Saturday, 14th December 2024

ಸೊಸೆಗೊಂದು ರೀತಿ, ಮಗಳಿಗೊಂದು ನೀತಿ

ಕೆ.ಲೀಲಾ ಶ್ರೀನಿವಾಸ್

ಯಾಕ್ರೀ ಸುಮಿತ್ರಮ್ಮ ಒಬ್ಬರೇ ಬಂದಿದ್ದೀರಿ? ಸೊಸೆ ಊರಲಿಲ್ಲವಾ?’ ಪದ್ದಕ್ಕನ ನಿತ್ಯ ಪ್ರಶ್ನೆ ಪತ್ರಿಕೆಯ ಮೊದಲ ಪ್ರಶ್ನೆ ಔಟ್ ಆಗಿತ್ತು!

ಅಂದು ವೆಂಕಟರಮಣ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿತ್ತು. ಜನ ಸಾಕಷ್ಟಿ ದ್ದರು, ಪದ್ದಕ್ಕನ ಪ್ರಶ್ನೆಗೆ ಉತ್ತರ ಬರಲಿಲ್ಲ, ಅವರು ಬಿಟ್ಟಾರೆಯೇ? ‘ಯಾಕ್ರೀ, ತುಬಾ ಬೇಸರದಲ್ಲಿದ್ದೀರಾ? ಮನೆಯಲ್ಲಿ ಏನಾ ದರೂ ಕಟಿಪಿಟಿ? ಸೊಸೆ ಸರಿಯಿದ್ದಾಳೆ ತಾನೇ?’

ಸುಮಿತ್ರಮ್ಮನಿಗೆ ಮಾತನಾಡದೇ ವಿಧಿಯೇ ಇಲ್ಲ ‘ಏನು ಹೇಳಲಿ ಪದ್ದಕ್ಕ? ಮಾಟಗಾತಿ. ಮನೇಲಿ ಎಲ್ಲರಿಗೂ ಮೋಡಿ ಮಾಡಿ ದ್ದಾಳೆ, ಮನೆ ಮುಂದೆ ರಂಗೋಲಿಯಿಂದ ಹಿಡಿದು ರಾತ್ರಿ ಉಂಡು ಮಲಗುವವರೆಗೂ ಅವಳು ಹೇಳಿದಂತೇ ನಡೆಯ ಬೇಕಂತೆ! ಗಂಡನಿಗೆ ಗಾರುಡಿ ಮಾಡಿ ಬಿಟ್ಟಿದ್ದಾಳೆ ಸೋಗಲಾಡಿ. ಈ ಮಗರಾಯ ಮದುವೆಗೆ ಮೊದಲು ಅಮ್ಮಾ, ಅಮ್ಮಾ ಎಂದು ನನ್ನ ಹಿಂದಿಂದೇ ಓಡಾಡುತ್ತಿದ್ದವ ಈಗ ಮಾತೇ ಕಡಿಮೆ ಮಾಡಿದ್ದಾನೆ.

ಆಫೀಸಿಗೆ ಹೋಗುವಾಗ ಅವಳ ರೂಮಿನ ಬಾಗಿಲ ಬಳಿ ನಿಂತು ಅದೇನೋ ಕಣ್ಸನ್ನೇ, ಬಾಯಿಸನ್ನೆ ಮಾಡಿ ಹೋಗ್ತಾನೆ. ಸಂಜೆ ಬಂದವನೇ ಕೋಣೆ ಒಳಗೆ ಹೋಗಿ ಬಾಗಿಲು ಹಾಕ್ಕೋತಾನೇ! ಅದೇನು ಗುಸುಗುಸು, ಪಿಸುಪಿಸು! ಶಾಂಪೂ, ಸೆಂಟು, ನೂರೆಂಟು ಕ್ರೀಂಗಳು, ತಿಂಗಳಿಗೊಮ್ಮೆ ಸೀರೆ, ಒಡವೆ, ಡ್ರೆಸ್ಸು, ಯಾವುದಕ್ಕೂ ಮಿತಿಯೇ ಇಲ್ಲ.

ಯಾವಾಗ ನೋಡಿದರೂ ಅಮೆಜಾನ್, ಟಿ.ವಿ. ಮೊಬೈಲ್‌ನಲ್ಲಿಯೇ ಮುಳುಗಿರ್ತಾಳೆ. ಸೊಸೆ ಬಂದರೂ ನಮಗೆ ಅಡುಗೆ ಮನೆ ಬಾಂಧವ್ಯ ತಪ್ಪಿಲ್ಲ ನೋಡಿ. ಗಟವಾಣಿ ಕಣ್ರೀ. ಏನ್ಮಾಡೋದು ಎಲ್ಲಾ ನಾವು ಪಡೆದು ಬಂದದ್ದು.’ ಪದ್ದಕ್ಕ ಉತ್ಸಾಹದಿಂದ
ಕೇಳಿದಳು, ಎಲ್ಲವೂ ಮೆದುಳಿನಲ್ಲಿ ರೆಕಾರ್ಡ್ ಆಗಿತ್ತು, ಅಂದಿನ ವಾರ್ತಾ ಪ್ರಸಾರಕ್ಕೆ ಸಾಕಷ್ಟು ರೋಚಕ ಮಾಹಿತಿ ಸಿಕ್ಕಿತ್ತು.

ವೆಂಕಟೇಶ ಪದ್ಮಾವತಿ ಕಲ್ಯಾಣ ಮುಗಿದು ಮಂಗಳಾರತಿ ಕಣ್ಣಿಗೆ ಒತ್ತಿಕೊಂಡು ಪ್ರಸಾದ ಪಡೆದು ಹೊರಬಂದರು. ಪದ್ದಕ್ಕಳಿಗೆ ಇನ್ನೂ ಮಾಹಿತಿ ಬೇಕಿತ್ತು. ‘ಸುಮಿತ್ರಕ್ಕಾ, ಕಳೆದ ವರ್ಷ ಮದುವೆಯಾದ ಮಗಳು ಹೇಗಿದ್ದಾಳೆ?’ ಸುಮಿತ್ರಮ್ಮನಲ್ಲಿ ಮಿಂಚಿನ
ಸಂಚಾರವಾಯಿತು, ಉತ್ಸಾಹದ ಬುಗ್ಗೆಯಾದರು.

‘ನಮ್ಮ ಪುಣ್ಯ ಕಣ್ರೀ. ದೇವರು ಕರುಣಾಶಾಲಿ. ಅವಳನ್ನು ಒಳ್ಳೇ ಕಡೆ ಸೇರಿಸಿದ, ಕೈಗೊಂದು ಕಾಲಿಗೊಂದು ಆಳು. ಮಾವನಿಗೆ ಈಗಲೇ ಕೈಲಾಗೋಲ್ಲ, ಅವರನ್ನ ನೋಡಿಕೊಳ್ಳೋಕೆ ಒಬ್ಬ, ಅಡುಗೆ ಮಾಡೋಕೆ ಮತ್ತೊಬ್ಬ ಕೆಲಸವರಿದ್ದಾರೆ. ಅತ್ತೆಗೆ ಇವಳನ್ನು ಕಂಡರೆ ಭಯ. ಕೂರು ಎಂದರೆ ಕೂರುತ್ತಾರೆ, ಏಳು ಎಂದರೆ ನಿಲ್ಲುತ್ತಾರೆ. ಅಳಿಯ ನಿಜಕ್ಕೂ ಪುಣ್ಯಕೋಟಿ ಗೋವು. ಇವಳ ಮೇಲೆ ಬೆಟ್ಟದಂಥ ಪ್ರೀತಿ. ಇಬ್ಬರೇ ವಾರದಲ್ಲಿ ನಾಲ್ಕು ದಿನ ಹೊರಗೆ ಊಟ, ಸಿನೆಮಾ, ಮಾಲ್ ಅದೂ ಇದೂಂತ ಸುತ್ತುತ್ತಲೇ ಇರುತ್ತಾರೆ.

ನೀವೇ ಹೇಳಿ ಈಗ ಸುಖಪಡದೇ ಮಗು ಆದ ಮೇಲೆ ಅನುಭವಿಸೋಕೆ ಆಗುತ್ತೆಯೇ? ರಾಣಿ ಥರಾ ಇದ್ದಾಳೆ’. ನಿಜ! ಮಗಳಿಗೊಂದು ನೀತಿ, ಸೊಸೆಗೊಂದು ನೀತಿ, ಅಲ್ಲಿ ಸಲ್ಲದ್ದು, ಇಲ್ಲಿ ಸಲ್ಲುತ್ತದೆ, ಪದ್ದಕ್ಕ ಸಂಜೆಯ ವಾರ್ತಾಪ್ರಸಾರ ಆರಂಭಿಸಲು ಮಹಿಳಾ ಕಟ್ಟೆ ಯೆಡೆಗೆ ಸಾಗಿದರು.