ಚಾರ್‌ಮಿನಾರ್ ಚಿತ್ರದ ಮೂಲಕ ಸಿನಿಪ್ರಿಯರ ಮನಗೆದ್ದ ಮೇಘನಾ ಗಾಂವ್ಕರ್, ಕಾಳಿದಾಸನ ಜತೆ ಬಂದು ಕನ್ನಡದ ಪಾಠ ಹೇಳಿದರು. ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡ ಪ್ರೇಮ ಬೆಳೆಸಿಕೊಳ್ಳುವಂತೆ ಸಾರಿ ಹೇಳಿದರು. ಈಗ ಅದೇ ಮೇಘನಾ ಸದ್ದಿಲ್ಲದೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿ ಶುಭಮಂಗಳ ಚಿತ್ರವೂ ಒಂದು. ಶಿರ್ಷಿಕೆಯೇ ಹೇಳುವಂತೆ ಇದು ಗಟ್ಟಿಮೇಳದ ಕಥೆ ಹೇಳಲಿದೆ. ಮದುವೆ ಮನೆಯಲ್ಲಿ ನಡೆಯುವ ಕಥೆಯೇ ಈ ಶುಭಮಂಗಳ. ಈ ಹಿಂದೆಯೂ ಶುಭಮಂಗಳ ಹೆಸರಿನ ಚಿತ್ರ ತೆರೆಗೆ ಬಂದಿತ್ತು. ಸೂಪರ್ ಹಿಟ್ ಆಗಿತ್ತು. ಆದರೆ ಹಳೆಯ ಶುಭಮಂಗಳದ ಕಥೆಗೂ ಈ ಕಥೆಗೂ ಯಾವುದೇ ಸಂಬಂಧ ಇಲ್ಲವಂತೆ. ಸದ್ಯ ತೆರೆಗೆ ಬರಲು ಸಿದ್ಧವಾಗಿರುವ ಶುಭಮಂಗಳದಲ್ಲಿ ಐದು ಕಥೆಗಳು ಬೆರತಿವೆ. ಮೂರು ದಶಕಗಳ ಹಿಂದಿನ ಕಥೆ ಚಿತ್ರದಲ್ಲಿದ್ದು, ಇಂದಿನ ಕಥೆಯೂ ಜತೆಗೆ ಸಾಗಲಿದೆ.
ಮಾಡ್ರನ್ ಗರ್ಲ್ ಮೇಘನಾ: ಮೇಘನಾ ಎಂತಹ ಪಾತ್ರಕ್ಕೂ ಸೈ ಎನಿಸಿಕೊಳ್ಳುತ್ತಾರೆ. ತಮಗೆ ನೀಡಿದ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಾರೆ. ಅಂತೆಯೇ ಶುಭಮಂಗಳ ಚಿತ್ರದಲ್ಲೂ ಕೂಡ ಒಳ್ಳೆಯ ಪಾತ್ರವೇ ಸಿಕ್ಕಿದೆ. ಇಲ್ಲಿ ಮೇಘನಾ ಮಾಡ್ರನ್ ಗರ್ಲ್ ಆಗಿ ಕಾಣಿಸಿಕೊಂಡಿದ್ದಾರೆ. ಕಾರ್ಪೋರೇಟ್ ಸ್ಟೈಲ್‌ನಲ್ಲಿಯೇ ಬೆಳೆದ ಹುಡುಗಿ ಪ್ರೀತಿ ಅನ್ನುವುದನ್ನು ಹೇಗೆ ಸ್ವೀಕರಿಸುತ್ತಾಳೆ. ಎಲ್ಲವನ್ನೂ ಧಿಕ್ಕರಿಸುವ ಧಾವಂತದಲ್ಲಿ ತನ್ನ ಪ್ರಿತಿಯನ್ನು ಹೇಗೆ ಕಳೆದು ಕೊಳ್ಳುತ್ತಾಳೆ ಎಂಬ ಪಾತ್ರದಲ್ಲಿ ಮೇಘನಾ ನಟಿಸಿದ್ದಾರೆ. ಹಾಗಾದರೆ ಚಿತ್ರದಲ್ಲಿ ನಾಯಕಿ ಭಗ್ನಪ್ರೇಮಿಯೇ. ತಾನು ಕಳೆದುಕೊಂಡ ಪ್ರೀತಿಯನ್ನು ಮರಳಿ ಪಡೆಯುವುದಿಲ್ಲವೇ, ಹೀಗೆ ಹಲವು ಪ್ರಶ್ನೆಗಳು ಕಾಡುವುದು ಸಹಜ, ಅದಕ್ಕೆ ತೆರೆಯಲ್ಲಿಯೇ ಉತ್ತರ ಸಿಗಲಿದೆ.
ಬಯಸಿದ ಪಾತ್ರವೇ ಸಿಕ್ಕಿದೆ: ನಾನು ಬಹಳ ದಿನಗಳಿಂದಲೂ ಚಾಲೆಂಜಿಂಗ್ ಪಾತ್ರವನ್ನು ಬಯಸಿದ್ದೆ. ಅದು ಶುಭಮಂಗಳ ಚಿತ್ರದಲ್ಲಿ ಸಿಕ್ಕಿದೆ. ಇಲ್ಲಿ ಕಥೆಯೇ ಪ್ರಧಾನ. ಜತೆಗೆ ಚಿತ್ರದ ಪ್ರತಿ ಪಾತ್ರಗಳು ಮುಖ್ಯವಾಗುತ್ತವೆ. ಒಂದು ಮದುವೆಯ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಮದುವೆಯ ಸಡಗರದಲ್ಲಿ ಒಂದೊಂದೆ ಪಾತ್ರಗಳು ರಿವಿಲ್ ಆಗುತ್ತವೆ. ಹೀಗೆ ಐದು ಕಥೆಗಳು ವಿಭಿನ್ನವಾದ ನೆಲೆಗಟ್ಟಿನಲ್ಲಿ ಸಾಗುತ್ತವೆ. ಸಾಮಾನ್ಯವಾಗಿ ನಮಗೆ ಯೌವನಕ್ಕೆ ಕಾಲಿಟ್ಟಾಗಲೇ ಯಾರ ಮೇಲಾದರೂ ಪ್ರೀತಿ ಚಿಗುರಿತ್ತದೆ. ಆ ಪ್ರೀತಿ ಬಹಳ ದಿನಗಳ ಬಳಿಕ ಮದುವೆ ಸಮಾರಂಭದಲ್ಲಿ ಪ್ರತ್ಯಕ್ಷ ವಾದಾಗ, ಆ ಹಳೆಯ ನೆನಪುಗಳು ಹೇಗೆ ಸುಳಿಯಬಹುದು ಎಂಬುದು ಕೂಡ ತೆರೆಯಲ್ಲಿ ಹಾದು ಹೋಗುತ್ತದೆ. ಇನ್ನು ಬಯಸಿದ ಹುಡುಗ ಬೇರೆ ಹುಡುಗಿಯ ಕೈ ಹಿಡಿಯುವಾಗ ಆಗುವ ನೋವು-ಸಂಕಟ ಎಲ್ಲವೂ ಚಿತ್ರದಲ್ಲಿ ಅಡಕವಾಗಿದೆ ಯಂತೆ. ಶುಭಮಂಗಳ ಕಂಪ್ಲೀಟ್ ಫ್ಯಾಮಿಲಿ ಓರಿಯಂಟೆಡ್ ಸಿನಿಮಾ. ಹಾಗಾಗಿ ಎಲ್ಲರೂ ಒಟ್ಟಾಗಿ ಕುಳಿತು ನೋಡ ಬಹುದಾದ ಸಿನಿಮಾವಾಗಿದೆ ಯಂತೆ.
ಕರ್ವ ತಂಡ ಸೇರಿದ ಕಾಳಿದಾಸನ ಬೆಡಗಿ: ಶುಭಮಂಗಳ ಚಿತ್ರ ಇನ್ನೇನು ತೆರೆಗೆ ಬರಲಿದೆ. ಆಗಲೇ ಮೇಘನಾ ಮತ್ತೊಂದು ಚಿತ್ರದಲ್ಲಿ ಬಣ್ಣಹಚ್ಚಲು ಸಿದ್ಧವಾಗಿದ್ದಾರೆ. ಸದ್ಯ ಕರ್ವ ೩ ಚಿತ್ರತಂಡ ಸೇರಿದ್ದಾರೆ ಮೇಘನಾ. ಚಿತ್ರದ ಕಥೆ ಸಿದ್ಧವಾಗಿದ್ದು, ಇನ್ನೇನು ಚಿತ್ರೀಕರಣ ಆರಂಭವಾಗಲಿದೆ. ಈ ಹಿಂದೆಯೇ ತೆರೆಗೆ ಬಂದ ಕರ್ವ ಚಿತ್ರದಂತೆ ಇಲ್ಲಿಯೂ ಹಾರರ್ ಕಥೆ ಇದೆ. ಹಾಗಾಗಿ ಕಥೆಗೆ ತಕ್ಕಂತೆ ನಟಿಸಲು ಮೇಘನಾ ಈಗಾಗಲೇ ಸಜ್ಜಾಗಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಚಿತ್ರ ಸೆಟ್ಟೇರಬೇಕಿತ್ತು. ಆದರೆ ಕರೋನಾದಿಂದಾಗಿ ಎಲ್ಲವೂ ಹಿನ್ನಡೆಯಾಗಿದೆ. ಈ ಚಿತ್ರದ ಜತೆಗೆ ಮೇಘನಾಗೆ ಪರಭಾಷೆಯಲ್ಲೂ ಅವಕಾಶಗಳು ಅರಸಿ ಬರುತ್ತಿವೆ. ಮುಂದೆ ಮೇಘನಾ ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೂ ಕಾಲಿಡಲಿದ್ದಾರೆ.