Saturday, 14th December 2024

ಸೆನ್ಸಾರ್‌ ಅಂಗಳಕ್ಕೆ ಕ್ರಾಂತಿವೀರ

 

ಕೆಚ್ಚದೆಯ ಸ್ವಾತಂತ್ರ್ಯ ಹೋರಾಟಗಾರ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಕ್ರಾಂತಿಕಾರಿ ಭಗತ್‌ಸಿಂಗ್ ಅವರ
ಜೀವನ ಚರಿತ್ರೆ ತೆರೆಗೆ ಬರಲು ಸಿದ್ಧವಾಗಿದೆ.

‘ಕ್ರಾಂತಿವೀರ’ ಶಿರ್ಷಿಕೆಯಲ್ಲಿ ಚಿತ್ರ ಮೂಡಿಬರುತ್ತಿದೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗಾಗಲೇ ಸೆನ್ಸಾರ್ ಅಂಗಳಕ್ಕೆ ತಲುಪಿದೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಭಗತ್‌ಸಿಂಗ್ ಬಯೋಪಿಕ್ ಬೆಳ್ಳಿತೆರೆ ಮೇಲೆ ಬರುತ್ತಿದೆ. ಯುವ ನಟ ಅಜಿತ್ ಜಯರಾಜ್ ಈ ಚಿತ್ರದಲ್ಲಿ ‘ಕ್ರಾಂತಿವೀರ’ ಭಗತ್‌ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಆದತ್ ಸಾರಥ್ಯದಲ್ಲಿ ಚಿತ್ರ ಸಿದ್ಧವಾಗುತ್ತಿದೆ.

ಒಂದಷ್ಟು ಕಿರುಚಿತ್ರಗಳು ಹಾಗೂ ಚಲನಚಿತ್ರ ನಿರ್ದೇಶನ ಮಾಡುವ ಮೂಲಕ ಗುರುತಿಸಿಕೊಂಡಿರುವ ಆದತ್, ಇದೇ ಮೊದಲಬಾರಿಗೆ ದೇಶಭಕ್ತನ ಬಯೋಪಿಕ್ ಸಿನಿಮಾದ ಸಾಹಸಕ್ಕೆ ಕೈಹಾಕಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಅಲ್ಲದೆ ಕೆಜಿಎಫ್, ಹುಬ್ಬಳ್ಳಿ, ಬಾಗಲಕೋಟೆ, ಶಿವಮೊಗ್ಗ ಜೈಲ್ ಅಲ್ಲದೆ ಜಲಿಯನ್ ವಾಲಾಬಾಗ್ ಸೆಟ್ ಹಾಕಿ ಸುಮಾರು 63 ದಿನಗಳ
ಚಿತ್ರೀಕರಣ ನಡೆಸಲಾಗಿದೆ.

ಈ ಚಿತ್ರದಲ್ಲಿ 9 ಹಾಡುಗಳಿದ್ದು, ಪ್ರತಾಪ್ ಎಸ್. ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ಚಂದ್ರಶೇಖರ ಆಜಾದ್ ಪಾತ್ರದಲ್ಲಿ, ಸಾಹಿತಿ ವಿ.ನಾಗೇಂದ್ರಪ್ರಸಾದ್ ಲಾಲಾ ಲಜಪತ್ರಾಯ್ ಆಗಿ ಬಣ್ಣ ಹಚ್ಚಿದ್ದಾರೆ. ನಟಿ ಭವಾನಿ ಪ್ರಕಾಶ್ ಭಗತ್‌ಸಿಂಗ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು , ಜೋಸೈಮನ್ ತಾತನ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಧರ್ಮ ಜೈಲರ್ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಹಲವು ಹೊಸ ಪ್ರತಿಭೆಗಳೂ ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಂದ್ರಕಲಾ, ಮಂಜುನಾಥ ನಾಯಕ್ ಹಾಗೂ ಆರ್ಜೂರಾಜ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜತೆಗೆ ತ್ರಿವಿಕ್ರಮ ಸಾಫಲ್ಯ, ಪ್ರಶಾಂತ್ ಕಲ್ಲೂರ ಕೂಡ ಕೈಜೋಡಿಸಿದ್ದಾರೆ.