Friday, 13th December 2024

ಓಲ್ಡ್ ಮಾಂಕ್‌ ಹಿಡಿದ ಬೀರಬಲ್‌ನ ಶ್ರೀನಿ

ಪ್ರಶಾಂತ್‌ ಟಿ.ಆರ್‌

ಹಿಂದೆ ಶ್ರೀನಿವಾಸ ಕಲ್ಯಾಣದ ಮೂಲಕ ಪ್ರೇಕ್ಷಕರನ್ನು ನಗಿಸಿ, ಬೀರ್‌ಬಲ್‌ನಲ್ಲಿ ಸಿನಿಪ್ರಿಯರನ್ನು ಕುತೂಹಲದಲ್ಲಿ ತೇಲಿಸಿದ್ದ ನಟ, ನಿರ್ದೇಶಕ ಶ್ರೀನಿ, ಈಗ ಓಲ್ಡ್ ಮಾಂಕ್ ಹಿಡಿದು ಬರುತ್ತಿದ್ದಾರೆ. ಓಲ್ಡ್ ಮಾಂಕ್ ಅಂದಾಕ್ಷಣ ಕೆಲವರ ಕಿವಿ ನೆಟ್ಟಗಾಗಬಹುದು. ಇದೇನಿದು ಶೀರ್ಷಿಕೆ, ಹೀಗಿದೆಯಲ್ಲ ಎಂದು ಹಲವರು ಅಂದು ಕೊಳ್ಳಬಹುದು. ಈ ಬಗ್ಗೆ ಚಿತ್ರತಂಡ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ವಿ.ಸಿನಿಮಾಸ್‌ನೊಂದಿಗೆ ಮಾತುಕತೆಗೆ ಸಿಕ್ಕ ಶ್ರೀನಿ, ಓಲ್ಡ್‌ಮಾಂಕ್ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ವಿ.ಸಿನಿಮಾಸ್ : ಓಲ್ಡ್ ಮಾಂಕ್, ಶೀರ್ಷಿಕೆಯೇ ವಿಭಿನ್ನವಾಗಿದೆಯಲ್ಲ?
ಶ್ರೀನಿ : ಸಿನಿಮಾದ ಶೀರ್ಷಿಕೆ ಕೇಳಿದಾಕ್ಷಣ ಎಲ್ಲರಿಗೂ ಅಚ್ಚರಿಯಾಗಬಹುದು, ಮಾಂಕ್ ಎಂದರೆ ಸನ್ಯಾಸಿ, ಅಂತೆಯೇ ಈ ಚಿತ್ರದಲ್ಲಿ ಒಬ್ಬ ಸನ್ಯಾಸಿಯ ಕಥೆ ಹೇಳಿದ್ದೇವೆ. ದೇವಲೋಕದ ನಾರದನ ಕಥೆಯ ಒಂದು ಎಳೆಯನ್ನು ಆಧಾರ ವಾಗಿಟ್ಟುಕೊಂಡು ಅದಕ್ಕೆ ಪೂರಕವಾಗಿ, ಪ್ರಸ್ತುತ ಸನ್ನಿವೇಶಕ್ಕೆ ಹೊಂದುವಂತೆ ಚಿತ್ರ ಕಥೆ ಹೆಣೆದು ತೆರೆಗೆ ತರುವ ಪ್ರಯತ್ನ ಮಾಡಿದ್ದೇವೆ. ಸ್ವಲ್ಪ ಚೇಂಜ್ ಇರಲಿ ಎಂದು ಓಲ್ಡ್ ಮಾಂಕ್ ಎಂಬ ಟೈಟಲ್ ಆಯ್ಕೆ ಮಾಡಿಕೊಂಡೆವು.

ವಿ.ಸಿ : ಚಿತ್ರದಲ್ಲಿ ಪೌರಾಣಿಕ ಕಥೆಯೂ ಇದೆಯೆ?
ಶ್ರೀನಿ : ಹೌದು. ಸಿನಿಮಾದ ಮೊದಲ ಸನ್ನಿವೇಶ ಆರಂಭವಾಗುವುದೇ ಪೌರಾಣಿಕ ಕಥೆಯ ಮೂಲಕ. ನಾರದನ ದೃಶ್ಯದ ಮೂಲಕ ಒಪೆನಿಂಗ್ ಪಡೆದು ಕೊಳ್ಳಲಿದೆ. ಬಳಿಕ ಭೂಲೋಕದಲ್ಲಿ ಪ್ರಸ್ತುತ ಸನ್ನಿವೇಶದ ಕಥೆ ಸಾಗಲಿದೆ. ಓಲ್ಡ್ ಮಾಂಕ್ ರೊಮ್ಯಾಂಟಿಕ್, ಕಾಮಿಡಿಯ ಪಕ್ಕಾ ಕಮರ್ಷಿಯಲ್ ಸಿನಿಮಾ.

ವಿ.ಸಿ : ಕಥೆ ಹುಟ್ಟಿದ್ದು ಹೇಗೆ?
ಶ್ರೀನಿ : ಬೀರ್‌ಬಲ್ ಸಿನಿಮಾದ ಬಳಿಕ ಪ್ರೇಕ್ಷಕರಿಗೆ ತೆರೆಯಲ್ಲಿ ಹೊಸತನ್ನ ಕಟ್ಟಿಕೊಡಬೇಕು ಎಂಬ ಆಸೆಯಿತ್ತು. ಅದರಂತೆ ಕಥೆ ಹೆಣೆಯುವಾಗ, ಅದರಲ್ಲಿ
ಏನಾದರೂ ವಿಶೇಷತೆ ಇರಬೇಕು ಅನ್ನಿಸಿತು. ಆ ಸಮಯದಲ್ಲಿಯೇ ನಾರದನ ಕಥೆ ಹೊಳೆಯಿತು. ಅದಕ್ಕೆ ತಕ್ಕಂತೆ ಕಥೆಯೂ ಸಿದ್ಧವಾಯಿತು. ಅಂದುಕೊಂಡಂತೆ ಚಿತ್ರೀಕರಣವೂ ಮುಗಿದಿದೆ. ಚಿತ್ರದಲ್ಲಿ ಹೊಡಿ ಬಡಿ ದೃಶ್ಯಗಳು, ಬಿಲ್ಡಪ್‌ಗೆ ಅವಕಾಶವಿಲ್ಲ. ಮನರಂಜನೆಯೇ ಇಲ್ಲಿ ಮುಖ್ಯವಾಗಿದೆ. ಸಿನಿಮಾದ ಪ್ರತಿ ದೃಶ್ಯವೂ ಪ್ರೇಕ್ಷಕರನ್ನು ರಂಜಿಸುತ್ತದೆ.

ವಿ.ಸಿ: ಚಿತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು?

ಶ್ರೀನಿ : ಚಿತ್ರದಲ್ಲಿ ನಾನು ನಾರದನ ಪಾತ್ರದಲ್ಲಿ ನಟಿಸಿದ್ದೇನೆ. ಕಥೆ ಸಿದ್ಧವಾಗುವಾಗಲೇ ನನ್ನಲ್ಲಿ ಹೊಸ ಭಾವ ಆವರಿಸಿತ್ತು. ಈ ಪಾತ್ರವನ್ನು ಹೀಗೆಯೇ ನಿರ್ವಹಿಸಬೇಕು ಎಂದು ಆಗಲೇ ಮನದಲ್ಲಿ ಅಂದುಕೊಂಡಿದ್ದೆ. ಅದರಂತೆ ತಯಾರಿ ನಡೆಸಿದೆ. ಪ್ರೀತಿಯ ಕಥೆ ಹೇಳುತ್ತಾ, ನಗಿಸುವುದು ಒಂದು ಚಾಲೆಂಜ್. ಅದಕ್ಕಾಗಿ ಪೂಜಾ ಎಂಬುವವರಿಂದ ಒಂದಷ್ಟು ದಿನ ತರಬೇತಿ ಪಡೆದುಕೊಂಡೆ. ಇದರಿಂದ ನನ್ನಲ್ಲಿ ಹೊಸ ಹುರುಪು ಬಂತು. ಹಾಗಾಗಿ ಅಂದುಕೊಂಡಂತೆ ನಟಿಸಲು ಸಾಧ್ಯವಾಯಿತು. ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ.

ವಿ.ಸಿ : ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೇಗೆ ನಿಭಾಯಿಸಿದಿರಿ?
ಶ್ರೀನಿ : ನಿಜವಾಗಿಯೂ ಅದೊಂದು ಚಾಲೆಂಜ್, ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿ ನಿಭಾಯಿಸುವುದು ಸ್ವಲ್ಪ ಒತ್ತಡವೇ. ಆದರೆ ನಮ್ಮ ಜವಾಬ್ದಾರಿ ಯನ್ನು ಅನುಭವಿಸುತ್ತಾ ಕಾರ್ಯನಿರ್ವಹಿಸಿದರೆ ಸಂತದಾಯಕ ಅನ್ನಿಸುತ್ತದೆ. ಚಿತ್ರೀಕರಣ ಮುಗಿಯುವವರೆಗೂ ಕಥೆಯಲ್ಲಿಯೇ ಮುಳುಗಿದ್ದೆ, ಕೆಲಸವನ್ನು ಆಶಾದಾಯಕವಾಗಿಯೇ ಆನಂದಿಸಿದೆ.

ವಿ.ಸಿ : ತಾರಾಗಣದ ಬಗ್ಗೆ ಹೇಳುವುದಾದರೆ ?  
ಶ್ರೀನಿ : ಓಲ್ಡ್ ಮಾಂಕ್‌ನಲ್ಲಿ ದೊಡ್ಡ ತಾರಾಬಳಗವೇ ಇದೆ. ಹಿರಿಯ ನಿರ್ದೇಶಕರಾದ ಎಸ್.ನಾರಾಯಣ್ ನನ್ನ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದೆಂದೂ
ಕಾಣದ ಪಾತ್ರದಲ್ಲಿ ನಾರಾಯಣ್ ಎಲ್ಲರನ್ನು ನಗಿಸುತ್ತಾರೆ. ಹಿರಿಯ ನಟರಾದ ರಾಜೇಶ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ನಟಿ ಅದಿತಿ ಪ್ರಭುದೇವ ನಾಯಕಿಯಾಗಿ ಅಭಿನಯಿಸಿದ್ದಾರೆ.

ವಿ.ಸಿ : ಓಲ್ಡ್ ಮಾಂಕ್ ಬಿಡುಗಡೆ ಯಾವಾಗ?
ಶ್ರೀನಿ : ಸದ್ಯ ಸಿನಿಮಾ ಸೆನ್ಸಾರ್ ಅಂಗಳದಲ್ಲಿದೆ. ಮುಂದಿನ ತಿಂಗಳು ಟ್ರೇಲರ್ ಬಿಡುಗಡೆ ಮಾಡಲಿದ್ದೇವೆ. ಆ ಬಳಿಕ ಪರಿಸ್ಥಿತಿ ನೋಡಿಕೊಂಡು ಬಿಡುಗಡೆಯ ದಿನಾಂಕವನ್ನು ಘೋಷಿಸುತ್ತೇವೆ. ಅಂತು ಈ ವರ್ಷವೇ ಚಿತ್ರವನ್ನು ಚಿತ್ರಮಂದಿರದಲ್ಲೇ ಪ್ರೇಕ್ಷಕರ ಮುಂದೆ ತರಬೇಕು ಎಂಬ ಆಸೆಯಿದೆ.