Friday, 13th December 2024

ಹೊಸ ಸಿನೆಮಾ ಘೋಷಿಸಿದ ಹೊಂಬಾಳೆ

ಕೆಜಿಎಫ್ ಯಶಸ್ಸಿನ ಖುಷಿಯಲ್ಲಿರುವ ಹೊಂಬಾಳೆ ಫಿಲಂಸ್ ಹೊಸ ಚಿತ್ರವನ್ನು ಅನೌನ್ಸ್ ಮಾಡುವ ಮೂಲಕ ಸಿನಿಪ್ರಿಯರಿಗೆ ಮತ್ತೊಂದು ಸಿಹಿ ಸುದ್ಧಿ ನೀಡಿದೆ. ಈ ಬಾರಿಯೂ ಮತ್ತೊಂದು ಅದ್ಭುತ ಸಿನಿಮಾವನ್ನ ನಿರ್ಮಿಸಲು ಹೊಂಬಾಳೆ ಫಿಲಂಸ್
ಸಿದ್ಧವಾಗುತ್ತಿದೆ. ವಿಶೇಷ ಎಂದರೆ ಈ ಬಾರಿ ಹೊಂಬಾಳೆ, ಮಹಿಳಾ ನಿರ್ದೇಶಕಿಗೆ ಮಣೆ ಹಾಕಿದೆ.

ಹೌದು, ತಮಿಳು ಹಾಗೂ ತೆಲುಗಿನಲ್ಲಿ ವಿಭಿನ್ನ ಕಥೆಯ ಸಿನಿಮಾಗಳನ್ನು ನಿರ್ದೇಶಿಸಿ ಖ್ಯಾತಿ ಪಡೆದಿರುವ ಸುಧಾ ಕೊಂಗರ ಅವರ ನಿರ್ದೇಶನದಲ್ಲಿ ಹೊಸ ಚಿತ್ರ ಮೂಡಿ ಬರಲಿದೆ. ಸುಧಾ ಕೊಂಗರ ಈ ಹಿಂದೆ ಸೂರ್ಯ ಅಭಿನಯದ ಸೂರೆರೈ ಪೊಟ್ರು ಸಿನಿಮಾ ವನ್ನು ನಿರ್ದೇಶಿಸಿ ಪ್ರಸಿದ್ಧಿ ಪಡೆದಿದ್ದರು, ಸೂರರೈ ಪೊಟ್ರು ನೈಜ ಘಟನೆ ಆಧಾರಿತ ಚಿತ್ರವಾಗಿತ್ತು. ಕಡಿಮೆ ಬೆಲೆಯಲ್ಲಿ ವಿಮಾನ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟು ಹೊಸ ಸಾಧನೆ ಮಾಡಿದ್ದ ಕನ್ನಡಿಗ ಕ್ಯಾ.ಗೋಪಿನಾಥ್ ಅವರ ಜೀವನಾಧಾರಿತ ಕಥೆ ಯನ್ನು ಚಿತ್ರ ಒಳಗೊಂಡಿತ್ತು.

ಈಗ ಅಂತೆಹದ್ದೇ ಸತ್ಯ ಘಟನೆಯನ್ನು ಹೊತ್ತು ಮತ್ತೊಂದು ಚಿತ್ರ ಮೂಡಿಬರುವುದು ಬಹುತೇಕ ಖಚಿತವಾಗಿದೆ. ಅದು ಹೊಂಬಾಳೆ ಫಿಲಂಸ್‌ನಲ್ಲಿ ಎಂಬುದು ವಿಶೇಷ. ಕೆಲವು ನೈಜ ಘಟನೆಗಳನ್ನು ಹೇಳಲೇಬೇಕು. ಸುಧಾ ಕೊಂಗರ ಅವರ ಜತೆ ನಮ್ಮ ಹೊಸ ಸಿನಿಮಾ ಘೋಷಿಸಲು ಹೆಮ್ಮೆಯಾಗುತ್ತಿದೆ ಎಂದು ಹೊಂಬಾಳೆ ಫಿಲಂಸ್ ಸೋಷಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದೆ.

ಚಿತ್ರದ ಶಿರ್ಷಿಕೆ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಹೊಂಬಾಳೆ ಪ್ರೊಡಕ್ಷನ್ ನಲ್ಲಿ ಈಗಾಗಲೇ ಪ್ರಭಾಸ್ ಅಭಿನಯದ ಸಲಾರ್, ಜಗ್ಗೇಶ್ ನಟಿಸುತ್ತಿರುವ ರಾಘವೇಂದ್ರ ಸ್ಟೋರ‍್ಸ್, ರಿಷಬ್ ಶೆಟ್ಟಿ ನಟಿಸುತ್ತಿರುವ ಕಾಂತಾರ ಚಿತ್ರಗಳು ಮೂಡಿಬರುತ್ತಿವೆ. ಶ್ರೀಮುರಳಿ ನಟಿಸಲಿರುವ ಬಘೀರ ಚಿತ್ರ ಇನ್ನೇನು ಸೆಟ್ಟೇರಲಿದೆ. ಈ ಸಾಲಿಗೆ ಈಗ ಸುಧಾ ಕೊಂಗರ ನಿರ್ದೇಶನದ ಸಿನಿಮಾವೂ ಸೇರ್ಪಡೆಯಾಗಲಿದೆ.