Saturday, 14th December 2024

ಥ್ರಿಲ್ಲರ್‌ ಕಥೆ ಹೆಣೆದ ದಿಯಾ ನಿರ್ದೇಶಕ

ಕಳೆದ ವರ್ಷದ ಲಾಕ್‌ಡೌನ್‌ಗೂ ಮೊದಲು ದಿಯಾ ಸಿನಿಮಾ ತೆರೆಗೆ ಬಂದಿತ್ತು. ಆದರೆ ಹೊಸಬರ ಚಿತ್ರ ಎನ್ನುವ ಕಾರಣಕ್ಕೆ ಪ್ರೇಕ್ಷಕರು ಅಷ್ಟಾಗಿ ಚಿತ್ರಮಂದಿರಗಳತ್ತ ಧಾವಿಸಲೇ ಇಲ್ಲ. ಹಾಗಾಗಿ ದಿಯಾ ಹೆಚ್ಚು ದಿನ ಚಿತ್ರಮಂದಿರದಲ್ಲಿ ಉಳಿಯಲೇ
ಇಲ್ಲ. ಅದೇ ದಿಯಾ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದಾಗ ಜನಮೆಚ್ಚುಗೆ ಪಡೆಯಿತು.

ಲಾಕ್‌ಡೌನ್ ಅವಧಿಯಲ್ಲಿ ಸಾಕಷ್ಟು ಸಿನಿಪ್ರಿಯರು ದಿಯಾ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆ ಚಿತ್ರದ ನಟ ನಟಿಯರು ಸ್ಟಾರ್ ಆಗಿ ಹೊರಹೊಮ್ಮಿದರು. ಪರಭಾಷೆಗಳಲ್ಲೂ ಚಿತ್ರದ ರೈಟ್ಸ್‌ಗೆ ಬೇಡಿಕೆ ಬಂದಿತು. ಇಂತಹ ಒಳ್ಳೆಯ ಚಿತ್ರ ವನ್ನು ನಿರ್ದೇಶಿಸಿದ್ದ ನಿರ್ದೇಶಕ ಅಶೋಕ್ ಈಗ ಮತ್ತೊಂದು ಸದಭಿರುಚಿಯ ಚಿತ್ರವನ್ನು ತೆರೆಗೆ ತರಲು ಸಿದ್ಧವಾಗುತ್ತಿದ್ದಾರೆ. ಒಂದು ವರ್ಷದ ಬಳಿಕ ಮತ್ತೊಂದು ಒಳ್ಳೆಯ ಕಥೆಯನ್ನು ತೆರೆಗೆ ತರಲು ಅಣಿಯಾಗುತ್ತಿದ್ದಾರೆ.

ಹಾಗಾದರೆ ಅಶೋಕ್ ನಿರ್ದೇಶನದಲ್ಲಿ ಮತ್ತೊಮ್ಮೆ ದಿಯಾದಂತಹ ಲವ್ ಸ್ಟೋರಿ ಮೂಡಿಬರಲಿದೆಯೇ ಎಂಬ ಕುತೂಹಲ
ಸಿನಿಪ್ರಿಯರಲ್ಲಿದೆ. ಆದರೆ ಈ ಬಾರಿ ಅಶೋಕ್ ಪ್ರೇಮಕಥೆ ಹೇಳುತ್ತಿಲ್ಲ. ಬದಲಾಗಿ ಥ್ರಿಲ್ಲರ್ ಕಥೆಯೊಂದನ್ನು ತೆರೆಗೆ ತರಲು ಸಿದ್ಧ ವಾಗಿದ್ದಾರೆ. ಈಗಾಗಲೇ ಕಥೆಯೂ ಕೂಡ ರೆಡಿಯಾಗುತ್ತಿದೆ. ಒಂದು ಕೊಲೆಯ ಸುತ್ತ ನಡೆಯುವ ಕಥೆ ಇದಾಗಿದ್ದು, ಕೊಲೆಯ ಜಾಡು ಹಿಡಿದು ಬರುವ ಡಿಟೆಕ್ಟಿವ್ ಒಬ್ಬರ ಸಾಹಸಮಯ ಕಥೆ ಚಿತ್ರದಲ್ಲಿ ಇರಲಿದೆಯಂತೆ.

ಅದನ್ನು ತೆರೆಯಲ್ಲಿ ಮತ್ತಷ್ಟು ರೋಚಕವಾಗಿ ತೋರಿಸುವ ಪ್ರಯತ್ನ ನಡೆಯುತ್ತಿದೆ. ಕಥೆಯೇ ಪ್ರಧಾನವಾಗಿರುವ ಈ ಚಿತ್ರದಲ್ಲಿ
ನಾಯಕನ ಪಾತ್ರಕ್ಕೂ ಅಷ್ಟೇ ಮಹತ್ವವಿದೆಯಂತೆ. ಹಾಗಾದರೆ ನಾಯಕ ಯಾರಾಗಬಹುದು ಎಂಬ ಕುತೂಹಲ ಅದಾಗಲೇ ಪ್ರೇಕ್ಷಕರಲ್ಲಿದೆ. ಈ ಚಿತ್ರದಲ್ಲಿಯೂ ನಿದೇಶಕರು ಹೊಸಬರಿಗೆ ಅವಕಾಶ ನೀಡಲಿದ್ದಾರ ಎಂಬ ಕಾತರತೆಯೂ ಇದೆ. ಈ ಸಿನಿಮಾ ದಲ್ಲಿಯೂ ಕೂಡ ಕೆಲವೇ ಕೆಲವು ಪಾತ್ರಗಳು ಬರಲಿದ್ದು, ಆ ಪಾತ್ರಗಳಲ್ಲಿ ಯಾರು ಬಣ್ಣಹಚ್ಚಬಹುದು ಎಂಬುದನ್ನು ಮುಂದಿನ
ದಿನಗಳಲ್ಲಿ ನಿದೇಶಕರು ತಿಳಿಸಲಿದ್ದಾರೆ.

***

ನನ್ನ ಮೊದಲ ಸಿನಿಮಾ ಹಾರರ್ ಜಾನರ್‌ನಲ್ಲಿತ್ತು. ದಿಯಾ ಲವ್ ಜಾನರ್‌ನ ಚಿತ್ರವಾಗಿತ್ತು. ಹಾಗಾಗಿ ಮತ್ತೆ ನಾನು ಅದೇ ಜಾನರ್‌ ನ ಕಥೆ ಬರೆಯಲು ಇಷ್ಟಪಡಲಿಲ್ಲ. ಬದಲಾಗಿ ಒಂದಷ್ಟು ಬದಲಾವಣೆ ಬಯಿಸಿದೆ. ಹಾಗಾಗಿ ಈ ಬಾರಿ ಥ್ರಿಲ್ಲರ್ ಕಥೆ ಹೆಣೆದಿದ್ದೇನೆ. ಚಿತ್ರದಲ್ಲಿ ಕಥೆಗೆ ತಕ್ಕಂತೆ ನಟ ನಟಿಯರು ನಟಿಸಲಿದ್ದಾರೆ. ಅದು ಯಾರು ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ. ಒಟ್ಟಿನಲ್ಲಿ ಪ್ರೇಕ್ಷಕರು ಬಯಸುವ ಚಿತ್ರವನ್ನು ನೀಡುವ ಪ್ರಯತ್ನ ಮಾಡುತ್ತೇನೆ.
-ಅಶೋಕ್ ನಿರ್ದೇಶಕ