Friday, 13th December 2024

ಹಾರುವ ಕಾರ್‌ ಯಾವಾಗ ಸಾರ್‌ !

ವಸಂತ ಗ ಭಟ್‌

ಟೆಕ್ ಫ್ಯೂಚರ್‌

ಹಾರುವ ಕಾರುಗಳಿದ್ದರೆ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಿಕೊಂಡು ಸಲೀಸಾಗಿ ಚಲಿಸುವ ಅವಕಾಶ ದೊರೆಯುತ್ತ ದಲ್ಲವೆ! ಹಕ್ಕಿ ಹಾರುವ ರೀತಿ ನೇರವಾಗಿ ತಲುಪುವುದರಿಂದ ಸಮಯದ ಉಳಿತಾಯವೂ ಸಾಧ್ಯ. ಹಾರುವ ಕಾರು ವಲಯ ದಲ್ಲಿ ಸಂಶೋಧನೆ ಯಾವ ಹಂತದಲ್ಲಿದೆ? 

ವಾಹನ ದಟ್ಟಣೆಯಲ್ಲಿ ಪ್ರಯಾಣಿಸುವಾಗ ಹೆಚ್ಚಿನವರು ಒಮ್ಮೆಯಾದರೂ ಹಾರುವ ಕಾರುಗಳನ್ನು ಕಲ್ಪಿಸಿಕೊಂಡಿರುತ್ತೀರಿ. ಹಾಲಿವುಡ್ ಚಲನಚಿತ್ರಗಳಂತೂ ಹಾರುವ ಕಾರುಗಳನ್ನು ಪ್ರೆಕ್ಷಕನಿಗೆ ತೋರಿಸುತ್ತಾ ಹಲವು ದಶಕಗಳೇ ಕಳೆದಿವೆ. ಸುದ್ದಿ  ವಾಹಿನಿ ಗಳಲ್ಲಿ ಹಾರುವ ಕಾರಿನ ಪರೀಕ್ಷಾ ಹಾರಾಟದ ಸುದ್ದಿಯನ್ನು ನೋಡಿರುತ್ತೀರಿ.

ಆದರೆ ಇಲ್ಲಿಯವರೆಗೂ ಹಾರುವ ಕಾರುಗಳು ವ್ಯವಹಾರಿಕ ಮಾರಾಟಕ್ಕೆ ಲಭ್ಯ ವಿಲ್ಲ. ಸಮೀಕ್ಷೆಗಳ ಪ್ರಕಾರ 2040 ರ ವೇಳೆಗೆ ಹಾರುವ ಕಾರುಗಳು ಮಾರುಕಟ್ಟೆ ಗೆ ಬಂದರೆ ಅದರ ವ್ಯವಹಾರ ಸುಮಾರು 1.4 ಟ್ರಿಲಿಯನ್ ಡಾಲರ್‌ಗಿಂತಲೂ ಅಧಿಕವಾಗಿರಲಿದೆ. ಇತಿಹಾಸ ಹಾರುವ ಕಾರುಗಳಿಗೆ ಸುಮಾರು ಒಂದು ಶತಮಾನದ ಇತಿಹಾಸವಿದೆ. 1917 ರಲ್ಲೇ ಅಮೆರಿಕದಲ್ಲಿ ಮೊದಲ ಹಾರುವ ಕಾರು ರಸ್ತೆಗಿಳಿದಿತ್ತು. ಆದರೆ ಇದು ಹಾಲಿವುಡ್ ನಲ್ಲಿ ತೋರಿಸುವ ತರಹದ ಹಾರುವ ಕಾರು ಆಗಿರಲಿಲ್ಲ, ಬದಲಾಗಿ ರಸ್ತೆಯಲ್ಲಿ ಓಡುವ ಕಾರಿಗೆ ವಿಮಾನದ ರೆಕ್ಕೆಯನ್ನು ಜೋಡಿಸುವ ವ್ಯವಸ್ಥೆಯಿತ್ತು. ಒಂದು ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ವಿಮಾನದ ರೆಕ್ಕೆಯನ್ನು ಅಲ್ಲೇ ತೆಗೆದಿಟ್ಟು, ಕೇವಲ ಚಲಿಸುವ ಕಾರಿನ ಭಾಗ ವನ್ನು ಅದರಿಂದ ಬೇರ್ಪಡಿಸಿ ನಗರದಲ್ಲಿ ಸಂಚರಿಸಿ ಮತ್ತೆ ವಿಮಾನ ನಿಲ್ದಾಣಕ್ಕೆ ಮರಳಿ ರೆಕ್ಕೆಯನ್ನು ಸಿಕ್ಕಿಸಿಕೊಂಡು ಹಾರಬಹು ದಾಗಿತು. ನಂತರದ ದಿನಗಳಲ್ಲಿ ವಿಶ್ವ ಯುದ್ಧ ಆರಂಭವಾದ ಕಾರಣ ಹಾರುವ ಕಾರಿಗಿಂತ ಶಕ್ತಿಶಾಲಿಯಾದ ವಿಮಾನದ ಅವಶ್ಯ ಕತೆ ಇದ್ದ ಕಾರಣ ಸಂಸ್ಥೆಗಳು ಹಾರುವ ವಿಮಾನಗಳನ್ನು ತಯಾರಿಸತೊಡಗಿದವು.

1940ರ ಸುಮಾರಿಗೆ ರಾಬರ್ಟ್ ಫೋಲ್ಟೆೆನ್ ನಿರ್ಮಿಸಿದ ಏರ್ ಫೀ ಬಿಯನ್ ಕಾರು ಸಹ ಇದೆ ಮಾದರಿಯನ್ನು ಹೊಂದಿತ್ತು. ಇದು ಉತ್ತಮ ವಾಹನವಾಗಿದ್ದರೂ ನಿರ್ಮಾಣ ವೆಚ್ಚ ಅಧಿಕವಾಗಿದ್ದ ಕಾರಣದಿಂದ ಮೂರು ವರ್ಷಗಳ ನಂತರ ಈ ಕಾರಿನ ಉತ್ಪಾದನೆ ಯನ್ನು ನಿಲ್ಲಿಸಲಾಯಿತು. 1970 ರಲ್ಲಿ ಖ್ಯಾತ ಫೋರ್ಡ್ ಸಂಸ್ಥೆ ಸುಮಾರು 25,000 ಹಾರುವ ಕಾರುಗಳನ್ನು ಉತ್ಪಾದಿ ಸುವ ಮಹತ್ವದ ಯೋಜನೆಯನ್ನು ಹಾಕಿಕೊಂಡಿತ್ತಾದರೂ, ಸರಕಾರ ಮತ್ತು ಎಂಜಿನೀಯರ್‌ಗಳು ಅದನ್ನು ಅಂಗೀಕರಿಸದ ಕಾರಣ ಫೋರ್ಡ್ ಆ ಯೋಜನೆಯನ್ನು ಕೈ ಬಿಟ್ಟಿತು.

ಅಲ್ಲಿಂದೀಚೆಗೆ ಹಾರುವ ಕಾರುಗಳು ಮತ್ತೆ ಮುನ್ನಲೆಗೆ ಬಂದಿದ್ದು ಟೆಸ್ಲಾ ನಿರ್ಮಿಸಿದ ವಿದ್ಯುತ್ ಚಾಲಿತ ಕಾರುಗಳು ವ್ಯವಹಾರಿಕ ವಾಗಿ ಯಶಸ್ಸು ಗಳಿಸಿದ್ದರಿಂದ. 1970ರ ನಂತರ ಹಾರುವ ಕಾರಿನ ಕ್ಷೇತ್ರದಲ್ಲಿ ಯಾವುದೇ ಮಹತ್ವದ ಅನ್ವೇಷಣೆಗಳು ನಡೆಯಲ್ಲಿಲ್ಲ ವೇಕೆ ?

ಹಾರುವ ಕಾರಿಗೆ ಹಲವು ಸಮಸ್ಯೆಗಳು

ಕಾರು ಮೂಲಭೂತವಾಗಿ ರಸ್ತೆಯ ಉಬ್ಬು ತಗ್ಗುಗಳು, ಗಾಳಿಯ ಒತ್ತಡ, ಟಾರ್ಕ್ ಮತ್ತಿತರ ಸಮಸ್ಯೆಗಳನ್ನು ಸರಿಯಾಗಿ ನಿರ್ವಹಿಸಲು ವಿನ್ಯಾಸಗೊಂಡಿರುತ್ತದೆ. ವಿಮಾನಗಳು ಭೂಮಿಯ ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ದಿಕ್ಕಿನಲ್ಲಿ ಹೇಗೆ ಪಯಣಿಸಬೇಕು ಎನ್ನುವ ಮೂಲ ಉದ್ದೇಶ ದೊಂದಿಗೆ ಸಿದ್ಧಗೊಂಡಿರುತ್ತವೆ.

ಯಾವಾಗ ಎರಡು ಉತ್ಪನ್ನಗಳ ಮೂಲ ಉತ್ಪಾದನಾ ಉದ್ದೇಶ ಬೇರೆ ಬೇರೆ ಆಗಿರುವುದೋ ಅಂತಹ ಉತ್ಪನ್ನಗಳನ್ನು ಒಂದರಲ್ಲಿ ಇನ್ನೊಂದನ್ನು ಸಂಯೋಜಿಸಲು ಪ್ರಯತ್ನಪಟ್ಟರೆ ಯಾವುದಾದರೂ ಒಂದು ಉತ್ಪನ್ನದ ಗುಣಮಟ್ಟದೊಡನೆ ನಾವು ರಾಜಿ ಮಾಡಿಕೊಳ್ಳ ಬೇಕಾಗುತ್ತದೆ. ಎಂಜಿನೀಯರ್‌ಗಳ ಪ್ರಕಾರ ಒಂದು ಕಾರು ರಸ್ತೆಯ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಬಳಕೆ ಯಾಗುವ ಉಪಕರಣಗಳು ಅದಕ್ಕೆ ಒಂದಿಷ್ಟು ತೂಕವನ್ನು ನೀಡುತ್ತವೆ, ಅದೇ ಕಾರು ಆಗಸದಲ್ಲಿ ಹಾರಬೇಕಾದಾಗ ಆ ತೂಕವೇ ಅದಕ್ಕೆ ಹೊರೆಯಾಗುತ್ತದೆ. ಹಾಗಾಗಿ ಹಾರುವ ಕಾರು ಮಾಡಲು ಹೋದರೆ ಒಂದೋ ಕಾರಿನ ಗುಣಮಟ್ಟ ಇಲ್ಲವೇ ವಿಮಾನದ ಗುಣಮಟ್ಟ ಅಥವಾ ಎರಡರ ಗುಣಮಟ್ಟದೊಡನೆಯೂ ರಾಜಿ ಮಾಡಿಕೊಳ್ಳಬೇಕಾಗುತ್ತದೆ.

ಜೊತೆಗೆ ಅವುಗಳು ರಸ್ತೆ ಮತ್ತು ವಿಮಾನಯಾನ ಪರೀಕ್ಷಣಾ ಸಂಸ್ಥೆಗಳಿಂದ ಒಪ್ಪಿಗೆ ಪಡೆಯಬೇಕು. ಒಂದೇ ಯಂತ್ರ ಎರಡು ಕ್ಷೇತ್ರ ದಲ್ಲಿ ಒಪ್ಪಿಗೆ ಪಡೆಯುವುದು ಬಹಳ ಕಷ್ಟಕರವಾದ ಕೆಲಸ. ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ, ಅಂತಹ ಹಾರುವ ಕಾರು ಅತ್ಯಂತ ದುಬಾರಿಯಾಗುತ್ತದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ, ಅಮೆರಿಕದ ಟೆರಾಫುಜಿಯ ಸಂಸ್ಥೆ ಮೊದಲ ಹಾರುವ ಕಾರಿಗೆ ಬೇಕಾದ ಎಲ್ಲ ಮಾನ್ಯತೆಗಳನ್ನು ಪಡೆದಿದೆ. ಯುರೋಪ್‌ನ ಏರ್ ಮೊಬೈಲ್ ಸಂಸ್ಥೆ ಹಾರುವ ಕಾರು ತಯಾರಿಸಲು ಯೂರೋಪಿಯನ್ ಒಕ್ಕೂಟದ ಅನುಮತಿಗಾಗಿ ಕಾಯುತ್ತಿವೆ.

ಏರ್ ಟ್ಯಾಕ್ಸಿ
ಇಂದು ಹೆಚ್ಚಿನ ಸಂಸ್ಥೆಗಳು ಹಾರುವ ಕಾರಿನ ಬದಲಾಗಿ ಬೀಟಲ್ ಅಥವಾ ನಿಂತ ಜಾಗದಿಂದಲೇ ಹಾರಾಟ ಮಾಡುವ ವಿಶೇಷ ವಿಮಾನದ ತಯಾರಿಕೆಯಲ್ಲಿ ನಿರತವಾಗಿವೆ. ಇವುಗಳನ್ನು ಟ್ಯಾಕ್ಸಿ ರೂಪದಲ್ಲಿ ಪರಿಚಯಿಸುವುದು ಇದರ ಮುಖ್ಯ ಉದ್ದೇಶ. ಉಬರ್ ಸಂಸ್ಥೆ ಇದರಲ್ಲಿ ಮುಂಚೂಣಿಯಲ್ಲಿದ್ದು 2023ರ ಒಳಗೆ ಹಾರುವ ಟ್ಯಾಕ್ಸಿಗಳನ್ನು ಬಳಕೆದಾರನಿಗೆ ನೀಡುವ ನೀರಿಕ್ಷೆ ಯಲ್ಲಿದೆ. ಇವುಗಳು ಎಲ್ಲೆಂದರಲ್ಲಿ ಟೇಕ್ ಆಫ್ ಮತ್ತು ನಿಲುಗಡೆ ಆಗುವುದಿಲ್ಲ. ಈ ಬೀಟಲ್‌ಗಳು ಹಾರಾಟ ಮಾಡುವ
ಕಟ್ಟಡ ಅಥವಾ ಖಾಲಿ ಜಾಗಕ್ಕೆ ಬಳಕೆದಾರ ತೆರಳಿ, ಅಲ್ಲಿಂದ ಅವುಗಳ ಮೂಲಕ ಅವುಗಳು ಹಾರಾಟದ ಸೇವೆಯನ್ನು ಪಡೆದು,
ಆಗಸದಲ್ಲಿ ಹಾರಬಹುದಾಗಿದೆ.

ಬೋಯಿಂಗ್, ಏರ್ ಬಸ್, ಟೊಯೋಟ, ಹುಂಡೈ , ಪೊರ್ಶೆ ಮತ್ತಿತರ ಸಂಸ್ಥೆಗಳು ಸಹ ಹಾರುವ ಟ್ಯಾಕ್ಸಿಗಳನ್ನು ನಿರ್ಮಿಸುವು ದರಲ್ಲಿ ನಿರತವಾಗಿವೆ. ಇವುಗಳು ಬ್ಯಾಟರಿ ಮೂಲಕ ಹಾರಾಟ ನಡೆಸುವುದರಿಂದ ಟೆಸ್ಲಾ ಕಾರಿನ ತಂತ್ರಜ್ಞಾನವನ್ನು ಈ ಬೀಟಲ್ ‌ಗಳಲ್ಲಿ ಬಳಸಲು ಯೋಚಿಸಿವೆ.

ಸಧ್ಯದ ಮಟ್ಟಿಗೆ ಹೇಳುವುದಾದರೆ ರಸ್ತೆಯಿಂದ ಒಮ್ಮೆಗೆ ಆಕಾಶಕ್ಕೆ ಜಿಗಿದು ತಮ್ಮ ಗುರಿ ಮುಟ್ಟುವ ವಾಹನಗಳು ರಸ್ತೆಗಿಳಿಯುವುದು ಕೇವಲ ಕಲ್ಪನೆ ಮಾತ್ರ. ಇನ್ನು ಬೀಟಲ್‌ಗಳು ಪ್ರಯಾಣಿಕರಿಗೆ ಮುಕ್ತವಾಗಲು ಹಲವಾರು ವರ್ಷ ಬೇಕಾದೀತು. ಅವುಗಳ ಸುರಕ್ಷ ಹಾರಾಟ ಸ್ಥಿರಗೊಳ್ಳಲು ಇನ್ನಷ್ಟು ವರ್ಷ ಬೇಕಾದೀತು. ವರ್ಷಗಳ ಕಾಲ ಹಾರಾಟ ನಡೆಸಿ, ಎಲ್ಲಾ ರೀತಿಯಲ್ಲಿಯೂ ಪರೀಕ್ಷೆಗೆ ಒಳಗಾದ ಬೋಯಿಂಗ್ ವಿಮಾನಗಳೇ ತಾಂತ್ರಿಕ ದೋಷದಿಂದ ಅಪಘಾತವಾಗುವ ಸಾಧ್ಯತೆ ಇರುವಾಗ, ಹಾರುವ ಟ್ಯಾಕ್ಸಿಗಳನ್ನು ನೆಚ್ಚಿಕೊಂಡು ಪಯಣಿಸಲು ಬಹಳ ವರ್ಷ ಕಾಯಬೇಕಾದೀತು.

ಬೆಲೆ ಎಷ್ಟಿರಬಹುದು?
ಹಾರುವ ಕಾರುಗಳು ಮಾರುಕಟ್ಟೆಗೆ ಬಂದಾಗ, ಅವುಗಳನ್ನು ಸಣ್ಣ ಸಣ್ಣ ಪಯಣಗಳಿಗೆ ಉಪಯೋಗಿಸುವುದೇ ಹೆಚ್ಚು ಪ್ರಾಯೋಗಿಕ. ವಿಮಾನಗಳಿಗೆ ಹೋಲಿಸಿದರೆ, ಹಾರುವ ಕಾರುಗಳ ಮೈಲೇಜ್ ಕಡಿಮೆ ಇರುತ್ತದೆ, ಏಕೆಂದರೆ ಇವು ಕೆಳ ಮಟ್ಟದಲ್ಲಿ ಹಾರಾಡುತ್ತವೆ. ಜತೆಗೆ, ಇಂತಹ ಕಾರುಗಳ ಇಂಜಿನ್ನುಗಳನ್ನು ಹಾರುವ ಕೆಲಸ ಮಾಡಲು ವಿನ್ಯಾಸಗೊಳಿಸಿರುವುದರಿಂದಾಗಿ, ರಸ್ತೆಯಲ್ಲಿ ಚಲಿಸುವಾಗಲೂ ಇವುಗಳ ಮೈಲೇಜ್ ಕಡಿಮೆ ಇರುತ್ತದೆ!

ಈ ಆಧುನಿಕ ತಂತ್ರಜ್ಞಾನವು ಗ್ರಾಹಕರಿಗೆ ತಲುಪುವಾಗ ಸಾಕಷ್ಟು ದುಬಾರಿಯೂ ಆಗಬಲ್ಲದು. ಭವಿಷ್ಯದಲ್ಲಿ ಮಾರುಕಟ್ಟೆಗೆ ಬರಲಿರುವ ಹಾರುವ ಕಾರನ್ನು ಖರೀದಿಸುವ ಗ್ರಾಹಕರು ಕೋಟಿಗಟ್ಟಲೆ ಹಣವನ್ನು ವೆಚ್ಚ ಮಾಡಲೇಬೇಕಾದೀತು!