Friday, 13th December 2024

ಕವಿತೆಗಳನ್ನು ನನ್ನ ಸಲುವಾಗಿ ಬರೆಯುತ್ತೇನೆ : ಚೊಕ್ಕಾಡಿ

ನಿರೂಪಣೆ: ಅಂಜನಾ ಹೆಗಡೆ

ನಾನು ಯಾವುದು ಮುಖ್ಯ ಕವಿತೆಯೆಂದು ಭಾವಿಸಿದ್ದೆನೋ ಅಂತಹ ಕವಿತೆಗಳು ಯಾರನ್ನೂ ತಲುಪಲೇ ಇಲ್ಲ ಹಾಗೂ ಆ ಕವಿತೆಗಳ ಮೂಲಕ ನನ್ನನ್ನು ಗುರುತಿಸಲಿಲ್ಲ ಎನ್ನುವ ಬೇಸರವೂ ನನಗೆ ಇದೆ. ಗಂಭೀರವಾದ ಕವಿತೆಗಳನ್ನು ಓದುವವರ ಸಂಖ್ಯೆೆ ಬಹಳ ಕಡಿಮೆಯಿದೆ; ಜನಪ್ರಿಯವಾದಂತಹ ಕವಿತೆಗಳು, ಹಾಸ್ಯಕವಿತೆಗಳು ಅಥವಾ ಹಾಡು ಗಳನ್ನು ಜನರು ಇಷ್ಟಪಡುವುದು ಜಾಸ್ತಿ. ಅಂತಹ ಸರಳವಾದ ಕವಿತೆಗಳಲ್ಲಿ ಸಾಮಾನ್ಯ ಜನರಿಗೂ ಓದುವ ಹಾಗೂ ತಿಳಿದುಕೊಳ್ಳುವ ಅವಕಾಶವಿರುತ್ತದೆ; ತುಂಬಾ ಸಂಕೀರ್ಣವಾದ ಕವಿತೆಗಳನ್ನು ಓದುವವರ ಸಂಖ್ಯೆ ತುಂಬಾ ಕಡಿಮೆಯಿದೆ.

28.3.2021 ರಂದು ಬಿಡುಗಡೆಯಾಗಲಿರುವ ಸುಬ್ರಾಯ ಚೊಕ್ಕಾಡಿ ಅವರ ಆತ್ಮಚರಿತ್ರೆ ‘ಕಾಲದೊಂದೊಂದೇ
ಹನಿ’ ಯ ಆಯ್ದ ಭಾಗಗಳು.

ಕತ್ತಲಲ್ಲೇ ಕಣ್ಣುನೆಟ್ಟು ತಡಕುವ ನನಗೆ

ಹೊಳೆವುದು ಹಠಾತ್ತನೊಂದು ಚಿನ್ನದ ಗೆರೆ

ಇವು ಅಡಿಗರ ‘ಭೂತ’ ಕವಿತೆಯ ಸಾಲುಗಳು. ಅಡಿಗರ ಕಾವ್ಯದ ಪರಿಚಯ ನನ್ನ ಒಟ್ಟೂ ಚಿಂತನಾಕ್ರಮವನ್ನು ಮತ್ತು ನನ್ನ ಬರೆವಣಿಗೆಯ ರೀತಿಯನ್ನು ಹಠಾತ್ತಾಗಿ ಬದಲಾಯಿಸಿಬಿಟ್ಟಿತ್ತು ಎನ್ನುವುದನ್ನು ಹೇಳಲಿಕ್ಕೆ ಈ ಸಾಲು ಗಳನ್ನು ಬಳಸಿಕೊಳ್ಳುತ್ತಿದ್ದೇನೆ.

ಅಡಿಗರ ಕವಿತೆಗಳ ಮಾದರಿ ನನ್ನೆದುರಿಗೆ ಇದ್ದರೂ ಅವುಗಳ ಬಗ್ಗೆ ಕೂಲಂಕುಶ ವಾಗಿ ತಿಳಿಸಿಕೊಡುವಂಥವರು ಯಾರೂ ಇರಲಿಲ್ಲ. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅಡಿಗರ ಪದ್ಯಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅವರು ಏನನ್ನು ಬರೆಯುತ್ತಾರೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ಹಾಗಾಗಿ ನಾನು ನನ್ನಷ್ಟಕ್ಕೇ ಅಡಿಗರ ಪದ್ಯಗಳನ್ನು ಮಾದರಿ ಯಾಗಿಟ್ಟುಕೊಂಡು ಒಂದಿಷ್ಟು ಪದ್ಯಗಳನ್ನು ನಿರಂತರವಾಗಿ ಬರೆಯಲಿಕ್ಕೆ ಆರಂಭ ಮಾಡಿದೆ.

ಹಾಗೆ ಬರೆದ ಪದ್ಯಗಳನ್ನು ಪ್ರಕಟಿಸುವುದಕ್ಕೆ ಆ ಕಾಲದಲ್ಲಿ ‘ಗೋಕುಲ’ದಂತಹ ಪತ್ರಿಕೆ ಅವಕಾಶ ಮಾಡಿಕೊಟ್ಟಿತು. ಅದು ಆಗ ಖಾದ್ರಿ ಶಾಮಣ್ಣನವರ ನೇತೃತ್ವದಲ್ಲಿ ಪ್ರಕಟವಾಗುತ್ತಿತ್ತು. ಆ ಪತ್ರಿಕೆಯ ಒಂದು ಪುಟವನ್ನು ಕಾವ್ಯಧಾರೆಗೆಂತಲೇ ಪ್ರಾರಂಭ ಮಾಡಿದ್ದರು. ಆ ಕಾವ್ಯಧಾರೆಯ ಪುಟದಲ್ಲಿ ಪ್ರತಿ ವಾರ ನನ್ನ ಒಂದು ಅಥವಾ ಎರಡು ಪದ್ಯಗಳು ಪ್ರಕಟವಾಗುತ್ತಿದ್ದವು. ಆ ಕಾಲದಲ್ಲಿ ನನ್ನ ಜೊತೆಗೆ ಬರೆಯುತ್ತಿದ್ದಂತಹ ಎಚ್ ಎಸ್ ವೆಂಕಟೇಶಮೂರ್ತಿ, ನಿಸಾರ್ ಅಹಮದ್, ಲಕ್ಷ್ಮಣರಾವ್ ಎಲ್ಲರಿಗೂ ಗರಡಿಯಾಗಿದ್ದದ್ದು ‘ಗೋಕುಲ’ ಪತ್ರಿಕೆ. ಅದರ ಜೊತೆಗೆ ಬೇರೆಬೇರೆ ಪತ್ರಿಕೆಗಳೂ ಕೂಡಾ ಆಗ ಪದ್ಯಗಳ ಪ್ರಕಟಣೆಯನ್ನು ಆರಂಭ ಮಾಡಿದ್ದವು. ನಾನು ಅವುಗಳಲ್ಲಿ ನಿರಂತರವಾಗಿ ಕವಿತೆಗಳನ್ನು ಬರೆಯುತ್ತಿದ್ದೆ. ಆದರೆ ಅವುಗಳೆಲ್ಲ ನಿಜವಾದ ಅರ್ಥದಲ್ಲಿ ಕವಿತೆಗಳು ಹೌದೋ ಅಲ್ಲವೋ ಎನ್ನುವುದು ನನಗೆ ಗೊತ್ತಿರಲಿಲ್ಲ. ಸುಮ್ಮನೆ ಅಡಿಗರ ಪದ್ಯಗಳನ್ನು ಮಾದರಿಯಾಗಿಟ್ಟುಕೊಂಡು ಎಷ್ಟೋ ಪದ್ಯಗಳನ್ನು ಬರೆದೆ.

ಏಳು ನೂರು ಪದ್ಯಗಳು ಸರಿಯಿಲ್ಲ!
ಆದರೆ ದಿನಗಳು ಕಳೆದಂತೆ ಆ ಪದ್ಯಗಳ ಬಗ್ಗೆ ನನಗೆ ನಂಬಿಕೆ ಕಡಿಮೆಯಾಗುತ್ತ ಹೋಯಿತು. ಪ್ರಕಟವಾದ ಪದ್ಯಗಳನ್ನೂ
ಒಳಗೊಂಡು ಸುಮಾರು ಏಳು ನೂರು ಪದ್ಯಗಳನ್ನು ‘ಇವು ಸರಿಯಿಲ್ಲ’ ಎನ್ನುವ ಭಾವನೆಯಿಂದ ಹರಿದು ಬಿಸಾಡಿದ್ದೂ ಇದೆ. ಅಷ್ಟೂ ಪದ್ಯಗಳಲ್ಲಿ ನಲವತ್ತು ಪದ್ಯಗಳನ್ನು ಮಾತ್ರ ಆರಿಸಿಕೊಂಡು ನನ್ನ ಮೊದಲ ಸಂಕಲನಕ್ಕೆ ಸೇರಿಸಿಕೊಂಡೆ.

‘ತೆರೆ’ ಎನ್ನುವ ಹೆಸರಿನ ನನ್ನ ಮೊದಲ ಸಂಕಲನ 1970 ನೇ ಇಸವಿಯಲ್ಲಿ ಬಿಡುಗಡೆಯಾಯಿತು. ನನ್ನ ಆತ್ಮೀಯ ಗೆಳೆಯರಾಗಿದ್ದ
ಜಿ ಎಸ್ ಉಬರಡ್ಕ ಅವರು ತಮ್ಮ ‘ಕಾರ್ತಿಕ ಪ್ರಕಾಶನ’ದ ಮೂಲಕ ನನ್ನ ಪುಸ್ತಕವನ್ನು ಬಿಡುಗಡೆ ಮಾಡಿದರು. ಅದನ್ನು
ಮುದ್ರಿಸಿದವರು ಬೆಂಗಳೂರಿನ ನನ್ನ ಗೆಳೆಯರಾದಂತಹ ‘ಲಿಪಿ ಪ್ರಕಾಶನ’ದ ಬಾಕಿನ ಅವರು. ಆ ಕಾಲದಲ್ಲಿ ಅದರಷ್ಟು
ಸುಂದರವಾದ ಪುಸ್ತಕ ಮುದ್ರಣ ಬೇರೆಲ್ಲಿಯೂ ಆಗಿರಲಿಲ್ಲ.

ಆ ಪುಸ್ತಕಕ್ಕೆ ಅಡಿಗರು ಮುನ್ನುಡಿಯನ್ನು ಬರೆದಿದ್ದರು. ಈಗಿನ ಕವಿಗಳಾದರೆ ಬಹುಶಃ ಆ ರೀತಿಯ ಮುನ್ನುಡಿಯನ್ನು ಬರೆದಿದ್ದರೆ ಅದನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಅದರ ನಂತರದ ಯಾವ ಸಂಕಲನಗಳಿಗೂ ನಾನು ಮುನ್ನುಡಿಯನ್ನು ಬರೆಸಲಿಲ್ಲ.
ಏಕೆಂದರೆ ಆ ಮುನ್ನುಡಿಯು ಸೂಚಿಸುವ ಅಭಿಪ್ರಾಯಗಳ ರೀತಿಯಲ್ಲೇ ಪದ್ಯಗಳನ್ನು ಓದುವುದಕ್ಕೆ ಅಥವಾ ಅರ್ಥ ಮಾಡಿ ಕೊಳ್ಳಲಿಕ್ಕೆ ಆರಂಭ ಮಾಡುತ್ತೇವೆ. ಒಂದು ಕವಿತೆಯೊಳಗೆ ನುಗ್ಗುವುದಕ್ಕೆ ಅನೇಕ ಬಾಗಿಲುಗಳು ಇರುತ್ತವೆ ಹಾಗೂ ಯಾರು ಯಾವ ರೀತಿಯಲ್ಲಿ ಓದಿಕೊಳ್ಳುತ್ತಾರೋ ಮತ್ತು ಅರ್ಥೈಸಿಕೊಳ್ಳುತ್ತಾರೋ ಅದೇ ಆ ಕವಿತೆಯ ಅರ್ಥ ಎನ್ನುವ ಹಿನ್ನೆಲೆಯಲ್ಲಿ ನಾನು ಮುನ್ನುಡಿಯನ್ನು ಬರೆಸುತ್ತಿರಲಿಲ್ಲ.

ಅಡಿಗರು ನನ್ನ ಕಾವ್ಯದ ಗುರುವೆಂದು ಭಾವಿಸಿದ್ದ ಕಾರಣ ನಾನು ಅವರಿಂದ ಕಲಿತ ಪಾಠವನ್ನು ಅವರಿಗೆ ಒಪ್ಪಿಸುವುದಕ್ಕಾಗಿ ಮೊದಲ ಸಂಕಲನಕ್ಕೆ ಅವರಿಂದ ಮುನ್ನುಡಿಯನ್ನು ಬರೆಸಿದೆ. ಅದರಲ್ಲಿ ಅಡಿಗರು ಸಾಕಷ್ಟು ಒಳ್ಳೆಯ ಮಾತುಗಳನ್ನೂ ಆಡಿದ್ದರು ಹಾಗೂ ತಿದ್ದುಪಡಿ ಮಾಡಿಕೊಳ್ಳಬೇಕಾದಂತಹ ಸಂಗತಿಗಳನ್ನು ಕೂಡಾ ಸೂಚಿಸಿದ್ದರು. ಇವರಲ್ಲಿ ಎಲ್ಲ ರೀತಿಯ ಶಕ್ತಿಯಿದೆ, ಆದರೆ ಅದನ್ನು ಸಮಗ್ರವಾಗಿ ಜೋಡಿಸುವಂಥದ್ದನ್ನು ಕಲಿಯಬೇಕಾಗಿದೆ ಎನ್ನುವ ಅರ್ಥ ಬರುವಂತೆ ಅವರು ಮುನ್ನುಡಿಯನ್ನು ಬರೆದಿದ್ದರು. ನಾನು ಅವರ ಟೀಕೆಯನ್ನು ಕೂಡಾ ಒಂದು ಆಶೀರ್ವಾದದ ರೀತಿಯಲ್ಲಿ ಸ್ವೀಕರಿಸಿ, ಅದನ್ನು ಸಂಕಲನದಲ್ಲಿ ಬಳಸಿಕೊಂಡಿದ್ದೆ.

ಅಡಿಗರು ನನಗೆ ಕಾವ್ಯದ ಹೊಸ ಮಾರ್ಗವನ್ನು ತೋರಿಸಿಕೊಟ್ಟವರು, ಹೊಸ ರೀತಿಯನ್ನು ಕಲಿಸಿಕೊಟ್ಟವರು ಮತ್ತು ಹೊಸ ರೀತಿಯ ಚಿಂತನೆಯನ್ನು ಮಾಡಲಿಕ್ಕೆ ಪ್ರೇರಣೆ ನೀಡಿದವರು ಎನ್ನುವ ಭಾವನೆಯಿತ್ತು. ಆದರೆ ನಾನು ಎಲ್ಲಿಯವರೆಗೆ ಅವರ ಪ್ರಭಾವದಲ್ಲಿರಬೇಕು, ಇದು ಸರಿಯಾದ ಮಾರ್ಗವಲ್ಲ ಎನ್ನುವ ಯೋಚನೆಯೂ ನನ್ನಲ್ಲಿತ್ತು. ಕಾಲಕ್ರಮೇಣ ನಾನು ಅಡಿಗರ ಕಾವ್ಯದಿಂದ ಬಿಡುಗಡೆ ಪಡೆಯಲಿಕ್ಕೆ ಪ್ರಯತ್ನಿಸಿದೆ. ಅಡಿಗರ ಕಾವ್ಯದ ಅನೇಕ ಸಂಗತಿಗಳು ನನ್ನ ಯೋಚನಾ ರೀತಿಗೆ ಹೊಂದಿಕೆ ಯಾಗುತ್ತಿರಲಿಲ್ಲ. ಏಕೆಂದರೆ ಅವರ ನಂಬಿಕೆಗಳು ನನ್ನವಲ್ಲ ಎನ್ನುವ ಭಾವನೆ ನನಗೆ ಇತ್ತು. ಅವರು ತಮ್ಮ ಯೋಚನಾ ಧಾಟಿಗೆ ಅನುಸಾರವಾಗಿ ದೇಶ- ವಿದೇಶಗಳ ವಿವಿಧ ಪುರಾಣ, ಇತಿಹಾಸಗಳನ್ನು ತಮ್ಮ ಅನುಭವ ನಿವೇದನೆಗೆ ಬಳಸಿಕೊಂಡ ರೀತಿ ನನಗೆ ಎಟುಕದ್ದಾಗಿತ್ತು. ಅವರು ನಮ್ಮ ಪರಂಪರೆಯಿಂದ ಸಿಡಿದು ಹೋಗಿರುವಂತೆ ಕಂಡರೂ ನಿಜಕ್ಕೂ ಅವರು ಪರಂಪರೆಯ ಮುಂದುವರಿಕೆಯಾಗಿ ಬೆಸೆದ ಕೊಂಡಿಯೇ ಆಗಿದ್ದರು. ಅವರ ಕಾವ್ಯ ಪಾಶ್ಚಾತ್ಯ ಕಾವ್ಯದ ಅನುಕರಣೆ, ಅವರಿಗೆ ಭಾರತೀಯ ಕಾವ್ಯ ಪರಂಪರೆ ಹಾಗೂ ನಮ್ಮ ವೇದಪುರಾಣೇತ್ಯಾದಿಗಳ ಅರಿವಿಲ್ಲ ಎನ್ನುವ ಅಭಿಪ್ರಾಯ ತಪ್ಪಾಗಿತ್ತು.

ನಮ್ಮ ವೇದಪುರಾಣಗಳು ಹಾಗೂ ನಮ್ಮ ಕಾವ್ಯದ ಅರಿವಿಲ್ಲದವರಿಗೆ ಅಡಿಗರ ಕಾವ್ಯ ಅರ್ಥವಾಗಲಾರದಾಗಿತ್ತು. ಅವರ ಈ ವಿದ್ವತ್ತಿನ ವ್ಯಾಪ್ತಿ ನನ್ನದಾಗಲು ಸಾಧ್ಯವಿರಲಿಲ್ಲ. ಅವರ ರೀತಿ ಹಾಗೂ ನಂಬಿಕೆಗಳು ನನ್ನದಲ್ಲವಾದ ಕಾರಣ ನಾನು ಬೇರೆಯೇ ಹಾದಿಯನ್ನು ಹಿಡಿಯಬೇಕಿತ್ತು. ಹಾಗಾಗಿ ಅವರ ಕಾವ್ಯವನ್ನೇ ನಂಬಿಕೊಂಡಿದ್ದರೆ ನನ್ನ ಕಾವ್ಯದ ಬೆಳೆವಣಿಗೆ ಸಾಧ್ಯವಿಲ್ಲ ಎಂದು ನನಗೆ ಅನ್ನಿಸಿತು. ಅವರ ‘ವರ್ಧಮಾನ’ ಕವಿತೆಯಲ್ಲಿ ‘ಬಿತ್ತಕ್ಕೆ ಬೇರಿನ ಚಿಂತೆ ಇಲ್ಲ ಆದಷ್ಟು ದೂರ ಠಣ್ಣೆಂದೆಗರಿ ಬಿಚ್ಚುವುದು ತನ್ನ ಮಾಯಾಪಟವ’ ಎನ್ನುವ ಸಾಲುಗಳಿವೆ. ಒಂದು ಮರದ ಅಡಿಯಲ್ಲಿ ಅದರ ಬೀಜವನ್ನು ಹಾಕಿದರೆ ಅದು ಬೆಳೆಯುವುದೇ ಇಲ್ಲ. ಅದೇ ರೀತಿಯಲ್ಲಿ ಒಬ್ಬರ ಆಶ್ರಯದಲ್ಲಿ ಅನುಕರಣೆ ಮಾಡುತ್ತ ಬರೆಯುತ್ತಿದ್ದರೆ ನಾವು ಬೆಳೆಯಲಿಕ್ಕೆ ಸಾಧ್ಯವಿಲ್ಲ, ಅವರಿಂದ ದೊರೆತ ತಿಳಿವಳಿಕೆಯ ಆಧಾರದ ಮೇಲೆ ಸ್ವಂತಿಕೆಯನ್ನು ಉಪಯೋಗಿಸಿ ಬರೆಯುವುದನ್ನು ರೂಢಿಸಿಕೊಳ್ಳಬೇಕು ಎನ್ನುವ ಯೋಚನೆಯಲ್ಲಿ ಅಡಿಗರ ರೀತಿಯಿಂದ ಬಿಡುಗಡೆಯನ್ನು ಪಡೆಯಲಿಕ್ಕೆ ನಾನು ಪ್ರಯತ್ನಿಸಿದೆ.

ಅದರಿಂದ ಬೇರಾಗುವುದಕ್ಕಾಗಿಯೇ ನಾನು ಪುರಾಣಗಳಿಂದ ಎತ್ತಿಕೊಂಡ ಪ್ರತಿಮೆಗಳನ್ನು ಬಳಸುವುದನ್ನು ನಿಧಾನವಾಗಿ ಕೈಬಿಟ್ಟೆ. ಅವರು ಬಳಸುತ್ತಿದ್ದ ವ್ಯಂಗ್ಯ ವಿಡಂಬನೆಯ, ಏರುಸ್ವರದ ನಿರೂಪಣೆಯ ಹಾದಿಯಿಂದ ಪ್ರತ್ಯೇಕವಾಗಿ ಸಾಗಲು ನಿರ್ಧರಿಸಿದೆ. ಅವರು ಕಾವ್ಯಕ್ಕೆ ಬಳಸುತ್ತಿದ್ದ ಬೃಹತ್ ಕ್ಯಾನ್ವಾಸಿಗೆ ಬದಲಾಗಿ ನನ್ನ ಪುಟ್ಟ ಕೈಗಳಿಗೆ ಎಟಕುವಷ್ಟನ್ನೇ ಬಳಸಿಕೊಳ್ಳುವ ಮೂಲಕ ಅವರಿಗೆ ಗೌರವಪೂರ್ವಕವಾಗಿ ನಮಸ್ಕರಿಸುತ್ತಲೇ ಅವರಿಂದ ಬೇರಾಗಿ ನನ್ನದೇ ಹಾದಿ ಹಿಡಿಯಲು ನಿರ್ಧರಿಸಿದೆ.

ವರ್ಧಮಾನ ಸಾಹಿತ್ಯ ಪ್ರಶಸ್ತಿ
‘ತೆರೆ’ ಸಂಕಲನದಲ್ಲಿ ಅಡಿಗರ ರೀತಿಯಲ್ಲೇ ಬರೆದ ಅನೇಕ ಪದ್ಯಗಳಿದ್ದವು. ಅವುಗಳಿಂದ ಭಿನ್ನವಾಗಿ ಬರೆಯಲಿಕ್ಕೆ ಅದರ
ನಂತರದ ಸಂಕಲನಗಳಲ್ಲಿ ನಾನು ಪ್ರಯತ್ನಿಸಿದೆ. ಆಗ ಅವು ವ್ಯಕ್ತಿಕೇಂದ್ರಿತ ಕವಿತೆಗಳಿಂದ ಸಮಾಜಕೇಂದ್ರಿತ ಕವಿತೆಗಳಾಗಿ
ಬದಲಾಗುತ್ತ ಹೋದವು. ‘ಬೆಟ್ಟವೇರಿದ ಮೇಲೆ’ ಎನ್ನುವ ಎರಡನೆಯ ಕವನ ಸಂಕಲನ 1978 ನೇ ಇಸವಿಯಲ್ಲಿ ಪ್ರಕಟವಾಯಿತು.

ಅದರ ನಂತರ 1983 ನೇ ಇಸವಿಯಲ್ಲಿ ‘ನಿಮ್ಮವೂ ಇರಬಹುದು’, 1990 ನೇ ಇಸವಿಯಲ್ಲಿ ಪ್ರಕಟವಾದ ‘ಮೊನ್ನೆ ಸಿಕ್ಕವರು’, 1996 ನೇ ಇಸವಿಯಲ್ಲಿ ಪ್ರಕಟವಾದ ‘ಇದರಲ್ಲಿ ಅದು’ ಈ ಎಲ್ಲ ಕೃತಿಗಳು ‘ಅಕ್ಷರ ಪ್ರಕಾಶನ’ದ ಮೂಲಕ ಪ್ರಕಟವಾದವು. ಆ ಸಮಯದಲ್ಲಿ ನನಗೆ ‘ಅಕ್ಷರ ಪ್ರಕಾಶನ’ದ ಕೆ ವಿ ಸುಬ್ಬಣ್ಣನವರ ಪರಿಚಯವಾಗಿತ್ತು. ಹಾಗಾಗಿ ಅವರ ಹತ್ತಿರ ಕೇಳಿಕೊಂಡಾಗ ಅವರು ನನ್ನ ಪುಸ್ತಕಗಳನ್ನು ಪ್ರಕಟಿಸಲಿಕ್ಕೆ ಒಪ್ಪಿಕೊಂಡರು. ‘ಬೆಟ್ಟವೇರಿದ ಮೇಲೆ’ ಸಂಕಲನಕ್ಕೆ ‘ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ’ಯೂ ಸಿಕ್ಕಿತು.

ಆ ಸಂಕಲನದಲ್ಲಿ ಒಂದು ರೀತಿಯ ಪ್ರತಿಭಟನೆಯ ಕವಿತೆಗಳಿವೆ. ಅದರ ಜೊತೆಗೆ ಆ ಕಾಲದಲ್ಲಿ ತುರ್ತುಪರಿಸ್ಥಿತಿಯ ವಿರುದ್ಧವಾಗಿ ನಡೆಯುತ್ತಿದ್ದ ಚಳುವಳಿಯ ಪ್ರಭಾವವೂ ಇತ್ತು. ‘ಮೊನ್ನೆ ಸಿಕ್ಕವರು’ ಕವನ ಸಂಕಲನದಿಂದ ನನ್ನ ಕವಿತೆಗಳ ಸ್ವರೂಪ ಬದಲಾಗುತ್ತ ಹೋಯಿತು. ಅವುಗಳಲ್ಲಿ ಮುಖ್ಯವಾಗಿ ಪ್ರಕೃತಿಯತ್ತ ನನ್ನ ಕಾವ್ಯರಚನೆಯ ಚಲನೆಯಿರುವುದು ಕಾಣಬಹುದಿತ್ತು. ಅದರ ನಂತರ 2000 ನೇ ಇಸವಿಯಲ್ಲಿ ‘ಇನ್ನೊಂದು ಬೆಳಗು’ ಕವನ ಸಂಕಲನ ಪ್ರಕಟವಾಯಿತು. ಆ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೂರು ಕವಿಗಳ ಹಾಗೂ ಸಾಹಿತಿಗಳ ಪುಸ್ತಕವನ್ನು ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿತ್ತು.

ನನ್ನನ್ನೂ ಆ ಯೋಜನೆಯಲ್ಲಿ ಸೇರಿಸಿಕೊಂಡಿದ್ದ ಕಾರಣ ನನ್ನ ಪುಸ್ತಕವನ್ನು ಅವರಿಗೆ ಪ್ರಕಟನೆಗಾಗಿ ಕೊಟ್ಟೆ. ಅದರ ನಂತರ ‘ಮಾಗಿಯ ಕೋಗಿಲೆ’ ಎನ್ನುವ ಪುಸ್ತಕ ಪ್ರಕಟವಾಯಿತು. ಅದರಲ್ಲಿ ಕೂಡಾ ಪ್ರಕೃತಿಯ ಕಡೆಗಿನ ನನ್ನ ಒಲವು ಹಾಗೂ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧಗಳ ಕುರಿತಾದ ಚಿತ್ರಣವಿದೆ. ಈ ಪುಸ್ತಕವನ್ನು ಜಿನೇಶ್ ಜೈನ್ ಎನ್ನುವ ಕಾರ್ಕಳದ ಸಮೀಪದ ನಲ್ಲೂರಿನ ಒಬ್ಬ ಯುವ ಸಾಹಿತ್ಯಾಸಕ್ತರು ಅದನ್ನು ಪ್ರಕಟಿಸಿದರು. ಜಿನೇಶ್ ಜೈನ್ ಅರವಿಂದ ಚೊಕ್ಕಾಡಿಯ ಶಿಷ್ಯರೂ ಆಗಿದ್ದರು. ಅವರ ‘ಮೌಲ್ಯ ಪ್ರಕಾಶನ’ ಎನ್ನುವ ಪ್ರಕಾಶನ ಸಂಸ್ಥೆಯ ಮೂಲಕ 2004 ನೇ ಇಸವಿಯಲ್ಲಿ ‘ಮಾಗಿಯ ಕೋಗಿಲೆ’ ಪುಸ್ತಕ ಪ್ರಕಟವಾಯಿತು.

ಹಾಡುಗಳ ರಚನೆ
ಈ ನಡುವೆ ನಾನು ಅನೇಕ ಹಾಡುಗಳನ್ನು ಬರೆದಿದ್ದೆ. ಅವುಗಳೆಲ್ಲ ಕೆಸೆಟ್ಟುಗಳಾಗಿ, ಸಿಡಿಗಳಾಗಿ ಅದಾಗಲೇ ಬಿಡುಗಡೆಯಾಗಿ
ದ್ದವು. ಅನೇಕರು ನನ್ನ ಹತ್ತಿರ ನಿಮ್ಮ ಹಾಡುಗಳ ಪುಸ್ತಕ ಬೇಕು ಎಂದು ನನ್ನನ್ನು ಕೇಳುತ್ತಿದ್ದರು. ಹಾಗಾಗಿ ಅವುಗಳನ್ನೆಲ್ಲ ಸೇರಿಸಿ
ಒಂದು ಪುಸ್ತಕವನ್ನು ಪ್ರಕಟಿಸುವ ಯೋಚನೆ ಬಂತು. ‘ಹಾಡಿನ ಲೋಕ’ ಎನ್ನುವ ನನ್ನ ಮೊದಲ ಹಾಡುಗಳ ಸಂಕಲನ 1998 ನೇ
ಇಸವಿಯಲ್ಲಿ ಸುಳ್ಯ ತಾಲ್ಲೂಕು ಐದನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪ್ರಕಟವಾಯಿತು.

ಅದರ ಪ್ರಕಟಣೆಗೆ ನೆರವಾದವರಲ್ಲಿ ಆಗ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಕೋಟೆ ವಸಂತಕುಮಾರ್, ಎಂ ಬಲ್ಲಾಳ, ರಾಮಕೃಷ್ಣ ಭಟ್ ಚೊಕ್ಕಾಡಿ, ಕೆ ಆರ್ ಗಂಗಾಧರ, ಸಿ ಎಚ್ ಕೃಷ್ಣಶಾಸ್ತ್ರಿ ಬಾಳಿಲ ಮುಖ್ಯರಾದವರು. ಹಾಗೆ ಬಿಡುಗಡೆ ಯಾದ ಸಂಕಲನ ತುಂಬಾ ಜನಪ್ರಿಯವಾಯಿತು.

ಅದಾಗಿ ಸ್ವಲ್ಪ ವರ್ಷಗಳ ನಂತರ ‘ಬಂಗಾರದ ಹಕ್ಕಿ’ ಎನ್ನುವ ಹಾಡುಗಳ ಪುಸ್ತಕವನ್ನು ನನ್ನ ಬೆಂಗಳೂರಿನ ಗೆಳೆಯ ಬಾಕಿನ
ಅವರು ತಮ್ಮ ‘ಲಿಪಿ ಪ್ರಕಾಶನ’ದ ಮೂಲಕ 2003 ನೇ ಇಸವಿಯಲ್ಲಿ ಪ್ರಕಟಿಸಿದರು. 2010 ನೇ ಇಸವಿಯಲ್ಲಿ ‘ಹಳದಿ ಬೆಳಕಿನ ಸಂಜೆ’ ಎನ್ನುವ ಕವನ ಸಂಕಲನವನ್ನು ಮೈಸೂರಿನ ‘ಅಂಬಾರಿ ಪ್ರಕಾಶನ’ದ ಮಹೇಶ್ ಅವರು ಪ್ರಕಟಿಸಿದರು. ನನ್ನ ಬಗ್ಗೆ ತುಂಬಾ ಅಭಿಮಾನವಿದ್ದ ಅವರು ನನ್ನ ಸಮಗ್ರ ಕಾವ್ಯವನ್ನು ಕೂಡಾ 2010 ನೇ ಇಸವಿಯಲ್ಲಿ ಪ್ರಕಟಿಸಿದರು.

‘ಚೊಕ್ಕಾಡಿಯ ಹಕ್ಕಿಗಳು’ ಎನ್ನುವ ಹೆಸರಿನ ಆ ಸಂಕಲನದಲ್ಲಿ ಹತ್ತು ಕವನ ಸಂಕಲನಗಳ ಎಲ್ಲ ಕವಿತೆಗಳೂ ಸೇರಿವೆ. ಅದಾದಮೇಲೆ ‘ಭಾವಲೋಕ’ ಎನ್ನುವ ನನ್ನ ಹಾಡುಗಳ ಸಂಕಲನವನ್ನು ಪುತ್ತೂರಿನ ‘ಜ್ಞಾನಗಂಗಾ ಪ್ರಕಾಶನ’ದ ಪ್ರಕಾಶ್
ಕೊಡೆಂಕಿರಿ ಎನ್ನುವವರು 2016 ನೇ ಇಸವಿಯಲ್ಲಿ ಪ್ರಕಟಿಸಿದರು. 2020 ನೇ ಇಸವಿಯಲ್ಲಿ ಮೈಸೂರಿನ ‘ರೂಪ ಪ್ರಕಾಶನ’ದ ಮಹೇಶ್ ಅವರು ‘ಕಲ್ಲು ಮಂಟಪ’ ಎನ್ನುವ ನನ್ನ ಹೊಸ ಕವನ ಸಂಕಲನವನ್ನು ಪ್ರಕಟಿಸಿದರು. 2010 ನೇ ಇಸವಿಯಿಂದ 2020 ರವರೆಗಿನ ಅವಧಿಯಲ್ಲಿ ನನ್ನ ಕವಿತೆಗಳ ರೀತಿ-ನೀತಿಗಳು ತುಂಬಾ ಬದಲಾಗಿಬಿಟ್ಟಿದ್ದವು. ನನ್ನ ಹೊಸ ಸಂಕಲನದಲ್ಲಿ ಆಧ್ಯಾತ್ಮಿಕ ಸೆಳೆತ ಕೂಡಾ ಇದೆ ಎನ್ನುವುದನ್ನು ಅನೇಕರು ಗುರುತಿಸಿಕೊಂಡಿದ್ದರು.

ನನ್ನ ಕೆಲವು ಕವಿತೆಗಳು ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿವೆ. ‘ಧ್ಯಾನಸ್ಥ’
ಎನ್ನುವ ಕವಿತೆ ಭಾರತದ ಎಲ್ಲ ಭಾಷೆಗಳಿಗೆ ಅನುವಾದವಾಗಿದೆ. ಅಲ್ಲದೆ ನನ್ನ ಇತರ ಕೆಲವು ಕವಿತೆಗಳು ಇಂಗ್ಲಿಷ್, ಹಿಂದಿ,
ತೆಲುಗು, ತಮಿಳು ಭಾಷೆಗಳಿಗೆ ಅನುವಾದವಾಗಿವೆ. ಹಾಗೆಯೇ ಬೆಂಗಳೂರಿನ ‘ಸುಂದರ ಸಾಹಿತ್ಯ’ ಪ್ರಕಟಿಸಿದ ’ಕನ್ನಡ ಕವಿ
ಕಾವ್ಯ ಕುಸುಮ-36’ ರಲ್ಲಿ ನನ್ನ ಆಯ್ದ ಇಪ್ಪತ್ತಾರು ಕವಿತೆಗಳು ಸೇರ್ಪಡೆಯಾಗಿವೆ. ನಾನು ಸಂಪಾದಿಸಿದ್ದ ‘ದ.ಕ. ಕಾವ್ಯ-1901-76’ ಕೃತಿಯು ಕೇರಳದ ವಿಶ್ವವಿದ್ಯಾಲಯದ ಕನ್ನಡ ಪೀಠದ ಎಂ.ಎ. ತರಗತಿಗೆ ಪಠ್ಯವಾಗಿತ್ತು.

ನಾನು ಹಳ್ಳಿಯಲ್ಲಿದ್ದರೂ ಕೂಡಾ ಹೊರಗಿನ ಅನೇಕ ಪ್ರಕಾಶನ ಸಂಸ್ಥೆಗಳು ನನ್ನ ಪುಸ್ತಕಗಳನ್ನು ಪ್ರಕಟಮಾಡಲಿಕ್ಕೆ ಸಿಗುತ್ತಿದ್ದದ್ದು ನನ್ನ ಅದೃಷ್ಟವೆಂದೇ ಹೇಳಬೇಕು.

ಮುನಿಸು ತರವೇ ಕವಿ
ಸುಮಾರು ಎಂಟು ನೂರು ಕವಿತೆಗಳನ್ನು ನಾನು ಪ್ರಕಟಿಸಿದ್ದರೂ, ನನ್ನ ಜನಪ್ರಿಯ ಕವಿತೆಯಾದ ‘ಮುನಿಸು ತರವೇ’ ಕವಿತೆಯ
ಮೂಲಕವೇ ಜನರು ನನ್ನನ್ನು ಗುರುತಿಸುತ್ತಾರೆ. ಆ ಕವಿತೆ ಎಷ್ಟು ಜನಪ್ರಿಯವಾಗಿತ್ತೆಂದರೆ, ನನ್ನನ್ನು ಭೇಟಿಯಾದ ಹೊಸಬರೆಲ್ಲ
ನನ್ನ ಹೆಸರು ಕೇಳಿದ ತಕ್ಷಣ ‘ನೀವು ಮುನಿಸು ತರವೇ ಕವಿಯಲ್ಲವೇ?’ ಎಂದು ಕೇಳುತ್ತಾರೆ.

ಅದರ ಜೊತೆಗೆ ‘ಸಂಜೆಯ ರಾಗಕೆ’, ‘ದಿನ ಹೀಗೆ ಜಾರಿಹೋಗಿದೆ’, ‘ಎಂಥ ದಿನಗಳವು’, ‘ಆಕಾಶ ಬಿಕ್ಕುತಿದೆ’ ಮೊದಲಾದ ಹಾಡುಗಳು
ಕೂಡಾ ನನಗೆ ಜನಪ್ರಿಯತೆಯನ್ನು ತಂದುಕೊಟ್ಟಿವೆ. ಇದು ನನಗೆ ಸಂತೋಷವನ್ನು ಕೊಟ್ಟಿದೆಯಾದರೂ, ನಾನು ಯಾವುದು ಮುಖ್ಯ ಕವಿತೆಯೆಂದು ಭಾವಿಸಿದ್ದೆನೋ ಅಂತಹ ಕವಿತೆಗಳು ಯಾರನ್ನೂ ತಲುಪಲೇ ಇಲ್ಲ ಹಾಗೂ ಆ ಕವಿತೆಗಳ ಮೂಲಕ ನನ್ನನ್ನು ಗುರುತಿಸಲಿಲ್ಲ ಎನ್ನುವ ಬೇಸರವೂ ನನಗೆ ಇದೆ. ಗಂಭೀರವಾದ ಕವಿತೆಗಳನ್ನು ಓದುವವರ ಸಂಖ್ಯೆೆ ಬಹಳ
ಕಡಿಮೆ ಯಿದೆ; ಜನಪ್ರಿಯವಾದಂತಹ ಕವಿತೆಗಳು, ಹಾಸ್ಯಕವಿತೆಗಳು ಅಥವಾ ಹಾಡುಗಳನ್ನು ಜನರು ಇಷ್ಟಪಡುವುದು ಜಾಸ್ತಿ.

ಅಂತಹ ಸರಳವಾದ ಕವಿತೆಗಳಲ್ಲಿ ಸಾಮಾನ್ಯ ಜನರಿಗೂ ಓದುವ ಹಾಗೂ ತಿಳಿದುಕೊಳ್ಳುವ ಅವಕಾಶವಿರುತ್ತದೆ; ತುಂಬಾ
ಸಂಕೀರ್ಣವಾದ ಕವಿತೆಗಳನ್ನು ಓದುವವರ ಸಂಖ್ಯೆ ತುಂಬಾ ಕಡಿಮೆಯಿದೆ. ನಾವು ಬರೆಯುವುದು ಕರ್ನಾಟಕದ ಏಳು ಕೋಟಿ
ಜನರನ್ನೂ ತಲುಪಬೇಕು ಎನ್ನುವ ನಿರೀಕ್ಷೆಯೇ ತಪ್ಪು ಎನ್ನುವುದು ನನ್ನ ಭಾವನೆ. ಮೊದಲನೆಯದಾಗಿ ಕವಿತೆಗಳನ್ನು
ನಾನು ನನ್ನ ಸಲುವಾಗಿ ಬರೆಯುತ್ತೇನೆ ಹಾಗೂ ಹಾಗೆ ಬರೆದ ಕವಿತೆಗಳನ್ನು ಸಮಾನಮನಸ್ಕರಾದ ಕೆಲವರು ಇಷ್ಟಪಟ್ಟರೆ
ಅದರಿಂದಾಗಿ ಒಂದು ಸಮಾಧಾನ ದೊರೆಯುತ್ತದೆ. ಒಬ್ಬ ಸಮರ್ಥನಾದ ಓದುಗ ಅದನ್ನು ಓದಿ ಇಷ್ಟಪಟ್ಟರೆ, ಅದು
ಸಾವಿರಗಟ್ಟಲೆ ಜನರು ಓದುವುದಕ್ಕೆ ಸಮ ಎನ್ನುವುದು ನನ್ನ ಭಾವನೆ.

ನಾನು ಬರೆದ ಕವಿತೆಗಳು ತುಂಬಾ ಜನರನ್ನು ತಲುಪದೇ ಇರಬಹುದು; ಆದರೆ ಯಾರಿಗೆ ತಲುಪಿದೆಯೋ ಅವರು ಅದನ್ನು ಇಷ್ಟಪಟ್ಟಿದ್ದಾರೆ ಮತ್ತು ಸಂದರ್ಭ ಸಿಕ್ಕಾಗ ನನಗೆ ತಿಳಿಸಿದ್ದಾರೆಕೂಡಾ. ಯಾರೋ ಎಲ್ಲಿಯೋ ನನ್ನ ಕವಿತೆಗಳನ್ನು ಓದುತ್ತಿದ್ದಾರೆ ಹಾಗೂ ಎಲ್ಲಿಯೋ ದೂರದಲ್ಲಿ ಅದೃಶ್ಯ ಓದುಗರು ಇರುತ್ತಾರೆ ಎನ್ನುವ ನಂಬಿಕೆಯಿಂದ ನಾನು ಬರೆಯುತ್ತಿದ್ದೇನೆ.