Wednesday, 6th November 2024

ಹೊಸ ಗೆಟಪ್‌ನಲ್ಲಿ ರಾಮಾಚಾರಿ 2.0

ಪ್ರಶಾಂತ್‌ ಟಿ.ಆರ್‌

ರಾಮಾಚಾರಿ ಚಂದನವನದಲ್ಲಿ ಎಂದು ಮರೆಯದ, ಮರೆಯಲಾಗದ ಹೆಸರು. ನಾಗರಹಾವು ಚಿತ್ರದಿಂದ ಪ್ರಾರಂಭವಾದ
ರಾಮಚಾರಿ ಇಂದಿಗೂ ಅಜರಾಮರ. ಕಾರಣ ಆ ಹೆಸರಿನಲ್ಲೇ ಹೊಸ ಚೈತನ್ಯವಿದೆ. ಪವರ್ ಇದೆ. ಹಾಗಾಗಿಯೇ ರಾಮಚಾರಿ ಶೀರ್ಷಿಕೆಯಲ್ಲಿ ಬಂದ ಯಾವ ಸಿನಿಮಾಗಳು ಸೋತಿಲ್ಲ. ಈಗ ಅದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಅದುವೇ ರಾಮಾಚಾರಿ 2.0. ಈ ಶೀರ್ಷಿಕೆ ಕೇಳಲು ಹಿತವಾಗಿದೆ. ಅಂತೆಯೇ ಗಟ್ಟಿಕಥೆಯೂ ಕೂಡ ಚಿತ್ರದಲ್ಲಿದೆ.

ಇದೇ ಶೀರ್ಷಿಕೆಯಲ್ಲಿ ಹಿಂದೆ ಬಂದಂತಹ ಸಿನಿಮಾಗಳಂತೆ ಇಲ್ಲಿಯೂ ಆಂಗ್ರಿ ಯಂಗ್ ಮ್ಯಾನ್‌ಕಥೆ ಇದೆ. ಲವ್ ಸ್ಟೋರಿಯೂ ಇದೆ. ಎಲ್ಲಕ್ಕೂ ಹೆಚ್ಚಾಗಿ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಇದೆ. ಹೀಗೆ ಎಲ್ಲವನ್ನು ಒಳಗೊಂಡಿರುವ ಅದ್ಭುತ ಕಥೆಯನ್ನು ಮಾಸ್ ಮೂಲಕ ತೆರೆಗೆ ತರಲು ನಟ ಹಾಗೂ ನಿರ್ದೇಶಕ ತೇಜ್ ಸಿದ್ಧವಾಗುತ್ತಿದ್ದಾರೆ. ಈಗಾಗಲೇ ರಿವೈಂಡ್ ಗೆಲುವಿನ ಖುಷಿಯಲ್ಲಿರುವ ತೇಜ್, ಈಗ ಅದೇ ರೀತಿಯ ಮತ್ತೊಂದು ಸಿನಿಮಾವನ್ನು ನಿರ್ದೇಶನ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಅದಾಗಲೇ ಚಿತ್ರ ಕೂಡ ಸೆಟ್ಟೇರಿದ್ದು, ಸದ್ಯ ಕರೋನಾ ಆರ್ಭಟ ಕಡಿಮೆಯಾದ ಬಳಿಕ ಚಿತ್ರೀಕರಣಕ್ಕೆ ಹೊರಡಲಿದ್ದಾರೆ.

ಕರ್ಮದ ಹಿಂದಿನ ಮರ್ಮ
ರಿವೈಂಡ್ ಕಂಪ್ಲೀಟ್ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ. ಅದರಂತೆ ರಾಮಚಾರಿ ೨.೦ ದಲ್ಲೂ ಕೂಡ ಒಂದಷ್ಟು ಸೈಂಟಿಫಿಕ್ ಅಂಶಗಳಿವೆಯಂತೆ. ಇಲ್ಲಿ ಕರ್ಮ, ಅದರ ಹಿಂದಿನ ಮರ್ಮದ ಕಥೆಯನ್ನು ಹೇಳಲು ಹೊರಟ್ಟಿದ್ದಾರೆ ತೇಜ್. ನಮ್ಮ ಪೂರ್ವಜರು ಮಾಡಿದ ಪಾಪ, ಪುಣ್ಯಗಳು ನಮ್ಮನ್ನು ಕೂಡ ಕಾಡುತ್ತವೆ. ಎಂಬ ನಂಬಿಕೆ ನಮ್ಮದು. ಆ ಕರ್ಮಗಳು ನಮ್ಮನ್ನು ಸುತ್ತಿಕೊಳ್ಳುತ್ತವೆ ಎಂಬ ಮಾತು ನಮ್ಮಲ್ಲಿ ಜನಜನಿತವಾಗಿದೆ.

ಇದೇ ಕಥೆಯನ್ನು ಹೆಣೆದು ಅದಕ್ಕೆ ಒಂದಷ್ಟು ಮನರಂಜನೆಯ ಅಂಶಗಳನ್ನು ಬೆರೆಸಿ ತೆರೆಗೆ ತರಲು ಸಿದ್ಧವಾಗುತ್ತಿದ್ದಾರೆ ತೇಜ್. ವಿಶೇಷ ಎಂದರೆ ಕರ್ಮವನ್ನು ನಾವು ನೆಗೆಟಿವ್ ಆಗೆ ನೋಡುತ್ತೇವೆ. ಅದೇ ಕರ್ಮವನ್ನು ಪಾಸಿಟಿವ್ ಆಗಿ ನಾವು ಹೇಗೆ ಬದಲಿಸ ಬಹುದು ಎಂಬುದನ್ನು ಸಾರಿ ಹೇಳುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡುತ್ತಿದ್ದಾರೆ.

ಹಳ್ಳಿಯ ಸೊಗಡಿನ ಕಥೆ
ರಾಮಚಾರಿ ೨.೦ ಅಪ್ಪಟ ಹಳ್ಳಿಗಾಡಿನ ಕಥೆ. ಇಡೀ ಚಿತ್ರದ ಕಥೆ ಹಳ್ಳಿಯಲ್ಲಿಯೇ ನಡೆಯಲಿದೆ. ಹಾಗಾಗಿಯೇ ಮಂಡ್ಯ, ಮೈಸೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಇಲ್ಲಿಯೂ ನಾಗರಹಾವು ಚಿತ್ರದಲ್ಲಿ ಕಾಣುವ ಬಹುತೇಕ ಪಾತ್ರಗಳು ಬರುತ್ತವೆ. ಆದರೆ ಪಾತ್ರಧಾರಿಗಳು ಮಾತ್ರ ಬದಲಾಗುತ್ತಾರೆ. ದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಹೈ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಲಿದೆ.

ರಗಡ್ ಲುಕ್‌ನಲ್ಲಿ ತೇಜ್

ರಿವೈಂಡ್‌ನಲ್ಲಿ ಪತ್ರಕರ್ತನಾಗಿ ಬಣ್ಣಹಚ್ಚಿ ಜನರ ಮೆಚ್ಚುಗೆ ಪಡೆದ ತೇಜ್, ರಾಮಾಚಾರಿ 2.0ನಲ್ಲಿ ರಗಡ್ ಲುಕ್ ತಾಳಿದ್ದಾರೆ. ಚಿತ್ರದ ಫಸ್ಟ್ ಲುಕ್ ನೊಡಿದರೆ ಇಲ್ಲಿ ಆಕ್ಷನ್ ಕೂಡ ಮಿಳಿತವಾಗಿರುವುದು ಖಚಿತವಾಗುತ್ತದೆ. ಅಂತು ತೇಜ್ ಮತ್ತೊಂದು
ಒಳ್ಳೆಯ ಚಿತ್ರವನ್ನು ನೀಡಲು ಸಿದ್ಧವಾಗುತ್ತಿದ್ದಾರೆ.