Wednesday, 11th December 2024

ಮಾಫಿಯಾಗೆ ಮುಹೂರ್ತ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಮಾಫಿಯಾ ಚಿತ್ರದ ಮುಹೂರ್ತ ನೆರವೇರಿದೆ. ಬೆಂಗಳೂರಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಹಲವು ಗಣ್ಯರು ಪಾಲ್ಗೊಂಡು ಚಿತ್ರಕ್ಕೆ ಶುಭಕೋರಿದರು. ಇದು ಪ್ರಜ್ವಲ್ ಅಭಿನಯದ ೩೫ ನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ಪ್ರಜ್ವಲ್ ಹೊಸ ಗೆಟಪ್‌ನಲ್ಲಿ ಮಿಂಚಲಿದ್ದಾರೆ.

ಅದಕ್ಕಾಗಿ ಎರಡು ವರ್ಷಗಳ ಬಳಿಕ ತಮ್ಮ ಕೇಶಕ್ಕೆ ಕತ್ತರಿ ಹಾಕಿದ್ದಾರೆ. ಆ ಕೂದಲನ್ನು ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ದಾನ ಮಾಡಿ ಮಾನವೀ ಯತೆ ಮೆರೆದಿದ್ದಾರೆ. ಮಾಫಿಯಾ, ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದು ಆಕ್ಷನ್ ಪ್ರಧಾನ ಕಥೆಯ ಚಿತ್ರವಾಗಿದೆ. ಅಂಡರ್‌ವರ್ಲ್ಡ್ ಸ್ಟೋರಿಯೂ ಚಿತ್ರದಲ್ಲಿದೆ. ಈ ಹಿಂದೆ ಮಮ್ಮಿ ಮತ್ತು ದೇವಕಿ ಚಿತ್ರ ಗಳನ್ನು ನಿರ್ದೇಶಿಸಿ ಜನಪ್ರಿಯವಾಗಿರುವ ಲೋಹಿತ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ.

ಮಾಫಿಯಾ ಚಿತ್ರದ ಚಿತ್ರೀಕರಣ ಡಿಸೆಂಬರ್ ಆರರಿಂದ ಆರಂಭವಾಗಲಿದೆ. ಪ್ರಜ್ವಲ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಲಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್.ಬಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ತರುಣ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.