Wednesday, 11th December 2024

ರಿವೇಂಜ್ ಕಥೆಯ ಆಕಾಶವಾಣಿ ನಿಲಯ

ವಿಭಿನ್ನ ಶೀರ್ಷಿಕೆಯ ‘ಆಕಾಶವಾಣಿ ನಿಲಯ ಬೆಂಗಳೂರು’ ಚಿತ್ರ ತೆರೆಗೆ ಬಂದಿದೆ. ಟೈಟಲ್ ಕೇಳಿದಾಕ್ಷಣ ಇದು, ಆಶಾವಾಣಿಯ ಕಥೆಯೇ ಇರಬೇಕು ಅಂದುಕೊಳ್ಳುವುದು ಸಹಜ. ಆದರೆ ಇಲ್ಲಿ ಕುತೂಹಲಕಾರಿ ಕಥೆಯಿದೆ. ಹಾರರ್, ಸಸ್ಪೆನ್ಸ್ ಕಥಾಹಂದರ ಈ ಚಿತ್ರದಲ್ಲಿದ್ದು, ಸಿನಿಮಾದ ಟೈಟಲ್‌ಗೂ ಆಕಾಶವಾಣಿ ಕೇಂದ್ರಕ್ಕೂ ಯಾವುದೇ ಸಂಬಂಧವಿಲ್ಲ.

ಚಿತ್ರದಲ್ಲಿ ರೇಡಿಯೋ ಕೂಡ ಒಂದು ಪಾತ್ರವಾಗಿ ಮೂಡಿಬಂದಿದ್ದು, ಆಗಾಗ ಆಕಾಶವಾಣಿಯ ಸಂಗೀತ ಕೇಳಿ ಬರುತ್ತಿರುತ್ತದೆ. ಅದಕ್ಕಾಗಿಯೇ ಈ ಶೀರ್ಷಿಕೆ ಇಟ್ಟಿದ್ದಾರೆ ನಿರ್ದೇಶಕರು. ಈ ಹಿಂದೆ ‘ನಾವೇ ಭಾಗ್ಯವಂತರು’ ಚಿತ್ರವನ್ನು ನಿರ್ದೇಶಿಸಿದ್ದ ಹರಿಕೃಷ್ಣ, ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಸ್ಪಲ್ಪ ವಿಭಿನ್ನವಾಗಿರಲಿ ಎಂದು ಈ ಶಿರ್ಷಿಕೆ ಇಟ್ಟಿದೇವೆ. ಆಕಾಶವಾಣಿ ಸಂಸ್ಥೆ ಹಾಗೂ ಅದರ ಸಿಬ್ಬಂದಿಗೆ ಅಪಪ್ರಚಾರ ಮಾಡುವ ಯಾವುದೇ ಕಂಟೆಂಟ್ ನಮ್ಮ ಚಿತ್ರದಲ್ಲಿಲ್ಲ ಎನ್ನತ್ತಾರೆ ನಿರ್ದೇಶಕ ಹರಿಕೃಷ್ಣ.

ಚಿತ್ರದಲ್ಲಿ ಪ್ರತೀಕಾರದ ಕಥೆಯಿದ್ದು, ಪ್ರತಿ ಕ್ಷಣಕ್ಕೂ ಚಿತ್ರ ಕೂತೂಹಲ ಮೂಡಿಸುತ್ತಾ ಸಾಗುತ್ತದೆ. ಇಲ್ಲಿ ನಾಯಕ ನಾರು, ಖಳನಾಯಕನಾರು ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಉತ್ತರ ಸಿಗಲಿದೆ. ರಣವೀರ್ ಪಾಟೀಲ್ ನಾಯಕನಾಗಿ ಅಭಿನಯಿಸಿದ್ದು, ಮೂರು ಶೇಡ್‌ನಲ್ಲಿ ಕಂಗೊಳಿಸಿದ್ದಾರೆ. ರಣವೀರ್‌ಗೆ ಜತೆಯಾಗಿ ನಿಖಿತಾ ಸ್ವಾಮಿ ಬಣ್ಣಹಚ್ಚಿದ್ದಾರೆ.

ಹಳ್ಳಿ ಹುಡುಗಿಯೊಬ್ಬಳು ತನಗಾದ ಅನ್ಯಾಯಕ್ಕೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾಳೆ ಎಂಬ ಪಾತ್ರದಲ್ಲಿ ನಿಖಿತಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಸುಚೇಂದ್ರ ಪ್ರಸಾದ್ ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಹಾಸ್ಯ ನಟ ಟೆನ್ನಿಸ್ ಕೃಷ್ಣ ಕೂಡ ಚಿತ್ರದಲ್ಲಿ ನಟಿಸಿದ್ದು, ಬಹುದಿನಗಳ ಬಳಿಕ ಎಲ್ಲರನ್ನು ನಗಿಸಲಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಶ್ರೀ ಸೇರಿದಂತೆ ಮತ್ತಿತರರ ಅಭಿನಯವಿದೆ. ಸುಮ್‌ಸುಮ್ನೆ ವಿಜಯಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಎ.ಟಿ.ರವೀಶ್ ಸಂಗೀತ, ಆಂಟೋನಿ ಎಂ, ಶಿವರಾಜ್ ಗುಬ್ಬಿ ಸಾಹಿತ್ಯ, ಪ್ರವೀಣ್ ಶೆಟ್ಟಿ ಛಾಯಾಗ್ರಹಣ, ಪವನ್ ಗೌಡ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ತಿಪಟೂರು ಹಾಗೂ ನೊಣವಿನಕೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕಮಲಾನಂದ ಚಿತ್ರಾಲಯ ಬ್ಯಾನರ್ ನಲ್ಲಿ ಶಿವಾನಂದಪ್ಪ
ಬಳ್ಳಾರಿ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.