ಲಲಿತ ಪ್ರಬಂಧ
ಬಿ.ಕೆ.ಮೀನಾಕ್ಷಿ, ಮೈಸೂರು
ಈ ಯುಗವು ಅಲಂಕಾರಗಳ ಕಾಲ, ಮೇಕಪ್ ಮಯ. ಕಾರ್ಯಕ್ರಮಕ್ಕೆ ಭಂಗ ಬಂದರೂ ಪರವಾಗಿಲ್ಲ, ಮೇಕಪ್ ಕೆಡಬಾರದು ಎಂಬುದು ಇಂದಿನ ಒಂದು ಸಾಲಿನ ಮಂತ್ರ. ಬೂದಿಬಡಕರ ಹಾಗೆ ಪೌಡರ್ ಮೆತ್ತಿಕೊಳ್ಳುವ ಗಂಡಸರು, ನಾಟಕದ ಪಾತ್ರಗಳ ಹಾಗೆ ಬಣ್ಣ ಬಳಿದುಕೊಳ್ಳುವ ಹೆಂಗಸರು! ಸಂಬಂಧಗಳಿಗಿಂತ ಮೇಕಪ್, ಆಡಂಬರವೇ ಮುಖ್ಯವಾಗಿ ಹೋಯಿತಲ್ಲ!
ಒಂದು ಶಾಲೆ. ಆ ಶಾಲೆಯಲ್ಲಿ ನಾನು ಕರ್ತವ್ಯನಿರ್ವಹಿಸುತ್ತಿದ್ದೆ. ಅಲ್ಲಿ ನನ್ನ ಸಹ ಶಿಕ್ಷಕಿಯಾಗಿದ್ದ ಒಬ್ಬ ಮಹಿಳೆಯ ಯಜಮಾನರಿಗೆ ಅಪಘಾತವಾಗಿ ಸ್ಥಳದಲ್ಲೇ ಕಾಲು ಮುರಿದುಹೋಯಿತು. ನಮಗೆಲ್ಲ ವಿಷಯ ಗೊತ್ತಾಗಿ ನಾನು ಅವರಿಗೆ ದೂರವಾಣಿ ಮೂಲಕ ಸಮಾಧಾನ ಹೇಳತೊಡಗಿದೆ. ಅವರು, ‘ಇರಲಿ ಬಿಡಿ. ಇನ್ನೇನು ಮಾಡುವುದು? ನಾನು ನಿಮ್ಮನೆಗೆ ಬಂದು ಲೀವ್ ಲೆಟರ್ ಕೊಟ್ಟು ಹೋಗ್ತೇನೆ. ಸ್ವಲ್ಪ ಹೆಡ್‌ಮಾಸ್ಟರ್‌ಗೆ ತಲುಪಿಸಿಬಿಡಿ.’ ಎಂದರು. ‘ಆಗಲಿ ಮೇಡಂ ಕೊಡಿ.’ ಎಂದೆ.
ಅವರ ದಾರಿಯನ್ನೇ ಕಾಯುತ್ತಾ ಕುಳಿತೆ. ಛೇ…..ಪಾಪ! ಶಾಲೆಗೆ ಅದೆಷ್ಟು ನೀಟಾಗಿ ಡ್ರೆಸ್ ಮಾಡಿಕೊಂಡು ಬರುತ್ತಿದ್ದರು. ಈಗ ಹೇಗಿರುತ್ತಾರೋ..ಎಂದುಕೊಂಡು ಅವರನ್ನು ಸಮಾಧಾನ ಮಾಡುವುದು ಹೇಗಪ್ಪಾ ಎಂದು ಆತಂಕದಿಂದ ಕಾಯುತ್ತಾ
ಕುಳಿತೆ. ಬಂದರು, ಹೋಗಿ ಬಾಗಿಲು ತೆಗೆದೆ. ತಬ್ಬಿಬ್ಬುಗೊಳ್ಳುವ ಸರದಿ ನನ್ನದು! ಹೊಸದಾದ ಹಸಿರು ಸೀರೆಯೊಂದನ್ನು ಉಟ್ಟು, ಬಹಳ ನೀಟಾಗಿ ನೆರಿಗೆ ಹಿಡಿದು ಪಿನ್ ಹಾಕಿದ ಸೆರಗು, ತುಟಿಗೆ ತೆಳುವಾಗಿ ಕೆಂಪಿನ ತುಟಿಬಣ್ಣ ಲೇಪಿಸಿ, ಬಿಳಿಕೂದಲೊಂದೂ
ಕಾಣದಂತೆ, ಬಣ್ಣ ಹಾಕಿದ ಕೂದಲಿಗೆ ಹೇರ್ ಬ್ಯಾಂಡ್ ಬಿಗಿದಿದ್ದಾರೆ.
ಕೈಕಾಲಿನ ಉಗುರುಗಳಂತೂ ಒಂದು ದಿನವೂ ಬಣ್ಣ ಕಳೆದುಕೊಳ್ಳುತ್ತಿರಲಿಲ್ಲ, ಅದು ಬೇರೆ ವಿಷಯ, ಆದರೆ ಎಂದಿನಂತೆ ಮೇಕಪ್ ಹಾಕಿಕೊಂಡೇ ಬಂದಿದ್ದರು. ಎಂದಿಗಿಂತ ಒಂಚೂರು ಪೌಡರ್ ಹೆಚ್ಚಾಗಿಯೇ ಇತ್ತೆನ್ನಿ. ನಾನು ಅವರನ್ನು ಸಂತೈಸುವ ನಾಲ್ಕು ಮಾತಾಡಿದೆ. ಆದರೆ ಅವರೇ ನನ್ನನ್ನುಸಮಾಧಾನಿಸುತ್ತಾ, ‘ಏನು ಮಾಡೋದು ಬಿಡಿ. ನೀವೇನೂ ಚಿಂತಿಸಬೇಡಿ. ಈ ಲೀವ್ ಲೆಟರ್ ತಲುಪಿಸಿಬಿಡಿ.’ ಎಂದು ಹೇಳಿ ಪತ್ರ ಕೊಟ್ಟರು. ಡಿಕಾಕ್ಷನ್ ಹಾಕಿ ಕಾಫಿಗೆ ರೆಡಿ ಮಾಡಿದ್ದ ನಾನು, ಕಾಫಿ ಕೊಡುವುದನ್ನೂ ಮರೆತಿದ್ದೆ! ನನಗೆ ‘ಹೀಗೂ ಉಂಟೆ?’ ಅನ್ನಿಸದಿರದೇ? ನಮ್ಮ ಮನೆಯ ರಸ್ತೆಯಲ್ಲೇ ನಾವುಗಳೆಲ್ಲ ಚೆನ್ನಾಗಿ ಬಲ್ಲ ಒಂದು ಹುಡುಗಿ ಯಿದ್ದಳು.
ನೆಂಟರ ಮಗಳೇ. ಅಕ್ಕಂದಿರೆಲ್ಲ ಮದುವೆಯಾಗಿ, ಹೊರಟುಹೋಗಿ ಮನೆಯನ್ನು ನಿರ್ವಹಿಸುತ್ತಿದ್ದ ಹುಡುಗಿ. ಮೂವತ್ತಾದರೂ ಮದುವೆಯಾಗದೆ, ಕಡೆಗೊಬ್ಬ ಗಂಡು ಸಿಕ್ಕಿ, ಮದುವೆ ಸೆಟ್ಟಾಯಿತು. ಮದುವೆಯಾಗಿ ಹೋಗಿಬಿಡುತ್ತೇನೆ, ನಮ್ಮಮ್ಮನನ್ನು ನೋಡಿ ಕೊಳ್ಳುವವರು ಯಾರು? ನಮ್ಮನೆ ಕಡೆ ಸ್ವಲ್ಪ ನೋಡಿಕೊಳ್ಳಿ ಅಕ್ಕ, ಎಂದು ಪ್ರತಿದಿನವೂ ಹೇಳುತ್ತಲೇ ಇದ್ದಳು. ಪಾಪ..ಛೇ! ಎಷ್ಟು ಕಾಳಜಿ ತವರಿನ ಬಗ್ಗೆ ಎಂದು ನಾವು ದಿನವೂ ಮಾತಾಡಿಕೊಳ್ಳುತ್ತಿದ್ದೆವು.
ಮದುವೆಯ ದಿನವೂ ಬಂತು. ಧಾರೆಯ ಸಮಯ. ಛೇ.. ಈ ಹುಡುಗಿಯ ಕಣ್ಣೀರಧಾರೆ ಯನ್ನು ಹೇಗೆ ನೋಡುವುದಪ್ಪಾ ಈಗ? ಎಂದು ನಾವುಗಳು, ಅವಳನ್ನು ಬಲ್ಲವರು ಮಾತಾಡಿಕೊಳ್ಳುತ್ತಿದ್ದೆವು. ಅಯ್ಯೋ ರಾಮ! ಕಣ್ಣೀರು ಹಾಕುವ ಸರದಿ ನಮ್ಮಗಳ ದಾಯಿತೇ ಹೊರತು, ಅವಳ ಕಣ್ಣಿಂದ ಒಂದು ಹನಿ ನೀರು ಧರೆಗಿಳಿಯಲಿಲ್ಲ. ಅಯ್ಯೋ ದೇವ್ರೆ, ಮಾಂಗಲ್ಯ ಕಟ್ಟಿಸಿ ಕೊಳ್ಳುತ್ತಾಳೋ ಇಲ್ಲವೋ ಎಂದುಕೊಂಡಿದ್ದರೆ, ವಾರೆಗಣ್ಣಿಂದ ಗಂಡನನ್ನು ನೋಡುತ್ತಾ, ಕೊರಳೊಡ್ಡುವುದೇ? ನಂತರ ‘ನಿನಗೆ ಅಳು ಬರಲಿಲ್ವೇನೆ ಧಾರೆಯಲ್ಲಿ?’ ಎಂದದ್ದಕ್ಕೆ ಅವಳ ಉತ್ತರ ಇಷ್ಟೇ! ‘ಎಷ್ಟು ಅಳು ಬಂತು ಗೊತ್ತಾ ಅಕ್ಕಾ? ಆದರೆ ಮೇಕಪ್ ಹೋಗುತ್ತಲ್ಲ ಎಂದು ಹಾಗೇ ತಡೆದುಕೊಂಡೆ.’ ಈಗ ಹೇಳಿ, ‘ಹೀಗೂ ಉಂಟೆ?’ ಅಂತ ಅಂದುಕೊಳ್ಳಬೇಕೋ ಬೇಡವೋ?
ಕಾಫಿ ಪ್ಲಾಂಟರ್ ಮನೆಯಲ್ಲಿ
ನಾವು ಶಿಕ್ಷಕರೆಲ್ಲ ಸೇರಿ, ಕಾಫಿಪ್ಲಾಂಟರೊಬ್ಬರ ಮನೆಯ ಮದುವೆಗೆ ಹೋಗಿದ್ದೆವು. ಮಲೆನಾಡಿನ ಹೆಣ್ಣುಮಕ್ಕಳನ್ನು ಕೇಳಬೇಕೆ? ಒಳ್ಳೆ ಕೆಂದಾವರೆ ತರಹ ಅರಳಿ ಮನಮೋಹಕ ವಾಗಿರುತ್ತಾರೆ. ಹಳ್ಳಿಯ ಕೆಲಸದ ಹೆಂಗಸರು ಸಹ ಬಹಳ ನಯ ನಾಜೂಕಿನಿಂದ ಕೂಡಿರುತ್ತಾರೆ. ನಾವು ಶಿಕ್ಷಕರುಗಳು ಮದುವೆಗೆ ಹೋಗಬೇಕೆಂದು ಬೆಳಗ್ಗೆ ಮನೆ ಯಿಂದಲೇ ಸೀರೆ ಒಡವೆಗಳನ್ನು ತಂದುಕೊಂಡು, ಸಂಜೆ ಶಾಲೆ ಬೆಲ್ ಆಗುವ ಮೊದಲೇ ಮುಖ ತೊಳೆದು ಸ್ವಲ್ಪ ಪೌಡರ್ರು, ಸ್ನೋ ಗಳನ್ನು ಹೆಚ್ಚೆಚ್ಚಾಗೇ ಹಚ್ಚಿಕೊಂಡು ತಯಾರಾದೆವು.
ಸಾಮಾನ್ಯ ನಾವೆಲ್ಲ ಭದ್ರಾವತಿಗೆ ಹತ್ತಿರದವರೆ! ಕೋಲಾರಕ್ಕೆ ಹತ್ತಿರದವರು ಒಬ್ಬರೇ! ಜೊತೆಗವರು ಮಲೆನಾಡಿನವರೇ. ಮಲೆನಾಡಿನ ರೀತಿ ರಿವಾಜು ಬಲ್ಲವರು. ರೆಡಿಯಾದರು. ಬಹಳ ಸಿಂಪಲ್ಲಾಗಿದ್ದರು. ಇದೇನು ಮದುವೆಗೆ ಹೀಗೆ ರೆಡಿಯಾಗಿದ್ದಾರೆ? ಸ್ವಲ್ಪವಾದ್ರೂ ಆಡಂಬರ ಬೇಡ್ವೇ? ಎಂದು ಕೆಲವರು ಮಾತಾಡಿಕೊಂಡರು. ಮದುವೆಗೆ ಹೊರಟವರು, ಪೋನಿಟೈಲು, ಕೂದಲನ್ನು ಚೆನ್ನಾಗಿ ಬಾಚಿ ಬಿಗಿಯಾಗಿ ಮೇಲಿನಿಂದ ಹೆಣೆದು, ಬೆಳಗ್ಗೆಯೇ ಮದುವೆಗೆ ಮುಡಿಯಲು ಜೋಪಾನವಾಗಿ ತಂದಿದ್ದ ಹೂವನ್ನ ಜಡೆಯ ಎರಡೂ ಕಡೆ ಒಂದೊಂದು ಎಳೆ ಇಳಿ ಬೀಳುವಂತೆ ಮುಡಿದುಕೊಂಡಿದ್ದರು.
ದೊಡ್ಡದಾದ ಕುಂಕುಮ, ಜೊತೆಗೆ ಕೂದಲಿನ ಗುಂಗುರುಗಳೂ ನೇತಾಡುತ್ತಿದ್ದವು. ಕೆಲವರು ಮಕ್ಕಳ ಮನೆಯಿಂದ ಗುಲಾಬಿ ಹೂವು ತರಿಸಿ ಕಿವಿಯ ಹಿಂಬದಿಗೆ ದೊಡ್ಡದೊಡ್ಡದನ್ನು ಆರಿಸಿ ಮುಡಿದುಕೊಂಡರು. ಸರಿ, ಹೊರಟಿತು ನಮ್ಮ ಮೆರವಣಿಗೆ. ಮದುವೆಮನೆಯವರು ಜೀಪು ಕಳಿಸಿದ್ದರು.
ನನಗೆ ಇವರನ್ನೆಲ್ಲ ನೋಡಿ ಅಂಜಿಕೆಯಾಗತೊಡಗಿತು. ಬರುತ್ತಲೇ ಒಂದು ಸಿಂಪಲ್ ಸೀರೆ ಉಟ್ಟುಬಂದಿದ್ದ ನಾನು, ತೀರಾ ಕಳಪೆಯಾಗಿದ್ದೆೆ. ಆರ್ಟ್ ಸಿಲ್ಕ್ ಸೀರೆ, ಸಾದಾ ಪಿಂಕ್ ಜೊತೆಗೆ ಬಾರ‌್ಡರಿನ ಬಣ್ಣದ ನೀಲಿ ರವಿಕೆ. ಜೊತೆಗೆ ಮುಖಕ್ಕೆ ಹಚ್ಚಲು ಏನೂ ತಂದಿರಲಿಲ್ಲ. ಅಯ್ಯೋ ಅಲಂಕಾರವೇ ಮುಖ್ಯವೇ? ಪಾಠ ಮಾಡುವುದು ತಾನೇ ಮುಖ್ಯ ಎಂದು ಆತ್ಮವಿಶ್ವಾಸದಿಂದ
ಅವರೊಟ್ಟಿಗೆ ನಡೆದೆ.
ಮದುವೆ ಮನೆಗೆ ಬಂದೆವು. ದೊಡ್ಡ ಬಂಗಲೆ. ಹೆಣ್ಣು ಮಕ್ಕಳೆಲ್ಲ ಸಿಂಪಲ್ಲಾಗಿ ಒಂದೇ ಜರಿ ಯಂಚಿನ ಕಂಚಿ ಸೀರೆ, ಅದರದೇ ರವಿಕೆ, ತೆಳ್ಳನೆಯ ಪೌಡರ್ ಲೇಪನ, ಸಾದಾನಗು, ಇಷ್ಟೇ ಅವರ ಆಭರಣ ಮತ್ತು ಅವರು ಅಷ್ಟರಿಂದಲೇ ಶೋಭಿಸುತ್ತಿದ್ದರು. ನಾವೆಲ್ಲರೂ ಒಂದು ಕಡೆ ಸಾಲಾಗಿ ನಿಂತುಕೊಂಡೆವು. ನನಗೆ ಈಗಲೂ ನಗೆ ಉಕ್ಕುಕ್ಕಿ ಬರುತ್ತದೆ. ಸಾಮಾನ್ಯ ಇಬ್ಬರನ್ನು ಬಿಟ್ಟು ಎಲ್ಲರೂ ದೊಡ್ಡ ಜರಿಗಳ ರೇಶಿಮೆ ಸೀರೆಗಳು, ಕೆಂಪು, ಹಳದಿ, ಹಸಿರುಗಳ ಗಾಢವಾದ ಬಣ್ಣಗಳ ಸೀರೆಗಳಿಂದ ಎಲ್ಲರೂ ‘ಎದ್ದೆದ್ದು’ ಕಾಣುತ್ತಿದ್ದರು.
ಮೊದಲೇ ಶ್ಯಾಮಲ ವರ್ಣದ ಮಹಿಳೆಯರ ಮೈಮೇಲೆ ಆ ಸೀರೆಗಳಿಂದ ಧಗೆ ಉಕ್ಕುಕ್ಕಿ ಹರಿಯತೊಡಗಿ, ಹಚ್ಚಿದ್ದ ಪೌಡರ್, ಒಂದು ಕಡೆ ಉಳಿದುಕೊಂಡರೆ ಒಂದು ಕಡೆ ಹೊರಟುಹೋಗಿ, ನಾವೆಲ್ಲ ಇಲ್ಲಿ ವಿಚಿತ್ರದವರಾಗಿ ಕಾಣಿಸುತ್ತಿದ್ದೇವಾ ಎಂದು
ಭಾಸವಾಗತೊಡಗಿತು.
ಸರಿ, ಮಾರನೇ ದಿನ ಶಾಲೆಯಲ್ಲಿ ಇದರ ಬಗ್ಗೆ ಚರ್ಚೆ, ಅವರೇಕೆ ಆ ಸೀರೆ ಉಟ್ಟಿದ್ದರು, ಇವರೇಕೆ ಈ ಸೀರೆ ಉಟ್ಟರು, ಅವರಿಗೆ ಅದು ಒಪ್ಪುತ್ತಿರಲಿಲ್ಲ, ಇದ್ದದ್ದರಲ್ಲಿ, ನಾನೇ ಚೆನ್ನಾಗಿ ಕಾಣಿಸುತ್ತದ್ದೆ, ಎಂದು ಎಲ್ಲರೂ ಎಲ್ಲರ ಬೆನ್ನ ಹಿಂದೆ ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುತ್ತಿದ್ದರು. ಆದರೆ ಎಲ್ಲರೂ ಒಂದೇ ತಕ್ಕಡಿಯಲ್ಲೇ ತೂಗುತ್ತಿದ್ದವರು. ನನಗೆ ಇವರನ್ನೆಲ್ಲ ಗಮನಿಸುತ್ತಾ ಒಳಗೇ ನಗು. ಹೇಳಿ ಮತ್ತೆ ನನಗೆ ಅನ್ನಿಸದಿದ್ದೀತೇ…..‘ಹೀಗೂ ಉಂಟೇ?’ ಅಂತ.
ಕುದುರೆಮುಖದಲ್ಲಿ ಕವಿಗೋಷ್ಠಿ
ಒಮ್ಮೆ ಕುದುರೆಮುಖಕ್ಕೆ ಕವಿಗೋಷ್ಠಿಗೆ ಹೋಗಿದ್ದೆವು. ಚಿಕ್ಕಮಗಳೂರಿನಿಂದ ಬಸ್ ಮಾಡಿ ಕೊಂಡು ಹೋಗಿದ್ದೆವು. ಚೆನ್ನಾಗಿತ್ತು. ಒಬ್ಬರಿಗೊಬ್ಬರು ಪರಿಚಯವಾದೆವು, ಪರಿಚಯವಿದ್ದವರು ಆತ್ಮೀಯರಾದರು. ಆತ್ಮೀಯ ರಾದವರು ಫೋನ್ ನಂಬರ್, ಮನೆಯ ವಿಳಾಸ ಬದಲಿಸಿಕೊಂಡರು. ಹೀಗೆ ನನಗೆ ಪರಿಚಯವಿದ್ದ ಹಿರಿಯ ಕವಿಯೊಬ್ಬರು, ಕುಶಲೋಪರಿ ವಿಚಾರಿಸಿದರು.
ನಾನೂ ಮಾತನಾಡಿದೆ. ಅವರ ಬಗ್ಗೆಯೂ ವಿಚಾರಿಸಿದೆ. ಹಾಗೇ ಅವರ ಮುಖ ನೋಡುತ್ತಾ ಕುತೂಹಲಗೊಂಡೆ. ಒಂದು ಮೀಸೆ
ಉದ್ದವಿದೆ. ಇನ್ನೊಂದು ತುಂಬಾ ಚಿಕ್ಕದಿದೆ. ಅಷ್ಟರಲ್ಲಿ ಎಲ್ಲರೂ ತಮ್ಮ ತಮ್ಮ ಆಸನಗಳಲ್ಲಿ ಆಸೀನರಾಗಲು ಮನವಿ ಮಾಡ ಲಾಗಿ ನಾನು ಬಂದು ನನ್ನ ಸೀಟಿನಲ್ಲಿ ಕುಳಿತೆ. ನನ್ನ ಮಗಳಿಗೆ ಹೇಳತೊಡಗಿದೆ, ‘ನೋಡೇ….ಪಾಪ ಬೆಳಗ್ಗೆ ಹೊರಡೋ ಅರ್ಜೆಂಟಿ ನಲ್ಲಿ ಹಿರಿಯ ಕವಿ ಶ್ರೀ…..ಯವರು ಒಂದು ಕಡೆ ಮೀಸೆ ಕತ್ತರಿಸಿ, ಇನ್ನೊಂದನ್ನು ಮರೆತು ಬಿಟ್ಟಿದ್ದಾರೆ, ಎಷ್ಟು ವಿಕಾರವಾಗಿ ದ್ದಾರೆ ಗೊತ್ತಾ?’ ಎಂದೆ.
ಮಧ್ಯಾಹ್ನದ ಊಟದ ವಿರಾಮದಲ್ಲಿ ಇವಳೂ ಹೋಗಿ ಮಾತನಾಡಿಸಿ ಬಂದಳು. ಅವಳಿಗೆ ನಗೆ ತಡೆಯಲಾಗುತ್ತಲೇ ಇಲ್ಲ. ಯಾಕೆ ಎಂದದ್ದಕ್ಕೆ, ‘ಅಮ್ಮಾ.. ಅವರು ಡೈ ಮಾಡುವಾಗ ಒಂದುಕಡೆಯಲ್ಲಿ ಬಣ್ಣ ಇಳಿದು ಬಿಟ್ಟಿದೆ. ಪೂರ್ತಿ ಗದ್ದದವರೆಗೆ ಇಳಿದು ಅದು
ವಿಕಾರವಾಗಿ ಕಾಣ್ತಿದೆ. ಬೆಳಗ್ಗೆ ಹೊರಟಾಗ ಕತ್ತಲೆಯಲ್ವಾ? ಸರಿಯಾಗಿ ನೋಡಿಕೊಂಡಿಲ್ವೇನೋ?’ ಎಂದಳು. ಹೌದು! ಬಲಗಡೆ, ಸರಿಯಾಗಿ ಮೀಸೆ, ತುಟಿಗಳ ನೇರಕ್ಕಿದ್ದು, ಎಡಗಡೆಗೆ ಇಳಿಬಿದ್ದ ಬಣ್ಣವನ್ನು ನಾನು ಚೀನಿಯರ ಮೀಸೆಯೆಂದು ತಪ್ಪಾಗಿ
ಭ್ರಮಿಸಿದ್ದೆ!
ಹೆಂಗಸರ ನಡುವೆ ತೂರಿಬಂದ ಈ ಪುರುಷರೊಬ್ಬರ ಕುರಿತಾದ ಜೋಕ್ ಬಗ್ಗೆ ಕ್ಷಮೆಯಿರಲಿ. ಮೇಕಪ್ಪಿನ ಇಂತಹ ಸಮಾಚಾರಗಳು ಸಾಕಷ್ಟಿವೆ. ಆದ್ರೆ ಏನು ಮಾಡುವುದು? ಬರೆಯೋಣ ಎಂದು ಕುಳಿತಾಗ ಮರವೆಯಾಗಿ ಮೂಲೆ ಸೇರಿಬಿಡುತ್ತವೆ. ಅಲಂಕಾರಪ್ರಿಯ ಹೆಣ್ಣುಮಕ್ಕಳು ಮದುವೆಮನೆಗೆ ಬರುವುದನ್ನು ನೋಡಿದ್ದೀರಾ? ಪರಮಾತ್ಮ! ಆ ಸಿಕ್ಕಪಟ್ಟೆ ಜರಿಯಿರುವ ದೊಡ್ಡಸೀರೆ, ನಕ್ಕಿ ಗಳಿಂದಲಂಕರಿಸಿದ ರವಿಕೆಯ ತೋಳು, ಜಾಕೀಟಿನ ಹಿಂಬದಿಗೆ ಅಲಂಕಾರಿಕ ಕುಸುರಿಕೆಲಸ, ಸೀರೆ ಹತ್ತು ಸಾವಿರದ್ದಾದರೆ, ರವಿಕೆ ಹೊಲಿಸಲು ಐದು ಸಾವಿರ ಖರ್ಚು ಮಾಡುವುದು ಈಗಿನ ಟ್ರೆಂಡ್!
ಮದುವೆಯೆಂದರೆ, ಹೋಗಿ ಅಕ್ಷತೆ ಹಾಕಿ ಆಶೀರ್ವದಿಸುವುದಲ್ಲ, ಅಲಂಕಾರ ಮಾಡಿಕೊಂಡು, ಎಲ್ಲಿ ಅಲಂಕಾರ ಹಾಳಾಗಿ ಬಿಡುವುದೋ ಎಂದು ಆತಂಕದಿಂದ ಮದುವೆಮನೆಯಲ್ಲಿ ಎಚ್ಚರಿಕೆಯಿಂದ ಓಡಾಡುವುದು ! ಬೇಲೂರಿನ ಶಿಲಾಬಾಲಿಕೆಯರ ಕಾಲದಿಂದಲೂ ಸ್ತ್ರೀ ಅಲಂಕಾರಪ್ರಿಯಳೇ! ಇಲ್ಲದಿದ್ದರೆ ಶಿಲಾಬಾಲಿಕೆಯರೇಕೆ ಅಷ್ಟು ಅಲಂಕರಿಸಿಕೊಳ್ಳುತ್ತಿದ್ದರು? ಕಾಡುಜನರ ಕೊರಳ ಸರಗಳಿಂದಲೂ, ಕೈಗಳ ನಾನಾವಿಧದ ಬಳೆಗಳಿಂದಲೂ, ಕೊರಳಿಗೆ ಧರಿಸಿದ ಸುತ್ತಿನ ಮುರಿಗೆಗಳಿಂದಲೂ, ಲಂಬಾಣಿ ಯರ ಕುಸುರಿಯ ಲಂಗಗಳಿಂದಲೂ ಹೀಗೆ ಎಲ್ಲ ಬಗೆಯ ಹೆಂಗಸರೂ ಅಲಂಕಾರಪ್ರಿಯರೇ!
ನಾವೆಲ್ಲ ಬಿಸಿಲಲ್ಲಿ ಓಡಾಡಿದರೆ ಮುಖ ಕಪ್ಪಿಟ್ಟು, ಬೆವರಿಳಿಯುತ್ತಿದ್ದರೆ, ಕೆಲವರು ಬೆಳಗಿನಿಂದ ಸಂಜೆಯವರೆಗೂ ಈಗ ಮನೆ ಯಿಂದ ಹೊರಬಂದರೇನೋ ಎನ್ನುವಂತೆ ಕಂಗೊಳಿಸುತ್ತಿರುತ್ತಾರೆ. ಅದು ಹೇಗಪ್ಪಾ ಇವರ ಮೇಕಪ್ಪು? ನನಗಂತೂ ತಿಳಿಯದು! ‘ಊರು ಉಪಕಾರ ಬಲ್ಲದೆ? ಹೆಣ ಶೃಂಗಾರ ಬಲ್ಲದೆ?’ ಎಂಬ ಗಾದೆ ಮಾತೊಂದಿದೆ. ಮೊನ್ನೆ ಫೇಸ್ ಬುಕ್‌ನಲ್ಲಿ ‘ಭೈರಪ್ಪನವರು ಒಂದು ಕಾದಂಬರಿಯಲ್ಲಿ ಈ ಗಾದೆ ಬಳಸಿದ್ದಾರೆ, ನೀವು ಕೇಳಿದ್ದೀರಾ?’ ಎಂದು ಭೈರಪ್ಪನವರ ಅಭಿಮಾನಿಯೊಬ್ಬರು ಬರೆದು ಕೊಂಡಿದ್ದರು.
ಅದಕ್ಕೆ ನಾನೂ ಕೂಡ ಮೆಸೇಜ್ ಮಾಡಿದ್ದೆ ಅನ್ನಿ. ಇದೇಕಪ್ಪಾ ಈ ವಿಷಯ ಬಂತೆಂದು ಕೇಳುತ್ತಿದ್ದೀರಾ? ಹೌದು. ಇದನ್ನು ನಾನು ಈಗ ಹೇಳದಿದ್ದರೆ ವಿಧಿಯೇ ಇಲ್ಲ. ಊರು ಉಪಕಾರ ಅರಿಯುತ್ತೋ ಬಿಡುತ್ತೋ ಅದು ಒತ್ತಟ್ಟಿಗಿರಲಿ. ಆದರೆ ಹೆಣ ಶೃಂಗಾರ
ಅರಿಯುತ್ತದೆ ಸ್ವಾಮಿ! ನಾವು ಒಂದು ಸಾವಿಗೆ ಹೋದೆವು.
ದುರದೃಷ್ಟವಶಾತ್, ಬಹುಅಂಗಾಂಗಳ ವೈಫಲ್ಯದಿಂದ ಆ ಹೆಣ್ಣುಮಗಳು ಮರಣ ಹೊಂದಿದ್ದರು. ಬಸ್ಸಿನಲ್ಲಿ ಹೋಗುತ್ತಾ ನಾವು ಪಾಪ! ಎಷ್ಟು ವೇದನೆ ಅನುಭವಿಸಿದರೋ…..ದೇವರಿಗೆ ಈಗಾದರೂ ಕರುಣೆ ಬಂತಲ್ಲ, ಎರಡು ವರ್ಷಗಳಿಂದ ಅವರನ್ನು ನರಳಿಸಿಬಿಟ್ಟ, ತನ್ನ ಪಾದಕ್ಕೆ ಸೇರಿಸಿಕೊಳ್ಳದೆ.. ಹೀಗೆ ಮಾತಾಡಿಕೊಂಡು ಇದೇ ಯೋಚನೆಯಲ್ಲೇ ಅವರ ಮನೆಗೆ ಹೋದೆವು. ಮುತ್ತೈದೆ ಸಾವು. ನಾವು ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದೆವು. ಅವರು ನಮಗೆ ಅರಿಷಿಣ ಕುಂಕುಮ ಹಚ್ಚಲಾಗಲೀ, ಹೂವು
ಹಾಕಲಾಗಲೀ ಬಿಡಲಿಲ್ಲ. ಪದ್ಧತಿಯಂತೆ ತೆಗೆದುಕೊಂಡು ಬಂದಿದ್ದೆವಾದರೂ, ಅದರ ರೂಢಿಗೆ ಅಷ್ಟೊಂದು ಮಹತ್ವ ಕೊಟ್ಟವ ರಲ್ಲ. ಹಚ್ಚಲು ಬಿಡಲಿಲ್ಲವಲ್ಲ, ಓ..ಪರವಾಗಿಲ್ಲ, ಇವರೂ ಹೊಸಮಾದರಿಯಲ್ಲಿ ಯೋಚಿಸುತ್ತಿದ್ದಾರೆ ಎಂದು ಕೊಂಡೆವು.
ನಾವು ಹೋಗಿ ಒಂದೆಡೆ ಕುಳಿತುಕೊಂಡೆವು. ನಮ್ಮ ಬಳಿಗೆ ಬಂದ ಬಂಧುವೊಬ್ಬರು, ನಮಗೂ ಹಚ್ಚಲು ಬಿಡಲಿಲ್ಲ. ಮೇಕಪ್ ಮಾಡಿರೋದು ಹೊರಟು ಹೋಗುತ್ತೆ, ಬೇಡ. ಎಂದರು. ನಂತರ ಗಮನಿಸಿದರೆ, ಹೌದು! ನೀಟಾಗಿ ಐಬ್ರೋ ಲೈನ್ ಇದೆ. ಫೇಶಿ ಯಲ್ ಮಾಡಿದ್ದಾರೆ. ಅಂದವಾದ ಸ್ಟಿಕ್ಕರ್ ಇಟ್ಟಿದ್ದಾರೆ. ನಮಗೆ ನಗಬೇಕೋ, ಅಳಬೇಕೋ ತಿಳಿಯಲಿಲ್ಲ. ‘ಹೀಗೂ ಉಂಟೆ?’ ಅನ್ನಿಸಬೇಕೋ ಬೇಡವೋ ನೀವೇ ಹೇಳಿ.
ಇವರು ಬೂದಿಬಡಕರಾ!
ಬೂದಿಬಡುಕರ ಹಾಗೆ ಪೌಡರ್ ಬಳಿದುಕೊಳ್ಳುವ ಗಂಡಸರನ್ನು ನೋಡಿದ್ದೇನೆ. ಕಿವಿ ಕಪ್ಪಗಿದ್ದು ಮುಖ ಮಾತ್ರ ಗೆರೆ ಎಳೆದಂತೆ ಬೆಳ್ಳಗಿರುವ ಹೆಂಗಸರನ್ನು ನೋಡಿದ್ದೇನೆ. ಮುಖದ ತುಂಬಾ ಪೌಡರ್ ಬಳಿದುಕೊಂಡು, ಬೆವರಿಗೆ ಮುಖ ಒರೆಸಿಕೊಂಡು, ಅರೆಬರೆ ಬೆಳ್ಳಗೆ- ಕಪ್ಪಗಿರುವ ಮುಖಗಳನ್ನು ನೋಡಿದ್ದೇನೆ.
ಅಬ್ಬಬ್ಬಾ! ಎಂತೆಂತಹ ಮೇ‘ಕಪ್ಪಿನ’ ಮುಖಗಳು! ಕೆಲವು ನಗು ತರಿಸಿದರೆ, ಕೆಲವು ಇರಿಸುಮುರಿಸು ಉಂಟುಮಾಡುತ್ತವೆ.
ಇನ್ನೂ ಕೆಲವು, ‘ಅಯ್ಯೋ, ಇವರಿಗ್ಯಾಕಪ್ಪಾ ಬೇಕಿತ್ತು ಮೇಕಪ್ಪು!’ ಎನಿಸದಿರದು. ನಾನು ಚಿಕ್ಕವಳಿದ್ದಾಗ, ಬಾಣಾವರದಿಂದ ಅರಸೀಕೆರೆಗೆ, ಅರಸೀಕೆರೆಯಿಂದ ತಿಪಟೂರಿಗೆ ಬಸ್ಸು ಹತ್ತಿ, ಅಲ್ಲಿಂದ ಅದೆಷ್ಟೋ ಮೈಲಿ ನಡೆದು, ಹಿಂದಿನ ದಿನವೇ ಹೆಡಗರ ಹಳ್ಳಿಯ ನಮ್ಮ ಚಿಕ್ಕಪ್ಪನ ಮನೆ ಸೇರಿ, ಅವರ ಮಗಳ ಮದುವೆಗೆ, ನಮ್ಮಮ್ಮ ಹಳೆಯದಾದ ರೇಶಿಮೆ ಸೀರೆಯುಟ್ಟು, ಬಿಗಿದು ಕಟ್ಟಿದ ತುರುಬಿಗೆ ಮೊಳಮಲ್ಲಿಗೆ ಮುಡಿದು, ಕಾಲು ಕೈ ಕೆನ್ನೆಗಳಿಗೆ ಅರಿಷಿಣ ತೊಡೆದು, ಕಾಸಿನಗಲ ಕುಂಕುಮ ಹಚ್ಚಿ, ಮದುವೆ ಮನೆಯಲ್ಲಿ ಅಮ್ಮ ಓಡಾಡಿದ ನೆನಪು ನನಗಿನ್ನೂ ಹಸಿರಾಗಿದೆ.
ನಾವೆಲ್ಲ ನಮ್ಮ ಚಿಕ್ಕಪ್ಪ ಹೊಲಿಸಿದ ಚೀಟಿಬಟ್ಟೆಯ ಲಂಗ ಜಾಕೀಟು ತೊಟ್ಟುಕೊಂಡು ಸಿರಿಯಿಂದ ಓಡಾಡಿದ್ದು ಹಸಿಯಾಗಿದೆ! ಸಂಭ್ರಮವೋ ಸಂಭ್ರಮ. ಮದುವೆಮನೆಯಿಂದ ಯಾರೂ ದಡಬಡಿಸುತ್ತಾ ಎದ್ದು ಹೋಗಿರಲಿಲ್ಲ, ಹೊರಡುವ ಆತುರವಿರಲಿಲ್ಲ. ಈಗ ನೋಡಿ, ರೆಸೆಪ್ಷನ್‌ಗೆ ನಿಲ್ಲಿಸಿದ್ದೇ ತಡ, ಮೈಲುದ್ದ ಕ್ಯೂನಲ್ಲಿ ಅರ್ಧಜನ, ಮಿಕ್ಕವರು ಊಟದ ಹಾಲ್ನಲ್ಲಿ.
ಭಗವಂತ! ಸಂಬಂಧಗಳು ಹೀಗಾದವಲ್ಲಾ ಎಂದು ಪರಿತಾಪವಾಗುತ್ತದೆ. ಹೀಗೇ ಸಾಕಷ್ಟು ಮುಖಗಳು ಕಣ್ಣಮುಂದೆ ಪ್ರತ್ಯಕ್ಷ ವಾಗುತ್ತವೆ. ನಿಮಗೂ ನೆನಪಿಗೆ ಬಂದಿರಬಹುದೇನೋ ಅಲ್ವಾ?