Wednesday, 11th December 2024

ಕಾಂತಾರ ಜಾನಪದ ದಂತಕತೆ ಕಾನನದಲ್ಲಿನ ಸೌಗಂಧಿಕ ಪುಷ್ಪ

ಇದು ಜಾನಪದ ಶೈಲಿಯ ಕಥೆಯಾಗಿರುವುದರಿಂದ ಅದಕ್ಕೆ ತಕ್ಕಂತೆ ದುಡಿ ಕುಣಿತ, ಪಾಡ್ದಾನ, ಹೀಗೆ ಹಲವು ಜಾನಪದ ಕಲೆಯ ತಂಡವನ್ನು ಕರೆಸಿ ರೆಕಾರ್ಡ್ ಮಾಡಿ, ಅದನ್ನೇ ಚಿತ್ರದಲ್ಲಿ ಬಳಸಿಕೊಂಡಿದ್ದೇನೆ.

ರಿಷಬ್ ಶೆಟ್ಟಿ ಸಿನಿಮಾಗಳು ಎಂದರೆ ಅಲ್ಲಿ ವಿಶೇಷತೆ ಇರಲೇಬೇಕು. ಅಂತೆಯೇ ಈಗ ತೆರೆಗೆ ಬಂದಿರುವ ಕಾಂತಾರ ಹಲವು ವಿಶೇಷತೆಗಳನ್ನು ಹೊತ್ತುಬಂದಿದೆ. ಪ್ರೇಕ್ಷಕರನ್ನು ಹೊಸಲೋಕಕ್ಕೆ ಕೊಂಡೊಯ್ಯುತ್ತದೆ. ಕರಾವಳಿಯ, ಕಾನನದ ನಡುವಿನ ಭವ್ಯ ಪರಂಪರೆಯನ್ನು ಚಿತ್ರದಲ್ಲಿ ಪರಿಚಯಿಸಿದ್ದಾರೆ.

ತಮ್ಮ ಚಿತ್ರದ ಕುರಿತಂತೆ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ ರಿಷಬ್, ಕಾಂತಾರದ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ವಿ.ಸಿನಿಮಾಸ್ : ಕಾಂತಾರದಲ್ಲಿ ಕಂಬಳದ ಕಥೆಯೇ ಅಡಕವಾಗಿದೆಯೇ ?
ರಿಷಬ್ ಶೆಟ್ಟಿ : ಕಾಂತರ ಕರಾವಳಿ ಭಾಗದ ಜಾನಪದ ದಂತಕಥೆ. ಅಲ್ಲಿನ ಕೃಷಿ, ಸಂಪ್ರದಾಯ, ಆಚಾರ ವಿಚಾರಗಳತ್ತ ಚಿತ್ರದ ಕಥೆ ಸಾಗುತ್ತದೆ. ಇಲ್ಲಿ ಕಂಬಳವೂ ಪ್ರಧಾನವಾಗಿದೆ. ಹಾಗಂತ ಚಿತ್ರದುದ್ದಕ್ಕೂ ಕಂಬಳದ ಕಥೆ ಇಲ್ಲ. ಚಿತ್ರದಲ್ಲಿನ ಪಾತ್ರಕ್ಕಾಗಿ ಆ ಊರಿಗಾಗಿ, ನೆಲಕ್ಕಾಗಿ ಕಂಬಳವಿದೆ.

ವಿ.ಸಿ : ಕಂಬಳಕ್ಕಾಗಿ ನಿಮ್ಮ ತಯಾರಿ ಹೇಗಿತ್ತು ?
ರಿಷಬ್: ನಾನು ಪ್ರತಿ ವಾರ ಹೋಗಿ ಕಂಬಳ ಗದ್ದೆಯಲ್ಲಿ ತಯಾರಿ ಮಾಡುತ್ತಿದ್ದೆ. ಆರಂಭ ದಲ್ಲಿ ಸ್ವಲ್ಪ ಕಷ್ಟವಾಗುತ್ತಿತ್ತು. ಕೋಣದ ಬಾಲ ಹಿಡಿದುಕೊಂಡು, ಹಲಗೆಯ ಮೇಲೆ ಕಾಲಿಟ್ಟು ಅದರ ಗ್ರಿಪ್‌ನಲ್ಲಿಯೇ ಸಾಗಬೇಕು. ಅಂತು ನನ್ನ ಪಾತ್ರಕ್ಕಾಗಿ ಕಂಬಳ ಒಡಿಸುವ ಬಗ್ಗೆ ಕಲಿತೆ. ಚಿತ್ರೀಕರಣಕ್ಕಾಗಿ ಮೂವತ್ತಾರು ರೌಂಡ್ ಕಂಬಳ ಓಡಿಸಿದೆ. ನಮ್ಮ ಊರಿನಲ್ಲಿ ಹಿಂದಿನಿಂದಲೂ ನಮ್ಮ ಕುಟುಂಬದವರೇ ಕಂಬಳ ನಡೆಸುತ್ತಾ ಬಂದಿದ್ದಾರೆ. ಕಂಬಳ ನಡೆಯುವ ದಿನವೇ ಚಿತ್ರೀಕರಣ ನಡೆಸಲು ನಿರ್ಧರಿಸಿ ದೆವು. ಹಾಗಾಗಿ ನೈಜವಾದ, ರೋಚಕ ವಾದ ಕಂಬಳ ದೃಶ್ಯಗಳು ನಮ್ಮ ಚಿತ್ರದಲ್ಲಿವೆ.

ವಿ.ಸಿ : ಕಾಂತಾರದ ಕಥೆ ಹುಟ್ಟಿದ್ದು ಹೇಗೆ ?
ರಿಷಬ್ : ನಾನು ಕರಾವಳಿಯ ಭಾಗದವನು. ಹಾಗಾಗಿ ಆ ಭಾಗದ ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯದ ಅರಿವಿದೆ. ಜತೆಗೆ ಕಣ್ಣಾರೆ ಕಂಡು, ಹಿರಿಯರಿಂದ ಜಾನಪದ ಕಥೆಗಳನ್ನು ಕೇಳಿ ತಿಳಿದುಕೊಂಡಿದ್ದೇನೆ. ಅದನ್ನೇ ಚಿತ್ರವಾಗಿ ತೆರೆಗೆ ತರಬೇಕು ಎಂಬ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಹೇಳಿದ್ದೇನೆ.

ವಿ.ಸಿ : ಚಿತ್ರದ ಚಿತ್ರೀಕರಣ ಚಾಲೆಂಜಿಂಗ್ ಅನ್ನಿಸಿತ ?
ರಿಷಬ್ : ಒಂದು ಭಾಗದ ಸಂಸ್ಕೃತಿ, ಸಂಪ್ರದಾಯವನ್ನು ಹೇಳುವಾಗ ಅದಕ್ಕೆ ತಕ್ಕಂತೆ ಸಿದ್ಧತೆ ಆಗಲೇಬೇಕು. ಕಾಂತಾರದಲ್ಲಿ
ದೈವಾರಾಧನೆ, ಭೂತಾರಾಧನೆಯೂ ಮುಖ್ಯವಾಗಿದೆ. ಅದಕ್ಕೆ ಹಲವು ಕಟ್ಟು ಪಾಡುಗಳಿವೆ. ಅದನ್ನು ಪಾಲಿಸಲೇಬೇಕು, ಅದ ಕ್ಕಾಗಿ ಮಾಂಸಹಾರವನ್ನು ತ್ಯಜಿಸಿದ್ದೆ. ಚಿತ್ರೀಕರಣಕ್ಕಾಗಿಯೇ ಸೆಟ್‌ನಲ್ಲಿ ದೈವದ ಸ್ಥಾನ ಕೂಡ ನಿರ್ಮಿಸಿದೆವು. ದೇವಸ್ಥಾನದ ಸುತ್ತಮುತ್ತಲ ವಾತಾವರಣವೇ ಅಲ್ಲಿ ನಿರ್ಮಾಣವಾಗಿತ್ತು. ಅದು ಭಾವನೆಗಳಿಗೂ ಮೀರಿದ್ದು. ಒಟ್ಟು ತೊಂಬತ್ತಾರು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ.

ವಿ.ಸಿ : ಕಾಂತಾರ ಪ್ಯಾನ್ ಇಂಡಿಯಾ ಸಿನಿಮಾವಾಗಲಿಲ್ಲ ಯಾಕೆ ?
ರಿಷಬ್ : ಕನ್ನಡದಲ್ಲಿಯೇ ಸಿನಿಮಾ ಬರಬೇಕು. ನಮ್ಮ ಭಾಷೆಯಲ್ಲಿಯೇ ಚಿತ್ರವನ್ನು ಪ್ರಪಂಚದಾದ್ಯಂತ ತಲುಪಿಸಬೇಕು ಎಂಬ ಆಸೆ ನನಗಿತ್ತು. ಅದಕ್ಕಾಗಿಯೇ ಕನ್ನಡದಲ್ಲಿಯೇ ಸಿನಿಮಾ ತೆರೆಗೆ ತರುತ್ತಿದ್ದೇವೆ. ಕಾಂತಾರ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ.

ವಿ.ಸಿ : ನಟನೆ ಮತ್ತು ನಿರ್ದೇಶನವನ್ನು ಹೇಗೆ ನಿಭಾಯಿಸಿದಿರಿ?
ರಿಷಬ್ : ಎರಡು ಜವಾಬ್ದಾರಿ ನಿಭಾಯಿಸುವುದು ಕಷ್ಟದ ಕೆಲಸವೆ. ಒಂದು ಒಳ್ಳೆಯ ಚಿತ್ರವನ್ನು ತೆರೆಯಲ್ಲಿ ಕಟ್ಟಿಕೊಡಬೇಕಾದರೆ ಶ್ರಮಪಡಲೇಬೇಕು. ಈ ಹೊತ್ತಿನಲ್ಲಿ ನಮ್ಮ ಹಿರಿಯವರಾದ ಶಂಕರಣ್ಣ, ಕಾಶಿನಾಥ್, ಉಪ್ಪಿ.. ಇವರೆಲ್ಲ ನಮಗೆ ಮೇರು ಶಿಖರ ಗಳಂತೆ ಭಾಸವಾಗುತ್ತಾರೆ. ನಾವು ಈಗ ಆ ಹಾದಿಯಲ್ಲಿ ಸಾಗುವ ಪ್ರಯತ್ನ ಮಾಡುತ್ತಿದ್ದೇವೆ ಅಷ್ಟೇ.

***

ಕರಾವಳಿ ಭಾಗದಲ್ಲಿ ಕಂಬಳ ಬಲು ಜನಪ್ರಿಯ. ನಮ್ಮ ಕುಟುಂಬವೇ ಕಂಬಳ ನಡೆಸುತ್ತದೆ. ಆ ಗದ್ದೆಯೂ ನಮ್ಮ ಕಟುಂಬಕ್ಕೆ ಸೇರಿತ್ತು. ಅದನ್ನು ನೋಡಿದಾಗ ಇಲ್ಲಿನ ಸಂಪ್ರದಾಯಗಳನ್ನು ಚಿತ್ರವಾಗಿ ತೆರೆಗೆ ತರಬೇಕೆಂಬ ಆಸೆ ಚಿಗುರಿತು. ಅದು ಕಾಂತಾರದ ಮೂಲಕ ಈಡೇರಿದೆ.