Friday, 13th December 2024

ಶೋಷಣೆಯಿಂದ ಹೊರಬನ್ನಿ

ಗಾಂಧೀಜಿಯವರು ಅಹಿಂಸೆಯನ್ನು ಪ್ರತಿಪಾದಿಸುತ್ತಾ ಬಂದವರು, ಯಾವುದೇ ಕಾರಣಕ್ಕೂ ಹಿಂಸಾತ್ಮಕ ಪ್ರತಿಭಟನೆ ಮಾಡಬಾರದು ಎಂದು ಹೇಳಿದವರು. ಆದರೆ, ಶೋಷಿತರು ತಿರುಗಿಬಿದ್ದಾಗ ಅದನ್ನು ಬೆಂಬಲಿಸಿದ್ದರು. ಪ್ರತಿದಿನ ತಮಗೆ ತೊಂದರೆ ಕೊಡುತ್ತಿದ್ದ ಪುಂಡರಿಗೆ ಕಪಾಳಮೋಕ್ಷ ಮಾಡಿದ ಅವರ ಸಹಾಯಕರ ಕಾರ್ಯವನ್ನು ಸರಿ ಎಂದು ಹೇಳುವ ಮೂಲಕ ಶೋಷಣೆ ಯನ್ನು ವಿರೋಧಿಸಿದ್ದರು ಗಾಂಧಿ.

ಗೌರಿ ಚಂದ್ರಕೇಸರಿ

ಒಬ್ಬ ವ್ಯಕ್ತಿ ಮಹಾತ್ಮನಾಗುವುದು ತನ್ನ ಸಚ್ಛಾರಿತ್ರ್ಯ, ನಿಸ್ವಾರ್ಥ ಸೇವೆ, ತ್ಯಾಗ, ಅವಿರತ ಹೋರಾಟ ಹಾಗೂ ಸರಳತೆ ಯನ್ನು ಮೈಗೂಡಿಸಿಕೊಂಡಾಗ. ಗಾಂಧೀಜಿಯವರು ಮಹಾತ್ಮನೆನಿಸಿಕೊಂಡದ್ದು ಇಂತಹ ಹಾದಿಯನ್ನು ಸವೆಸಿದ ಕಾರಣದಿಂದಲೇ. ಏಕೆಂದರೆ ಗಾಂಧೀಜಿಯವರು ಆಯ್ದುಕೊಂಡದ್ದು ಕಲ್ಲು ಮುಳ್ಳಿನ ಹಾದಿಯನ್ನು.

ನಮ್ಮ ದೇಶದ ಜನಸಾಮಾನ್ಯರು ಧರಿಸುವ ರೀತಿ, ಮಾನ ಮುಚ್ಚಲು ಅಗತ್ಯವಿರುವಷ್ಟು ಬಟ್ಟೆ, ಬದುಕಲು ಅಗತ್ಯವಿರುವಷ್ಟು ಮಾತ್ರ ಆಹಾರ, ಭವಿಷ್ಯತ್ತಿಗಾಗಿ ಕೂಡಿಡುವುದು ಮಹಾಪಾಪವೆಂಬ ಮನೋಭಾವನೆ, ಎಲ್ಲಕ್ಕಿಂತ ಮುಖ್ಯವಾಗಿ ಸತ್ಯ ಮತ್ತು ಅಹಿಂಸೆಯ ಮೂಲಕ ಹೋರಾಟ ಇಂತಹ ಮೌಲ್ಯಗಳನ್ನು ಅಳವಡಿಸಿಕೊಂಡು, ಅದರಲ್ಲಿ ಯಶಸ್ವಿಯಾದರು. ಅಂತಹ ಸರಳತೆಯನ್ನೇ ಆಯುಧವನ್ನಾಗಿಸಿಕೊಂಡು, ಬಲಾಢ್ಯ ಬ್ರಿಟಿಷರ ವಿರುದ್ಧ ಹೋರಾಡುವ ಸ್ಫೂರ್ತಿ ಬೆಳೆಸಿಕೊಳ್ಳಲು ಗಾಂಧೀಜಿ ಯಂತಹ ತ್ಯಾಗಿಗಳಿಗೆ ಮಾತ್ರ ಸಾಧ್ಯ.

ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ತನ್ನದಾಗಿಸಿಕೊಳ್ಳುವುದು ಜೀವನದಲ್ಲಿ ಅಳವಡಿಸಿಕೊಂಡು, ಎಲ್ಲವನ್ನೂ ಬೇರೊಬ್ಬರ ಹಿತಕ್ಕಾಗಿ, ಜನಮಾನಸದ ಒಳಿತಿಗಾಗಿ ಬಳಸಿಕೊಳ್ಳಲು ಒಬ್ಬ ಕಠೋರ ತಪಸ್ವಿಗೆ ಮಾತ್ರ ಸಾಧ್ಯ. ಅವರ ಕೆಲವು ನಡೆಗಳು, ಕೆಲವು ನಿರ್ಣಯಗಳು ಇಂದು ವ್ಯಾಪಕ ವಿಶ್ಲೇಷಣೆಗೆ ಒಳಪಟ್ಟಿದ್ದು, ಹಲವರು ಅವರ ಜೀವನವನ್ನು ಮೆಚ್ಚಿದ್ದಾರೆ, ಕೆಲವರು ಟೀಕೆ ಮಾಡಿದ್ದೂ ಉಂಟು. ಅಂತಹ ಟೀಕೆಗಳ ಮಧ್ಯದಲ್ಲಿಯೂ ಗಾಂಧಿ ಇಷ್ಟವಾಗುವುದು ಅವರ ಸರಳತೆ, ಕಷ್ಟ ಸಹಿಷ್ಣುತೆ ಹಾಗೂ ಶೋಷಣೆಯನ್ನು ಸಹಿಸಿಕೊಳ್ಳುವುದೂ ಒಂದು ರೀತಿಯ ಅಪರಾಧವೆಂದು ಹೇಳಿದ ಅವರ ದೃಷ್ಟಿಕೋನದಿಂದಾಗಿ.

ಕಪಾಳ ಮೋಕ್ಷ ತಮ್ಮ ಸರಳ ಜೀವನದ ನಡುವೆಯೂ, ಅಹಿಂಸೆಯನ್ನು ಪ್ರತಿಪಾದಿಸುವ ದಿನಗಳ ನಡುವೆಯೂ, ಶೋಷಣೆ ಯನ್ನು ವಿರೋಧಿಸುತ್ತಿದ್ದ ಅವರು, ಅಂತಹ ಶೋಷಣೆಯನ್ನು ದೂರ ಮಾಡಲು ಸಣ್ಣ ಮಟ್ಟದ ಹಿಂಸಾತ್ಮಕ ಪ್ರತಿಭಟನೆ ನಡೆಸಿದರೆ ತಪ್ಪಿಲ್ಲ ಎಂದಿದ್ದರು. ಅದಕ್ಕೆ ಉದಾಹರಣೆಯೆಂದರೆ, ಅವರ ಪ್ರಾರ್ಥನಾ ಮಂದಿರಕ್ಕೆ ಇಬ್ಬರು ಶಿಷ್ಯೆಯರು ಬರುವಾಗ ದಿನನಿತ್ಯ ಕೆಲವು ಪುಂಡರು ಅಸಭ್ಯವಾಗಿ ಚುಡಾಯಿಸುತ್ತಿರುತ್ತಾರೆ.

ತಾಳ್ಮೆಯನ್ನು ಕಳೆದುಕೊಂಡ ಇಬ್ಬರೂ ಹೆಣ್ಣುಮಕ್ಕಳು ಒಂದು ದಿನ ಆ ಬೀದಿ ಕಾಮಣ್ಣರಿಗೆ ಕಪಾಳ ಮೋಕ್ಷವನ್ನು ಮಾಡು ತ್ತಾರೆ. ಆದರೆ ಬಾಪೂ ಅವರ ಅಹಿಂಸಾಧರ್ಮದ ಮೌಲ್ಯಕ್ಕೆ ವಿರುದ್ಧವಾಗಿದ್ದ ಹಿಂಸೆ ತಮ್ಮಿಂದ ಜರುಗಿತಲ್ಲ ಎಂದು ನೊಂದುಕೊಂಡು ಪಶ್ಚಾತ್ತಾಪದಲ್ಲಿ ಬೇಯುತ್ತಾರೆ. ಇದನ್ನು ಕೇಳಿ ಗಾಂಧೀಜಿಯವರು ಬೇಸರಗೊಳ್ಳಬಹುದು, ಅವರು ಏನಾದರೂ ಪ್ರಶ್ನೆ ಕೇಳಿದರೆ ಏನೆಂದು ಉತ್ತರಿಸುವುದು ಎಂದು ಮನಸ್ಸಿನಲ್ಲೇ ಯೋಚಿಸುತ್ತಿರುತ್ತಾರೆ.

ಗಾಂಧಿಯವರು ಕೋಪಗೊಂಡರೆ, ಅದನ್ನು ತಡೆಯುವ ಶಕ್ತಿ ತಮಗೆ ಇಲ್ಲ ಎಂದು ತಿಳಿದು ಬಸವಳಿಯುತ್ತಾರೆ. ಕೊನೆಗೆ ನಡೆದ ಸಂಗತಿಯನ್ನೆಲ್ಲ ಒಂದು ದಿನ ಗಾಂಧಿಯವರಲ್ಲಿ ಹೇಳಿಕೊಂಡು, ಅನಿವಾರ್ಯವಾಗಿ ಈ ರೀತಿ ಹಿಂಸೆಯ ಅಸ್ತ್ರವನ್ನು ಕೈಗೆತ್ತಿ ಕೊಂಡದ್ದಕ್ಕೆ ತಮ್ಮನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತಾರೆ. ಆಗ ಗಾಂಧೀಜಿಯವರು, ‘‘ನೀವು ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ, ಹಿಂಸೆ, ಶೋಷಣೆಯನ್ನು ಸಹಿಸಿಕೊಳ್ಳುವುದೂ ಒಂದು ರೀತಿಯ ಸ್ವಯಂಕೃತ ಅಪರಾಧ’’ ಎಂದು ಹೇಳಿ ಶಿಷ್ಯೆಯರು ಅಪರಾಧಿ ಭಾವದಿಂದ ಹೊರಬರುವಂತೆ ಮಾಡುತ್ತಾರೆ.

ನಿತ್ಯ ಹಲವರಿಂದ, ನೂರಾರು ತೆರನಾದ ಹಿಂಸೆ, ಶೋಷಣೆಗಳನ್ನು ಸಹಿಸಿಕೊಳ್ಳುತ್ತಿರುವವರು ಶೋಷಣೆಯ ವಿರುದ್ಧ ಧ್ವನಿ ಎತ್ತಬೇಕಿದೆ. ಶೋಷಣೆಯನ್ನು ಕಂಡಾಗ, ಅದನ್ನು ವಿರೋಧಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಗಾಂಧೀಜಿಯವರು ಅಹಿಂಸೆಯನ್ನು ಪಾಲಿಸಬೇಕು ಎಂದು ಹೇಳಿದ್ದು ನಿಜವಾದರೂ, ಶೋಷಣೆ ಮಾಡುವವರ ವಿರುದ್ಧ ತಿರುಗಿ ಬಿದ್ದರೆ ತಪ್ಪು ಎಂದಿಲ್ಲ. ಆದರೆ ದಿನವೂ ಹಿಂಸೆಯನ್ನು ಉಂಡು, ಶೋಷಣೆಯಲ್ಲಿಯೇ ಕೈತೊಳೆಯುತ್ತಿರುವವರು ಈ ಪರಿಸ್ಥಿತಿಯು ‘ನಾವು ಪಡೆದು ಬಂದದ್ದು’ ಎಂಬ ಮನೋಭಾವ ನೆಯನ್ನು ಹೊಂದಿರುವವರೆಗೂ, ಎಷ್ಟೇ ಜನ ಗಾಂಧಿ ಹುಟ್ಟಿ ಬಂದರೂ ಪರಿಸ್ಥಿತಿ ಯನ್ನು ಬದಲಾಯಿಸಲು ಸಾಧ್ಯವಿಲ್ಲ