Wednesday, 11th December 2024

ಅಲ್ಲೋಲ ಕಲ್ಲೋಲ

ಸಂಧ್ಯಾ ಎಂ.ಸಾಗರ

ಅವಳ ಕಥೆಯನ್ನು ಕೇಳಿದಾಗ ಒಂದು ಕ್ಷಣ ನನಗೂ ಏನು ಹೇಳಬೇಕು ಅಂತಾನೆ ತಿಳಿಯಲಿಲ್ಲ. ಅವಳ ದುಃಖತಪ್ತ ಮುಖವನ್ನೇ ದಿಟ್ಟಿಸಿ ನೋಡಿ ಕೆಲ ಸಾಂತ್ವನದ ಮಾತುಗಳನ್ನು ಹೇಳಿದೆ.

ಜೀವನವೆಂಬ ಪುಸ್ತಕದಲ್ಲಿ ನಾವು ಬರೆಯೋ ಪ್ರತಿಯೊಂದು ಪುಟಗಳು ಸರಿಯಿರಲ್ಲ, ಅದೆಷ್ಟೋ ತಪ್ಪು ಲೆಕ್ಕಗಳನ್ನು ಮಾಡಿ ರ್ತೀವಿ ಹಾಗಂತ ಇಡೀ ಪುಸ್ತಕ ಎಸೆಯೋದುಂಟಾ. ಬಂದದ್ದು ಬರಲಿ ಆಗಿದ್ದು ಆಗಲಿ ಅಂತ ಮುನ್ನಡೆಯಬೇಕು. ಅದರಲ್ಲೂ ಕೆಲವರ ಬದುಕಿನ ಕಥೆ ನಮ್ಮನ್ನು ಯೋಚನಾ ಲಹರಿಯಲ್ಲಿ ಮುಳುಗುವಂತೆ ಮಾಡುತ್ತದೆ.

ಅವತ್ತು ಶುಕ್ರವಾರ, ಶಿವಮೊಗ್ಗದಿಂದ ಮೈಸೂರಿಗೆ ಟ್ರೈನ್‌ನಲ್ಲಿ ಹೊರಟಿದ್ದೆ. ಸಹ ಪ್ರಯಾಣಿಕರೊಬ್ಬರು ಜೋರಾಗಿ ಚಂದಿರ ನಿಲ್ಲದ ಆ ಬಾನಿನಲ್ಲಿ ಬೆಳದಿಂಗಳನ್ನು ಹುಡುಕುತ್ತಿರುವ ಒಬ್ಬ ಕುರುಡನು ನಾನಿಲ್ಲಿ ಅನ್ನೋ ಹಾಡನ್ನು ಹಾಕಿದ್ದರು. ನನ್ನ ಎದುರಿಗೆ ಪರಿಚಿತ ಮುಖವೊಂದು ಯಾವುದೋ ಲೋಕದಲ್ಲಿ ಮುಳುಗಿತ್ತು. ಮಾತನಾಡಿಸಲಾ ಬೇಡವಾ ಅನ್ನೋ ಗೊಂದಲ ನನ್ನಲ್ಲಿ. ಕೊನೆಗೂ ಮಾತನಾಡಿಸಿದೆ. ಅವಳು ಮಾನ್ವಿ ನನ್ನ ಡಿಗ್ರಿ ಕ್ಲಾಸ್ ಮೇಟ್. ಅವಳ ಮುಖದಲ್ಲಿ ಕಾಣುತ್ತಿದ್ದ ಆ ನೋವು ಯಾಕೆ ಅನ್ನೋ ಪ್ರಶ್ನೆ ನನಗೆ. ಕೊನೆಗೂ ಧೈರ್ಯ ಮಾಡಿ ಕೇಳಿದೆ. ಏನಾದರೂ ತೊಂದರೆನಾ, ಸಹಾಯ ಬೇಕಾ ಅಂತ.

ಅವಳು ಮೊದಲು ಏನು ಇಲ್ಲ ಅಂತ ನಿರಾಕರಿಸಿದಳು. ನಾನು ಎರಡನೇ ಬಾರಿ ಕೇಳಿದೆ ಅವಳಿಗೂ ಏನು ಅನಿಸಿತೋ ಏನೋ ಅವಳ ಕಥೆಯನ್ನು ನನ್ನ ಮುಂದೆ ಬಿಚ್ಚಿಟ್ಟಳು.

ಪೊಲೀಸ್ ಆಗುವ ಕನಸು
ಮಾನ್ವಿ ತಂದೆ ಸಾಮಾನ್ಯ ಗುಮಾಸ್ತ, ತಾಯಿ ಶಾಲೆಯೊಂದರಲ್ಲಿ ಶಿಕ್ಷಕಿ. ಬಡತನ ಹಿರಿಯರ ಬಳುವಳಿ. ಅಲ್ಲದೇ ತಂದೆ ತಾಯಿ ನಡುವೆ ಸಂಬಂಧ ಹಳಸಿತ್ತು. ಬೇರೆಯಾಗುವ ನಿರ್ಧಾರ ತೆಗೆದುಕೊಂಡಾಗಿತ್ತು. ತಂದೆ ಜೊತೆ ಇವಳು ಇರೋದು ಅಂತ ನಿರ್ಧಾರ ವಾಯಿತು. ಚಿಕ್ಕಂದಿನಿಂದಲೇ ತಂದೆ ಮತ್ತು ತಾಯಿ ಇಬ್ಬರ ಪ್ರೀತಿಯಿಂದ ವಂಚಿತೆ ಈಕೆ. ಇದರ ನಡುವೆ ತಂದೆ ಮಲತಾಯಿ ಯನ್ನು ತಂದಿದ್ದ. ಇವಳ ಕಷ್ಟಕ್ಕೆ ಎಲ್ಲೆನೇ ಇರಲಿಲ್ಲ. ಆದರೆ ಇವಳಲ್ಲೂ ಎಲ್ಲರಂತೆ ಆಸೆ ಕನಸು. ಯಾವ ಹೀರೋನ ಯಾವ ಫಿಲ್ಮ್ ನೋಡಿದ್ಲೋ ಗೊತ್ತಿಲ್ಲ ಪೊಲೀಸ್ ಆಗಬೇಕು ಅಂತ ಕನಸು. ಇವಳಿಗೆ ಯಾರು ಹೆಚ್ಚಿನ ಫ್ರೆಂಡ್ಸ್ ಇರಲಿಲ್ಲ.

ಅವಳು ಡಿಗ್ರಿಗೆ ಕಾಲೇಜ್ ಸೇರಿದಾಗ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ತಾನಾಯಿತು, ತನ್ನ ಓದಾಯಿತು. ಆದರೆ ಅವನೊಬ್ಬ ಮಾತ್ರ ಇವಳಿಗೆ ಹೇಗೆ ಹತ್ತಿರವಾದ ಗೊತ್ತಿಲ್ಲ. ಹೆಸರು ಪ್ರೀತಮ್. ವಾಚಾಳಿ, ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ
ಹಠ. ಪ್ರತಿಯೊಂದು ಚಟುವಟಿಕೆಯಲ್ಲಿಯೂ ಮುಂದೆ. ಇವಳ ಗುಣವನ್ನು ಮೆಚ್ಚಿದ್ದ. ಇಬ್ಬರೂ ಹತ್ತಿರವಾಗಿದ್ರು, ಗೆಳೆತನ ಪ್ರೇಮಕ್ಕೆ ತಿರುಗಿತ್ತು. ಇಬ್ಬರೂ ಜೀವನದಲ್ಲಿ ಒಂದು ಕನಸನ್ನು ಹೊತ್ತು ಡಿಗ್ರಿ ಮುಗಿಸಿದ್ದರು. ಇವಳು ತನ್ನಾಸೆಯಂತೆಯೇ ಪೊಲೀಸ್ ಆಗಿ ಇಲಾಖೆ ಸೇರಿದ್ಲು. ಅವನು ಒಂದು ಕಂಪನಿಯಲ್ಲಿ ಪುಟ್ಟ ಕೆಲಸ ಮಾಡುತ್ತಿದ್ದ. ಇಬ್ಬರ ಜೀವನ ಹಾಗೇ ಸಾಗು ತ್ತಿತ್ತು. ಯಾರಿಗೂ ಗೊತ್ತಿರಲಿಲ್ಲ ಅವಳು ಎರಡು ದೋಣಿ ಮೇಲೆ ಕಾಲಿಡುವ ಸಮಯ ಬರುತ್ತೆ ಅಂತ.

ಪ್ರೇಮ ಪಾಶ
ಅವನು ಸಂಪತ್, ಇವಳ ಸಹೋದ್ಯೋಗಿ. ನೋಡೋಕೆ ತುಂಬಾ ಚೆನ್ನಾಗಿದ್ದ. ಇವಳಿಗಿಂತ ಎರಡು ವರ್ಷ ದೊಡ್ಡವನಿರಬೇಕು. ಕೆಲಸದ ಕಾರಣ ಇಬ್ಬರೂ ಒಟ್ಟಿಗೆ ಇರುತ್ತಿದ್ದರು. ಹತ್ತಿರ ಆಗುತ್ತಿದ್ದರು. ಇವಳ ಮನಸಲ್ಲಿ ಏನೋ ತಳಮಳ. ಪ್ರೀತಮ್ ಗಿಂತ ಇವನ ಬಗ್ಗೆನೇ ಹೆಚ್ಚು ಯೋಚನೆ ಮಾಡುತ್ತಿದ್ದಳು. ಅವಳ ಅರಿವಿಗೆ ಬಾರದಂತೆ ಅವಳು ಸಂಪತ್‌ನ ಪ್ರೇಮ ಪಾಶಕ್ಕೆ ಸಿಲುಕಿದ್ಲು. ದಿನೇ ದಿನೇ ಇನ್ನೂ ಹತ್ತಿರವಾಗುತ್ತಿದ್ದರು. ಇತ್ತ ಪ್ರೀತಮ್ ನಿಂದ ದೂರವಾಗುತ್ತ ಇದ್ಲು.

ಆದರೆ ಆ ಒಂದು ಸುದ್ದಿ ಇವಳ ಬದುಕನ್ನೇ ಅಲ್ಲೋಲ ಕಲ್ಲೋಲವಾಗಿಸುತ್ತೆ ಅಂತ ಮಾನ್ವಿ ಎಣಿಸಿಯೂ ಇರಲಿಲ್ಲ. ಸಂಪತ್‌ಗೆ
ಮದುವೆಯಾಗಿ ಆರು ತಿಂಗಳಾಗಿತ್ತು. ಈ ವಿಷಯವನ್ನು ಅವನು ಮಾನ್ವಿಯಿಂದ ಮುಚ್ಚಿಟ್ಟಿದ್ದ. ಬರ ಸಿಡಿಲಿನಂತೆ ಅಪ್ಪಳಿಸಿದ್ದ ಅವನ ಮದುವೆಯ ವಿಷಯ ಅವಳನ್ನ ಸ್ತಬ್ಧಗೊಳಿಸಿತ್ತು. ಜೀವನದಲ್ಲಿ ಏನಾಗುತ್ತಿದೆ ಎಂದೇ ಅವಳಿಗೆ ಅರ್ಥವಾಗಲಿಲ್ಲ. ಅವಳಿಗೆ ಭೂಮಿಯೇ ಕುಸಿದ ಅನುಭವ. ತಾನು ಎಂಥ ತಪ್ಪು ಮಾಡಿಬಿಟ್ಟೆ ಅನ್ನೋ ಭಾವ.

ಮುಂದೆ ಏನು ಮಾಡಬೇಕು ಅಂತ ತಿಳಿದೇ ಕಂಗಾಲಾಗಿದ್ಲು. ಅವಳ ಕಥೆಯನ್ನು ಕೇಳಿದಾಗ ಒಂದು ಕ್ಷಣ ನನಗೂ ಏನು ಹೇಳ ಬೇಕು ಅಂತಾನೆ ತಿಳಿಯಲಿಲ್ಲ. ಅವಳ ದುಃಖತಪ್ತ ಮುಖವನ್ನೇ ದಿಟ್ಟಿಸಿ ನೋಡಿ ಕೆಲ ಸಾಂತ್ವನದ ಮಾತುಗಳನ್ನು ಹೇಳಿದೆ. ಅವಳಿಗೆ ತನ್ನ ಮುಂದಿನ ಜೀವನದ ಬಗ್ಗೆ ಹುಟ್ಟಿರೋ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕೋ ಅಥವಾ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕೋ ಏನೂ ತಿಳಿಯದಾಗಿತ್ತು. ಕೊನೆಗೆ ಅವಳ ಊರು ಬಂತು ಬಾ..ಯ ಹೇಳಿ ಇಳಿದು ಹೋದಳು. ಅವಳು ಹೋಗೋದನ್ನೇ ನೋಡುತ್ತಿದ್ದ ನನಗೆ ಮನಸಲ್ಲಿ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಅನ್ನೋ ಹಾಡು ನೆನಪಾಗುತ್ತಿತ್ತು.