ವಿದ್ವಾನ್ ನವೀನಶಾಸ್ತ್ರಿ .ರಾ.ಪುರಾಣಿಕ
ಬ್ರಾಹ್ಮೀ ಮುಹೂರ್ತದಲ್ಲಿ ನಡೆಸುವ ಅಧ್ಯಯನ, ಧ್ಯಾನ, ಪಠಣ ಎಲ್ಲವೂ ಶ್ರೇಷ್ಠ ಎನ್ನಲಾಗಿದೆ. ಬ್ರಾಹ್ಮೀ ಮುಹೂರ್ತದ ವಿಶೇಷವೇನು?
ವೇದ ಪುರಾಣಗಳಲ್ಲಿ ಬ್ರಾಹ್ಮೀ ಮುಹೂರ್ತ ಎಂಬ ವಿಶೇಷ ಮಹತ್ವ ಇರುವ ಸಮಯವಿದೆ. ತನ್ನ ಸುತ್ತ ವಿಶಿಷ್ಟ ಪ್ರಭಾವಲಯ ವನ್ನು ಹೊಂದಿರುವ, ಹಲವು ಕಾರ್ಯಗಳಿಗೆ ಶುಭ ಎನಿಸಿರುವ ಬ್ರಾಹ್ಮೀ ಮುಹೂರ್ತಕ್ಕೆ ಅಮತಹ ಮಹತ್ವ ಮತ್ತು ಪಾವಿತ್ರ್ಯತೆ ಕೂಡಿ ಬಂದಿದ್ದು ಹೇಗೆ?
ಬ್ರಾಹ್ಮೀ ಮುಹೂರ್ತಂ ಉತ್ತಿಷ್ಟೆತ್
ಸ್ವಸ್ತೋ ರಕ್ಷಾರ್ಥಂ ಆಯುಷಃ |
ತಾತ್ರ ಸರ್ವಾರ್ಥ ಸಂಧ್ಯಾರ್ಥಂ
ಸಮೀಕ್ಷ ಮಧುಸೂದನಂ||
ಮುಂಜಾನೆಯ ನಸುಕಿನ ೩:೦೦ ರಿಂದ ೬:೦೦ ರವರೆಗಿನ ಸಮಯದಲ್ಲಿ ಧ್ಯಾನ, ಯೋಗ, ಜಪ, ಪೂಜೆ ಮುಂತಾದ ಸತ್ಕರ್ಮ ಗಳನ್ನಾಚರಿಸಿದರೆ ಹೆಚ್ಚು ಫಲಪ್ರದ. ಇದನ್ನೇ ಬ್ರಾಹ್ಮೀ ಮುಹೂರ್ತವೆಂದು ಕರೆಯ ಲಾಗಿದ್ದು, ಈ ಸಮಯದಲ್ಲಿ ನಡೆಸುವ ಅಧ್ಯಯನ, ಧ್ಯಾನ, ಪೂಜೆ, ಸಾಧನೆ, ಪ್ರಾಣಾಯಾಮ, ಲಘು ವ್ಯಾಯಾಮ ಎಲ್ಲವೂ ಉತ್ತಮ ಎನಿಸುವ ಫಲ ನೀಡುತ್ತವೆ. ಮನುಸ್ಮೃತಿಯಲ್ಲಿ ಬ್ರಹ್ಮ ಮುಹೂರ್ತದ ಬಗ್ಗೆ ಹೇಳಲಾಗಿದೆ.
ಬ್ರಹ್ಮ ಮುಹೂರ್ತಂ ಉದಯೆತ್ ಧರ್ಮಾರ್ಥ
ಚಾಣಚಿಂತಯೆತ್
ಕಾಯಕಾಲೇಚ ಆತತನುಮೇಲಾನ್ ವೇದದ್ವಾರತ್ಮೆಭವ||
ಪ್ರತಿನಿತ್ಯ ಬ್ರಹ್ಮಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ತೇಜಸ್ ಹಾಗೂ ಆರೋಗ್ಯ ಗಳು ವೃದ್ಧಿಸುತ್ತವೆ. ಈ ಸಮಯದಲ್ಲಿ ನಿದ್ರಿಸುವುದು ಶಾಸ ನಿಷಿದ್ಧವಾದದ್ದು. ರಾತ್ರಿಯ ಸಮಯವನ್ನು ನಾಲ್ಕು ಭಾಗಗಳಲ್ಲಿ ಪುರಾಣಗಳಲ್ಲಿ ವಿಂಗಡಿಸಲಾಗಿದೆ ಅವುಗಳು, ಸಂಜೆ ಆರರಿಂದ ಒಂಬತ್ತರರವರೆಗೆ ರುದ್ರ ಕಾಲವೆಂದೂ, ಒಂಬತ್ತರಿಂದ
ಹನ್ನೆರಡರವರೆಗೆ ರಾಕ್ಷಸ ಕಾಲವೆಂದೂ, ಹನ್ನೆರಡರಿಂದ ಮೂರನ್ನು ಗಂಧರ್ವಕಾಲವೆಂದೂ, ಮೂರರಿಂದ ಆರರವರೆಗೆ ಮನೊಹರ ಕಾಲವೆಂದೂ ವಿಭಾಗಿಸಲಾಗಿದೆ.
ರುದ್ರಕಾಲದಲ್ಲಿ ಮಲಗಬಾರದು, ರಾಕ್ಷಸಕಾಲದಲ್ಲಿ ಎಚ್ಚರವಿರಬಾರದು, ಗಂಧರ್ವ ಕಾಲದಲ್ಲಿ ನಿದ್ದೆ ತುಂಬಾ
ಆಳವಾಗಿರುತ್ತದೆ ಎಂದೂ ಹಾಗೆಯೇ ಮನೋಹರ ಕಾಲದಲ್ಲಿ ಹೇಗಾದರೂ ನಾವು ಏಳಲೇ ಬೇಕು ಎಂಬ ನಿಯಮ ಮಾಡಿದ್ದಾರೆ. ಯಾಕೆಂದರೆ ಮನೋಹರ ಕಾಲದಲ್ಲಿ ವಿಶ್ವಶಕ್ತಿಯ ಸಂಚಾರ ತುಂಬಾ ಹೆಚ್ಚಿರುವುದರಿಂದ ಈ ಕಾಲ ಒಳ್ಳೆಯದು ಎಂಬ ನಂಬಿಕೆ. ಬ್ರಹ್ಮಾಂಡವನ್ನು ಸರಿಯಾಗಿ ನಡೆಸಿಕೊಂಡು ಹೋಗುವ ಈ ವಿಶ್ವಶಕ್ತಿ ನಾವು ಮಲಗಿರುವಾಗ ಸ್ವಲ್ಪ ಮಟ್ಟಿಗೆ ನಮ್ಮ ಮೆದುಳನ್ನು ಸೇರುತ್ತದೆ.
ಪರಿಶುದ್ಧ ವಾತಾವರಣ
ವೈeನಿಕ ದೃಷ್ಟಿಯಿಂದಲೂ ಬ್ರಹ್ಮ ಮುಹೂರ್ತದಲ್ಲಿ ವಾಯುಮಂಡಲ ಮಾಲಿನ್ಯದಿಂದ ವಿಮುಕ್ತವಾಗಿರುತ್ತದೆ. ಅಂತಹ ಸಮಯದಲ್ಲಿ ಎಚ್ಚರವಿದ್ದಾಗ, ನಮ್ಮ ಶ್ವಾಸಕೋಶಗಳು ಶುದ್ಧಿಯಾಗುತ್ತವೆ. ಶುದ್ಧಪ್ರಾಣವಾಯುವಿನಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯಕರವಾಗಿರುತ್ತದೆ.
ಯಾರು ಬ್ರಹ್ಮ ಮುಹೂರ್ತದದ್ದು ನಡೆಯುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆಂದು ಆಯುರ್ವೇದ ತಿಳಿಸುತ್ತದೆ. ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿಯಿರುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿ ಮನವರಿಕೆಯಾಗುತ್ತದೆ. ಪ್ರಮುಖ ಮಂದಿರಗಳ ಮುಖ್ಯದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದ. ದೇವರ ಶೃಂಗಾರ ಹಾಗೂ ಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ.
ಬ್ರಹ್ಮ ಮುಹೂರ್ತದಲ್ಲಿ ಭಗವಂತನ ಪೂಜೆ, ಧ್ಯಾನ ಹಾಗೂ ಪವಿತ್ರಕಾರ್ಯಗಳನ್ನು ಮಾಡುವುದರಿಂದ ಆತ್ಮ ಶಕ್ತಿ ಪ್ರಾಪ್ತಿಯಾಗುತ್ತದೆ. ಜ್ಞಾನ, ವಿವೇಕ, ಶಾಂತಿ, ಸುಖ ಮುಂತಾದ ಸದ್ಗುಣಗಳ ವೃದ್ಧಿಯಾಗುತ್ತದೆ. ಆಯುರ್ವೇದದ ಪ್ರಕಾರ ಯಾರೂ ಹತ್ತು ಗಂಟೆಯಿಂದ ಎರಡು ಗಂಟೆಯವರೆಗೂ ಎಚ್ಚರವಿರಬಾರದು. ದಿನ ನಿತ್ಯ ಉಪಯೋಗಿಸದೆ ಇರುವ ನಮ್ಮೊಳಗಿನ (ಅಂತಃಶಕ್ತಿ)ಎನರ್ಜಿಯನ್ನು ಉಪಯೋಗಿಸಿಕೊಳ್ಳಲು ಮಹರ್ಷಿ ಪತಂಜಲಿ ಒಂದು ಸೂತ್ರ ತಿಳಿಸಿದ್ದಾರೆ ಅದೆನೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ.
ಇವುಗಳನ್ನು ಅಷ್ಟಾಂಗಯೋಗ ಸೂತ್ರವೆಂದು ಕರೆಯುತ್ತಾರೆ. ಇದರಲ್ಲಿ ಐದನೆಯದು ಅಂದರೆ ಪ್ರತ್ಯಾಹಾರ. ನಮ್ಮ ಪಂಚೆಂದ್ರಿಯಗಳನ್ನು ಉದ್ದೇಶಿಸಿ ಇರುವಂತಹದ್ದು. ಯೋಗಿಗಳು ಅವರ ಇಚ್ಛಾಶಕ್ತಿಗಳ ಮೂಲಕ ಪಂಚೆಂದ್ರಿಯಗಳನ್ನು ಧ್ಯಾನದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಆದರೆ ಸಾಮಾನ್ಯರಾದ ನಮಗೆ ಇದು ಸಾಧ್ಯವಿಲ್ಲ. ಸಣ್ಣ ಸಣ್ಣ ಶಬ್ದಗಳಿಗೂ ನಮ್ಮ ಮೆದುಳು ಬಹಳ ಬೇಗ ಪ್ರತಿಕ್ರಿಯಿಸುತ್ತದೆ. ಆದ್ದರಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುವುದರ ಮೂಲಕ ನಮ್ಮ ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು. ನಸುಕಿನ ಈ ಮುಹೂರ್ತದಲ್ಲಿ ಏಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯಗಳು ವೃದ್ಧಿಸುತ್ತವೆ ಎನ್ನುತ್ತದೆ ನಮ್ಮ ಪೂರ್ವಜರ ಜ್ಞಾನ.
ಬ್ರಹ್ಮಮುಹೂರ್ತೇ ಯಾ ನಿದ್ರಾ ಸಾ ಪುಣ್ಯಕ್ಷಯಕಾರಿಣೀ
ಬ್ರಹ್ಮಮುಹೂರ್ತದಲ್ಲಿ ಯಾರು ನಿದ್ರೆ ಮಾಡುತ್ತಾರೋ ಅವರ ಪುಣ್ಯಫಲಗಳು ನಾಶವಾಗುತ್ತವೆ ಎಂದು ಹಿಂದಿನವರು ಎಚ್ಚರಿಸಿದ್ದಾರೆ.
ಆಲಸ್ಯವನ್ನು ಬಿಟ್ಟು ಬ್ರಹ್ಮ ಮುಹೂರ್ತದದ್ದು ಪುಣ್ಯ ಕರ್ಮಗಳನ್ನು ಮಾಡಿದರೆ ಶ್ರೇಯಸ್ಸು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿದ್ಯಾರ್ಥಿಗಳಿಗೆ ವಿಷಯ ಮನನ ಮಾಡಲು ಈ ಸಮಯ ಬಹು ಪ್ರಶಸ್ತ. ಅದೇ ರೀತಿ ವಿವಿಧ ಸಾಧನೆ ಮಾಡುವವರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಮಾಡುವವರಿಗೆ, ಬರಹಗಾರರಿಗೆ, ಕವಿಗಳಿಗೆ ಬ್ರಾಹ್ಮೀ ಮುಹೂರ್ತ ಹೇಳಿ ಮಾಡಿಸಿದ್ದು. ಆ ಸಮಯದಲ್ಲಿ ಮಾಡಿದ ಕಾರ್ಯಗಳೆಲ್ಲವೂ ಅಂತಃಶಕ್ತಿಯ ಬೆಂಬಲ ಪಡೆದು ಪರಿಪೂರ್ಣ ಎನಿಸುತ್ತವೆ.