Wednesday, 11th December 2024

ಯುವಕರ ಕನಸಿಗೆ ಸ್ಪೂರ್ತಿ ಯುವರತ್ನ

ಪ್ರಶಾಂತ್‌ ಟಿ.ಆರ್‌

ಯೂತ್‌ಫುಲ್ ಸ್ಟೋರಿಯ ‘ಯುವರತ್ನ’ ಅದ್ಧೂರಿಯಾಗಿ ತೆರೆಗೆ ಬಂದಿದೆ. ಚಿತ್ರದಲ್ಲಿ ಯೂತ್ ಐಕಾನ್ ಆಗಿ ಹೊರ ಹೊಮ್ಮಿರುವ ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯಕ್ಕೆ ಅಭಿಮಾನಿಗಳು ಬಹುಪರಾಕ್ ಎನ್ನುತ್ತಿದ್ದಾರೆ.

‘ಯುವರತ್ನ’ ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ಬಿಡುಗಡೆಯಾಗಿದ್ದು, ಅಲ್ಲಿಯೂ ಸದ್ದು ಮಾಡುತ್ತಿದ್ದೆ. ವಿದೇಶದಲ್ಲೂ ಪ್ರದರ್ಶನ ಕಾಣುತ್ತಿದ್ದು, ಜನಮೆಚ್ಚುಗೆ ಗಳಿಸುತ್ತಿದ್ದೆ. ಇಂದಿನ ಯುವಕರ, ಪೋಷಕರ ಕನಸಿಗೆ ನೀರೆರೆವ ಅದ್ಭುತವಾದ ಕಥೆ ಚಿತ್ರದಲ್ಲಿದೆ. ಕಾಲೇಜು ಕಥೆಯಲ್ಲಿ ಸಮಾಜಕ್ಕೆ ಅಗತ್ಯವಾದ ಸಂದೇಶವೂ ಅಡಕವಾಗಿದೆ. ‘ಯುವರತ್ನ’ನಾಗಿ ಕಂಗೊಳಿಸಿದ ಅಪ್ಪು ಮತ್ತೆ ಜನಮೆಚ್ಚುಗೆ ಪಡೆದಿದ್ದಾರೆ.

ಅದು ಆರ್‌ಕೆ ಯೂನಿವರ್ಸಿಟಿ, ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕ ಕಾಲೇಜು. ಅಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಯೋರ್ವಳು, ಇದ್ದಕ್ಕಿದಂತೆ ಆತ್ಮಹತ್ಯೆಗೆ ಶರಣಾಗುತ್ತಾಳೆ. ಈ ಘಟನೆ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಅನ್ಯಾಯಕ್ಕೆ ಬಲಿಯಾದ ವಿದ್ಯಾರ್ಥಿಗೆ ನ್ಯಾಯ ಒದಗಿಸಲು ಪ್ರಾಂಶುಪಾಲರ ನೇತೃತ್ವದಲ್ಲಿ ಹೋರಾಟ ಆರಂಭವಾಗುತ್ತದೆ.

ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಕೂಡ ತಮ್ಮ ಕಾಲೇಜಿ ಗಾಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಸಾಥ್ ನೀಡುತ್ತಾರೆ. ಆ ಹೋರಾಟ ಕ್ಕೆ ಖಾಸಗಿ ವಲಯದ ಬಲಿಷ್ಠರು ತಡೆಯೊಡ್ಡಲು ನಾನಾ ತಂತ್ರ ಹೆಣೆಯುತ್ತಾರೆ. ಹೀಗಿರುವಾಗಲೇ ಆರ್ ಕೆ ಯೂನಿವರ್ಸಿಟಿಗೆ ನಾಯಕನ ಎಂಟ್ರಿಯಾಗುತ್ತದೆ.

ವಿದ್ಯಾರ್ಥಿಯಾಗಿ ಪ್ರವೇಶ ಪಡೆದ ಅರ್ಜುನ್, ಕಾಲೇಜಿನ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾನೆ. ಕಾಲೇಜಿನಲ್ಲಿ ಡ್ರಗ್ಸ್ ಜಾಲದ ಕಂಬಂದ ಬಾಹು ಚಾಚಿರುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳುತ್ತಾನೆ. ಅದನ್ನು ಮಟ್ಟ ಹಾಕುವತ್ತ ದಿಟ್ಟ ಹೆಜ್ಜೆ ಇಡುತ್ತಾನೆ. ಅಷ್ಟಕ್ಕೂ ನಾಯಕ ಈ ಕಾಲೇಜಿಗೆ ಬಂದಿದ್ದಾದರೂ ಯಾಕೆ, ಆತನಿಗೂ ಈ ಕಾಲೇಜಿಗೂ ಏನು ಸಂಬಂಧ ಎಂಬ ವಿಚಾರ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ.

ಖಾಸಗಿ ಕಾಲೇಜಿನ ಕಿರುಕುಳ
ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆೆ ಮಾಡಿಕೊಳ್ಳಲು ಖಾಸಗಿ ಕಾಲೇಜಿನ ಕೈವಾಡವೂ ಇರುತ್ತದೆ. ಸರಕಾರಿ ಕಾಲೇಜಿಗೆ ಕೆಟ್ಟ ಹೆಸರು ತರಬೇಕು. ಆ ಮೂಲಕ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜಿನತ್ತ ಸೆಳೆಯಬೇಕು ಎಂದು ಬಲಿಷ್ಠರ ಗುಂಪೊಂದು ಸದ್ದಿಲ್ಲದೆ
ಕಾರ್ಯನಿರ್ವಹಿಸುತ್ತಿರುತ್ತದೆ.

ಈ ನಡುವೆ ಸರಕಾರಿ ಕಾಲೇಜು ಉಳಿಸಬೇಕು, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಧ್ಯೇಯ ಇಟ್ಟುಕೊಂಡು
ಪ್ರಾಂಶುಪಾಲರು ಶತಾಯಗತಾಯ ಪ್ರಯತ್ನಿಸುತ್ತಿರುತ್ತಾರೆ. ಇದಕ್ಕೆ ನಾಯಕ ಕೂಡ ಕೈಜೋಡಿಸುತ್ತಾನೆ. ಅಷ್ಟಕ್ಕೂ ಈ ಅರ್ಜುನ್ ಯಾರು ಎಂಬ ವಿಚಾರ ಸೆಕೆಂಡ್ ಹಾಫ್‌ನಲ್ಲಿ ರಿವಿಲ್ ಆಗುತ್ತದೆ. ಅಲ್ಲಿಂದ ಚಿತ್ರ ಮತ್ತಷ್ಟು ರೋಚಕ ತಿರುವು ಪಡೆದುಕೊಳ್ಳುತ್ತದೆ. ಖಾಸಗಿಯವರ ಕಿರುಕುಳ ತಪ್ಪುತ್ತದೆಯೇ, ಸರಕಾರಿ ಕಾಲೇಜು ಮತ್ತೆ ತನ್ನ ಹಿಂದಿನ ವೈಭವಕ್ಕೆ ಮರಳುತ್ತದೆಯೆ. ಅದರ ಹಿಂದೆ
ಯಾರ ಪರಿಶ್ರಮವಿರುತ್ತದೆ ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.

ವಿದ್ಯಾರ್ಥಿಗಳ ಪ್ರತಿಭೆಗೆ ಆದ್ಯತೆ ನೀಡಬೇಕು, ಈ ನಿಟ್ಟಿನಲ್ಲಿ ಪೋಷಕರ ಕರ್ತವ್ಯ ಏನು, ಶಿಕ್ಷಣ ಮತ್ತು ಶಿಕ್ಷಕರ ಮಹತ್ವ ಏನು
ಎಂಬುದನ್ನು ‘ಯುವರತ್ನ’ ಸಾರಿ ಹೇಳುತ್ತದೆ. ಈ ನಿಟ್ಟಿನಲ್ಲೇ ‘ಪಾಠ ಶಾಲಾ… ಹಾಡು ಮೂಡಿಬಂದಿದೆ. ಕಾಲೇಜಿನ ಯುವರಾಜ
ಈ ಹಿಂದೆ ಎಂದು ಕಂಡಿರದ ಪಾತ್ರದಲ್ಲಿ ಪುನೀತ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರ ಏನು ಎಂಬುದನ್ನು ಚಿತ್ರತಂಡ ಎಲ್ಲಿಯೂ ರಿವಿಲ್ ಮಾಡಿರಲಿಲ್ಲ. ಆ ಪಾತ್ರದ ಬಗ್ಗೆ ಕುತೂಹಲವಿದ್ದರೆ ಅದಕ್ಕೆ ತೆರೆಯಲ್ಲಿಯೇ ಉತ್ತರ ಸಿಗಲಿದೆ.

ಎಂತಹ ಪಾತ್ರವನ್ನು ನೀಡಿದರು ಅಪ್ಪು ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಅದು ಈ ಚಿತ್ರದಲ್ಲಿ ಮತ್ತೆ ಸಾಬೀತಾಗಿದೆ. ಪವರ್ಸ್ಟಾರ್ ಡ್ಯಾನ್ಸ್‌, ಫೈಟ್ಸ್ .. ಹೀಗೆ ಎಲ್ಲದರಲ್ಲಿಯೂ ಸೂಪರ್ ಆಗಿ ಮಿಂಚಿದ್ದಾರೆ. ಅದರಲ್ಲೂ ಅಪ್ಪು ಸ್ಟೆಪ್ಸ್‌ ಯುವಕರಲ್ಲಿ ಕಿಚ್ಚಾಯಿಸಿದೆ.

ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ರಗ್ಬಿ ಆಟಗಾರನಾಗಿಯೂ ಅಪ್ಪು ಗಮನ ಸೆಳೆಯುತ್ತಾರೆ. ಮೆಚ್ಚಿಗೆಯಾದ ಪಾತ್ರ ಚಿತ್ರ ದಲ್ಲಿ ನಾಯಕನಷ್ಟೇ ಪ್ರಮುಖವಾದ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದಾರೆ. ಇಲ್ಲಿ ಪ್ರಕಾಶ್ ರಾಜ್ ಪ್ರಾಂಶುಪಾಲರಾಗಿ ನಟಿಸಿದ್ದು, ಪಾತ್ರಕ್ಕೆ ಮಹತ್ವ ತಂದುಕೊಟ್ಟಿದ್ದಾರೆ. ತೆರೆಯಲ್ಲಿ ಪ್ರಕಾಶ್ ರಾಜ್ ಅವರನ್ನು ನೋಡುತ್ತಿದ್ದರೆ, ಇವರು ನಿಜವಾಗಿಯೂ ಕಾಲೇಜು ಪ್ರಾಂಶುಪಾಲರೇ ಇರಬೇಕು ಎಂಬ ಭಾವ ಕಾಡುತ್ತದೆ. ಇಡೀ ಚಿತ್ರದುದ್ದಕ್ಕೂ ಈ ಪಾತ್ರ ಪ್ರೇಕ್ಷಕರನ್ನು
ಹಿಡಿದಿಡುತ್ತದೆ. ಇದರ ಜತೆಗೆ ದಿಗಂತ್ ಕೂಡ ಪ್ರಮುಖ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿಯಾಗಿ ಅವರ ನಟನೆ ಮೆಚ್ಚುವಂತಹದ್ದು, ಇನ್ನು ರಂಗಾಯಣ ರಘು ಇಲ್ಲಿಯೂ ಕಾಮಿಡಿ ಕಚಗುಳಿ ಇಡುತ್ತಾರೆ.
ಸಾಧು ಕೋಕಿಲ, ಕುರಿ ಪ್ರತಾಪ್ ಕೂಡ ಪ್ರೇಕ್ಷಕರನ್ನು ನಗಿಸುತ್ತಾರೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಅಚ್ಯುತ್ ಕುಮಾರ್, ಅವಿನಾಶ್, ರವಿಶಂಕರ್, ಸುಧಾರಾಣಿ, ಸೋನುಗೌಡ, ತಾರಕ್ ಹೀಗೆ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ದ್ದಾರೆ.

ಡಾಲಿ ಧನಂಜಯ ಇಲ್ಲಿಯೂ ಖದರ್ ಖಳನಾಗಿ ಮಿಂಚಿದ್ದಾರೆ. ಸಾಯಿಕುಮಾರ್ ಕೂಡ ಚಿತ್ರದಲ್ಲಿ ನಟಿಸಿದ್ದು ಅವರ ಪಾತ್ರ ಏನೆಂಬುದನ್ನು ತೆರೆಯಲ್ಲಿಯೇ ನೋಡಬೇಕು. ನಾಯಕಿ ಸಯೇಷಾ ಸೈಗಲ್ ವೈದ್ಯೆಯ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಹ್ಯಾಟ್ರಿಕ್ ಸಂತೋಷದಲ್ಲಿ ಆನಂದ್ ರಾಮ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾರಥ್ಯದಲ್ಲಿ ‘ಯುವರತ್ನ’ ಮಾಡಿಬಂದಿದೆ. ‘ಮಿಸ್ಟರ್ ಅಂಡ್ ಮಿಸೆಸ್ ರಾಮಚಾರಿ’, ‘ರಾಜಕುಮಾರ’ ಚಿತ್ರಗಳ ಬಳಿಕ ‘ಯುವರತ್ನ’ದಂತಹ ಹಿಟ್ ಚಿತ್ರ ನೀಡಿರುವ ಸಂತೋಷ್ ಆನಂದ್ ರಾಮ್ ಹ್ಯಾಟ್ರಿಕ್ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಅಚ್ಚುಕಟ್ಟಾದ ಕಥೆ, ಚಿತ್ರಕಥೆ ಬರೆದು ಪ್ರೇಕ್ಷಕರ ಮನಗೆದ್ದಿದ್ದಾರೆ.