾದದಲ್ಲಿ, ಮಲ್ಲಿಗೆ ದಂಡೆಯ ಘಮದಲ್ಲಿ, ದೇಹ ಅರಳುವ ಹಸಿಬಿಸಿ ಕ್ಷಣದಲ್ಲಿ ತಟ್ಟನೆ ನಿನ್ನ ನೆನಪಾಗುತ್ತದೆ. ಇಲ್ಲಿಯವರೆಗೆ ಬದುಕಿದ್ದದ್ದೇ ಸುಳ್ಳೆಂಬಂತೆ, ಈಗ ನಿನ್ನ ಕೈಹಿಡಿಯುವ ಸಾಂಗತ್ಯದಲ್ಲೇ ಮರು ಹುಟ್ಟು ಪಡೆದಂತೆ ಸಂಭ್ರಮಿಸು ವುದಕ್ಕೆ ನನಗೂ ಅಚ್ಚರಿಯಾಗುತ್ತದೆ.

ಮದುವೆ ನಿಶ್ಚಯದ ದಿನದಿಂದ ಮದುವೆಯಾಗುವ ದಿನದವರೆಗಿನ ಈ ಮಧುರಾತಿ ಮಧುರ ದಿನಗಳನ್ನು ಬಣ್ಣಿಸುವುದಾದರೂ
ಹೇಗೆ? ನಿನ್ನ ಕಣ್ಸನ್ನೆ, ಪೋಲಿ ಹರಟೆಗಳು, ನಿನ್ನೆಲ್ಲ ಬೇಕು ಎಂಬ ಬೇಡಿಕೆಗಳಿಗೆ, ಸಿದ್ಧ ಉತ್ತರದಂತಹ ನನ್ನ ‘ಬೇಡ’ ಎಂಬ ತಲೆಯಾಡಿಸುವಿಕೆ, ಅವಕಾಶ ಸಿಕ್ಕಾಗ ಜೀವ ನಾಚಿ, ನೀರಾಗುವಂತಹ ಒಂದು ಬಿಸಿಯಪ್ಪುಗೆ.. ಎಲ್ಲವೂ.. ಈ ಎಲ್ಲವೂ ಕೊಡುವ ನವಿರುತನಕ್ಕೆ ಮದುವೆಯಾಗದೇ, ಆಗಬೇಕಾದ ಜೋಡಿಗಳಾಗಿಯೇ ಉಳಿದು ಬಿಡುವ ಎನ್ನಿಸುತ್ತದೆ.

ಕಾಲು ಮುಟ್ಟಿ ಓಡಿ ಹೋಗುವ ಸಮುದ್ರದ ಅಲೆಗಳ ನಡುವೆಯೂ ಇಬ್ಬರ ಹೆಜ್ಜೆಗಳು ಬೆಸೆದು ನಡೆಯುವುದನ್ನು ನೋಡುವಾಗ ಅನಂತ ಧನ್ಯತೆ ಆವರಿಸಿಕೊಳ್ಳುತ್ತದೆ. ಸಹ್ಯಾದ್ರಿಯ ಸೆರಗಿನಲ್ಲಿ ಜಾರುವ ಸೂರ್ಯ, ಬೀಳುವ ಮಳೆಯ ಸದ್ದು, ಚಿಲಿಪಿಲಿಗುಟ್ಟುವ ಹಕ್ಕಿಗಳ ಕಲರವ, ಅರಳುವ ಹೂವಿನ ನಸುನಗೆ, ಹುಲ್ಲಿನ ಮೇಲೆ ಜೀಕುವ ಮಂಜಿನ ಮುತ್ತು… ಪ್ರಕೃತಿಯ ಪ್ರತಿ ಚರ್ಯೆಯಲ್ಲೂ ಹೊಸದೇನೋ ಅರ್ಥ ಕಾಣುತ್ತದೆ. ನನ್ನ ಬದುಕು ಸಹ ಇಂತದ್ದೇ ಒಂದು ಹೊಚ್ಚ ಹೊಸ ತಿರುವಿಗಾಗಿ ಮೊರೆಯುತ್ತದೆ.

ನಿನ್ನ ಬೊಗಸೆಯಲ್ಲಿ ನನ್ನೀಡಿ ಜೀವನವನ್ನು ಒಗಾಯಿಸಿ ನಿರಾಳವಾಗಿ ಬದುಕಿ ಬಿಡುವ ಆಸೆ. ಇಷ್ಟವಾದದ್ದನ್ನು ಯಾರಿಗೂ ಕೊಟ್ಟೇ ಗೊತ್ತಿರದ ನಾನು, ಹೀಗೇ ಮದುವೆ ಎಂಬ ಸಿಹಿ ಸಂಕಟಕ್ಕೆ ಸಿಕ್ಕಿ ಮತ್ತೊಂದು ಮಾತಿರದೇ ನನ್ನನ್ನು ನಾನೇ ನಿನಗೊಪ್ಪಿಸು ತ್ತಿದ್ದೇನೆ. ಹೀಗೇ ಜೊತೆಗಿರು ಗೆಳೆಯ… ನನ್ನ ಸಾಫಲ್ಯಗಳಿಗೆ ಕಾರಣವಾಗಿ, ಎದುರಾಗುವ ಎಡರು ತೊಡರುಗಳನ್ನು ಭರಿಸುವುದಕ್ಕೆ ಶಕ್ತಿಯಾಗಿ…