Saturday, 14th December 2024

ಬುದ್ಧಚರಣ – ಲಲಿತ ಛಂದೋಲಯದ ಮಹಾಕಾವ್ಯ

ಎಚ್.ಎಸ್.ವೆಂಕಟೇಶಮೂರ್ತಿ

ಹಿರಿಯ ಕವಿ ಎಚ್ಚೆಸ್ವಿಯವರು ಬುದ್ಧನ ಕುರಿತು ಧ್ಯಾನಿಸುತ್ತಾ ಒಂದು ಮಹಾಕಾವ್ಯವನ್ನು ರಚಿಸಿದ್ದಾರೆ. ಇಂದಿನ ಕರೋನಾ ಸಂಕಟದ ಸಂದರ್ಭದಲ್ಲಿ ಬುದ್ಧನ ಕಥನವು ನಮ್ಮ ಜೀವನದಲ್ಲಿ ಹೊಸ ಅರ್ಥಗಳನ್ನು ತುಂಬಿಕೊಡಲು ಸಾಧ್ಯ. ಈ ಮಹಾ ಕಾವ್ಯವನ್ನು ರಚಿಸಿದ ಹಿನ್ನೆಲೆ, ಪ್ರೇರಣೆಯನ್ನು ಎಚ್ಚೆಸ್ವಿಯವರ ಮಾತುಗಳಲ್ಲೇ ಕೇಳುವುದು ವಿಶಿಷ್ಟ ಅನುಭವ. ಇಂದು ಬಿಡಗಡೆಯಾಗಲಿರುವ ‘ಬುದ್ಧಚರಣ’ ಮಹಾಕಾವ್ಯದ ಆಯ್ದ ಭಾಗಗಳನ್ನು ಸಹ ‘ವಿಶ್ವವಾಣಿ’ಯ ಓದುಗರಿಗಾಗಿ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.

ನಾನು ಬುದ್ಧನನ್ನು ಕುರಿತು ಬರೆಯಬೇಕೆಂದು ಸಂಕಲ್ಪಿಸಿದ್ದು ಇಪ್ಪತ್ತು ವರ್ಷಗಳ ಹಿಂದೆ. ಮಾನ್ಯ ಗೋವಿಂದ ಪೈ ಅವರ ವೈಶಾಖಿ ಮತ್ತು ಅವರ ಇತರ ಬುದ್ಧ ಪರಿಸರದ ಕಿರುಗವಿತೆಗಳು ನನ್ನನ್ನು ಗಾಢವಾಗಿ ಪ್ರಭಾವಿಸಿದ್ದವು. ರಾಜರತ್ನಂ ಅವರ ಬುದ್ಧನ ಕುರಿತ ಕೃತಿಗಳು ನಿರ್ವಾತದಲ್ಲಿ ಒಂದು ವಾತಾವರಣ ನಿರ್ಮಿಸುತ್ತಾ ಇದ್ದವು. ಬುದ್ಧನ ಮಾನ ವತ್ವದ ಔನ್ನತ್ಯಕ್ಕೆ ನಾನು ಸಂಪೂರ್ಣವಾಗಿ ಮನಸೋತಿದ್ದೆ.

ನಾನು ಬುದ್ಧನನ್ನು ಕುರಿತು ಚಿಂತಿಸುತ್ತಿರುವೆನೆಂದು ತಿಳಿದು ನನ್ನ ಆಪ್ತರು ಮತ್ತು ಗೆಳೆಯರು ನನಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವಾಗಲೆಲ್ಲಾ ಬುದ್ಧನ ಕುರಿತ ಕೃತಿಗಳನ್ನೇ ನೀಡತೊಡಗಿದರು. ಹಾಗೆ ಉಡುಗೊರೆ ನೀಡಿದವರಲ್ಲಿ ಡಾ.ಜಿ.ಎಸ್.ಎಸ್, ಡಾ.ಎಲ್.ಬಸವರಾಜು, ಡಾ.ಉಷಾ ವಸ್ತಾರೆ, ಡಾ.ತಾಳ್ತಜೆ ವಸಂತಕುಮಾರ್, ಸಿ. ಚನ್ನ ಬಸವಣ್ಣ, ಡಾ.ಎಸ್.ನಟರಾಜ್ ಬೂದಾಳು, ಮೊಳಕಾಲ್ಮೂರು ಶ್ರೀನಿವಾಸಮೂರ್ತಿ, ಡಾ.ಮಾಧವರಾವ್, ಡಾ.ಜಿ.ಬಿ.ಹರೀಶ್, ಡಾ.ಬಿ.ವಿ.ರಾಜಾ ರಾಮ್, ಸುನೀತಾ ಅನಂತ ಸ್ವಾಮಿ ಮುಖ್ಯರು.

ಬುದ್ಧನ ವ್ಯಕ್ತಿತ್ವ ನನ್ನ ನಿತ್ಯ ಸ್ಮರಣೆಯಾಗುವಂತೆ ಬಹು ಸುಂದರವಾದ ಮತ್ತು ಅಪರೂಪವಾದ ಬುದ್ಧಶಿಲ್ಪ, ಚಿತ್ರಿಕೆಗಳನ್ನು ನನಗೆ ನನ್ನ ಆಪ್ತರು ನೀಡತೊಡಗಿದರು. ಜಿ.ಎಸ್.ಎಸ್. ತಮ್ಮ ಬರೆಯುವ ಮೇಜಿನ ಮೇಲೆ ಸದಾ ಇರಿಸಿಕೊಂಡಿರುತ್ತಿದ್ದ ಬುದ್ಧನ
ಮುಖಾಕೃತಿಯನ್ನು ನೀಡಿದರು. ರವಿಬೆಳಗೆರೆ ಅವರು ದಿವ್ಯವಾದ ಬುದ್ಧನ ಲೋಹ ಪ್ರತಿಮೆಯನ್ನು ಉಡುಗೊರೆಯಾಗಿ  ನೀಡಿ ದರು. ಅಮರದೇವ, ಫ್ರಾನ್ಸಿಸ್ ಬೇಗೂರ್ ಬೃಹದ್ಗಾಾತ್ರದ ಭಿತ್ತಿಚಿತ್ರಗಳನ್ನು ನೀಡಿದರು.

ಇಂಥ ಬುದ್ಧಶಿಲ್ಪಗಳ ಉಡುಗೊರೆ ಯನ್ನು ನನ್ನ ಮಕ್ಕಳಿಂದಲೂ ನಾನು ಪಡೆದಿದ್ದೇನೆ. ನನ್ನ ಪುಟ್ಟ ಮೊಮ್ಮಗಳು ಬಹು ಸುಂದರವಾದ ಬುದ್ಧವರ್ಣಿಕೆಯನ್ನು ನನ್ನ 75ನೇ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದನ್ನು ಮರೆಯುವಂತೆಯೇ ಇಲ್ಲ!

ಬುದ್ಧಚರಣದ ನಿರ್ಮಾಣಕ್ಕೆ ತೊಡಗಿದ್ದೇನೋ ಆಯಿತು. ನೂರಾರು ಪುಟ ಬರೆಯುವುದು, ಬರೆದದ್ದು ತೃಪ್ತಿ ತರದೆ ಹರಿಯು ವುದು ನಡೆದೇ ಇತ್ತು. ಬುದ್ಧನ ಮನೋಧರ್ಮಕ್ಕೆ ಯುಕ್ತವಾದ ಲಯ ಮತ್ತು ನುಡಿಗಟ್ಟು ದಕ್ಕಿಸಿಕೊಳ್ಳುವುದು ನನ್ನ ಮೊದಲ ಅಗತ್ಯವಾಗಿತ್ತು. ಮನೆಯ ಒಳಗೆ ಹೊರಗೆ ಅತ್ಯಾಪ್ತರನೇಕರು ಮರಣವಶರಾಗಿ ಗಾಢವಾದ ವಿಷಾದ ಮನಸ್ಸನ್ನು ಆವರಿಸಿದ್ದ ದಿನಗಳವು. ನನ್ನ ಪತ್ನಿ ಮರಣಶಯ್ಯೆಯಲ್ಲಿರುವಾಗ, ಬುದ್ಧಕೃತಿಯನ್ನು ನಾನು ಮುಗಿಸಲೇಬೇಕೆಂದೂ, ಹಾಗೆ ಮುಗಿಸಿದ ಕೃತಿಯನ್ನು ತನಗೇ ಕೊಡುಗೆಯಾಗಿ ನೀಡಬೇಕೆಂದು ಆರ್ತನೋಟ ಬೀರುತ್ತಾ ಹೇಳಿದಾಗ ನನಗೆ ಕರುಳು ಕತ್ತರಿಸಿದ ಅನುಭವ ವಾಯಿತು. ಹತ್ತಿರವಿರುವವರು ಸದಾ ನಮ್ಮ ಬಳಿಯೇ ಇರುತ್ತಾರೆಂದು ನಾವು ಯಾವಾಗಲೂ ದೂರವಿರುವವರನ್ನು ಸಮೀಪಕ್ಕೆ ಸ್ವಾಗತಿಸುತ್ತೇವೆ. ನನ್ನ ಪತ್ನಿಯ ವಿಷಯದಲ್ಲಿ ಆದದ್ದಾದರೂ ಅದೆ! ಅವಳೂ ನನ್ನನ್ನು ತೊರೆದ ಮೇಲೆ ಆಕೆಯ ಸಾವಿನ ದಾರುಣ ಪರಿಣಾಮ ನನ್ನನ್ನು ಸಂಪೂರ್ಣವಾಗಿ ವಿಚಲಿತಗೊಳಿಸಿತು. ಈ ವಿಷಾದ ಆವರಿಸದೆ ಪ್ರಾಯಃ ಬುದ್ಧನ ಮಹಾಮೈತ್ರಿ ಮತ್ತು ಲೋಕಕಾರುಣ್ಯದ ಸಮೀಪ ಸುಳಿಯಲೂ ನಾನು ಅಸಮರ್ಥನಾಗುತ್ತಿದ್ದೆನೆಂದು ಈಗ ಅನ್ನಿಸುತ್ತಿದೆ.

ಡಾ.ಎಲ್.ಬಸವರಾಜು ಅವರ ಬುದ್ಧಚರಿತೆ ಮತ್ತು ಸೌಂದರನಂದ (ಅಶ್ವಘೋಷನ ಸಂಸ್ಕೃತ ಮೂಲದಿಂದ ಅದರ ಸಮಸ್ತ ಭಾವಜಗತ್ತಿನೊಂದಿಗೆ ಕನ್ನಡಕ್ಕೆ ಅವತರಿಸಿದ್ದ ಕೃತಿಗಳು) ಬುದ್ಧನ ಬಗ್ಗೆ ಬರೆಯಲು ಅಗತ್ಯವಾದ ಒಂದು ಭಾಷಿಕ ಸಾಮಗ್ರಿ
ಮತ್ತು ಲಯವನ್ನು ನನ್ನ ಅನುಬೋಧೆಗೆ ತಂದವೆಂದು ಕಾಣುವುದು.

ಮಾಸ್ತಿಯವರ ಸಾರಿಪುತ್ರನ ಕಡೆಯ ದಿನಗಳು ಮತ್ತು ಯಶೋಧರೆ ನಾಟಕ, ಕುವೆಂಪು ಅವರ ಮಹಾರಾತ್ರಿ, ಬೇಂದ್ರೆ ಅವರ
ಬುದ್ಧನನ್ನು ಕುರಿತ ಅದ್ಭುತವಾದ ಬಿಡಿಪದ್ಯ, ಕಾರಂತರ ಕಿಸಾಗೌತಮಿ, ಪ್ರಭು ಶಂಕರರ ಅಂಗುಲೀಮಾಲ, ಶ್ರೀನಿವಾಸ ಮೂರ್ತಿ ಯವರ ಬುದ್ಧನೊಡನೆ-ಮತ್ತೆ ಮತ್ತೆ ಓದುತ್ತಾ ಇದ್ದೆ. ಕಾಲದ ಅರೂಪವನ್ನು ಸದ್ಯೀಕರಿಸಲು ಅವು ಕನ್ನಡದ ಕೃತಿಗಳಾದ ಕಾರಣ ನನಗೆ ಸಹಾಯಕ ಆಗುತ್ತವೆ ಎಂದು ನನ್ನ ಒಳಮನಸ್ಸು ಯಾವಾಗಲೂ ಹೇಳುತ್ತಾ ಇತ್ತು. ಲೋಕ ಮತ್ತು ತತ್ವ ಗ್ರಹಿಕೆಗೆ ಅನ್ಯ ಭಾಷಾ ಕೃತಿಗಳು, ವಿಶೇಷವಾಗಿ ಆಂಗ್ಲಭಾಷೆಯ ಕೃತಿಗಳು ನನಗೆ ಸಹಾಯ ಮಾಡಿದವು.

ನನ್ನ ಮನೋಗರ್ಭದಲ್ಲಿ ಹುದುಗಿದ್ದ ವೈಶಾಖಿಯ ಮೂಲಬೀಜ ಈಗ ಒದ್ದೆಗೊಂಡು ಕಂಪಿಸತೊಡಗಿತ್ತು. ಈ ದಿನಗಳಲ್ಲೇ ನಾನು ಬುದ್ಧ ಯಾತ್ರೆಗೆ ತೊಡಗಿದ್ದು. ಭಾರತ ಮತ್ತು ನೇಪಾಳದಲ್ಲಿ ಬುದ್ಧ ಜೀವಿತದ ಮುಖ್ಯ ಘಟನಾವಳಿ ಸಂಭವಿಸಿದೆಡೆಯಲ್ಲೆಲ್ಲಾ ಯಾತ್ರಿಯಾಗಿ ಅಲೆದುಬಂದೆ. ಆ ದಿನಗಳಲ್ಲಿ ಬುದ್ಧನನ್ನು ಮುಟ್ಟಲು ಅಗತ್ಯವಾಗಿದ್ದ ಒಂದು ಭಾಷಾಕಲ್ಪ ಮತ್ತು ಲಯ ಪ್ರತೀತಿ ನನ್ನ ಮನೋ ಭೂಮಿಕೆಯಲ್ಲಿ ಸಂಚರಿಸತೊಡಗಿದವು. ಬುದ್ಧನನ್ನು ಕುರಿತ ವಿಭಿನ್ನ ಪ್ರವೇಶಗಳು ಅಜ್ಞಾತಕ್ಕೆ ಅನೇಕ ಸೀಳು ಹಾದಿಗಳನ್ನು ತೆರೆಯತೊಡಗಿದವು. ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡಕರ್, ಪುತಿನ, ಜಿಎಸ್ಸೆಸ್, ರಂಗಾಚಾರ್, ಶ್ರೀರಾಮ
ಭಟ್, ನಾನು ಭೆಟ್ಟಿ ಮಾಡಿದ ಬೇರೆಬೇರೆ ಬೌದ್ಧಚಿಂತಕರು ಆಗಾಗ ಆಡಿದ ಮಾತುಗಳು, ರಚಿಸಿದ ಕೃತಿಗಳು, ಗಾರಾದ ಮಣ್ಣಿಗೆ ಬೀಳುವ ಮಳೆಯಂತೆ ಮನೋಭೂಮಿಕೆಯನ್ನು ತೊಯ್ಸತೊಡಗಿದವು.

ರಾಮ, ಕೃಷ್ಣರಂತೆ ಬುದ್ಧನೂ ನನ್ನ ಅಂತಸ್ಥ ಪುತ್ಥಳಿಯಾಗುವುದಕ್ಕೆೆ ಸುದೀರ್ಘವಾದ ಧ್ಯಾನಚಾರಣವನ್ನು ನಾನು ಕೈಗೊಳ್ಳ ಬೇಕಾಯಿತು. ಕಲಬುರಗಿಯಲ್ಲಿ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ನಿರ್ಮಿಸಿರುವ ಭೂಮಾಕಾರದ ಬುದ್ಧವಿಹಾರವನ್ನು ಸಂದರ್ಶಿಸಿ ಅಲ್ಲಿ ಧ್ಯಾನಕ್ಕೆ ತೊಡಗಿದಾಗ, ಈಗ ಇದು ಆರಂಭ, ಇನ್ನು ಕೃತಿಯನ್ನು ಮುಗಿಸುವೆನು ಎಂಬ ವಿಲಕ್ಷಣ ಬೋಧೆ
ಮನಸ್ಸಲ್ಲಿ ಉಂಟಾಯಿತು.

ವರ್ಷದ ಹಿಂದೆ ಮತ್ತೆ ಆರಂಭಿಸಿದ್ದ ಬುದ್ಧಕಾವ್ಯಕ್ಕೆ ಈಗ ಪ್ರವಾಹದ ತುರುಸು ಉಂಟಾಯಿತು. ಕರೋನ ವಿಧಿಸಿದ ಗೃಹಬಂಧನ, ದೊರಕಿಸಿದ ಸಾವಿನ ನಿತ್ಯಸನ್ನಿಧಿ ನನಗೆ ಅತ್ಯಗತ್ಯವಾಗಿದ್ದ ಏಕಾಂತವನ್ನೂ, ಅತೀವವಾದ ಮನಸ್ಸಿನ ಒತ್ತಡವನ್ನೂ ದೊರಕಿ ಸಿತು. ನನಗೆ ಬರೆದಲ್ಲದೆ ವಿಮೋಚನೆಯ ಮಾರ್ಗವೇ ಇರಲಿಲ್ಲ.

ಬರೆದದ್ದನ್ನು ಬರೆಬರೆದಂತೆ ಆಪ್ತ ಗೆಳೆಯರಿಗೆ ಕಳುಹಿಸಿಕೊಟ್ಟೆ. ಅವರ ಇತ್ಯಾತ್ಮಕ ಸ್ಪಂದನ ಮನಸ್ಸಿನಲ್ಲಿ ಹೊಸ ಜೀವೋತ್ಸಾಹ ತುಂಬಿತು. ಜಿ.ಎನ್.ಆರ್., ಲಕ್ಷ್ಮಣರಾವ್, ನರಹಳ್ಳಿ, ಎಚ್.ಎಸ್.ಆರ್., ಎಸ್. ಆರ್.ವಿ., ಟಿ.ಪಿ. ಅಶೋಕ, ಜೋಗಿ, ಕೆ. ಸತ್ಯನಾರಾ
ಯಣ, ಡುಂಡಿರಾಜ, ರಾಘವೇಂದ್ರ ಪಾಟೀಲ, ಜಿ.ಬಿ. ಹರೀಶ್, ಚಿಂತಾಮಣಿ ಕೊಡ್ಲೆಕೆರೆ – ಈ ಆಪ್ತರಪಟ್ಟಿ ದೊಡ್ಡದಿದೆ.

ಅವರೆಲ್ಲರನ್ನೂ ನಾನಿಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಬುದ್ಧ ಕಾವ್ಯ ನಾನು ಬರೆಯತೊಡಗಿರುವೆನೆಂದು ತಿಳಿದಿದ್ದೇ ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ, ಪ್ರಭಾ ಕಂಬತ್ತಳ್ಳಿ ದಂಪತಿ ನಮ್ಮ ಮನೆಗೆ ಬಂದು (ಹತ್ತು ವರ್ಷದ ಹಿಂದಿನ ಮಾತು!) ಈ ಕೃತಿ ಮುಗಿದಾಗ ಅದನ್ನು ತಮ್ಮ ಪ್ರಕಾಶನಕ್ಕೇ ನೀಡಬೇಕೆಂದು ಆಗ್ರಹಪೂರ್ವಕವಾಗಿ ವಿನಂತಿಸಿದ್ದರು. ಕೊಟ್ಟ ಮಾತಿನಂತೆ ಅಂಕಿತಕ್ಕೆ ಈ ಕೃತಿಯನ್ನು ಈಗ ನೀಡುತ್ತಾ ಇದ್ದೇನೆ. ಗ್ರಂಥವನ್ನು ಬಹು ಸುಂದರವಾಗಿ ಪ್ರಕಟಿಸುತ್ತಿರುವ ಮಿತ್ರ ಕಂಬತ್ತಳ್ಳಿ
ಅವರಿಗೆ ಆಭಾರಿಯಾಗಿದ್ದೇನೆ. ನನ್ನ ಕುಮಾರವ್ಯಾಸ ಕಥಾಂತರಕ್ಕೆ ವಿನ್ಯಾಸ ಕಲ್ಪಿಸಿದ್ದ ರಘು ಅಪಾರ ಈ ಕೃತಿಗೂ ಮುಖಚಿತ್ರ ರಚಿಸಿಕೊಟ್ಟಿದ್ದಾರೆ.

ಮುದ್ರಕ ಮಿತ್ರರಾದ ಸ್ವ್ಯಾನ್ ಕೃಷ್ಣಮೂರ್ತಿ ಸುಂದರವಾಗಿ ಗ್ರಂಥವನ್ನು ಮುದ್ರಿಸಿದ್ದಾರೆ. ಬಿ.ಆರ್.ಎಲ್. ಕಡೆಯಿಂದ ವಾಗೀಶ ಹೆಗಡೆ ಅವರ ಪರಿಚಯವಾಗಿ, ಅವರ ಧ್ವನಿಪೂರ್ಣ ರೇಖಾಚಿತ್ರಗಳೂ ಬುದ್ಧಚರಣವನ್ನು ಅಲಂಕರಿಸಿವೆ! ಇದೆಲ್ಲಾ ಅನಿರೀಕ್ಷಿತ ಭಾಗ್ಯವೇ ಸರಿ. ಅನುಬಂಧವನ್ನು ಶ್ರಮವಹಿಸಿ ಸಿದ್ಧಪಡಿಸಿಕೊಟ್ಟ ಸುಧೀರ ಮತ್ತು ಸೌಖ್ಯ ಅವರನ್ನು ಇಲ್ಲಿ ಪ್ರೀತಿಯಿಂದ
ನೆನೆಯುತ್ತೇನೆ.

ಬುದ್ಧ ಎನ್ನುವುದೊಂದು ವಿಶ್ವವ್ಯಾಪಿಯಾದ ಮಹಾಮಾನವತೆಯ ಪ್ರತಿಮೆ. ಎಷ್ಟು ನಿಟ್ಟಿನಿಂದ ನೋಡಿಯೂ ಆತನ ಸಮ್ಯ ಗ್ದರ್ಶನ ಕೇವಲ ಕನಸು.ನನಗೆ ಮುಖ್ಯವೆನಿಸಿದ್ದು ಬುದ್ಧಚಾರಿತ್ರ್ಯ ಮತ್ತು ಬುದ್ಧವಾಣಿಯ ತಿರುಳು. ಬುದ್ಧನಿಗೆ ಸಂಪೂರ್ಣ
ಶರಣಾಗದೆ ಅದು ದಕ್ಕುವಂತಿರಲಿಲ್ಲ. ಬಸವನಾಗಿ, ಗಾಂಧಿಯಾಗಿ, ವಿನೋಬ ಆಗಿ, ಅಂಬೇಡ್ಕರ್ ಆಗಿ ಬುದ್ಧನ ವ್ಯಕ್ತಿತ್ವದ ವರ್ಣಿಕೆಗಳು ಭಾರತದಲ್ಲಿ ಮತ್ತೆ ಮತ್ತೆ ಸಂಭವಿಸುತ್ತಲೇ ಇದ್ದಾವೆ. ಮುಂದೆಯೂ ಸಂಭವಿಸುವುವು ಎನ್ನುವುದು ನನ್ನ ದೃಢ ವಾದ ನಂಬಿಕೆಯಾಗಿದೆ.

ಬುದ್ಧನ ನಿಬ್ಬಾಣವೂ ಈಗ ಅನೇಕ ಹೊಸ ಅರ್ಥದ ಕವಲುಗಳನ್ನು ಪಡೆಯುತ್ತಾ ಇದೆ. ಆ ಎಲ್ಲ ಕವಲುಗಳನ್ನೂ ನಾನು ವಿನಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಗತಿಸುವ ತನಕ ಸತ್ಪ್ರೇರಣೆಗಳನ್ನು ಸ್ವಾಗತಿಸುವುದೇ ಕೃತಕೃತ್ಯತೆಯ ಮಾರ್ಗವೆಂಬುದು
ನನ್ನ ದೃಢವಾದ ನಂಬಿಕೆಯಾಗಿದೆ. ನಮೋತಸ್ಸ ಭಗವತೋ ಅರಹತೋ ಸಮ್ಮಾಸಂಬುದ್ಧಸ್ಸ.

ಇತಿಶಂ.
(ಪ್ರತಿಕ್ರಿಯಿಸಿ : viramapost@gmail.com)

ಸನ್ಯಾಸಿಯಾದ ದೊರೆಮಗ
ಗೌತಮ ಬುದ್ಧನು 2500 ವರ್ಷಗಳ ಹಿಂದೆ, ಉತ್ತರಾಪಥದ ಹದಿನಾರು ಗಣರಾಜ್ಯಗಳಲ್ಲಿ ಒಂದಾಗಿದ್ದ ಶಾಕ್ಯರ ಪ್ರಜಾಸತ್ತೆಯಲ್ಲಿ, ದೊರೆ ಶುದ್ಧೋದನ ಮತ್ತು ರಾಣಿ ಮಾಯಾದೇವಿಯ ಪುತ್ರನಾಗಿ, ಕಪಿಲವಸ್ತುವಿನ ಸಮೀಪದ ಲುಂಬಿನೀವನದಲ್ಲಿ ವೈಶಾಖ ಪೂರ್ಣಿಮೆಯಂದು ಜನ್ಮವೆತ್ತಿದನು. ಸಿದ್ಧಾರ್ಥ ಎನ್ನುವುದು ಅವನ ಜನ್ಮನಾಮ. ಸಿದ್ಧಾರ್ಥ ಜನಿಸಿದ ಒಂದು ವಾರಕ್ಕೆ ಮಾಯಾ ದೇವಿ ಮೃತಳಾದುದರಿಂದ ಮಲತಾಯಿ ಪ್ರಜಾಪತಿ ಗೌತಮಿಯೇ ಅವನನ್ನು ಸಾಕಿ ಸಲಹಿದಳು.

ಯೌವನಸ್ಥನಾದಾಗ ಯಶೋಧರೆ ಎಂಬ ರಾಜಕನ್ಯೆಯೊಂದಿಗೆ ಅವನ ವಿವಾಹವಾಯಿತು. ತನ್ನ 29ನೇ ವಯಸ್ಸಿನಲ್ಲಿ ಪತ್ನಿ, ಪುತ್ರ, ತಾಯಿ-ತಂದೆ, ರಾಜ್ಯಕೋಶಗಳನ್ನು ತೊರೆದು, ಗೃಹತ್ಯಾಗ ಮಾಡಿ, ಲೋಕಶೋಕದ ಪರಿಹಾರಕ್ಕಾಗಿ ಸನ್ಯಾಸಿಯಾದನು.
ಏಳು ವರ್ಷಗಳ ಕಠೋರವಾದ ತಪಸ್ಸಿನ ನಂತರ ದೇಹದಂಡನೆಯ ಆ ಮಾರ್ಗವನ್ನು ತ್ಯಜಿಸಿ, ಧ್ಯಾನಮಾರ್ಗವನ್ನು ಅನುಸರಿಸಿ, ವಾರಣಾಸಿಯ ಸಮೀಪದ ಉರುವೇಲೆ ಎಂಬಲ್ಲಿ ಬೋಧಿವೃಕ್ಷದ ಕೆಳಗೆ, ವೈಶಾಖ ಪೂರ್ಣಿಮೆಯಂದು ಬೋಧಿಯನ್ನು ಪಡೆದು
ಬುದ್ಧನಾದನು.

ಎಚ್ಚೆಸ್ವಿ
ಸಮಕಾಲೀನ ಸಂದರ್ಭದ ಮಹತ್ವದ ಕವಿ ಮತ್ತು ಪ್ರಯೋಗಶೀಲ ನಾಟಕಕಾರ ಎಂದು ಗುರುತಿಸಲ್ಪಟ್ಟಿರುವ  ವೆಂಕಟೇಶ ಮೂರ್ತಿ, ಮಕ್ಕಳಿಗಾಗಿಯೂ ಕವಿತೆ, ನಾಟಕ, ಕಥೆಗಳನ್ನು ಬರೆದಿದ್ದಾರೆ. ಇವರು ಅನುವಾದಿಸಿದ ಕಾಲಿದಾಸನ ‘ಋತು ಸಂಹಾರ’ ಕಾವ್ಯಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರವನ್ನು ಪಡೆದಿದೆ. 2013ರಲ್ಲಿ ಮಕ್ಕಳ ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಪಡೆದಿದ್ದಾರೆ.

ಜೀವಮಾನ ಸಾಧನೆಗಾಗಿ ಮಾಸ್ತಿ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಆನಂದಕಂದ ಪ್ರಶಸ್ತಿ, ಅನಕೃ ನಿರ್ಮಾಣ್ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ-ಇವು ಇವರುಪಡೆದ ಇತರ ಕೆಲವು ಮುಖ್ಯ ಗೌರವ ಪುರಸ್ಕಾರಗಳು. ಎಚ್.ಎಸ್.ವಿ. ಕಲಬುರಗಿಯಲ್ಲಿ 2020ರಲ್ಲಿ ನಡೆದ ಅಖಿಲಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಪಡೆದಿರುವರು.

ಪರಿನಿರ್ವಾಣ
ಬೋಧಿಯನ್ನು ಪಡೆದ ಮೇಲೆ ಬುದ್ಧನು ಉರುವೇಲದಿಂದ ವಾರಣಾಸಿಗೆ ಬಂದು ಅಲ್ಲಿ ಐವರು ಶಿಷ್ಯರಿಗೆ ತನ್ನ ಹೊಸಧರ್ಮ ವನ್ನು ಬೋಧಿಸುವ ಮೂಲಕ ಧರ್ಮಚಕ್ರ ಪ್ರವರ್ತನೆಯನ್ನು ಪ್ರಾರಂಭಿಸಿದನು. ಮುಂದೆ ಸುಮಾರು 44 ವರ್ಷಗಳ ಕಾಲ ದೇಶಯಾಟನೆ ಮಾಡುತ್ತಾ ತನ್ನ ಧರ್ಮವನ್ನು ಶಿಷ್ಯರೊಂದಿಗೆ ಪ್ರಚಾರ ಮಾಡಿ, ಸಾವಿರಾರು ಮಂದಿ ಶಿಷ್ಯರಿಗೆ ಭಿಕ್ಕು ದೀಕ್ಷೆ ಯನ್ನು ಪ್ರದಾನ ಮಾಡಿದನು. ಕಾಶಿ, ರಾಜಗೃಹ, ಶ್ರಾವಸ್ತಿ, ಕೌಶಾಂಬಿ ಮೊದಲಾದ ನಗರಗಳಲ್ಲಿ ವರ್ಷಾಕಾಲವನ್ನು ಕಳೆಯುತ್ತಾ ಕೊನೆಗೆ, ಪಾವೆಗೆ ಬಂದನು. ಆಗ ಅವನಿಗೆ ಎಂಭತ್ತರ ವಯೋಮಾನ. ಪಾವೆಯಲ್ಲಿ ಚುಂದ ಎನ್ನುವವನ ಮನೆಯಲ್ಲಿ ತನ್ನ ಕೊನೆಯ ಭಿಕ್ಷೆಯನ್ನು ಸ್ವೀಕರಿಸಿ, ಅಲ್ಲಿಂದ 12 ಮೈಲಿ ದೂರದ ಕುಶಿನಾರಕ್ಕೆೆ ಆನಂದ ಮತ್ತು ಇತರ ಭಿಕ್ಕುಗಳೊಂದಿಗೆ ತೀವ್ರವಾದ ಅತಿಸಾರ ಕಾಡುತ್ತಿದ್ದರೂ ಲೆಕ್ಕಿಸದೆ, ಕಾಲ್ನಡಗೆಯ ಪ್ರಯಾಣ ಮಾಡಿ, ಮಲ್ಲರ ರಾಜಧಾನಿ ಕುಶಿನಾರದ ಪಕ್ಕದಲ್ಲಿದ್ದ ಸಾಲವನ ದಲ್ಲಿ ಇರುಳು ತಂಗಿದನು. ವೈಶಾಖ ಪೂರ್ಣಿಮೆಯಲ್ಲಿ ಆ ಇರುಳು ನಾಲಕ್ಕನೇ ಜಾವದಲ್ಲಿ ಯೋಗ ಸಮಾಧಿಯ ಮೂಲಕ ಪರಿ ನಿರ್ವಾಣ ಪಡೆದನು.

ಸಮಚಿತ್ತದ ಧ್ಯಾನ
ಈವತ್ತು ಸ್ವಲೋಲುಪ್ತಿ ಮತ್ತು ಭೋಗಲಾಲಸೆಗಳು ಬದುಕನ್ನು ತೀವ್ರಗತಿಯಲ್ಲಿ ಆಕ್ರಮಿಸತೊಡಗಿವೆ. ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ಹಪಾಹಪಿಯಲ್ಲಿ, ಮನುಷ್ಯ ಅಪಾಯಕಾರಿ ವೇಗದಲ್ಲಿ ಓಡುತ್ತಿದ್ದಾನೆ. ಇಂಥ ಧಾವಂತದ ಓಟಕ್ಕೆ ಲೋಕಾನುಕಂಪೆ ಮತ್ತು ಸಮಚಿತ್ತದ ಧ್ಯಾನದ ನಿಲುಗಡೆ ಮಾತ್ರ ಸಮಾಧಾನ ಒದಗಿಸೀತು. ಹಾಗಾಗಿಯೇ ಬುದ್ಧನ ಚರಣ ಮತ್ತು ಚಾರಿತ್ರ್ಯದ ಅನುಸಂಧಾನವು ಈವತ್ತು ಯಾವತ್ತಿಗಿಂತ ಹೆಚ್ಚಿನ ತುರ್ತು ಅಗತ್ಯವಾಗಿದೆ. ಈ ಕಾರಣಕ್ಕಾಗಿಯೇ, ಆತನ ನಡೆಯ ಭಾಷಾಕಲ್ಪ ಮತ್ತು ನುಡಿಯ ಲಯವಿನ್ಯಾಸವನ್ನು ಕಂಡರಿಸುವ ಯತ್ನದಲ್ಲಿ ಈ ಬುದ್ಧಚರಣ ಕಾವ್ಯವು ತನ್ಮಯತೆಯಿಂದ ತೊಡಗಿ ಕೊಂಡಿದೆ.

ಪೂರ್ವಕಾಂಡ
ಇದ್ದಕಿದ್ದಂತಾದವನೇ ಬುದ್ಧ? ಪೂರ್ವ ಸಿದ್ಧತೆಗಳೆಷ್ಟು ಹಿಂದಾದದ್ದು!
ಎದ್ದುಬರಲವು ಮೊದಲು ವಿಸ್ಮರಣೆಯನ್ನೊದ್ದು ಈವತ್ತಿನ ಸದ್ಯಕ್ಕೆ. 1

ಭವಭವಾಂತರದಲ್ಲಿ ಮಾಗುತ್ತ ಸಂಭವಿಸಿದ, ಪಾರಮಿ ಮುಗಿಸಿ. ಅವೋ ಒಂದಲ್ಲ ಬರೋಬ್ಬರಿ ಹತ್ತು.  ಅವನಾದದ್ದು ಬುದ್ಧ ಕಡೆಗೆ. 2

ದಶಪಾರಮಿಗಳ ವ್ರತ ಮೂರಾವರ್ತಿ ಮುಗಿಸಿದ ಮೇಲೆ ಬುದ್ಧತ್ವ ಪ್ರಾಪ್ತಿ. ನಾವ್ನೀವು ನಿಂತಿರುವಿದೇ ನೆಲದಲ್ಲಿ! ಭಾವಿಸಿ. ಅರೆಗಣ್ಣಾಗಿ ಅರೆಕ್ಷಣ. 3

ನೆಲೆಗೆ ನೆಲವಿರಲು, ಇರಲು ಹಸನಾದೊಳ್ಳೆ ಕಸುವುಳ್ಳ ಬೀಜ, ಇರಲು ಬಿಸಿಲು ಮಳೆ, ಕಾಯ್ವವರ ಕೃಪೆ ಒದಗಿ, ವಸುಮತಿಗೆ ದೆಸೆ ಬರಲು. 4

ಗೌತಮ ಬುದ್ಧಗಿಂತ ಮೊದಲು ಇಲ್ಲೇ ಅವತರಿಸಿದ್ದ ದೀಪಂಕರ ಬುದ್ಧ. ಜಾತಕದ ಕಥೆಯಲ್ಲಿ ಈವತ್ತಿನ ಬುದ್ಧ ವಿಸ್ತರಿಸಿ ದ್ದಾನಾವತ್ತಿನ ಕಥೆ.  5

ಬುದ್ಧ ಹೇಳುತ್ತಾನೆ ತಾನಾಗ ಸುಮೇದನಾಗಿದ್ದ, ದೀಪಂಕರನ ಕೃಪೆ ಪಡೆದಿದ್ದ, ಆತನಾಶೀರ್ವಾದದಿಂದ ಪಾರಮಿ ಹಿಡಿ
ದಿದ್ದ, ಕೊನೆಗದನ್ನು ಮುಗಿಸಿದ್ದ. 6

ಈವತ್ತಿನ ಮಂದಿ ನಂಬಲಿಕ್ಕೇ ಆಗದ ಕಥ ನವ ಕಥಿಸುವನು ಆಗಾಗ.  ಅವೇನು ಒಂದೆರಡೇ? ಸರಿಯಾಗೈ ನೂರನಲವತ್ತೇಳು ಕಥೆಗಳಿವೆಯವು. 7

ಸುಮೇದನ ಭವಾಂತರದ ಕತೆಗಳನ್ನು ಗೌತಮ ಬಿಕ್ಕುಗಳಿಗೆ ಹೇಳುವನು ಭವಾಂತರದ ಪರಿಹಾರಕ್ಕೆ, ಬುದ್ಧತ್ವ ಪ್ರಾಪ್ತಿ
ಗವಗಾಹಮಾಡಿರೊಳಗನ್ನೆೆಂದು. 8

ನೆಲದೊಡಲಲ್ಲಿ ಸುಕ್ಕುಗಟ್ಟಿದ ಬೀಜ ಯಾರೊಲವಿಗೋ ಯುಗದ ಭಾಗ್ಯಕೋ ನೆಲದಿಂದ ತಲೆಯೆತ್ತಿ ಮೇಲೆ ಕುಡಿಯೊಡೆದು
ಎಳೆದುಟಿ ತೆರೆಯುವುದೊಮ್ಮೆ. 9

ಕಾಲೂರಿ ಆಳಕ್ಕೆ ದಿಕ್ಕುದಿಕ್ಕಿಗೆ ಹರೆ ಬಿಸಾಕಿ ಎಲೆಹಸಿರ ಪತ್ರಗಳ ಗಿಡಿದು ಒಲವರಳಿಸಿದ ಹೂವಾಗಿ ಹಣ್ಣಾಗಿ ತಣ್ಣೆರಳಾಗಿ ಬೋಧಿಯ ವೃಕ್ಷ! 10

ಇಲ್ಲ ಹಣ್ಣಲ್ಲೊಂದು ಮರುಭವದ ಬಿತ್ತ. ನೆಲದಲ್ಲಿ ನಿಂತೇ ನಕ್ಷತ್ರ ಕುಲವ ಬಾಸಣಿಸಿ, ಅಸ್ತಾಂಕದಲಿ ಥಳ್ಥಳ ಹೊಳೆವ ಬೆಳಕಿನ ಹಣ್ಣು. 11

ಇಂದುಮುಖಿ ದಿಬ್ಬಣದಲ್ಲಿ ನಕ್ಷತ್ರಾಕ್ಷತೆ. ಒಂದಾಗಿ ನೆಲವೂ ಬಾನೂ ಚಂದ ಹಾರುತ್ತಿದೆ ತಂಗಾಳಿ ಹಾಯಿಪಟ ಮಂದ್ರ ಝಂಕೃತಿ ಜೇನು 12

ಕಲ್ಪಾಂತರಗಳ ಹಿಂದೆ ನಡೆದದ್ದಿದು. ಇದೇ ನೆಲದಲ್ಲಿ ಕಟ್ಟಿಗೆ ಮಾರಿ ಬಾಳ ಹೊರೆಯುತ್ತಿದ್ದ ಹುಟ್ಟಾ ಬಡವನಿದ್ದ.
ಹೇಳುವೆ ನೀಗಾತನ ಕಥೆ. 13

ಅವನವ್ವ ಹಣ್-ಹಣ್ ಮುದುಕಿ. ಮೂಳೆ ಚೀಲವ ಹೋಲುವಳಾಕೆಯನ್ನ ಇವನೊಂದರಗಳಿಗೆ ಬಿಟ್ಟಿರಲಾರ. ಹಡಗು ಬಂ
ತವರೂರಿನ ಹಡಗುಗಟ್ಟೆಗೆ. 14

ಹಡಗು ವ್ಯಾಪಾರದ್ದು. ರೇವಿಗೆ ಹಾಕಿರೆ ಲಂಗರು ಹುಡುಗ ನೋಡಿ ಹೇಗಾದರೂ ಮಾಡಿ ಹಡಗೇರಿ ದೂರಯಾನ ಮಾಡಿ ಲಾಭ
ನೀಡುವ ವ್ಯಾಪಾರಕ್ಕೆಳಸಿದ. 15

ಹಣ ಕೈ ಹತ್ತಿದರೆ ಮುಪ್ಪಿನ ಮುದುಕಿ ಅವ್ವನ ಚೆನ್ನಾಗಿಡಬಹುದೆಂಬಾಶೆ. ತಾಯನ್ನೂ ಜತೆಗೆ ಕಟ್ಟಿಕೊಂಡು ಹೊರಡಲಾ ಬಡ
ವನು ಚಂಡಮಾರುತವೇಳಬೇಕೆ? 16

ಕಾಣದ ಕೈಯೊಂದು ಬಾರಿಸಿದಂತೆ ಹೆಗ್ಗಡಲನಲ್ಲೋಲಕಲ್ಲೋಲ ಕಡಲು. ಇನ್ನಾ ಹಡಗಿನ ಪಾಡೇನ ಹೇಳಲಿ! ಬೊಬ್ಬೆ
ಯನಿಡುತಿದ್ದರು ಹಡಗಿನ ಜನ. 17

ಏಳುತಿಳಿಯುತ್ತಾಳುತ ಬುಗುರಿದಿರುಗಿ ಮರುಳು ಕೆ ರಳಿದಂತೊದರುತದುರುತಾ ಕಡಲಲ್ಲಿ ನಡುಮುರಿದು ಮುಳುಗಿತಾ ದುರ್ದೈವಿ
ಹಡ ಗೊಳಗಿದ್ದ ಸರಕಿನ ಸಹಿತ. 18

ಹುಡುಗ ಹರಸಾಹಸ ಮಾಡಿ ಒಡನೆ ಕಡಲಿಗೆ ಧುಡುಮ್ಮನೆ ಜಿಗಿದೀಜಿ ಈಜಿ ದಡ ಸೇರಿಸಿದ. ನೀವದನ್ನ ನಂಬಲೇ ಬೇಕು. ಹುಡುಗ ನವ್ವ ತಬ್ಬಿದಳಳುತ. 19

ಮಗನೇ ಮುಳುಗೊ ಬಾಳುದ್ಧರಿಸಿದೆ ಎಂದೊ ಗುಮಿಗುವ ನಲಿವಿಂದ ಮಗನ ಮೊಗವೆತ್ತಿ ಬೊಗಸೆಯಲಿ, ಹಣೆಮುತ್ತಿರಿಸಿ
ಮಗನ ಹರಸಿದಳಾಗ ಹೀಗೆ : 20

ಕಂದಾ! ಭವಸಾಗರದಲಿ ಮುಳುಗುತ್ತಿರುವ ಮಂದಿಯನ್ನೂ ಹೀಗೇ ಉದ್ಧರಿ ಸೆಂದೆದೆದುಂಬಿ ಹರಕೆನುಡಿ ನುಡಿದು ಮಗ
ಗೆಂದಳಾಗೆಂದು ಮುಂದೆ ಬುದ್ಧ. 21

ಹುಸಿಹೋಗದೆಂದೂ ತಾಯ ಹರಕೆ ನುಡಿ; ಹರಸಿದ ಆ ಹರಕೆಯ ಫಲವಾಗಿ ಉಸಿರು ಜನ್ಮಜನ್ಮಾಂತರ ಹಾಯ್ದಾ ಅವಧಿಯಲಿ
ದಶ ಪಾರಮಿಯ ಪೂರೈಸಿತ್ತು. 22

ಅದೇ ಬಡ ಹುಡುಗ ಹುಟ್ಟಿದ ಉಳ್ಳವರ ಗೃಹದಲ್ಲಿ. ಸುಮೇದನೆಂದವನ ಒಡಲುಕೊಟ್ಟವರು ಹೆಸರಿಟ್ಟು ಕರೆದರು, ಆ ಹುಡುಗ ಹುಟ್ಟಲ್ಲೆ ವಿರಾಗಿ. 23

ಮನೆಮಾರು ತೊರೆದು ತಪಕೆ ಹಿಮಗಿರಿಗೆ ಹೋದನು ನೋಡಿ ತಿಂದುಂಡಾಡುವದನ್ನು ಉಳಿದವರಿಗೆ ಬಿಟ್ಟು, ಸಂಸಾರಕ್ಕೆ ವಿದಾಯ ವನು ಹೇಳಿ, ಹೇಳದೇ ಕೇಳದೆ. 24

ಗಟ್ಟಿ ತಪದಿಂದತೀಂದ್ರಿಯಶಕ್ತಿ ಸಾಧಿಸಿ ತಿರುಗಿ ಹುಟ್ಟಿದೂರತ್ತ ಬರುತಿರುವಾಗ ಮೆಟ್ಟದೆ ನೆಲ ಬಾನಲ್ಲಿ ಹಕ್ಕಿ ಹಾಗೆ ಹಾರುತ್ತ.
ದಿಟ್ಟಿ ನೆಲದಲ್ಲಿಟ್ಟ ಯೋಗಿ. 25

ಹಾಗೆ ಬರುತಿರುವಾಗ ಒಮ್ಮೆಗೇ ಕಂಡಿತ್ತು ನೆಲದೊಳಗೆ ಇರುವೆಗಳಂತೆ ಜನ ತೊಡಗಿರುವುದು ಹೆದ್ದಾರಿ ನಿರ್ಮಾಣದಲ್ಲಿ. ಬೆಬ್ಬೆ
ರಗಾಗಿ ಕೆಳಕ್ಕಿಳಿದನಾ ಯೋಗಿ. 26

ಇಷ್ಟೊಂದಗಲ ಮಾರ್ಗ ಯಾತಕ್ಕಾಗಿ ಕೇಳಲು ಅಷ್ಟೊಂದು ಜನರಲ್ಲೊಬ್ಬನ ಕಷ್ಟಜೀವಿ ಇದು ನಾವೆಲ್ಲ ಸೇರಿ ತೊಡಗಿರುವ
ಇಷ್ಟಸೇವಾಕಾರ್ಯವೆಂದುಲಿದ. 27

ಬುಟ್ಟಿಗೆ ಮಣ್ಣು ತುಂಬುತ ನುಡಿಯೆ ಸೇವಾಕರ್ತ, ಈ ಪಾಟಿಯಗಲ ಮಾರ್ಗವೇ? ಕೌತುಕ ಪಟ್ಟು ಕೇಳಿದ ಸುಮೇದ. ಮಂಕರಿ ತಲೆಗಿಟ್ಟವ ಕೃಪೆಯಿಟ್ಟು ಬರುತ್ತಿರುವರು ಬುದ್ಧಗುರು. 28

ಅವರಿಗೋ ಲಕ್ಷೋಪಲಕ್ಷ ಶಿಷ್ಯರು. ಹಾಗಿರುವಾಗ ಸಾಕೆ ಸಣ್ಣ ಓಣಿ? ಅವನ ಮಾತು ಕಿವಿಗೆ ಬಿದ್ದೊಡನೆ ಈತ ಹೇಳಿದ
ನಲ್ಲವ ಮತ್ತೆ? ಬೇಕೇಬೇಕು. 29

ಕೇಳದೆ ಒದಗಿ ಬಂದ ಭಾಗ್ಯ ಸಮ್ಮಾಸಂಬುದ್ಧಸೇವೆ! ತಾಳಿ! ನಾನೂ ಒಡನೆ ದುಡಿವೆ ಪಾಳಿ ಹಿಡಿದೆಂದು ನಿರ್ಮಾಣಕ್ಕಿಳಿದ ಸುಮೇದ ತನ್ನ ಅಳವಿರದ ಶಕ್ತಿ ಬಳಸಲು ನಾಚಿ. 30

ತೋರುವುದು ತಕ್ಕುದೇ ಗರುಡನೆದುರು ನುಸಿ ತನ್ನ ರೆಕ್ಕೆ? ಗುರುವೆದುರು ತಾನೆಷ್ಟರವನೆಂದು ಮಂಕರಿಗೆ ಅಗಿದ ಮಣ್ಣು ತುಂಬುತ ಕೈಕೆಸರು ಮೈಬೆವರಲಿ ಇರುಳಾದರೂ ನಿಲ್ಲಿಸದೆ ಕಾಯಕವ. 31

ಆಗ ಪೂರ್ವದಿಕ್ಕಲ್ಲಿ ಒಮ್ಮೆಗೇ ಬೆಳ್ಳಂ ಬೆಳಗಾಗುತಿದೆ! ಸಂಜೆ ಸೂರ್ಯೋದಯವಾಗಲು ಥಟ್ಟನೆ ಶುರುವಾಯಿತು ಹಕ್ಕಿ ಚಿಲಿಪಿಲಿ.
ಆಗಮಿಸುತ್ತಿದ್ದಾನೆ ದೀಪಂಕರಬುದ್ಧ. 32

ಹೊನ್ನ ಬಣ್ಣದ ಹೊನಲು ಬಂದಂತೆ ಬಂದನು ಗುರು ತನ್ನ ಶಿಷ್ಯರ ಸಮೇತ. ಸುಮೇದ ಇನ್ನಾ ತುಂಬದು ಹಳ್ಳವೆಂದು ಗಡಿಬಿಡಿಯಿಂದ ಹಳ್ಳವನ್ನ ತುಂಬಲೆತ್ನಿಸಿದ ಮಣ್ಣಿಂದ. 33

ಅದಾಗದೆ, ಸನಿಹಕ್ಕೆ ಬರಲು ದೀಪಂಕರ ಮುನಿ ಇದೇ ಸರಿಯೆಂದು ನಿಶ್ಚಯಿಸಿ ಮಲಗಿದ ತಾನೇ ಹಳ್ಳಕ್ಕೆ ಒಡಲನ್ನೆ ಸೇತುವೆ ಮಾಡಿ ಆದಂತಿರಲು ಸೇತು, ದಂಡಪ್ರಣಾಮ. 34

ಇತ್ತ ತಲೆ ಅತ್ತ ಕಾಲ್ ತುಟಿಪಿಟ್ಟೆನ್ನದೆ ಸುಮೇದ. ಕಾಲೊತ್ತಾಗಲಿ ಮುಡಿಗುರುಳು ಪಾದಕ್ಕೆ! ಮತ್ತೆ ಬೆನ್ನಾಗಲಿ ಆ ಪದಧೂಳಿ ಧಾರಣೆಗೆ ಪಾತ್ರವೆನ್ನುತ್ತ ಕಾಯುತಿದ್ದನಾರೋಹಣಕ್ಕೆ! 35

ಆಹ! ಈ ಗರಿಹಗುರ ಪಾದ ಗುರುವಿನದೆ!ಗುರುವಿನದೆ! ದಾಹವಿಂಗಿತು. ಹಸಿವಿಂಗಿ ತುಂಬಿತಾ ಮಹಾ ಪುರುಷ ಪಾದಗಳೂರಿ ದಾಟಲು ಹೃದಯವೆಂದು ಅಹಮಿಂಗಿ ಆದ ಸುಮೇದ ಕೃತಾರ್ಥ. 36

ತಾವು ತುಳಿದದ್ದು ಸೇತುವೆಯಲ್ಲ ಸುಮೇದನ ತನುವೆಂದು ಗುರುವಿಗೇನರಿವಾಗದೆ? ನಸುನಗುತ್ತವರು ಸುಮೇದನ ಕೈಹಿಡಿದೆತ್ತಿದರು ಮೆಲ್ಲಗೊರಸಿದರು ಕಾವಿಗೆ ಹತ್ತಿದ್ದ ಕೆಸರನ್ನು. 37

ಕಂದಾ ಈವರೆಗು ನಾನು ದಾಟಿಸಿದೆ ನನ್ನಲ್ಲಿ ಶರಣು ಬಂದರಿಗೊಲಿದು ಕೈಹಿಡಿದೆತ್ತಿ. ಇಂದು ನೀನೇ ನನ್ನ ದಾಟಿಸಿದೆಯೆಂದು ನಸುನಕ್ಕು ಗುರು ವಂದು ಕೇಳಿದರು: ಏನು ಬೇಕು? 38

ತಡಬಡಿಸಿದ ಸುಮೇದ. ಹರಸಿ ಗುರು ನಾನೂ ಬಿಡದೆ ಹಿಡಿದು ಸುವ್ರತ ಎಂದಾದರೂ ಕಡೆಹಾಯಿಸುವ ಸಮ್ಮಾಸಂಬುದ್ಧನಾಗಿ ಪತಿತರ ಹಿಡಿದೆತ್ತಿ ಉದ್ಧರಿಸುವಂತೆ. 39

ಹಿಡಿದಪ್ಪಿ ಸುಮೇದನ, ಹಾಗೇ ಆಗಲೆಂದು ಹರಸಿದರು. ಬಿಡದೆ ಪೂರೈಸು ದಶಪಾರಮಿಯ ಎರಡು ಮತ್ತೊಂದು ಸಲ. ನಿಬ್ಬಾಣ ದೊರೆವುದು. ತಕ್ಕಂತೆಡೆಯಲ್ಲುದಿಸು ಅರಗುವರನಾಗಿ. 40

ಸಿದ್ಧಾರ್ಥನಾಗು. ಆಯತ ಹೊತ್ತಲ್ಲಿ ಸಂಸಾರವನ್ನು ತ್ಯಜಿಸಿದ ಶ್ರಾವಕನಾಗು. ಕಾಡುಮೇಡಲಿ. ಅದಿದೆನ್ನದೆ ಎಲ್ಲ ತತ್ವವ ಗ್ರಹಿಸು. ಒಪ್ಪದೆ ನೀನೇಸ್ವಯಂ ಬೋಧಿಪಡೆದಾಗು ಸಮ್ಮಾಸಂಬುದ್ಧ. 41

ಯುವತಿಯೊಬ್ಬಳು ಕೇಳೀ ಮಾತನ್ನು ಮುಂದೆ ಬಂದಳು ಸವಿನಯದಿಂದೆರಗಿ ಮುನಿಗೆ. ತವಸಿಯ ಬೇಡಿದಳು. ಕರುಣಿಸಿ ನನಗೂ
ಆಗುವಂತೆ ಭವಭವದಲಾತನ ಸಹವರ್ತಿ. 42

ಗುರುವು ನೋಡುವರು ಕಣ್ಮುಚ್ಚಿ ಅರೆಕ್ಷಣ! ಆಕೆಯಸಮಾನ್ಯತೆಯರಿಯುವರು ಕ್ಷಣಮಾತ್ರದಲ್ಲಿ. ಸರಿ ಮಗು. ನೀನಾಗವನ ಬಾಳ ಸಂಗಾತಿ ಭವ ಭವದಲ್ಲೂ, ಸರಿಯಾ ಎಂದು ಹರಸಿದರು. 43

ಗೌತಮಬುದ್ಧ ಹೇಳಿದ ಭಿಕ್ಕುಗಳಿಗೆ. ದೀಪಂಕರರೊಲಿದಂದು ಆ ತರುಣಿಯು ಯಾರೆಂದು ತಿಳಿಯಲಿಲ್ಲ. ತಿಳಿದದ್ದಿತ್ತೀಚೆಗೆ. ನನಗೆ
ಬೋಧಿ ಬಂದೊದಗಿದ ಮೇಲಷ್ಟೆ! 44

ಅವಳೇ ಸಿದ್ಧಾರ್ಥನನ್ನ ಕರುಣಿಸಿ ಕೈಹಿಡಿದುದ್ಧರಿಸಿದವಳು. ಯಶೋಧರೆಯೆಂಬ ತಾಯಿ. ಭವದ ವ್ಯೂಹ ಬಿಡಿಸುವುದು ಕಷ್ಟ ಭಿಕ್ಕುಗಳೇ. ನನಗಿ ರುವುದು ಪೂರ್ವದರಿವು; ನಿಮಗಿರದು. 45