Wednesday, 11th December 2024

ಇಬ್ಬರು ಹೆಂಡಿರ ಮುದ್ದಿನ ಯುವಕ

ಇಬ್ಬರು ಯುವತಿಯರನ್ನು ಪ್ರೀತಿಸಿದ ಯುವಕನೋರ್ವ, ಇಬ್ಬರನ್ನೂ ಒಂದೇ ಮದುವೆ ಮಂಟಪದಲ್ಲಿ, ಗ್ರಾಮಸ್ಥರ ಸಮ್ಮುಖ ದಲ್ಲಿ ಮದುವೆಯಾಗಿದ್ದಾನೆ. ಆದರೆ, ನಮ್ಮ ದೇಶದಲ್ಲಿ ಇಂತಹ ಮದುವೆಗೆ ಕಾನೂನಿನ ಮಾನ್ಯತೆ ಇಲ್ಲ. ಆದರೆ ಪ್ರೀತಿಗೆ ಅಂಕೆ ಎಲ್ಲಿ!

ಸುರೇಶ ಗುದಗನವರ

ಪ್ರೀತಿ ಎಂಬುದು ಒಂದು ಮಾಯೆ. ಕೆಲವರಿಗೆ ದಕ್ಕುತ್ತದೆ. ಕೆಲವರಿಗೆ ಅದು ಮರೀಚಿಕೆ. ಪ್ರೀತಿ ಹುಟ್ಟುವುದು ಎಲ್ಲಿ, ಹೇಗೆ ಮತ್ತು ಏಕೆ ಎಂಬ ಪ್ರಶ್ನೆಗೆ ಆ ಬ್ರಹ್ಮನಿಂದಲೂ ಸರಿಯಾದ ಉತ್ತರ ಕೊಡಲು ಅಸಾಧ್ಯ! ಎರಡು ಮನಸುಗಳ ನಡುವೆ ಪ್ರೀತಿ ಹುಟ್ಟುವ ವಿಚಾರ ಗೊತ್ತು. ಆದರೆ ಮೂರು ಮನಸುಗಳ ನಡುವೆಯೂ ಪ್ರೀತಿ ಹುಟ್ಟುತ್ತೆ ಎಂಬುದನ್ನು ಮದುವೆ ಮೂಲಕ ಸಾಬೀತು
ಪಡಿಸಿದ್ದಾರೆ ಛತ್ತೀಸಗಢದ ಯುವಕರೊಬ್ಬರು.

ಈ ಅಪರೂಪದ ಮದುವೆ ಛತ್ತೀಸಗಢದ ಬಸ್ತರ್ ಜಿಲ್ಲೆಯ ತಿಕ್ರಲೋಹಂಗ ಗ್ರಾಮದಲ್ಲಿ ಜನವರಿ 3, 2021ರಂದು ಜರುಗಿದೆ. ಇಪ್ಪತ್ನಾಲ್ಕು ವರ್ಷದ ಯುವಕ ಚಂದುಮೌರ್ಯ ಕೃಷಿ ಯೊಂದಿಗೆ ಕಾರ್ಮಿಕನಾಗಿಯೂ ಕೆಲಸ ಮಾಡುತ್ತಿದ್ದನು. ಮೂರು ವರ್ಷಗಳ ಹಿಂದೆ ಒಂದು ದಿನ ತೋಕಪಾಲ್ ಪ್ರದೇಶದಲ್ಲಿ ವಿದ್ಯುತ್ ಕಂಬಗಳನ್ನು ನೆಡುವ ಕೆಲಸಕ್ಕೆ ಹೋಗಿದ್ದನು. ಆ ಸಮಯದಲ್ಲಿ 21 ವರ್ಷದ ಬುಡಕಟ್ಟು ಜನಾಂಗದ ಸುಂದರಿ ಕಶ್ಯಪ್ ಎಂಬ ಯುವತಿಯನ್ನು ಭೇಟಿಯಾಗಿದ್ದನು.

ನಂತರ ಅವರಿಬ್ಬರು ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ಈರ‌್ವರೂ ಪರಸ್ಪರ ಪ್ರೀತಿಸ ತೊಡಗಿದರು. ನಂತರ ಮದುವೆ ಯಾಗಲು ಇಬ್ಬರೂ ಸಹ ನಿರ್ಧರಿಸಿದರು.

ಮೂರನೆಯ ಹೃದಯ
ಹೀಗಿರುವಾಗ ಒಂದು ದಿನ ಚಂದು ಮೌರ್ಯನ ಗ್ರಾಮಕ್ಕೆ 20 ವರ್ಷದ ಹಸೀನಾ ಬಫೇಲ್ ಎಂಬ ಯುವತಿ ಸಂಬಂಧಿಕರ ಮದುವೆಗೆ ಬಂದಿದ್ದಳು. ಅಲ್ಲಿ ಹಸೀನಾಳಿಗೆ ಚಂದುವಿನ ಪರಿಚಯವಾಗಿ, ಪ್ರೀತಿ ಹುಟ್ಟಿದೆ. ಹಸೀನಾ ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಚಂದು ಮೌರ್ಯ ಅವಳ ಪ್ರೀತಿಯನ್ನು ಸಹ ಒಪ್ಪಿಕೊಂಡಿದ್ದಾನೆ. ಈರ‌್ವರೂ ಮೊಬೈಲ್ ನಂಬರ್ ಬದಲಿಸಿಕೊಂಡರು. ಈ ಸಮಯದಲ್ಲಿ ಚಂದು ಮೌರ್ಯ ತನ್ನ ಮೊದಲಿನ ಪ್ರೇಯಸಿ ಸುಂದರಿ ಕಶ್ಯಪ್‌ಳನ್ನು ಹಸೀನಾಳಿಗೆ ಪರಿಚಯಿಸಿದ್ದಾನೆ. ನಂತರ ಮೂವರೂ ಫೋನ್‌ನಲ್ಲಿ ಸಂಪರ್ಕದಲ್ಲಿರುತ್ತಾರೆ.

ಮನೆಗೆ ಬಂದ ಪ್ರೇಯಸಿ
ಒಂದು ದಿನ ಹಸೀನಾ ಚಂದುಮೌರ್ಯನ ಮನೆಗೆ ಬಂದು ನಾನು ನಿನ್ನ ಜತೆಯಲ್ಲಿಯೇ ಇರುತ್ತೇನೆ ಎಂದು ತಿಳಿಸಿ ಅಲ್ಲಿಯೇ
ಇರತೊಡಗಿದಳು. ಸುಂದರಿ ಕಶ್ಯಪ್‌ಳಿಗೂ ಈ ವಿಷಯ ಗೊತ್ತಾಗಿ ಅವಳೂ ಚಂದುನ ಮನೆಗೆ ಬಂದಳು. ಆಗಿನಿಂದ ಮೂವರೂ ಕುಟುಂಬದ ರೀತಿಯಲ್ಲಿ ಒಂದೇ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಚಂದುಮೌರ್ಯನ ಜತೆ ತಂದೆ-ತಾಯಿ ಮತ್ತು ಇಬ್ಬರೂ ಸಹೋದರರು ವಾಸಿಸುತ್ತಿದ್ದರು. ಈಗ ಇಬ್ಬರು ಯುವತಿಯರು ಸೇರ್ಪಡೆಯಾದರು.

ಹಲವು ದಿನಗಳ ಬಳಿಕ ಗ್ರಾಮಸ್ಥರು ಮತ್ತು ಚಂದುವಿನ ಕುಟುಂಬದ ಸದಸ್ಯರು ಅವರ ಲಿವ್ ಇನ್ ರಿಲೇಶನ್‌ಶಿಪ್ ಬಗ್ಗೆ ಪ್ರಶ್ನಿಸ ತೊಡಗಿದರು. ಹೀಗಾಗಿ ಚಂದುಮೌರ್ಯ ಸುಂರಿ ಕಶ್ಯಪ್ ಮತ್ತು ಹಸೀನ ಬಫೇಲ್ ಈರ‌್ವರನ್ನೂ ಮದುವೆಯಾಗಲು ನಿರ್ಧರಿಸಿ ದರು.

ಮದುವೆಗೆ ಹಳ್ಳಿಯವರ ಸಾಥ್ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಒಂದೇ ಮಂಟಪದಡಿ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿದೆ. ಗ್ರಾಮಸ್ಥರೆಲ್ಲರೂ ಪಾಲ್ಗೊಂಡಿದ್ದ ಮದುವೆ ಸುಗಮವಾಗಿ ನಡೆದಿದೆ ಎನ್ನವುದೇ ವಿಶೇಷ. ಆದರೆ ಸುಂದರಿ ಕಶ್ಯಪ್ ಪೋಷಕರು
ಮದುವೆಗೆ ಹಾಜರಾಗಿಲ್ಲ. ‘‘ನಾನು ಅವರಿಬ್ಬರನ್ನೂ ಇಷ್ಟಪಡುತ್ತಿದ್ದೆ ಮತ್ತು ಅವರು ಕೂಡಾ ನನ್ನನ್ನು ಇಷ್ಟಪಡುತ್ತಿದ್ದರು.
ನಾವು ಎಲ್ಲಾ ಗ್ರಾಮಸ್ಥರ ಸಮ್ಮುಖದಲ್ಲಿಯೇ ಒಮ್ಮತದಿಂದ ವಿವಾಹವಾದೆವು. ಆದಾಗ್ಯೂ ಸುಂದರಿಯ ಕುಟುಂಬದ ಸದಸ್ಯರು ನಮ್ಮ ವಿವಾಹ ಕಾರ್ಯಕ್ಕೆ ಬರಲಿಲ್ಲ’’ ಎಂದು ಚಂದುಮೌರ್ಯ ಬೇಸರ ವ್ಯಕ್ತಪಡಿಸಿದ್ದಾರೆ.

‘‘ನನ್ನ ತಂದೆ-ತಾಯಿ ಮುಂದೆ ಒಂದು ದಿನ ಬಂದೇ ಬರುತ್ತಾರೆ’’ ಎಂದು ಸುಂದರಿ ವಿಶ್ವಾಸ ವ್ಯಕ್ತಪಡಿಸಿದಳು. ಚಂದುವನ್ನು ವಿವಾಹವಾಗಿರುವ ಸುಂದರಿ ಮತ್ತು ಹಸೀನಾ ಇಬ್ಬರೂ ಸಂತಸ ವ್ಯಕ್ತಪಡಿಸಿದ್ದು, ಸದಾ ಒಟ್ಟಿಗೆ ಇರುವುದಾಗಿ ಹೇಳಿದ್ದಾರೆ.
ತನ್ನಾಸೆಯಂತೆ ಯುವಕ ತಾನು ಇಷ್ಟಪಟ್ಟಇಬ್ಬರೂ ಯುವತಿಯರನ್ನೂ ಹಿರಿಯರು ಹಾಗೂ ಗೆಳೆಯರ ಸಮ್ಮುಖದಲ್ಲಿ ಒಂದೇ ದಿನ ಮದುವೆಯಾಗಿದ್ದಾನೆ. ಆದರೆ ಹಿಂದೂ ವಿವಾಹ ಕಾಯ್ದೆಯಡಿ ಈ ವಿವಾಹ ಅಪರಾಧ. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ. ಸಧ್ಯಕ್ಕಂತೂ ಇವರ ವಿವಾಹದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ನೂತನ ವಧುವರರು ನೆಮ್ಮದಿಯಿಂದ ಬಾಳಲಿ.