Saturday, 14th December 2024

ವಿಶ್ವರೂಪಿಣಿಯಾದ ಪ್ರಿಯಾಂಕಾ

ನಟಿ ಪ್ರಿಯಾಂಕಾ ಉಪೇಂದ್ರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರತಿ ಚಿತ್ರಗಳಲ್ಲಿಯೂ ವಿಭಿನ್ನ ಪಾತ್ರಗಳಲ್ಲಿಯೇ
ಗಮನಸೆಳೆಯುತ್ತಾರೆ. ಈಗ ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್ ನಿರ್ದೇಶನದ ನೂರ ಐದನೇ ಚಿತ್ರದಲ್ಲಿ ದೇವಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಪ್ರಿಯಾಂಕಾ ಅವರಿಗೆ ಅಪಾರ ನಿರೀಕ್ಷೆ ಇದೆ. ಈ ಕುರಿತಂತೆ ಪ್ರಿಯಾಂಕಾ ವಿ.ಸಿನಿಮಾಸ್‌ ನೊಂದಿಗೆ ಮಾತನಾಡಿದ್ದಾರೆ.

ನಾನು ಸಿನಿಮಾರಂಗಕ್ಕೆ ಬಂದು ಇಪ್ಪತ್ತೈದು ವರ್ಷಗಳು ಕಳೆದಿವೆ. ನನ್ನ ನಟನೆಯ ಐವತ್ತನೇ ಚಿತ್ರದ ಚಿತ್ರೀಕರಣ ಆರಂಭ ವಾಗಿದೆ. ಈ ನಡುವೆಯೇ ಭಕ್ತಿ ಪ್ರಧಾನ ಚಿತ್ರದಲ್ಲಿಯೂ ನಟಿಸುವ ಅವಕಾಶ ಸಿಕ್ಕಿದೆ. ಓಂ ಸಾಯಿಪ್ರಕಾಶ್ ನಿರ್ದೇಶಿಸುತ್ತಿರುವ ನೂರ ಐದನೇ ಚಿತ್ರದಲ್ಲಿ ನಾನು ನಟಿಸುತ್ತಿರುವುದು ಹೆಮ್ಮೆ ಅನ್ನಿಸುತ್ತಿದೆ. ಅದಕ್ಕೂ ಮಿಗಿಲಾಗಿ ಈ ಸಿನಿಮಾದಲ್ಲಿ ದೇವಿ ಪಾತ್ರ ಮಾಡುತ್ತಿರುವುದು ಖುಷಿಯಾಗಿದೆ. ಉಪ್ಪಿ ನಿನಗೆ ದೇವಿ ಪಾತ್ರ ಒಪ್ಪುತ್ತದೆ ಎಂದು ಈ ಹಿಂದೆಯೇ ಹೇಳಿದ್ದರು. ಅಂತೆಯೇ ಆ ಪಾತ್ರಕ್ಕಾಗಿ ಕಾಯುತ್ತಿದ್ದೆ.

ಅಂತು ಬಯಸಿದ ಪಾತ್ರವೇ ಸಿಕ್ಕಿರುವುದು ಅಪಾರ ಸಂತಸ ತಂದಿದೆ ಎನ್ನುತ್ತಾರೆ ಪ್ರಿಯಾಂಕಾ. ಬಂಗಾಳಿ ಮೂಲದವಳಾದ ನಾನು ಗುರುತಿಸಿಕೊಂಡಿದ್ದು ಕನ್ನಡದಲ್ಲಿ. ಈಗಾಗಲೇ ಹುಡುಗಾಟದ ಹುಡುಗಿಯಾಗಿ, ಗೃಹಿಣಿಯಾಗಿ, ಪೊಲೀಸ್ ಅಧಿಕಾರಿಯಾಗಿ, ಹಾರರ್ ಜಾನರ್.. ಹೀಗೇ ಹಲವು ಪಾತ್ರಗಳನ್ನು ನಿರ್ವಹಿಸಿದ್ದೇನೆ. ಭಕ್ತಿಪ್ರಧಾನ ಸಿನಿಮಾ ಮಾಡುವ ಆಸೆ ಇತ್ತು. ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರದಲ್ಲಿ ದೇವಿ ಪಾತ್ರ ಮಾಡುವ ಆಸೆ ನೆರವೇರಿದೆ.

ನನ್ನ ಹಾಗೂ ಸಾಯಿಪ್ರಕಾಶ್ ಕಾಂಬಿನೇಷನ್‌ನ ಎರಡನೇ ಸಿನಿಮಾವಿದು. ಈ ಹಿಂದೆ ರೌಡಿ ಅಳಿಯ ಸಿನಿಮಾದಲ್ಲಿ ಕೆಲಸ ಮಾಡಿದ್ದೆ ಎಂದರು.