Friday, 13th December 2024

ಭರ್ಜರಿಯಾಗಿ ಚೇಸ್ ಮಾಡುತ್ತ ಆಕ್ಷನ್‌ನಲ್ಲಿ ಮಿಂಚಿದ ರಾಧಿಕಾ

ಶಿವಾಜಿ ಸುರತ್ಕಲ್ ಚಿತ್ರದಲ್ಲಿ ಸಿಂಪಲ್ ಪಾತ್ರದಲ್ಲಿ ಕಂಗೊಳಿಸಿದ ರಾಧಿಕಾ ನಾರಾಯಣ್, ಮುಂದೆ ಯಾವ ಸಿನಿಮಾದಲ್ಲಿ ನಮ್ಮ ಮುಂದೆ ಬರಲಿದ್ದಾರೆ. ಯಾವ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬ ಪ್ರಶ್ನೆ ಪ್ರೇಕ್ಷಕರ ಮನದಲ್ಲಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ಮುಂದೆ ಚೇಸ್ ಮೂಲಕ ತೆರೆಯಲ್ಲಿ ಓಟ ಆರಂಭಿಸಲಿದ್ದಾರೆ.

ಹೌದು, ಚೇಸ್ ಚಿತ್ರದ ಮೂಲಕ ಮತ್ತೊಮ್ಮೆ ಮಿಂಚಲು ರಾಧಿಕಾ ರೆಡಿಯಾಗಿದ್ದಾರೆ. ಚಿತ್ರದ ಶೀರ್ಷಿಕೆ ಕೇಳಿದರೆ ಇದೊಂದು ಆಕ್ಷನ್ ಸಿನಿಮಾ ಎನ್ನುವುದು ಖಚಿತವಾಗುತ್ತದೆ. ಅಂತೆಯೇ ಚೇಸ್, ಆಕ್ಷನ್ ಜತೆಗೆ ಸೆಂಟಿಮೆಂಟ್ ಅಂಶಗಳನ್ನು ಒಳ ಗೊಂಡಿದೆ. ಗಂಭೀರವಾದ ನಿಗೂಢ ಪ್ರಕರಣದ ಸುತ್ತ ನಡೆಯುವ ಕಥೆಯೇ ಚೇಸ್. ಈ ಚಿತ್ರದಲ್ಲಿ ರಾಧಿಕಾ ನಾರಾಯಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತನಿಖಾಧಿಕಾರಿಯಾಗಿ ನಟಿಸಿದ್ದಾರೆ. ಆಗಷ್ಟೇ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾದ ನಾಯಕಿಗೆ ತನಿಖೆಯ ನೇತೃತ್ವ ವಹಿಸಿದಾಗ ಅದನ್ನು ನಾಯಕಿ ಹೇಗೆ ನಿಭಾಯಿಸುತ್ತಾಳೆ, ಕರ್ತವ್ಯದ ಜತೆಗೆ ತನ್ನ ಕುಟುಂಬದ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಾಳೆ ಎಂಬ ಪಾತ್ರದಲ್ಲಿ ರಾಧಿಕಾ ನಟಿಸಿದ್ದಾರೆ.

ಆಕ್ಷನ್‌ನಲ್ಲೂ ಫಸ್ಟ್
ಚೇಸ್ ಸಾಹಸ ಪ್ರಧಾನ ಚಿತ್ರ, ಹಾಗಾಗಿ ಇಲ್ಲಿ ಆಕ್ಷನ್ ಸನ್ನಿವೇಶಗಳೇ ಮುಖ್ಯವಾಗಿವೆ, ವಿಶೇಷ ಎಂದರೆ ಚಿತ್ರದಲ್ಲಿ ರಾಧಿಕಾ ನಾರಾಯಣ್ ಅದ್ಭುತವಾಗಿ ಫಿಟ್ ಮಾಡಿದ್ದಾರೆ. ಈ ಹಿಂದೆ ಸಾಫ್ಟ್ ಆದ ಪಾತ್ರದಲ್ಲಿ ಕ್ಯೂಟ್ ಲುಕ್‌ನಲ್ಲಿ ಮಿಂಚಿದ್ದ ರಾಧಿಕಾ, ಇಲ್ಲಿ ಫಿಟ್ ಮಾಡಿದ್ದಾರೆ ಎಂದರೆ, ನಂಬುವುದು ಕಷ್ಟವೇ. ಚೇಸ್ ಚಿತ್ರ ನೋಡಿದ ಮೇಲೆ ಅದು ಖಚಿತವಾಗುತ್ತದೆ. ಚೇಸ್ ಸಿನಿಮಾದ ಕಥೆ ಕೇಳಿದ ನಂತರ ಈ ಚಿತ್ರದಲ್ಲಿ ನಟಿಸಲೇಬೇಕು ಅನ್ನಿಸಿತು.

ಬಳಿಕ ನಿರ್ದೇಶಕರು ಸಾಹಸ ದೃಶ್ಯವೇ ಹೆಚ್ಚಿವೆ ಎಂದು ಹೇಳಿದಾಗ ನನಗೆ ಅಚ್ಚರಿಯಾಯಿತು. ಈ ಪಾತ್ರದಲ್ಲಿ ನಟಿಸಬಹುದೇ ಎಂದು ನಾನು ಒಮ್ಮೆ ಯೋಚಿಸಿದೆ. ಖಂಡಿತಾ ನಟಿಸಬಹುದು ಎಂದು ನನಗನ್ನಿಸಿತು. ಅದಕ್ಕಾಗಿ ಮಾರ್ಷಲ್ ಆರ್ಟ್ಸ್ ಕಲಿತವರ ಬಳಿ ತರಬೇತಿ ಪಡೆದೆ. ಇದಕ್ಕೆ ಪೂರಕ ಎಂಬಂತೆ ಒಂದಷ್ಟು ಸಾಹಸ ಚಿತ್ರಗಳನ್ನು ನೋಡಿದೆ. ಇದೆಲ್ಲದರಿಂದ, ನನಗೆ ನೀಡಿದ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ಮೂಡಿತು. ಚಿತ್ರೀ ಕರಣಕ್ಕೆ ಸಿದ್ಧವಾದೆ. ಅಂತು ಅಂದುಕೊಂಡಂತೆ ಚಿತ್ರೀಕರಣ ಮುಗಿದಿದೆ.

ಇನ್ನೇನು ಚಿತ್ರ ತೆರೆಗೆ ಬರಲಿದೆ. ಮತ್ತೆ ಶಿವಾಜಿಯ ಜತೆ ರಾಧಿಕಾ ಸೈಕಲಾಜಿಕಲ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬಂದ ಶಿವಾಜಿ ಸುರತ್ಕಲ್ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತು. ಈ ಯಶಸ್ಸಿನ ಸಂತಸದಲ್ಲಿರುವ ಚಿತ್ರತಂಡ, ಶಿವಾಜಿ ಸುರತ್ಕಲ್ ಮುಂದುವರಿದ ಭಾಗವನ್ನು ತೆರೆಗೆ ತರಲು ತಯಾರಿ ನಡೆಸಿದೆ. ಹೊಸ ಚಿತ್ರದಲ್ಲಿ ರಾಧಿಕಾ ನಾರಾಯಣ್ ಕೂಡ ಅಭಿನಯಿಸಲಿದ್ದಾರೆ. ಇಲ್ಲಿಯೂ ಸಿಂಪಲ್ ಪಾತ್ರದಲ್ಲಿಯೇ ಮಿಂಚಲಿದ್ದಾರ ಅಥವಾ ಹೊಸ ಪಾತ್ರದಲ್ಲಿ ಕಂಗೊಳಿಸಲಿದ್ದಾರ ಎಂಬ ಬಗ್ಗೆ ರಾಧಿಕಾ ಗುಟ್ಟು ಬಿಟ್ಟುಕೊಟ್ಟಿಲ್ಲ.

ಸದ್ಯಕ್ಕಿಲ್ಲ ನಿರ್ದೇಶನದ ಒಲವು ನನಗೆ ನಟನೆಯೇ ಅಚ್ಚುಮೆಚ್ಚು, ಹೊಸ ಹೊಸ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆಯಿದೆ. ನನಗೆ ಇಂತಹದ್ದೇ ಪಾತ್ರದಲ್ಲಿ ನಟಿಸಬೇಕು ಎಂಬ ಬೇಡಿಕೆ ಇಲ್ಲ. ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸ ಬೇಕು ಎಂಬ ಹಂಬಲವಿದೆ. ಶ್ರೀದೇವಿ ನಟಿಸಿರುವ ಸದ್ಮ ಚಿತ್ರದಂತಹ ಪಾತ್ರಗಳನ್ನು ನಿರ್ವಹಿಸಬೇಕು ಎಂಬ ಬಯಕೆಯೂ ಇದೆ. ಮುಂದೆ ಅಂತಹ ಕಥೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ, ಸದ್ಯ ಪರಭಾಷೆಯ ಚಿತ್ರಗಳಲ್ಲೂ ನಟಿಸಲು ಅವಕಾಶ ಗಳು ಬರುತ್ತಿವೆ. ತಮಿಳು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಇನ್ನೇನು ಚಿತ್ರೀಕರಣವೂ ಆರಂಭವಾಗಲಿದೆ ಎನ್ನುತ್ತಾರೆ ರಾಧಿಕಾ.