Wednesday, 11th December 2024

ಅಪ್ಪು ಅಪ್ಪುಗೆಗೆ ನಾನು ಧನ್ಯ: ನಿಜವಾಗಿಯೂ ನಾನೇ ಲಕ್ಕಿಮ್ಯಾನ್

Puneeth Death Anniversary

ಪ್ರಶಾಂತ್.ಟಿ.ಆರ್

ದೊಡ್ಮನೆ ರಾಜರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ಲಕ್ಕಿಮ್ಯಾನ್ ತೆರೆಗೆ ಬಂದಿದೆ. ಅಭಿಮಾನಿಗಳು ಅಪ್ಪುವನ್ನು ಪ್ರೀತಿಯಿಂದ ಕಣ್ತುಂಬಿ ಕೊಳ್ಳುತ್ತಿದ್ದಾರೆ. ಇದು ಸಿನಿಮಾ ಮಾತ್ರವಲ್ಲ ಮನೆ, ಮನಗಳ ಭಾವನಾ ತ್ಮಕ ನಂಟು. ಹಾಗಾಗಿಯೇ ಲಕ್ಕಿ ಮ್ಯಾನ್ ಹೃದಯಕ್ಕೆ ಹತ್ತಿರವಾದ ಸಿನಿಮಾವಾಗಿದೆ. ಅಪ್ಪು ಅಭಿನಯದ ಕೊನೆಯ ಚಿತ್ರವನ್ನು ನಿರ್ದೇಶಿಸಿದ ನಾಗೇಂದ್ರ ಪ್ರಸಾದ್ ಈ ಬಗ್ಗೆ ವಿ.ಸಿನಿಮಾಸ್‌ನೊಂದಿಗೆ ಮಾತ ನಾಡಿದ್ದಾರೆ.

ವಿ.ಸಿನಿಮಾಸ್ : ಲಕ್ಕಿ ಮ್ಯಾನ್ ನಿಮ್ಮ ಕನಸಾಗಿತ್ತ ?
-ನಾಗೇಂದ್ರ ಪ್ರಸಾದ್: ಪುನೀತ್‌ರಾಜ್ ಕುಮಾರ್ ಅವರ ಜತೆ ಸಿನಿಮಾ ಮಾಡಬೇಕು ಎಂಬುದು ನನ್ನದೊಡ್ಡ ಕನಸಾಗಿತ್ತು. ಅದು ಲಕ್ಕಿ ಮ್ಯಾನ್ ಚಿತ್ರದ ಮೂಲಕ ಈಡೇರಿದೆ. ನಿಜವಾಗಿಯೂ ನಾನೇ ಲಕ್ಕಮ್ಯಾನ್. ಯಾಕೆಂದರೆ ದೊಡ್ಡ ದೊಡ್ಡ ನಿರ್ದೇಶಕರು ಅಪ್ಪು ಅವರ ಜತೆ ಸಿನಿಮಾ ಮಾಡಬೇಕು ಅಂದುಕೊಂಡಿರುತ್ತಾರೆ ಆದರೆ, ಅದು ಕೈಗೂಡುವುದೇ ಇಲ್ಲ. ನಾನು ಈಗಷ್ಟೇ ನಿರ್ದೇಶನಕ್ಕೆ ಇಳಿದಿದ್ದೇನೆ. ನನ್ನ ಜತೆ ಸಿನಿಮಾ ಮಾಡಿ ಪ್ರೋತ್ಸಾಹಿಸಿದರಲ್ಲ, ಅದು ಅವರ ದೊಡ್ಡ ಗುಣ. ಅದು ಡೊಡ್ಮನೆ ಯಿಂದ ಮೈಗೂಡಿಬಂದ ಗುಣ.

ವಿ.ಸಿ : ಈ ಕಥೆ ಹೊಳೆದಿದ್ದು ಹೇಗೆ ?
– ನಾಗೇಂದ್ರ ಪ್ರಸಾದ್ : ಸಮಾಜದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ಸೂಕ್ಷ್ಮ ವಾಗಿ ಗಮನಿಸುತ್ತಿದ್ದೆ. ಅದರಲ್ಲಿ ಕೆಲವೊಂದು ವಿಚಾರಗಳನ್ನು ಹೇಳಬೇಕು ಎಂದು ಕೊಂಡಿದ್ದೆ. ಅದಕ್ಕಾಗಿ ಈ ಕಥೆ ಬರೆದೆ. ಜೀವನದಲ್ಲಿ ಯಾವುದೇ ವಿಚಾರವನ್ನು
ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇದು ತಮಿಳು ಚಿತ್ರದ ರಿಮೇಕ್ ಆದರೂ ಕನ್ನಡದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಕಥೆ ಹೆಣೆದಾಗ ಅಪ್ಪು ಸರ್ ಅವರು ಈ ಚಿತ್ರದಲ್ಲಿ ನಟಿಸಿದರೆ ತುಂಬಾ ಚೆನ್ನಾಗಿ ರುತ್ತದೆ ಎಂದುಕೊಂಡದೆ. ಅಂತೆಯೇ ಅವರನ್ನು ಭೇಟಿ ಮಾಡಿ ಕಥೆ ಹೇಳಿದೆ.

ಕಥೆ ಕೇಳಿ ಖುಷಿಪಟ್ಟರು. ಪ್ರೀತಿಯಿಂದ ನನ್ನನ್ನು ಅಪ್ಪಿ ಚಿತ್ರದಲ್ಲಿ ನಟಿಸಲು ಒಪ್ಪಿದರು. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ನಿಜವಾಗಿಯೂ ನಾನೇ ಲಕ್ಕಿಮ್ಯಾನ್ ಎಂದು ಮನದಲ್ಲಿಯೇ ಹಿಗ್ಗಿದೆ.

ವಿ.ಸಿ : ಚಿತ್ರಕ್ಕೆ ಈ ಶೀರ್ಷಿಕೆ ಇಡಲು ಕಾರಣ ?
– ನಾಗೇಂದ್ರ ಪ್ರಸಾದ್ : ಚಿತ್ರದ ಕಥೆಗೆ ತಕ್ಕಂತೆ ಭಾಗ್ಯವಂತ, ಭಗವಂತ ಹಾಗೂ ಲಕ್ಕಿಮ್ಯಾನ್ ಎಂಬ ಶೀರ್ಷಿಕೆಯನ್ನು ಆಯ್ದು ಕೊಂಡಿದ್ದೆವು. ಈ ಬಗ್ಗೆ ಪುನೀತ್ ರಾಜ್‌ಕುಮಾರ್ ಅವರಿಗೆ ಹೇಳಿದಾಗ, ಈ ಕಥೆಗೆ ಲಕ್ಕಿಮ್ಯಾನ್ ಸೂಕ್ತ ಟೈಟಲ್ ಎಂದರು. ಅಂತೆಯೇ ಅದೇ ಶೀರ್ಷಿಕೆಯಲ್ಲಿ ಚಿತ್ರ ನಿರ್ದೇಶಿಸಿ, ತೆರೆಗೆ ತರುತ್ತಿದ್ದೇವೆ.

ವಿ.ಸಿ : ಈ ಅದ್ಭುತ ಹಾಡು ಹೆಣೆದಿದ್ದು ಹೇಗೆ ?
– ನಾಗೇಂದ್ರ ಪ್ರಸಾದ್ : ಚೈನ್ನೈ ಎಕ್ಸ್‌ಪ್ರೆಸ್ ಚಿತ್ರದಲ್ಲಿ ರಜನಿಕಾಂತ್ ಅವರ ಕುರಿತು ಹಾಡು ರಚಿಸಲಾಗಿತ್ತು. ಅಂತೆಯೇ ಲಕ್ಕಿ ಮ್ಯಾನ್ ಚಿತ್ರದಲ್ಲಿ ಅಣ್ಣಾವ್ರ ಕುರಿತು ಹಾಡು ಇರಬೇಕು ಎಂದು ಯೋಚಿಸಿದ್ದೆ. ಅದಕ್ಕೆ ತಕ್ಕಂತೆ ಧನಂಜಯ ರಂಜನ್ ಬಾರೋ ರಾಜ… ಎಂಬ ಒಳ್ಳೆಯ ಹಾಡನ್ನು ಬರೆದುಕೊಟ್ಟರು. ಈ ಹಾಡಿನಲ್ಲಿ ಅಪ್ಪು ಅವರ ಜತೆಗೆ ನನ್ನ ಸಹೋದರ ಪ್ರಭುದೇವ ಇದ್ದರೆ ಚೆಂದ ಎಂದುಕೊಂಡೆ, ಪ್ರಭುದೇವ ಹಾಡಿನಲ್ಲಿ ಹೆಜ್ಜೆ ಹಾಕಲು ಒಪ್ಪಿದರು. ಬಳಿಕ ಅಪ್ಪು ಅವರ ಜತೆಗೆ ಹಾಡಿನ ಬಗ್ಗೆ ಚರ್ಚಿಸಿದೆ. ಪ್ರಭುದೇವ ಅವರು ಈ ಹಾಡಿನಲ್ಲಿ ಹೆಜ್ಜೆ ಹಾಕುತ್ತಾರೆ ಎಂದಾಗ ತುಂಬಾ ಸಂತೋಷಪಟ್ಟರು. ಅಪ್ಪು ಸರ್ ಕೂಡ ಡ್ಯಾನ್ಸ್ ಮಾಡಲು ಸಿದ್ಧವಾದರು. ಈ ಹಾಡು ಅದ್ಭುತವಾಗಿ ಮೂಡಿಬಂದಿದೆ. ಈ ಹಾಡಿನ ಚಿತ್ರೀಕರಣದ ಸುಮಧುರ ಕ್ಷಣವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ.

ವಿ.ಸಿ : ಈ ಚಿತ್ರದಲ್ಲಿ ಅಪ್ಪು ಅವರ ಪಾತ್ರದ ಬಗ್ಗೆ ಹೇಳುವುದಾದರೆ ?
-ನಾಗೇಂದ್ರ ಪ್ರಸಾದ್: ಲಕ್ಕಿಮ್ಯಾನ್ ಚಿತ್ರದಲ್ಲಿ ಅಪ್ಪು ಅವರದ್ದೇ ಪ್ರಮುಖ ಪಾತ್ರ. ದೇವರ ರೂಪದಲ್ಲಿ ಅವರು ನಟಿಸಿದ್ದಾರೆ. ಚಿತ್ರದಲ್ಲಿ ಸುಮಾರು ಐವತ್ತು ನಿಮಿಷಗಳು ಅಪ್ಪು ಅವರನ್ನು ಕಣ್ತುಂಬಿಕೊಳ್ಳಬಹುದು. ಇನ್ನೂ ವಿಶೇಷ ಎಂದರೆ ಚಿತ್ರದಲ್ಲಿ ಅಪ್ಪು ಅವರ ದನಿಯನ್ನೇ ಬಳಸಿ ಕೊಳ್ಳಲಾಗಿದೆ. ಚಿತ್ರೀಕರಣದ ವೇಳೆ ಡಬ್ ಆಗಿದ್ದ ದನಿಯನ್ನು ಹಾಗೆಯೇ ತೆರೆಗೆ ತರಲಾಗಿದೆ.

***

ಈ ಹಾಡಿನಲ್ಲಿ ಹೆಜ್ಜೆ ಹಾಕುವಾಗ ನಿಜವಾಗಿಯೂ ನಾನು ಥ್ರಿಲ್ ಆಗಿದ್ದೆ. ಅಪ್ಪು ಅವರ ಡ್ಯಾನ್ಸ್ ನೋಡುತ್ತಾ ನಾನೇ
ಮೈಮರೆಯುತ್ತಿದ್ದೆ. ಅವರು ದೇವರಂತೆಯೇ ಕಾಣುತ್ತಿದ್ದರು. ಅವರು ಎಲ್ಲರೊಂದಿಗೂ ನಗು ನಗುತ್ತಾ ಮಾತನಾಡುತ್ತಿದ್ದರು. ಅವರೊಂದಿಗೆ ಇರುವುದು ಎಂದರೆ ನನಗೆ ಬಲು ಆನಂದ. ಮುಂದೆ ನಮ್ಮ ಸಿನಿಮಾಗಳಲ್ಲಿ ನಟಿಸುತ್ತೀರ ಎಂದು ಕೇಳಿದಾಗ,
ಸಂತಸದಿಂದ ಒಪ್ಪಿದರು. ಅವರೊಂದಿಗೆ ಮತ್ತಷ್ಟು ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬ ಆಸೆಯಿತ್ತು. ಆದರೆ ಅಷ್ಟೊತ್ತಿಗೆ ಅವರು ನಮ್ಮನ್ನು ಅಗಲಿದರು. ಅಪ್ಪು ಅವರನ್ನು ಕಳೆದುಕೊಂಡ ನೋವಿನಿಂದ ಇಂದಿಗೂ ಹೊರಬರಲಾಗುತ್ತಿಲ್ಲ.
-ಪ್ರಭುದೇವ ನಟ

***

ಬಾರೋ ರಾಜ.. ಹಾಡು ಅದ್ಭುತವಾಗಿ ಮೂಡಿಬಂದಿದೆ. ಹಾಡನ್ನು ತೆರೆಯಲ್ಲಿ ನೋಡಿ ಆನಂದಿಸಬೇಕು. ಹಾಡಿನ ಚಿತ್ರೀ ಕರಣದ ಬಳಿಕ ನಾನು ಅಪ್ಪು ಅವರಿಗೆ ಧನ್ಯವಾದ ಹೇಳಲು ಹೋಗಿದ್ದೆ. ಅವರು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು ನನಗೆ ಪ್ರಭುದೇವ ಅವರ ಜತೆ ಹೆಜ್ಜೆ ಹಾಕಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ನನಗಾಗಿ ಐವತ್ತು ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಶೂ ಅನ್ನು ಉಡುಗೊರೆಯಾಗಿ ನೀಡಿದರು. ಅದನ್ನು ಜೋಪಾನವಾಗಿ ಕಾಯ್ದುಕೊಂಡಿದ್ದೇನೆ.

***

ನಾನು ಬಾಲ್ಯದಲ್ಲಿ, ಚೆನ್ನೈನಲ್ಲಿದ್ದ ಪುನೀತ್ ರಾಜ್‌ಕುಮಾರ್ ಅವರ ಮನೆಗೆ ತೆರಳಿದ್ದೆ. ಆಗ ಅವರು ಚಿಕ್ಕ ಲಾರಿಯನ್ನು ಹಿಡಿದು
ಆಡವಾಡುತ್ತಿದ್ದರು. ನನ್ನನ್ನು ಕಂಡಾಗ, ಬಾ ನಾವಿಬ್ಬರು ಇದರಲ್ಲಿ ಆಟ ಆಡೋಣ ಎಂದು ಪ್ರೀತಿಯಿಂದ ಕರೆದರು. ಬಾಲ್ಯದಲ್ಲಿಯೇ ಅವರಿಗೆ ಎಲ್ಲರೊಂದಿಗೂ ಬೆರೆಯುವ, ಪ್ರೀತಿಯಿಂದ ಕಾಣುವ ದೊಡ್ಡಗುಣವಿತ್ತು.