ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ಕಾವೇರಿಪುರ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನ ದಲ್ಲಿ ಅದ್ದೂರಿಯಾಗಿ ನಡೆಯಿತು.
ನಟ ವಿಜಯರಾಘವೇಂದ್ರ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಚಿತ್ರತಂಡಕ್ಕೆ ಶುಭ ಕೋರಿದರು. ಶಾಂತಕುಮಾರ್. ವಿ.ಪಾಟೀಲ್ ಡಿವಿ ಪ್ರೊಡಕ್ಷನ್‌ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ಣಯ್.ಡಿ.ಕೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಕಥೆಯು ಕಾವೇರಿಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುತ್ತದೆ. ಅಲ್ಲಿನ ಘಟನೆಗಳು, ಅಲ್ಲಿನ ವಿಚಾರಗಳು. ಬಡವರಿಗೆ ದೊರಕಬಹುದಾದ ಸವಲತ್ತುಗಳು ಇದರ ಜತೆಗೆ ಲವ್, ಆಕ್ಷನ್, ಸೆಂಟಿಮೆಂಟ್, ಕಾಮಿಡಿ ಹೀಗೆ ಕೌಟುಂಬಿಕ ಕಥೆಯನ್ನು ಕಾವೇರಿಪುರ ಒಳಗೊಂಡಿದೆ.
ಮಧ್ಯಮ ವರ್ಗದ ಹುಡುಗನಾಗಿ ರಾಜಪ್ರತೀಕ ನಾಯಕನಾಗಿ ನಟಿಸಿದ್ದು, ರಂಗಭೂಮಿ ಹಾಗೂ ಕಿರುಚಿತ್ರಗಳಲ್ಲಿ ನಟಿಸಿರುವ ಭೂಮಿಕಾ ಮಂಜುನಾಥ್ ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ.
ಧಣಿಯಾಗಿ ಬಲರಾಜವಾಡಿ, ನಾಯಕಿ ತಾಯಿ ಪಾತ್ರದಲ್ಲಿ ಸುನಂದಾ ಕಲ್ಬುರ್ಗಿ ಇವರೊಂದಿಗೆ ಹನುಮಕ್ಕ, ಚೇತನಾ, ಕಿಶೋರ್.ಹೆಚ್, ರಾಮ್.ಜಿ, ಮಹಾಂತೇಶ್, ರಾಕೇಶ್, ಸಿದ್ದಾರ್ಥ, ರಘುರಾಮ್ ಚರಣ್, ಹನುಮಂತ ರೆಡ್ಡಿ, ಆನಂದ, ಬಸವರಾಜ ಹೆಗ್ಗಣದೊಡ್ಡಿ, ಸಂಗಮನಾಥ.ಎಸ್.ಅಂಗಡಿ, ಹನುಮಂತಪ್ಪ ನಟಿಸುತ್ತಿದ್ದಾರೆ. ಕೆಜಿಎಫ್ ನ ರವಿಬಸ್ರೂರು ಶಿಷ್ಯ ವಿ.ನಿತೀಶ್ ಸಂಗೀತ, ಹರ್ಷವರ್ಧನ.ಕೆ. ಛಾಯಾಗ್ರಹಣವಿದೆ.
ರಾಯಚೂರು, ಗುರು ಗಂಟೆ, ಲಿಂಗಸುಗೂರು, ದೇವದುರ್ಗ, ಸುರಪುರ ಹಾಗೂ ಕೃಷ್ಣ-ತುಂಗಭದ್ರ ಎರಡು ನದಿಗಳ ನಡುವೆ ಒಟ್ಟು ಮೂವತ್ತು ದಿನಗಳ ಕಾಲ ನವೆಂಬರ್ ಮೊದಲ ವಾರದಿಂದ ಚಿತ್ರೀಕರಣ ನಡೆಸಲು ಚಿತ್ರತಂಡವು ಯೋಜನೆ ರೂಪಿಸಿಕೊಂಡಿದೆ.