Saturday, 14th December 2024

ಅದ್ಧೂರಿ ಎಂಟ್ರಿಗೆ ವಿಜಯ್ ರೆಡಿ

ಪ್ರಶಾಂತ್ ಟಿ.ಆರ್‌

ದುನಿಯಾ ವಿಜಿ ನಟಿಸಿ, ನಿರ್ದೇಶಿಸಿರುವ ‘ಸಲಗ’ ಬಿಡುಗಡೆಗೂ ಮುನ್ನವೇ ಸಖತ್ ಸದ್ಧು ಮಾಡುತ್ತಿದೆ. ಸೂರಿಯಣ್ಣನ ಹಾಡಿನ ಮೂಲಕವೇ ಹೊಸ ಟ್ರೆಂಡ್ ಸೃಷ್ಟಿಸಿದ್ದ ’ಸಲಗ’, ಟೀಸರ್ ಮೂಲಕವೂ ಗಮನಸೆಳೆಯುತ್ತಿದೆ. ಈಗ ‘ಸಲಗನಿಗೆ’ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ನೀಡಿದ್ದು , ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಅತಿಥಿಯಾಗಿ ಆಗಮಿಸಲಿದ್ದಾರೆ. ಇದು ‘ಸಲಗ’ ನಿಗೆ ಮತ್ತಷ್ಟು ಬಲ ತುಂಬಿದೆ. ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿ, ‘ಸಲಗ’ನ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಇದಕ್ಕೆ ಸಂತಸದಿಂದಲೇ ಒಪ್ಪಿರುವ ಅಪ್ಪು, ಚಿತ್ರದ ಹಾಡುಗಳನ್ನು ಕೇಳಿ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದ ಬಿಡುಗಡೆಗೂ ಮೊದಲೆ ‘ಸಲಗ’ನ ಪ್ರೀ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಸಿನಿಮಾರಂಗದ ಗಣ್ಯರು ರಾಜಕೀಯ ಮುಖಂಡರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಕಲರ್ ಫುಲ್ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಭಿಮಾನಿ ಗಳು ಕಾತರರಾಗಿದ್ದಾರೆ.

ಸಲಗನಿಗೆ ಸೆನ್ಸಾರ್ ಅಸ್ತು

‘ಸಲಗ’ ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಚಿತ್ರ. ಅದರ ಜತೆಗೆ ಚಿತ್ರದಲ್ಲಿ ವಿಜಯ್ ಮಚ್ಚು ಹಿಡಿದು ಅಬ್ಬರಿಸಿರುವುದು ಕುತೂಹಲ ಮೂಡಿಸಿದೆ. ‘ಸಲಗ’ ಭೂಗತ ಲೋಕದ ಕಥೆಯಾಧಾರಿತ ಚಿತ್ರವಾಗಿದೆ. ಕೆಲವೊಂದು ನೈಜ ಘಟನೆಗಳನ್ನೇ ಆಧರಿಸಿ ಚಿತ್ರದ ಕಥೆ ಹೆಣೆಯಲಾಗಿದೆ. ರಾ ಸ್ಟೈಲ್ ಮೇಕಿಂಗ್, ಡೈಲಾಗ್ಸ್ ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ.

ಟೀಸರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿದ್ದ ‘ಸಲಗ’ನಿಗೆ ಸೆನ್ಸಾರ್ ಮಂಡಳಿಯು ಅಸ್ತು ಎಂದಿದ್ದು, ‘ಎ’ ಪ್ರಮಾಣಪತ್ರ ನೀಡಿದೆ. ‘ಸಲಗ’
ಹೇಳಿ ಕೇಳಿ ಭೂಗತ ಲೋಕದ ಕಥೆಯಾಧಾರಿತ ಸಿನಿಮಾ. ಲಾಂಗ್, ಮಚ್ಚಿನ ಅಬ್ಬರದ ಜತೆಗೆ ಗುಂಡಿನ ಮೊರೆತವೂ ಚಿತ್ರದಲ್ಲಿದೆ. ಆ ಕಾರಣಕ್ಕೆ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ. ಇದರಿಂದ ಚಿತ್ರದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿರುವುದು ಖಚಿತವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಇದಕ್ಕೆ ಪುಷ್ಠಿ ನೀಡುತ್ತದೆ.

ಲಾಂಗ್ ಹಿಡಿದ ದುನಿಯಾ ವಿಜಯ್
ದುನಿಯಾ ವಿಜಯ್ ಅಭಿನಯದ ಚಿತ್ರ ಎಂದ ಮೇಲೆ ಅಲ್ಲಿ ಹೊಡಿಬಡಿ ದೃಶ್ಯಗಳು ಇರಲೇಬೇಕು. ಹಾಗಂತ ಬೋರ್ ಹೊಡೆಸುವಂತಹ ದೃಶ್ಯಗಳು
ಚಿತ್ರದಲ್ಲಿ ಇರುವುದಿಲ್ಲ. ಬದಲಾಗಿ ನೈಜತೆಗೆ ದುನಿಯಾ ವಿಜಿ ಹೆಚ್ಚು ಒತ್ತು ನೀಡುತ್ತಾರೆ. ಇಲ್ಲಿ ವಿಜಯ್, ಲಾಂಗ್ ಹಿಡಿದು ಅಬ್ಬರಿಸಿದ್ದರೂ, ಸೆಂಟಿಂಟ್‌ ನಲ್ಲೂ ಗಮನಸೆಳೆಯುತ್ತಾರೆ. ಹಾಗಂತ ‘ಸಲಗ’ ಅಂಡರ್ ವರ್ಲ್ಡ್ ಕಥೆಗೆ ಸೀಮಿತವಾಗಿಲ್ಲ. ಇಲ್ಲಿ ಸೆಂಟಿಮೆಂಟ್ ಜತೆಗೆ ಲವ್ ಸ್ಟೋರಿಗೂ ಒತ್ತು ನೀಡ ಲಾಗಿದೆ. ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.

ಉಳಿದಂತೆ ಡಾಲಿ ಧನಂಜಯ ಚಿತ್ರದ ಮತ್ತೊಂದು ಆಕರ್ಷಣೆಯಾಗಿದ್ದು, ಖಾಕಿ ತೊಟ್ಟು ಕಂಗೊಳಿಸಿದ್ದಾರೆ. ಸುಧೀರ್, ಯಶ್ ಶೆಟ್ಟಿ ಸೇರಿದಂತೆ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.