Friday, 13th December 2024

ಗ್ರೂಫಿಗೆ ಪ್ರೇಕ್ಷಕರಿಂದ ಗುಡ್ ರೆಸ್ಪಾನ್ಸ್

ಕಳೆದ ವಾರ ತೆರೆಗೆ ಬಂದ ಗ್ರೂಫಿ ಚಿತ್ರ ರಾಜ್ಯಾಂದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೊಸಬರ ಚಿತ್ರವಾದರೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತ ವಾಗುತ್ತಿದೆ.

ಮಲ್ಟಿ ಫ್ಲೆಕ್ಸ್‌ನಲ್ಲಿ ಪ್ರದರ್ಶನವಾಗುತ್ತಿದ್ದ ಗ್ರೂಫಿಗೆ ಸಿಂಗಲ್ ಥಿಯೇಟರ್‌ನಲ್ಲೂ ಪ್ರದರ್ಶನಕ್ಕಾಗಿ ಬೇಡಿಕೆ ಬರುತ್ತಿದೆ. ಕರೋನಾ ಕಾಲಘಟ್ಟದಲ್ಲೂ ಪ್ರೇಕ್ಷಕರನ್ನು ರಂಜಿಸಿದ, ಮೆಚ್ಚುಗೆ ಪಡೆದ ಚಿತ್ರ ಎನ್ನುವ ಖುಷಿ ಗ್ರೂಫಿ ಚಿತ್ರತಂಡಕ್ಕಿದೆ. ಉತ್ತಮ ಸಾಮಾಜಿಕ ಸಂದೇಶವಿರುವ ಗ್ರೂಫಿ, ಯುವಜನರನ್ನು ಚಿತ್ರಮಂದಿರದತ್ತ ಸೆಳೆ ಯುವಲ್ಲಿ ಯಶಸ್ವಿಯಾಗಿದೆ.

ಸೆಲ್ಫಿ ಕಥೆ ಹೇಳಿದ ಗ್ರೂಫಿ
ಗ್ರೂಫಿ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಅದನ್ನು ಅಷ್ಟೇ ನೈಜವಾಗಿ ಪ್ರೇಕ್ಷಕರ ಮನಕೊಪ್ಪುವಂತೆ ತೆರೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ನಿರ್ದೇಶಕ ರವಿ ಅರ್ಜುನ್. ಸಿನಿಮಾದ ಕಥೆಯಲ್ಲಿ ನಗುವಿದೆ, ಅಳುವಿದೆ, ಸೆಲ್ಫಿ ಕ್ರೇಜಿಗೆ ಬಲಿಯಾದವರ ಕರುಣಾಜನಕ ಕಥೆಯಿದೆ. ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಕಥೆಯಲ್ಲಿ ಮಿಳಿತ ವಾಗಿದ್ದು, ಚಿತ್ರ ಪ್ರತಿಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಗ್ರೂಫಿ ಸೆಲ್ಫಿ ಕಥೆಗೆ ಸೀಮಿತವಾಗಿಲ್ಲ. ಇದರ ಜತೆಗೆ ಪ್ರಾಕೃತಿಕ ವಿಕೋಪ. ಅದಕ್ಕೆ ಮಾನವರಾದ ನಾವು ಹೇಗೆ ಕಾರಣರಾಗಿದ್ದೇವೆ ಎಂಬುದನ್ನು ಸಾರಿ ಹೇಳುತ್ತದೆ. ಚಿತ್ರದಲ್ಲಿ ಎಲ್ಲಾ ಪಾತ್ರವೂ ಮುಖ್ಯವಾಗಿದ್ದು, ಪ್ರತಿ ಪಾತ್ರವೂ ಒಂದೊಂದು ಕಥೆ ಹೇಳುತ್ತಾ ಸಾಗುತ್ತದೆ. ಚಿತ್ರದ ನಾಯಕ ಕಾರ್ತಿಕ್ ಪೋಟೋ ಜರ್ನಲಿಸ್ಟ್.

ನಿಸರ್ಗದ ರಮಣೀಯ ಸಿರಿಯನ್ನು ಸವಿಯುವುದೇ ಈತನ ಕಾಯಕ. ತನ್ನ ನೆಚ್ಚಿನ ತಾಣಗಳಲ್ಲಿ ಆಗುತ್ತಿರುವ ವಿಕೋಪಗಳು ಅರಿವಾದಾಗ ಮರುಗುತ್ತಾನೆ. ಅದಕ್ಕೆ ಕಾರಣವನ್ನು ಹುಡುಕಲು ಹೊರಡುತ್ತಾನೆ. ಈ ನಡುವೆ ಸೆಲ್ಫಿ ಹುಚ್ಚಿನ ಭುವನಾ, ಸದಾ ಭಯಪಡುವ ಪುನೀತ್, ಹೊಸತನ್ನು ಕಂಡುಹಿಡಿಯಬೇಕು ಎಂದು ಬಯಸುವ ಪೂರ್ವಿ, ತಿಂಡಿಪೋತಿ ಸಾನಿಕಾ, ಸಂಗೀತ ಪ್ರಿಯ ಶಶಾಂಕ್, ಇವರೆಲ್ಲರು ಮಲೆನಾಡಿನ ಸುಂದರ ತಾಣದಲ್ಲಿ ಸಂದಿಸುತ್ತಾರೆ. ಹೀಗೆ ಇವೆರೆಲ್ಲರು ಇಲ್ಲಿಗೆ ಬಂದಿದ್ದು ಯಾಕೆ ಎಂಬುದು ಕಾತರತೆ ಹೆಚ್ಚಿಸುತ್ತಾ ಸಾಗುತ್ತದೆ. ನಡುವೆ ಒಂದಷ್ಟು ಹಾರರ್ ಟಚ್ ಇದ್ದು, ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ. ಗಗನ್, ಉಮಾ ಮಯೂರಿ, ಸಂಧ್ಯಾ, ಶ್ರೀಧರ್, ಸಂಗೀತಾ, ರಜನಿಕಾಂತ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

***

ಸಾಮಾಜಿಕ ಕಳಕಳಿಯಿಂದ ನಿರ್ಮಾಣವಾದ ಚಿತ್ರವೇ ಗ್ರೂಫಿ. ಪ್ರೇಕ್ಷಕರು ಮೆಚ್ಚುವ ಚಿತ್ರವನ್ನು ನೀಡಿದ್ದೇವೆ ಎಂಬ ತೃಪ್ತಿ ನಮಗಿದೆ. ಕರೋನಾ ಕಾಡುತ್ತಿರುವ ಸಮಯದಲ್ಲಿ ಚಿತ್ರ ಬಿಡುಗಡೆ ಮಾಡುವುದು ಹೇಗೆ ಎಂಬ ಭಯವಿತ್ತು. ಪ್ರೇಕ್ಷಕರು ನಮ್ಮ ಕೈಹಿಡಿಯುತ್ತಾರೆ ಎಂಬ ನಂಬಿಕೆಯೂ ಇತ್ತು. ಹಾಗಾಗಿ ಚಿತ್ರ ಬಿಡುಗಡೆ ಮಾಡಿದೆವು. ಪ್ರೇಕ್ಷಕರು ಚಿತ್ರವನ್ನು ಮೆಚ್ಚಿದ್ದಾರೆ. ಮೊದಲು ಮಲ್ಟಿ ಫ್ಲೆಕ್ಸ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದೆವು. ಈಗ ಏಕಪರದೆಯ ಚಿತ್ರಮಂದಿರಗಳಲ್ಲೂ ಚಿತ್ರ ಪ್ರದರ್ಶನಕ್ಕೆ ಬೇಡಿಕೆ ಬರುತ್ತಿದೆ. ಈ ವಾರದಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲೂ ಗ್ರೂಫಿ ಪ್ರದರ್ಶನವಾಗಲಿದೆ.
-ಕೆ.ಜೆ.ಸ್ವಾಮಿ ನಿರ್ಮಾಪಕ