Wednesday, 11th December 2024

ಸುಂದರಿ ನಗರಿ ಕಾರ್ಲ್ಸ್ ರೂಹೆ

ಡಾ.ಉಮಾಮಹೇಶ್ವರಿ ಎನ್‍

ಜರ್ಮನಿಯ ಬಹುಪಾಲು ನಗರಗಳಂತೆ, ಈ ನಗರ ಸಹ ಎರಡನೆಯ ಮಹಾಯುದ್ಧದ ಸಮಯದಲ್ಲಿ ಸಾಕಷ್ಟು ಹಾನಿಗೆ ಒಳಗಾದರೂ, ನಂತರ ಇಲ್ಲಿನ ಅರಮನೆಯನ್ನು ಸುಂದರವಾಗಿ ಮರುನಿರ್ಮಿಸಲಾಗಿದೆ. ಈ ಐತಿಹಾಸಿಕ ಅರಮನೆಯ ಪ್ರವಾಸ ಒಂದು ಮುದ ನೀಡುವ ಅನುಭವ.

ಜರ್ಮನಿಯ ನೈಋತ್ಯ ಭಾಗದಲ್ಲಿ ಇರುವ ಈ ಸುಂದರ ನಗರವು, ಇತಿಹಾಸದ ಹೊಡೆತಗಳನ್ನು ತಿಂದರೂ, ಮೇಲೆದ್ದು ಬಂದ ಪರಿ ಮಾತ್ರ ವಿಸ್ಮಯ ಹುಟ್ಟಿಸುವಂತಹದ್ದು. 1715ರಲ್ಲಿ ಕಾರ್ಲ್ಸ್‌ ವಿಲ್ ಹೆಲ್‌ಮ್‌‌ನಿಂದ ನಿರ್ಮಿಸಲ್ಪಟ್ಟ ಈ ನಗರದ ಪ್ರಮುಖ ಆಕರ್ಷಣೆ ಎಂದರೆ ರಮಣೀಯವಾದ ಐತಿಹಾಸಿಕ ಅರಮನೆ.

ಇಲ್ಲಿನ 32 ರಸ್ತೆಗಳು ಅರಮನೆಯ ಆವರಣದಿಂದ ತೊಡಗಿ ಬೀಸಣಿಗೆಯ ಎಸಳುಗಳಂತೆ ಹೊರ ಹೋಗುತ್ತವೆ. ಈ ರಸ್ತೆಗಳ ಮಧ್ಯೆೆ ಅರ್ಧವೃತ್ತಾಕಾರದ ರಸ್ತೆಗಳೂ ಇವೆ. ಇದರಿಂದಾಗಿ ಈ ನಗರಕ್ಕೆ ಫ್ಯಾನ್ ಸಿಟಿ ಅಥವಾ ಬೀಸಣಿಗೆ ನಗರ ಎಂಬ ಹೆಸರೂ ಉಂಟು.
ಅರಮನೆಯ ದಕ್ಷಿಣ ಭಾಗದಲ್ಲಿರುವ ಚೌಕಾಕಾರದ ಮಾರ್ಕ್‌ಟ್‌ ಸ್ಕ್ವೇರ್‌ನಲ್ಲಿ ಆಡಳಿತ ಭವನ, ಲೂಥೆರಾನ್ ಚರ್ಚ್ ಮತ್ತು ನಗರವನ್ನು ಸ್ಥಾಪಿಸಿದವನ ಸಮಾಧಿ ಇವೆ. ಇವೆಲ್ಲವೂ ನಿಯೊ ಕ್ಲಾಸ್ಸಿಕಲ್ ಶೈಲಿಯಲ್ಲಿವೆ.

ಅರಮನೆಯ ಉತ್ತರ ಭಾಗದಲ್ಲಿ ಕಾಡು ಮತ್ತು ಉದ್ಯಾನವನಗಳಿವೆ. ಪೂರ್ವ ಭಾಗದಲ್ಲಿ ಕಾಡು ಮತ್ತು ಉದ್ಯಾನಗಳಿದ್ದರೂ ಅದರ ನಡುವೆ ಫುಟ್ ಬಾಲ್ ಸ್ಟೇಡಿಯಂ, ಟೆಕ್ನಾಲಜಿ ಇನ್ಸ್ಟಿಟ್ಯೂಟ್, ವಸತಿಗಳು ಇವೆ. ಪಶ್ಚಿಮ ಭಾಗ ಪ್ರಮುಖವಾಗಿ ಜನವಸತಿ ಯುಳ್ಳ ಪ್ರದೇಶ.

ಯುದ್ಧಕಾಲದಲ್ಲಿ ಹಾನಿ
ಇಲ್ಲಿನ ಅರಮನೆಯು ಬರೋಕ್ ಶೈಲಿಯಲ್ಲಿದೆ. ಕೇಂದ್ರ ಭಾಗದ ಇಕ್ಕೆಲಗಳಲ್ಲಿ ಸಮ್ಮಿತೀಯವಾದ ವಿಸ್ತರಣೆಗಳಿರುವುದರಿಂದ ಅರ್ಧವೃತ್ತಾಕೃತಿಯಲ್ಲಿದೆ. ಜರ್ಮನಿಯ ಹಲವು ನಗರಗಳಂತೆ ಇದು ಎರಡನೇ ಮಹಾಯುದ್ಧದಲ್ಲಿ ಸಾಕಷ್ಟು ಘಾಸಿಗೊಂಡರೂ, ಈ ಅರಮನೆಯ ಹೊರಭಾಗವನ್ನು ಪುರಾತನ ವಿನ್ಯಾಸದಲ್ಲಿ ಮರುನಿರ್ಮಿಸಲಾಗಿದೆ. ಅರಮನೆಯ ಒಳಾಂಗಣವನ್ನು ಆಧುನಿಕ ಮ್ಯೂಸಿಯಂನಂತೆ ನಿರ್ಮಿಸಲಾಗಿದೆ. ಇಲ್ಲಿರುವ ಮ್ಯೂಸಿಯಂ ಪುರಾತನ ಕಾಲದ ವಸ್ತುಗಳಿಂದ ಇಂದಿನ ಕಾಲದ ವಸ್ತುಗಳ ವರೆಗಿನ ಅತ್ಯದ್ಭುತ ಸಂಗ್ರಹ ಹೊಂದಿದೆ. ಅರಮನೆಯ ವೀಕ್ಷಣಾಗೋಪುರ ಹತ್ತಲು ಪ್ರತ್ಯೇಕವಾದ ಪ್ರವೇಶಪತ್ರ ಖರೀದಿಸಬೇಕು. ತುತ್ತ ತುದಿಯಲ್ಲಿ ವೇಗವಾಗಿ ಬೀಸುತ್ತಿರುವ ಗಾಳಿಗೆ ಮೈ ಒಡ್ಡಿ ಇಡೀ ನಗರವನ್ನು ನೋಡುವ ಅನುಭವ ಚೇತೋಹಾರಿ.

ಜರ್ಮನಿಯ ಎಲ್ಲಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳು ಹಾಗೂ ಬಸ್ಸುಗಳು ಇಲ್ಲಿಂದ ಲಭ್ಯ. ಇಲೆಕ್ಟ್ರಿಕ್ ವಸ್ತುಗಳು, ಉಕ್ಕು, ಔಷಧಿಗಳು, ವಾಹನಗಳ ಬಿಡಿಭಾಗಗಳು, ಪೆಟ್ರೋಲಿಯಂ ಉತ್ಪನ್ನಗಳು ಇಲ್ಲಿ ತಯಾರಾಗುತ್ತವೆ. ಇಂಜಿನಿಯರಿಂಗ್, ಸಂಗೀತ, ಕಲೆಗಳ ಅಧ್ಯಯನವನ್ನು ಕೈಗೊಳ್ಳಬಹುದಾದ ಸಂಸ್ಥೆಗಳಿವೆ. ಹಲವಾರು ಮ್ಯೂಸಿಯಂಗಳೂ ಇವೆ. ನಗರದೊಳಗಿನ ಸಂಚಾರ ವ್ಯವಸ್ಥೆ ಪ್ರಮುಖವಾಗಿ ಟ್ರಾಮ್‌ಗಳನ್ನು ಅವಲಂಬಿಸಿದೆ.

ಮೃಗಾಲಯ
ಮುಖ್ಯ ರೈಲು ನಿಲ್ದಾಣದ ಬದಿಯಲ್ಲಿರುವ ನಗರ ಉದ್ಯಾನ 1967ರಲ್ಲಿ ಆರಂಭವಾಯಿತು. ಸಾಕಷ್ಟು ವಿಸ್ತಾರವಾಗಿರುವ ಉದ್ಯಾನ ದಲ್ಲಿ ಕಾರ್ಲ್‌ಸ್‌ ರೂಹೆಯ ಪ್ರಸಿದ್ಧ ಮೃಗಾಲಯವೂ ಇದೆ. ಇಲ್ಲಿ ಜಗತ್ತಿನ ಎಲ್ಲಾ ಪ್ರದೇಶಗಳಿಂದ ತರಿಸಿ, ಸಾಕಿರುವ ಪ್ರಾಣಿ- ಪಕ್ಷಿ, ಜಲಚರಗಳ ಸಂಗ್ರಹವಿದೆ. ಉಷ್ಣವಲಯದ ಆನೆ, ನೀರಾನೆಗಳೂ ಇಲ್ಲಿ ನೈಸರ್ಗಿಕ ಎನಿಸುವ ವಾತಾವರಣದಲ್ಲಿ ವಾಸಿಸಿ, ಪ್ರೇಕ್ಷಕ ರಿಗೆ ಮುದ ನೀಡುತ್ತವೆ. ಈ ಸುಂದರ ಉದ್ಯಾನವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ, ವ್ಯವಸ್ಥಿತವಾಗಿ ನಿರ್ವಹಿಸಿ, ಜತನದಿಂದ ಕಾಪಾಡಿಕೊಳ್ಳಲಾಗಿದೆ.

ಸಸ್ಯಶಾಸ್ತ್ರವನ್ನು ಅಭ್ಯಸಿಸುವವರ ಅನುಕೂಲಕ್ಕಾಗಿ ಎರಡು ಬೊಟಾನಿಕಲ್ ಗಾರ್ಡನ್‌ಗಳು ಈ ನಗರದಲ್ಲಿವೆ. ಇಲ್ಲಿನ ವಿಶ್ವ ವಿದ್ಯಾಲಯಗಳಲ್ಲಿ ಅಭ್ಯಸಿಸಲು, ಉದ್ದಿಮೆಗಳಲ್ಲಿ ಕೆಲಸ ಮಾಡಲು ಸಾಕಷ್ಟು ಮಂದಿ ಭಾರತೀಯರು ಬರುತ್ತಾರೆ. ಡೂರ್ಲಾಖ್- ಟೂರ್ಮ್ ಬೆರ್ಗ್ ಎಂಬ ಬೆಟ್ಟವನ್ನು ಏರುವುದು ಇಲ್ಲಿನ ಪ್ರವಾಸದ ಒಂದು ಭಾಗ ಎನಿಸಿದ್ದು, ಇಲ್ಲಿಂದ ಸುತ್ತಲಿನ ಜಾಗಗಳ ವೀಕ್ಷಣೆ ಮಾಡಬಹುದು. ಡೂರ್ಲಾಖ್ ವರೆಗೆ ಟ್ರಾಮ್‌ನಲ್ಲಿ ಹೋಗಬಹುದು. ಸಣ್ಣ ನಡಿಗೆಯ ಬಳಿಕ ಫ್ಯೂನಿಕ್ಯುಲರ್ ರೈಲು ನಿಲ್ದಾಣ ತಲುಪುತ್ತೇವೆ. ಇದು ಕೆಲವೇ ನಿಮಿಷಗಳಲ್ಲಿ ಬೆಟ್ಟದ ಮೇಲಕ್ಕೆ ಕರೆದೊಯ್ಯುತ್ತದೆ. 13ನೇ ಶತಮಾನದಲ್ಲಿ ನಿರ್ಮಾ
ಣವಾದ ಇಲ್ಲಿನ ಐತಿಹಾಸಿಕ ವೀಕ್ಷಣಾ ಗೋಪುರ ಹತ್ತಿ ಸುತ್ತಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇಡೀ ದಿನದ ಟ್ರಾಮ್ ಟಿಕೆಟ್ ತೆಗೆದುಕೊಂಡು ರಸ್ತೆಗಳುದ್ದಕ್ಕೂ ಪ್ರಯಾಣಿಸಿ ಸುತ್ತಲಿನ ಸೌಂದರ್ಯ ಆಸ್ವಾದಿಸಬಹುದು.

ರೈನ್ ನದಿ ದಡದಲ್ಲಿ
ಸುಮಾರು 3,13,000 ಜನಸಂಖ್ಯೆ ಹೊಂದಿರುವ ಈ ನಗರವು ರೈನ್ ನದಿಯ ಬಲದಡದಲ್ಲಿದೆ ಮತ್ತು ಸ್ಟುಟ್‌ಗಾರ್ಟ್ ನಗರದಿಂದ ಸುಮಾರು 80 ಕಿಮೀ ದೂರದಲ್ಲಿದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಹಿಟ್ಲರ್ ಸೇನೆ ನಡೆಸಿದ ಜನಾಂಗೀಯ ದ್ವೇಷದ
ಸಮಯದಲ್ಲಿ, ಇಲ್ಲಿನ 1421 ಜ್ಯೂ ಜನಾಂಗದ ವ್ಯಕ್ತಿಗಳನ್ನು ಹತ್ಯೆ ಮಾಡಲಾಯಿತು. ಆ ಹತ್ಯಾಕಾಂಡದ ನೆನಪಿಗಾಗಿ ಇಲ್ಲೊಂದು ಫಲಕ ನೆಟ್ಟಿದ್ದಾರೆ. ಎರಡನೆಯ ಮಹಾಯುದ್ಧದ ದುಃಸ್ವಪ್ನವನ್ನು ಕೊಡವಿಕೊಂಡು, ಇಂದು ಈ ನಗರ ಮೇಲೆದ್ದು ನಿಂತಿರು ವುದು ಅನುಕರಣಾರ್ಹ.

-ಶಹಾ

ಮೂರು ಬಾರಿ ನಾಶಗೊಂಡ ಅರಮನೆ
ಗೊಟ್ಟೇಸು ಅರಮನೆಯು ಈ ನಗರದ ಅತಿ ಪುರಾತನ ಕಟ್ಟಡಗಳಲ್ಲಿ ಒಂದು. 1588ರಲ್ಲಿ ನಿರ್ಮಾಣಗೊಂಡ ಈ ಅರಮನೆಯು
1689ರಲ್ಲಿ ನಾಶವಾಯಿತು. ಮರುನಿರ್ಮಾಣಗೊಂಡ ಅರಮನೆಯು 1735ರಲ್ಲಿ ಬೆಂಕಿಗೆ ಆಹುತಿಯಾಯಿತು. ಮತ್ತೊಮ್ಮೆ ಕಟ್ಟಿದರು. 1944ರಲ್ಲಿ ಅಮೆರಿಕದ ಯುದ್ಧ ವಿಮಾನಗಳ ಬಾಂಬ್ ದಾಳಿಗೆ ಗುರಿಯಾಯಿತು. ಆ ನಂತರ ಬಹು ಕಾಲ ಅವಶೇಷ ಗಳಾಗಿದ್ದ ಈ ಅರಮನೆಯನ್ನು, 1982-89ರ ಅವಧಿಯಲ್ಲಿ ಐತಿಹಾಸಿಕ ಶೈಲಿಯಲ್ಲಿ, ಹದಿನಾರನೆಯ ಶತಮಾನದ ನಿರ್ಮಾಣ
ವನ್ನು ಹೋಲುವಂತೆಯೇ ಮರುನಿರ್ಮಾಣ ಮಾಡಲಾಗಿದ್ದು, ಇಂದು ಇದು ಸಂಗೀತ ಕಾಲೇಜಾಗಿ ಕಾರ್ಯ ನಿರ್ವಹಿಸುತ್ತಿದೆ.
-ಶಹಾ