Friday, 13th December 2024

ಸ್ಯಾಂಡಲ್‌ವುಡ್‌ಗೆ ಮರಳಿದ ಧನ್ಯಾ

ಪ್ರಶಾಂತ್‌ ಟಿ.ಆರ್‌

ಮಾತೃಭಾಷೆಯಲ್ಲಿ ನಟಿಸುವುದೇ ನನಗಿಷ್ಟ

ಎಲ್ಲರೂ ‘2020’ಯನ್ನು ಅನ್‌ಲಕ್ಕಿ ಎನ್ನುತ್ತಿದ್ದರೆ. ನಟಿ ಧನ್ಯಾ ಬಾಲಕೃಷ್ಣ ಮಾತ್ರ ‘2020’ ನನಗೆ ಲಕ್ ತಂದಿದೆ ಎನ್ನುತ್ತಿದ್ದಾರೆ.
ಅಯ್ಯೋ ಇದೇನಪ್ಪಾ… ಅಂತ ಅಚ್ಚರಿಗೊಳ್ಳಬೇಡಿ.

ಇದು ಧನ್ಯಾ ನಟಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ. ಕನ್ನಡದ ಚಿತ್ರಗಳಲ್ಲಿ ನಟಿಸಬೇಕು ಎಂಬ ಧನ್ಯಾರ ಆಸೆ ಕೊನೆಗೂ ‘2020’ರಲ್ಲಿ ಫಲಿಸಿದೆ. ಇದನ್ನೇ ಅವರು ನನಗೆ ಬಲು ಲಕ್ಕಿ ಎನ್ನುತ್ತಿದ್ದಾರೆ. ಚಿತ್ರದಲ್ಲಿ ನಟಿಸಲು ಅಗತ್ಯ ತಯಾರಿಯನ್ನು ನಡೆಸು ತ್ತಿದ್ದಾರೆ. ಮರಳಿ ಚಂದನವನಕ್ಕೆ ಬಂದಿರುವ ಧನ್ಯಾ, ‘ವಿ.ಸಿನಿಮಾಸ್’ನೊಂದಿಗೆ ಸಂತಸಹಂಚಿಕೊಂಡಿದ್ದಾರೆ.

ಧನ್ಯಾ ಅಪ್ಪಟ ಕನ್ನಡದ ಹುಡುಗಿ. ಕನ್ನಡ ಎಂದರೆ ಧನ್ಯಾಗೆ ಬಲು ಅಚ್ಚುಮೆಚ್ಚು, ಮಾತೃ ಭಾಷೆಯ ಮೇಲೆ ವ್ಯಾಮೋಹವೂ ಹೆಚ್ಚು. ಆದರೆ ನಟಿಯಾಗಿ ಗುರುತಿ ಸಿಕೊಂಡಿದ್ದು, ಛಾಪು ಮೂಡಿಸಿದ್ದು ಮಾತ್ರ ಪರಭಾಷಾ ಚಿತ್ರರಂಗದಲ್ಲಿ. ಇಂದಿಗೂ ಧನ್ಯಾ ಟಾಲಿವುಡ್, ಕಾಲಿವುಡ್ ‌ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಆದರೂ ಯಾಕೋ ನಮ್ಮ ಚಂದನವನದಲ್ಲಿ ಹೆಚ್ಚು ಅವಕಾಶಗಳೇ ಇವರಿಗೆ ಸಿಗಲಿಲ್ಲ. ಹಾಗಾಗಿ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಬ್ಯುಸಿಯಾದರು. ನಟಿಸಿ ಸೈ ಎನಿಸಿಕೊಂಡರು. ಟಾಲಿವುಡ್‌ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದ ಧನ್ಯಾ, ತೆಲುಗಿನಲ್ಲಿಯೇ ನೆಲೆಯೂರಿದರು.

ಆದರೂ ಕನ್ನಡ ಚಿತ್ರಗಳಲ್ಲಿ ನಟಿಸಬೇಕೆಂಬ ಆಸೆ ಅವರ ಮನದಲ್ಲಿ ಬೇರೂರಿತ್ತು. ಅವರ ಆಸೆಯಂತೆ, ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದಲ್ಲಿ ನಟಿಸುವ ಅವಕಾಶ ಅರಸಿ ಬಂತು. ನಟ ರಿಷಿ ಅವರೊಂದಿಗೆ ಅಭಿ ನಯಿಸಿದರು. ಕೊಂಚ ಕಾಮಿಡಿ ಟಚ್ ಇದ್ದ ಚಿತ್ರದಲ್ಲಿ ಧನ್ಯಾ ರಂಜಿಸಿದರು. ಸಹಜ ಅಭಿನಯದ ಮೂಲಕವೇ ಗಮನ ಸೆಳೆದು, ಮೆಚ್ಚುಗೆ ಪಡೆದರು. ಆದರೆ ಚಿತ್ರ ಅಷ್ಟು ಸದ್ದು ಮಾಡಲೇ ಇಲ್ಲ. ಹಾಗಾಗಿ ಧನ್ಯಾ, ಮತ್ತೆ ತೆಲುಗು ಚಿತ್ರರಂಗದತ್ತ ಮುಖ ಮಾಡಿ ದರು. ಅಲ್ಲಿ ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಅವಕಾಶ ಅರಸಿ ಬಂದರೂ ಕನ್ನಡದ ಚಿತ್ರಗಳಲ್ಲಿ ಅಭಿನಯಿಸಬೇಕೆಂಬ ಬಯಕೆ ಅವರಲ್ಲಿತ್ತು. ಅದರಂತೆ ಈಗ, ‘2020’ಯ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದು, ಕೋಮಲ್ ಜತೆಯಾಗಿ ನಟಿಸು ತ್ತಿದ್ದಾರೆ.

ಗ್ಲಾಮರ್ ಬೆಡಗಿ

ಧನ್ಯಾ ಬಾಲಕೃಷ್ಣ ಅವರಿಗೆ ಎಂತಹದ್ದೇ ಪಾತ್ರಗಳನ್ನೂ ನೀಡಿದರು ಅಚ್ಚುಕಟ್ಟಾಗಿ ನಿಭಾಯಿಸುವ ಚಾಕಚಕ್ಯತೆ ಇದೆ. ಅವರು ಬಣ್ಣಹಚ್ಚಿದ ಬಹುತೇಕ ಚಿತ್ರಗಳಲ್ಲಿ ಗ್ಲಾಮರ್ ಲುಕ್‌ನಲ್ಲಿಯೇ ಗಮನ ಸೆಳೆದಿದ್ದಾರೆ. ಈಗ ‘2020’ಯಲ್ಲಿಯೂ ಗ್ಲಾಮರ್ ಬೆಡಗಿ ಯಾಗಿ ಕಂಗೊಳಿಸಲಿದ್ದಾರೆ. ‘2020’ ಮೂಲಕ ಮೂಲಕ ಕೋಮಲ್ ಮತ್ತೆ ಕಾಮಿಡಿ ಕಮಾಲ್ ಮಾಡಲು ಸಿದ್ಧ ರಾಗಿದ್ದು, ಧನ್ಯಾ ಕೂಡ ಕೋಮಲ್ ಜತೆ ಸೇರಿ ಒಂದಷ್ಟು ಹಾಸ್ಯದ ಹೊನಲನ್ನೇ ಹರಿಸಲಿದ್ದಾರೆ. ಈ ಚಿತ್ರದಲ್ಲಿ ಧನ್ಯಾ ಆಗ ತಾನೇ ಕಾಲೇಜು ಶಿಕ್ಷಣ ಮುಗಿಸಿ, ವರಾನ್ವೇಷಣೆಯಲ್ಲಿರುವ ಹುಡುಗಿ, ಆಗ ನಾಯಕಿಯನ್ನು ಅರಸಿ ನಾಯಕ, ಇವರಿಬ್ಬರ ಕಾಂಬಿನೇಷನ್ ಹೇಗಿರುತ್ತದೆ. ಈ ನಡುವೆ ಈ ಜೋಡಿ ಮಾಡುವ ಎಡ ವಟ್ಟೇನು ಎಂಬ ಕಥೆ ತೆರೆಯಲ್ಲಿ ಸಾಗಲಿದೆ. ಅದು ಕಾಮಿಡಿಯಾಗಿ. ಚಿತ್ರದ ಮಹೂರ್ತ ಈಗಾಗಲೇ ನೆರವೇರಿದ್ದು, ಇನ್ನೇನು ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ‘2020’ ನಟಿಸುತ್ತಿರುವುದು, ಧನ್ಯಾಗೆ ಧನ್ಯತಾಭಾವ ಮೂಡಿಸಿದೆ.

ಆ್ಯಕ್ಷನ್‌ನಲ್ಲಿ ಮಿಂಚುವಾಸೆ

ನಟಿ ಧನ್ಯಾ ಬಾಲಕೃಷ್ಣಗೆ ಸೋಲೋ ನಾಯಕಿಯಾಗಿ ಮಿಂಚುವ ಆಸೆಯಿದೆಯಂತೆ. ಅದರ ಜತೆಗೆ ಕಥೆಯೇ ಮಖ್ಯವಾಗಿರುವ ಚಿತ್ರದಲ್ಲಿ ಬಣ್ಣಹಚ್ಚಬೇಕು ಎಂಬ ಹಂಬಲ ಬಹುದಿನಗಳಿಂದಲೂ ಇದೆ. ಮಾಲಾಶ್ರೀ ಎಂದರೆ ಧನ್ಯಾಗೆ ಅಚ್ಚುಮೆಚ್ಚು, ಹಾಗಾಗಿ ಮಾಲಾಶ್ರೀ ಅವರು ಈ ಹಿಂದೆ ನಿರ್ವಹಿಸಿರುವ ಪಾತ್ರಗಳಲ್ಲಿ ಬಣ್ಣಹಚ್ಚಬೇಕು ಎಂಬ ಆಸೆಯೂ ಇದೆ. ಅದಕ್ಕಾಗಿ ಸೆಂಟಿಮೆಂಟ್ ‌ಗೂ ಸೈ, ಆ್ಯಕ್ಷನ್‌ಗೂ ಸೈ ಎನ್ನುತ್ತಾರೆ ಧನ್ಯಾ.