Wednesday, 11th December 2024

ಆನ ಯಾನ ಆರಂಭ

ಗ್ಲಾಮರ್ ಬೆಡಗಿ ಅದಿತಿ ಪ್ರಭುದೇವ ಈಗ ಸೂಪರ್ ನ್ಯಾಚುರಲ್ ವುಮೆನ್ ಆಗಿ ತೆರೆಗೆ ಬಂದಿದ್ದಾರೆ. ಆನ ಚಿತ್ರದ ಮೂಲಕ ಅದಿತಿ ಹೊಸ ಅವತಾರದಲ್ಲಿ ಮಿಂಚುತ್ತಿದ್ದಾರೆ.

ಆನ ಶೀರ್ಷಿಕೆ ಹೇಗೆ ವಿಭಿನ್ನವಾಗಿದೆಯೋ ಅಂತೆಯೇ ಸಿನಿಮಾದಲ್ಲಿ ಅದಿತಿ ಪಾತ್ರ ಇನ್ನೂ ವಿಭಿನ್ನತೆಯಿಂದ ಕೂಡಿದೆ. ಅದಿತಿ ಇದೇ ಮೊದಲ ಬಾರಿಗೆ ಹಾರರ್ ಕಥೆಯ ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಕೆಲವೊಂದು ದೃಶ್ಯದಲ್ಲಿ ಅದಿತಿ ಅಬ್ಬರಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ
ಟ್ರೇಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸುನೀಲ್ ಪುರಾಣಿಕ್ ಅವರ ಪಾತ್ರ ಸಹ ಎಲ್ಲರ ನೆನಪಿನಲ್ಲಿ ಉಳಿಯುವಂತಿದೆ.

ಆನ, ಅಂದುಕೊಂಡಂತೆಯೇ ಇದು ಹಾರರ್ ಕಥೆಯ ಚಿತ್ರವಾಗಿದೆ. ಕ್ಯಾಚಿ ಇರಲಿ ಎಂದು ಆನ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಚಿತ್ರದ ನಾಯಕಿಯ ಹೆಸರು ಅನರ್ಘ್ಯ, ಮನೆಯಲ್ಲಿ ಎಲ್ಲರೂ ಆಕೆಯನ್ನು ಪ್ರೀತಿಯಿಂದ ಆನ ಎಂದು ಕರೆಯುತ್ತಾರೆ. ಸಾಮಾನ್ಯ ಮಹಿಳೆಯೊಬ್ಬಳು ಹೇಗೆ ಸೂಪರ್ ನ್ಯಾಚುರಲ್ ಪವರ್ ಪಡೆಯುತ್ತಾಳೆ. ಅದರ ಹಿಂದಿನ ವೃತ್ತಾಂತವೇನು ಎಂಬುದೇ ಚಿತ್ರದ ಸಸ್ಪೆನ್ಸ್.

ವಿಭಿನ್ನತೆಯ ಆಗರ
ಆನ, ಈ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿ ಮೂಡಿಬಂದಿದೆ. ಇಲ್ಲಿ ಹಾರರ್ ಜತೆಗೆ ಸೂಪರ್ ನ್ಯಾಚುರಲ್ ಕಥೆಯೂ ಇದೆ. ಅದು ಒಬ್ಬ ಮಹಿಳೆ ಸೂಪರ್ ನ್ಯಾಚುರಲ್ ಪವರ್ ಪಡೆದು ಹೇಗೆ ಅನ್ಯಾಯದ ವಿರುದ್ಧ ಹೋರಾಡುತ್ತಾಳೆ. ದುರುಳರನ್ನು ಹೇಗೆ ಸೆದೆ ಬಡಿಯುತ್ತಾಳೆ ಎಂಬುದೇ ಸಿನಿಮಾದ ಇಂಟರೆಸ್ಟಿಂಗ್ ಅಂಶ. ಇದು ಕನ್ನಡದಲ್ಲಿಯೇ ಹೊಸ ಪ್ರಯೋಗವಾಗಿದೆ.

ತೆರೆಯಲ್ಲಿ ಸಿನಿಮಾ ನೋಡುತ್ತಿದ್ದರೆ ಹೊಸ ಅನುಭವ ನೀಡುತ್ತದೆ. ಪ್ರತಿ ಸನ್ನಿವೇಶವೂ ಕೂಡ ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಹಾಲಿವುಡ್ ಮಾದರಿಯಲ್ಲಿ
ಚಿತ್ರ ಮೂಡಿಬಂದಿದೆ ಎನ್ನುತ್ತಾರೆ ನಿರ್ದೇಶಕರ ಮನೋಜ್ ಪಿ.ನಡಲುಮನೆ ಕಾಲ್ಪನಿಕತೆಗೆ ನೈಜತೆಯ ಸ್ಪರ್ಶ ಆನ ಕಂಪ್ಲೀಟ್ ಕಾಲ್ಪನಿಕತೆಯ ಸಿನಿಮಾ. ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕೆಲವೊಂದು ಸನ್ನಿವೇಶಕ್ಕೆ ನೈಜತೆಯ
ಸ್ಪರ್ಶ ನೀಡಿ ತೆರೆಗೆ ತರಲಾಗಿದೆ. ಹಾಗಾಗಿ ಇದು ಮಹಿಳಾ ಪ್ರಧಾನ ಚಿತ್ರ ಎಂದರು ಅಚ್ಚರಿಪಡಬೇಕಾಗಿಲ್ಲ. ಇಲ್ಲಿ ನಾಯಕಿಯ ಪಾತ್ರವೇ ಪ್ರಮುಖವಾಗಿದೆ. ಕೌಟುಂಬಿಕ ಕಥೆ ಚಿತ್ರದಲ್ಲಿದ್ದು, ಇಡೀ ಕುಟುಂಬ ಸಮೇತ ಸಿನಿಮಾ ನೋಡಲು ಯಾವುದೇ ಅಡ್ಡಿಯಿಲ್ಲ.

ಸಸ್ಪೆನ್ಸ್, ಥ್ರಿಲ್ಲರ್ ಜತೆಗೆ ಮನರಂಜನೆಗೂ ಹೆಚ್ಚು ಒತ್ತು ನೀಡಲಾಗಿದೆ. ಯು.ಕೆ.ಪ್ರೊಡಕ್ಷ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ. ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಸ್, ಪ್ರೇರಣಾ ಕಂಬಂಮ, ವರುಣ್ ಅಮರವತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಮುಂತಾ ದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

***

ನಾನು ಈವರೆಗೂ ಈ ರೀತಿಯ ಪಾತ್ರದಲ್ಲಿ ನಟಿಸಿಲ್ಲ. ನನಗೂ ಚಿತ್ರ ಒಪ್ಪಿಕೊಂಡಾಗ ಸ್ವಲ್ಪ ಭಯವಿತ್ತು. ಹೇಗೆ ಕಾಣುತ್ತೇನೋ ಎಂಬ ಆತಂಕವೂ ಇತ್ತು. ಆದರೆ ಈಗ ಆ ಭಯ ಹೋಗಿದೆ. ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ನನಗಿದೆ. ಆನ ಎಂಬ ನನ್ನ ಹೆಸರು ಡಿಫರೆಂಟ್ ಆಗಿದೆ. ಅಂತೆಯೇ ಚಿತ್ರವೂ ಮೂಡಿಬಂದಿದೆ.
-ಅದಿತಿ ಪ್ರಭುದೇವ, ನಟಿ

***

ಇತ್ತೀಚೆಗೆ ಕ್ರೈಂ, ಥ್ರಿಲ್ಲರ್ ಸಿನಿಮಾಗಳೇ ಹೆಚ್ಚಾಗಿ ತೆರೆಗೆ ಬರುತ್ತಿವೆ. ಹಾಗಾಗಿ ಪ್ರೇಕ್ಷಕರಿಗೆ ಹೊಸ ಕಥೆಯ ಮೂಲಕ ಹೊಸತನ ಕಟ್ಟಿಕೊಡಬೇಕು ಎನ್ನಿಸಿತು. ಆ ನಿಟ್ಟಿನಲ್ಲಿ ಯೋಚಿಸುತ್ತಿರುವಾಗ ಈ ಕಥೆ ಹೊಳೆಯಿತು. ಹಾರರ್ ಜತೆಗೆ ಸೂಪರ್ ನ್ಯಾಚುರಲ್ ಪವರ್ ಕಥೆಯನ್ನು ಸೇರಿಸಿ ಕಥೆ ಹೆಣೆದೆ. ಚಿತ್ರವೂ ಸೆಟ್ಟೇರಿತು.
ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಿದೆವು.

ಅಂದುಕೊಂಡಂತೆ ಚಿತ್ರವೂ ಮೂಡಿಬಂದಿದೆ. ಇದು ನನ್ನ ಮೊದಲ ಚಿತ್ರ. ಸಹಜವಾಗಿಯೇ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿದೆ. ಸಿನಿಪ್ರಿಯರು ಬಯಸುವ ಎಲ್ಲಾ ಅಂಶಗಳು ಚಿತ್ರದಲ್ಲಿವೆ ಹಾಗಾಗಿ ಈ ಚಿತ್ರ ಖಂಡಿತವಾಗಿ ಮೆಚ್ಚುಗೆಯಾಗುತ್ತದೆ ಎಂಬ ನಂಬಿಕೆ ನನಗಿದೆ. ಈ ಚಿತ್ರದ ಬಳಿಕ ಇದೇ ರೀತಿಯ ಸರಣಿ ಕಥೆಯನ್ನು ತೆರೆಗೆ ತರಬೇಕು ಎಂಬ ಯೋಜನೆ ಇದೆ.
-ಮನೋಜ್ ಪಿ.ನಡುಲಮನೆ, ನಿರ್ದೇಶಕ