ಮನ ಕಥೆ ವಿಶ್ವವ್ಯಾಪಿ
ಡಾ.ಜಯಂತಿ ಮನೋಹರ್
ರಾಮಾಯಣದ ಕಥೆಯನ್ನು ಮೊಗಲ್ ದೊರೆಗಳು ಬಹುವಾಗಿ ಆಧರಿಸಿ, ಪರ್ಷಿಯನ್ ಬಾಷೆಗೆ ಅನುವಾದ ಮಾಡಿಸಿದ ವಿಚಾರ ಬಹಳ ಕುತೂಹಲಕಾರಿ. ಅಕ್ಬರ್ ಮತ್ತು ಹುಮಾಯೂನನ ಪತ್ನಿ ಪ್ರತ್ಯೇಕವಾಗಿ ರಾಮಾಯಣವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಲು ಆದೇಶಿಸಿದ್ದು ಮಾತ್ರವಲ್ಲ, ಜತೆಯಲ್ಲೇ ನೂರಾರು ಮಿನಿಯೇಚರ್ ಚಿತ್ರ ಗಳನ್ನು ಸಹ ಬರೆಯಿಸಿದ್ದರು. ಅಂತಹ ಅಪರೂಪದ ಚಿತ್ರಗಳು ಇಂದು ವಿಶ್ವದ ಹಲವು ಮ್ಯೂಸಿಯಂಗಳಲ್ಲಿ ಹರಡಿ ಹೋಗಿವೆ. ಐತಿಹಾಸಿಕ, ಅಪೂರ್ವ ಮತ್ತು ಜನಸಾಮಾನ್ಯರ ನೋಟಕ್ಕೆ ಲಭ್ಯವಿಲ್ಲದ ಇಂತಹ 660 ಚಿತ್ರಗಳನ್ನು ಅಡಕಗೊಳಿಸಿ, ಫ್ರೆಂಚ್ ರಾಮಾಯಣವೊಂದು ಎಂಟು ಸಂಪುಟಗಳಲ್ಲಿ ಹೊರಬಂದಿದೆ. 2011ರಲ್ಲಿ ಬಹು ಆಸ್ಥೆಯಿಂದ ಮುದ್ರಣಗೊಂಡ ಈ ಪುಸ್ತಕವು ವಾಲ್ಮೀಕಿ ರಾಮಾಯಣವನ್ನು ಫ್ರೆಂಚ್‌ನಲ್ಲಿ ನೀಡಿರುವುದರ ಜತೆಯಲ್ಲೇ, ಮೊಗಲ್ ದೊರೆಗಳು ಬರೆಯಿಸಿದ ರಾಮಾಯಣದ ಚಿತ್ರಗಳನ್ನು ಒಳಗೊಂಡಿರುವುದು ವಿಶೇಷ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತಿರುವ ಈಗಿನ ಸಂದರ್ಭದಲ್ಲಿ, ಮೊಗಲ್ ದೊರೆಗಳು ಬರೆಸಿದ ರಾಮಾಯಣದ ಚಿತ್ರಗಳನ್ನು ನೆನಪಿಸಿಕೊಳ್ಳುವುದಕ್ಕೆ ವಿಶೇಷ ಅರ್ಥವಿದೆ. ವಾಲ್ಮೀಕಿ ರಾಮಾಯಣದ ಫ್ರೆಂಚ್ ಅನುವಾದ, ಮೊಗಲರ ಕಾಲದ ರಾಮಾಯಣದ ಚಿತ್ರಗಳು, ರಾಮಾಯಣದ ವಿಶ್ವವ್ಯಾಪಿ ಸ್ವರೂಪ ಮೊದಲಾದವುಗಳನ್ನು ‘ವಿಶ್ವವಾಣಿ’ ಓದುಗರಿಗಾಗಿ ಇಲ್ಲಿ ಪರಿಚಯ ಮಾಡಿಕೊಡಲಾಗಿದೆ.
ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ’ ಎಂದು ನಮ್ಮ ಕುಮಾರವ್ಯಾಸ ಹೇಳಿ ಏಳು ನೂರು ವರ್ಷಗಳು ಕಳೆದ ನಂತರವೂ ರಾಮಾಯಣದ ರಚನೆಗಳು ಅವ್ಯಾಹತವಾಗಿ ಮುಂದುವರಿದಿದೆ. ಹಲವು ಶತಮಾನಗಳಿಂದಲೂ ಬೆಳೆಯುತ್ತಾ ಬಂದಿರುವ ರಾಮಾಯಣಗಳ ದೀರ್ಘಪಟ್ಟಿಗೆ ಫ್ರೆಂಚ್ ಭಾಷೆಯ ‘ರಾಮಾಯಣ ಡಿ ವಾಲ್ಮೀಕಿ’ 2011 ರಲ್ಲಿ ಸೇರ್ಪಡೆಯಾಗಿದ್ದು,
ಅಪರೂಪದ ಚಿತ್ರಗಳನ್ನು ಹೊಂದಿರುವ ಈ ಕೃತಿಯು ವಿಶ್ವದ ಗಮನ ಸೆಳೆದಿದೆ.
ಡಿಯಾನಾ ಸೆಲ್ಸಿಯರ್ಸ್ ರೂಪಿಸಿರುವ ಫ್ರೆಂಚ್ ಭಾಷೆಯ ಈ ಉದ್ಗ್ರಂಥದಲ್ಲಿ ವಾಲ್ಮೀಕಿ ರಾಮಾಯಣದ ಯಥಾವತ್
ಅನುವಾದದೊಂದಿಗೆ 16ರಿಂದ 19ನೇ ಶತಮಾನಗಳ ಅವಧಿಯಲ್ಲಿ ವಾಲ್ಮೀಕಿ ರಾಮಾಯಣದ ಆಧಾರದಲ್ಲಿ ರಚಿತವಾಗಿರುವ 660 ಮನಮೋಹಕ ಕಿರು ಕಲಾಕೃತಿಗಳ ನೋಟವಿದೆ. ಹಾಗಾಗಿ, ವಾಲ್ಮೀಕಿ ರಾಮಾಯಣದ ಪೂರ್ಣ ಪಾಠವಿರುವ ಮೊದಲ ಸಚಿತ್ರ ಆವೃತ್ತಿ ಇದು ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಇದರಲ್ಲಿ ಪರ್ಷಿಯನ್ ರಾಮಾಯಣಗಳಲ್ಲಿ ಕಾಣುವ ಕಿರುಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತವೆ. ಹಾಗಾಗಿ, ಜನಮಾನಸದಿಂದ ಬಹುತೇಕ ಮರೆಯಾಗಿ ಹೋಗಿರುವ ಪರ್ಷಿಯನ್ ಭಾಷೆಯಲ್ಲಿ ರಚಿತವಾಗಿರುವ ರಾಮಾಯಣಗಳು ಕುತೂಹಲ ಮೂಡಿಸುತ್ತವೆ.
ಯೋಜನೆಯ ಪ್ರಾರಂಭದಲ್ಲಿಯೇ, ಮೂಲ ವಾಲ್ಮೀಕಿ ರಾಮಾಯಣವನ್ನು ನಾಲ್ಕು ಬಾರಿ ಓದಿ, ಅದರ ಒಳ ಹರವನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ‘ಇದು ಇಡೀ ವಿಶ್ವಕ್ಕೆ ಸಂದೇಶವನ್ನು ಸಾರುತ್ತಿದೆ. ರಾಮಾಯಣವನ್ನು ಓದುವುದು ಅಥವಾ ಕೇಳುವುದು ಜ್ಞಾನಾರ್ಜನೆಯ ಹಾದಿಯಲ್ಲಿ ಒಂದು ಅನುಭವವನ್ನು ಕಟ್ಟಿಕೊಡುತ್ತದೆ ಹಾಗೂ ಮೂಲ ಸತ್ಯಾನ್ವೇಷಣೆಗೆ ಅನುವು ಮಾಡಿಕೊಡುತ್ತದೆ.
ವಿದ್ಯೆಯ ಉದ್ದೇಶವೇ ಅದು’ ಎಂದು ಹೇಳುವ ಡಿಯಾನಾ ಸೆಲ್ಸಿಯರ್ಸ್, ತಾನು ಈ ಅರಿವಿನ ಹಾದಿಯಲ್ಲಿ ನಡೆದು, ಅದು ತಮ್ಮ ವ್ಯಕ್ತಿತ್ವವನ್ನೇ ಬದಲಿಸಿದ್ದನ್ನು ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ. ಗ್ರೀಕ್ ದೇಶದ ಮಹಾಕವಿ ಹೋಮರ್, ವಾಲ್ಮೀಕಿ ರಾಮಾಯಣದಿಂದ ಪ್ರಭಾವಿತನಾಗಿರುವುದನ್ನು ಅವರು ಗುರುತಿಸುತ್ತಾರೆ. ಮೂಲ ‘ವಾಲ್ಮೀಕಿ ರಾಮಾಯಣ’ವನ್ನು ಅತ್ಯಂತ ಹಿಂದಿನ ಮಹೋನ್ನತ ಗ್ರಂಥವೆಂದು ಗುರುತಿಸಿ ಅದನ್ನು ತಮ್ಮ ಪ್ರಕಟಣೆಗೆ ಆಯ್ಕೆ ಮಾಡಿದ್ದಾಗಿ ಅವರು ಹೇಳುತ್ತಾರೆ.
ಧರ್ಮವನ್ನು ಪ್ರತಿನಿಧಿಸುವ ರಾಮ, ರಾವಣನಲ್ಲಿದ್ದ ದುಷ್ಟತನದ ನಾಶವನ್ನು ಮಾಡುವ ಸಂಕೇತವನ್ನು ರಾಮಾಯಣ ವಿಶ್ವಕ್ಕೆ ಸಾರುವುದನ್ನು ಅವರು ಗುರುತಿಸಿ, ಧರ್ಮವನ್ನು ನೇರವಾಗಿ ಬೋಧಿಸುವುದು ಬೇಕಿಲ್ಲ ಎನ್ನುವವರು ಕಾವ್ಯಗಳು ಕಟ್ಟಿಕೊಡುವ ಮೌಲ್ಯಗಳನ್ನಾದರೂ ಮುಂದಿನ ಪೀಳಿಗೆಯವರಿಗೆ ತಿಳಿಸಬೇಕು ಎನ್ನುತ್ತಾರೆ.
ಅಕ್ಬರ್ ಕಾಲದಲ್ಲಿ ರಾಮಾಯಣ ಅನುವಾದ
ಭಾರತದ ಅನಘ್ರ್ಯ ಸಂಪತ್ತು ಹೊರದೇಶಗಳ ಪಾಲಾದ ಹಾಗೆಯೇ ಅನೇಕ ಅಮೂಲ್ಯ ಪ್ರಾಚೀನ ಗ್ರಂಥಗಳು ಹಾಗೂ ಕಲಾಕೃತಿಗಳೂ ಕೂಡ ಹಲವು ನೂರು ವರುಷಗಳ ಹಿಂದೆಯೇ ವಿಶ್ವದಾದ್ಯಂತ ವಿವಿಧ ಸಂಗ್ರಹಕಾರರ ಬಳಿ ಸೇರಿಹೋಗಿವೆ.
ವಿಶಿಷ್ಟ ಕಲಾಪ್ರಕಾರಗಳಲ್ಲಿ ಚಿತ್ರಿತವಾಗಿರುವ ಮಹಾಗಾಥೆಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಡಿಯಾನಾ, ಪ್ರಪಂಚದ ಬೇರೆ ಬೇರೆ ಸಂಗ್ರಹಾಲಯಗಳಲ್ಲಿ ಸೇರಿರುವ ರಾಮಾಯಣದ 5,000 ಕಿರು ಕಲಾಕೃತಿಗಳನ್ನು ತಮ್ಮ ಸಚಿತ್ರ ರಾಮಾಯಣಕ್ಕಾಗಿ ಅಭ್ಯಾಸ ಮಾಡಿದ್ದಾರೆ. ಅವುಗಳಲ್ಲಿ, 660 ಕಲಾ ಕೃತಿಗಳನ್ನು ಆಯ್ಕೆ ಮಾಡುವುದು ಸುಲಭ ಸಾಧ್ಯವಾಗಿರಲಿಲ್ಲ. 16ರಿಂದ 19ನೇ ಶತಮಾನದ ಅವಧಿ
ಯಲ್ಲಿ ರಚಿತವಾದ ಆ ಚಿತ್ರಗಳಲ್ಲಿ, ಮೊಗಲ್ ದೊರೆ ಅಕ್ಬರ್, ಸಂಸ್ಕೃತ ಭಾಷೆಯಿಂದ ಪರ್ಷಿಯನ್ ಭಾಷೆಗೆ ಅನುವಾದ ಮಾಡಿಸಿರುವ ಸಚಿತ್ರ ರಾಮಾಯಣದ ಕಿರು ಕಲಾಕೃತಿಗಳೇ ಅತ್ಯಂತ ಹಿಂದಿನದು. ಈ ಮುನ್ನೂರು ವರ್ಷಗಳ ಅವಧಿಯಲ್ಲಿ ರಾಜಸ್ಥಾನದ ರಜಪೂತ್ ದೊರೆಗಳು ಬರೆಯಿಸಿದ ಸಾವಿ ರಾರು ಕಲಾಕೃತಿಗಳು ದೊರೆಯುತ್ತವೆ. ಅವೆಲ್ಲವನ್ನೂ, ಜಾಗರೂಕತೆ ಯಿಂದ ಪರಿಶೀಲಿಸಿ, 660 ಕಲಾ ಕೃತಿಗಳನ್ನು ಆಯ್ಕೆ ಮಾಡಿ, ಅವುಗಳಿಗೆ, ಸಂಬಂಧಿಸಿದ ಕಥೆಯ ವಿವರಗಳನ್ನು ಹಾಗೂ ಆ ಕಲಾ ಪ್ರಕಾರಗಳ ವಿವರಣೆಗಳನ್ನೂ ಡಿಯಾನರವರ ಫ್ರೆಂಚ್ ರಾಮಾಯಣದಲ್ಲಿ ಕಾಣಬಹುದು.
ಭಾರತದ ಶ್ರದ್ಧಾಕೇಂದ್ರವಾಗಿರುವ ವಾಲ್ಮೀಕಿ ರಾಮಾಯಣ ಎಂದಿನಿಂದಲೂ ಹಲವಾರು ರೀತಿಯ ವೈಚಾರಿಕ ಚರ್ಚೆಗಳನ್ನು ಹುಟ್ಟುಹಾಕಿದೆ. ಶ್ರದ್ಧಾವಂತರಿಗೆ ನಾವು ಇರುವ ಭೂಮಿಯ ಮೇಲೆಯೇ ನಡೆದ ರಾಜಾರಾಮನ ಕಥೆ ಇತಿಹಾಸವಾಗಿಯೂ ಧಾರ್ಮಿಕ ಗ್ರಂಥವಾಗಿಯೂ ತೋರಿದರೆ, ಆಧುನಿಕ ಇತಿಹಾಸಕಾರರಿಗೆ ಇದು ಕೇವಲ ಒಂದು ಕಾವ್ಯವೆಂದು ತೋರುತ್ತದೆ. ಆದರೆ, ಪ್ರಪಂಚದಾದ್ಯಂತ ಹಲವು ವಸ್ತುಸಂಗ್ರಹಾಲಯಗಳಲ್ಲಿ ಕಾಣುವ 16 ರಿಂದ 19ನೇ ಶತಮಾನದ ಕಿರು ಕಲಾಕೃತಿಗಳು, ಪ್ರಸಕ್ತ ಶಕೆಯ 500 ರ ಸುಮಾರಿಗೆ ಲಿಖಿತ ರೂಪದಲ್ಲಿ ಬಂದ ವಾಲ್ಮೀಕಿ ರಾಮಾಯಣವನ್ನೇ ಆಧರಿಸಿರುವುದನ್ನು ನೋಡಿದಾಗ, ಆ ಕೃತಿಯ ಮಹತ್ವ ಎಂತಹುದೆಂಬುದು ನಿಚ್ಚಳವಾಗಿ ತಿಳಿಯುತ್ತದೆ.
ಮೊಗಲ್ ದೊರೆಗಳು ಬರೆಸಿದ ಪರ್ಷಿಯನ್ ರಾಮಾಯಣಗಳು
ರಾಮನ ಆದರ್ಶ ರಾಜ್ಯಭಾರವನ್ನು ಅರಿಯಲೆಂದೇ, ಹಿಂದೂ ಪರಂಪರೆಗಿಂತ ಭಿನ್ನ ಪರಂಪರೆಯ ಆಕ್ರಮಣಕಾರೀ ಮೊಗಲ್ ದೊರೆಗಳು ರಾಮಾಯಣವನ್ನು ಬರೆಸಿರುವುದು ಕಾಣುತ್ತದೆ. ರಾಮಾಯಣದ ಅನುವಾದ ಹಾಗೂ ಮರು ಕಥನಗಳ ರಚನೆಗಳಲ್ಲಿ ಪರ್ಷಿಯನ್ ಭಾಷೆಯ ಪಾತ್ರವೂ ಹಿರಿದು. ಭಾರತಕ್ಕೆೆ ಬಂದು ಬಹುದೊಡ್ಡ ಸಾಮ್ರಾಜ್ಯ ಕಟ್ಟಿದ ಮೊಗಲ್ ದೊರೆ ಬಾಬರನ ಸೊಸೆ, (ಹೂಮಾಯೂನನ ಪತ್ನಿ) ಬೇಗಮ್ ಹಮೀದಾ ಬಾನು 1500ರ ಮಧ್ಯಭಾಗದಲ್ಲಿ, ಒಂದು ಸಚಿತ್ರ ರಾಮಾಯಣದ ರಚನೆಗೆ ಆದೇಶ ನೀಡಿದಳು.
ಇದನ್ನು ಈಗ ಝೂರಿಕ್‌ನಲ್ಲಿರುವ ರೈಟ್ಬರ್ಗ್ ಮ್ಯೂಸಿಯಮ್‌ನಲ್ಲಿ ಕಾಣಬಹುದು. ಶೇರ್ ಶಾ ಸೂರಿಯಿಂದ ತಪ್ಪಿಸಿಕೊಳ್ಳಲು, ಹಮೀದಾ ಬಾನು, ಪತಿ ಹೂಮಾಯೂನನೊಂದಿಗೆ ಕಾಡು ಮೇಡುಗಳಲ್ಲಿ ದೀರ್ಘ ಕಾಲ ಅಲೆದಾಡಬೇಕಾಯಿತು. ಅದರಿಂದಾ ಗಿಯೇ, ಅವಳು ತನ್ನ ಬದುಕಿನ ಬವಣೆಯನ್ನು ರಾಮ-ಸೀತೆಯರ ವನವಾಸದೊಂದಿಗೆ ಹೋಲಿಸಿಕೊಂಡಿದ್ದಳು. ತನಗೆ ಹುಟ್ಟುವ ಮಗ ಮುಂದೆ ಭಾರತದ ಚಕ್ರವರ್ತಿಯಾಗುತ್ತಾನೆ ಎನ್ನುವ ಭವಿಷ್ಯ ನುಡಿಯಿಂದಾಗಿ ಅವಳು, ರಾಜ ರಾಮನ ತಾಯಿ ಕೌಸಲ್ಯೆೆ ಯೊಂದಿಗೂ ತನ್ನನ್ನು ಗುರುತಿಸಿಕೊಂಡಿದ್ದಳು. ಅದರಂತೆಯೇ ಮೊಗಲ್ ಸಾಮ್ರಾಜ್ಯದ ಪ್ರಸಿದ್ಧ ರಾಜನಾದ ಅಕ್ಬರ್‌ನ ಮೇಲಿದ್ದ ಹಮೀದಾ ಬಾನುವಿನ ಪ್ರಭಾವದಿಂದಾಗಿ ಆ ಕಾಲಘಟ್ಟದಲ್ಲಿ ವಿವಿಧ ರಾಮಾಯಣದ ಹಲವು ಅನುವಾದಗಳು ಲಭ್ಯವಿದೆ.
ಜಯಪುರದಲ್ಲಿರುವ ಮಹಾರಾಜ 2ನೇ ಸವಾಯ್ ಮಾನ್ ಸಿಂಗ್ ಮ್ಯೂಸಿಯಂನಲ್ಲಿರುವ ರಾಮಾಯಣ ಗ್ರಂಥವನ್ನು ಬರೆಸಿ ದವನು ಸ್ವಯಂ ಚಕ್ರವರ್ತಿ ಅಕ್ಬರ್. ಅವನ ಆಸ್ಥಾನದಲ್ಲಿದ್ದ ಅಬ್ದುಲ್ ರಹೀಮ್ ಖಾನ್-ಇ-ಖಾನ್ ಕೂಡ ಪರ್ಷಿಯನ್ ಭಾಷೆ ಯಲ್ಲಿ ರಾಮಾಯಣದ ರಚನೆಗೆ ಆದೇಶಿಸಿದ. ಇದು ಈಗ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಸ್ಮಿತ್ಸೋನಿಯನ್ ಸಂಸ್ಥೆಯ ಫ್ರೀಯರ್ ಕಲಾ ಗ್ಯಾಲರಿಯಲ್ಲಿದೆ. ಈ ರಾಮಾಯಣ ಕಾವ್ಯದ ಪ್ರತಿಯೊಂದು ಪದ್ಯವೂ ಖಾನ್ -ಇ-ಖಾನ್ ಎಂದು ಕೊನೆಯಾಗು ತ್ತದೆ. ಇಲ್ಲೊಂದು ಪ್ರಶ್ನೆ ಏಳುತ್ತದೆ. ಮೇಲಿನ ರಾಮಾಯಣದ ಅನುವಾದದ ಜತೆಯಲ್ಲೇ, ಇನ್ನೂ ಹಲವಾರು ಪರ್ಷಿಯನ್ ರಾಮಾಯಣಗಳು ರಚಿತವಾದ ಕಾಲಘಟ್ಟದಲ್ಲಿ, ಅಂದರೆ, ಮೊಗಲ್ ದೊರೆ ಬಾಬರ್ ಹಾಗೂ ಅಕ್ಬರನ ಕಾಲದಲ್ಲಿ ಅಯೋಧ್ಯೆ ಯಲ್ಲಿ ರಾಮಲಲ್ಲನ ದೇವಾಲಯ ನಾಶವಾಗಿರುವ ಸಾಧ್ಯತೆಯಿದೆಯೇ ಎನ್ನುವ ಪ್ರಶ್ನೆ ಅದು. ಈ ಘಟನೆ ಬಹುಶಃ 17 ನೆಯ ಶತಮಾನದಲ್ಲಿ ನಡೆದಿರಬಹುದು ಎನ್ನುವ ಅಭಿಪ್ರಾಯವೂ ಇದೆ. ಈ ರಾಮಾಯಣಗಳ ಅಧ್ಯಯನದಿಂದ ಹಲವು ಸಮಕಾಲೀನ ವಿಚಾರಗಳು ಹೊರಬರುವ ನಿರೀಕ್ಷೆ ಇದೆ.
ಏಳು ಸಂಪುಟಗಳು
ಯಾವುದೇ ಮೂಲ ಕೃತಿಯನ್ನು ಅಭ್ಯಾಸ ಮಾಡದೆಯೇ, ಅದರ ವ್ಯಾಖ್ಯಾನ-ವಿಮರ್ಶೆಗಳನ್ನಷ್ಟೇ ಓದಿಕೊಂಡು, ತಮ್ಮ
ಧೋರಣೆಗಳನ್ನು ಬೆಳೆಸಿಕೊಳ್ಳುತ್ತಿರುವ ಭಾರತೀಯ ವಿಮರ್ಶಕರ ನಡುವೆ, ಡಿಯಾನಾ ಸೆಲ್ಸಿಯರ್ಸ್‌ರವರು ತಮ್ಮ ಗ್ರಂಥವನ್ನು ರೂಪಿಸುವ ಮೊದಲು, ಮೂಲ ಕೃತಿಯನ್ನು ಸಂಪೂರ್ಣವಾಗಿ ಓದಿ ಅದಕ್ಕೆ ಸಲ್ಲಿಸಿರುವ ಗೌರವ ಕಂಡು ಅಚ್ಚರಿಯೊಂದಿಗೆ ಅಪಾರವಾದ ಮೆಚ್ಚುಗೆ ಮೂಡುತ್ತದೆ.
ವಾಲ್ಮೀಕಿ ರಾಮಾಯಣದ ಏಳು ಕಾಂಡಗಳನ್ನು ಸಾಂದರ್ಭಿಕ ಕಿರು ಕಲಾಕೃತಿಗಳೊಂದಿಗೆ ಏಳು ಸಂಪುಟಗಳಲ್ಲಿ ಹಾಗೂ
ಅದರೊಂದಿಗೆ ಹೆಚ್ಚಿನ ವ್ಯಾಖ್ಯಾನಗಳಿರುವ ಎಂಟನೆಯ ಸಂಪುಟವನ್ನೂ ಸೇರಿಸಿದ್ದಾರೆ. ಅತ್ಯುತ್ತಮ ಕಾಗದದ ಮೇಲೆ ಅಂದ ವಾಗಿ ಮುದ್ರಿಸಿರುವ ಆಕರ್ಷಕ ಕೆಂಪು ಬಣ್ಣದ ಹೊದಿಕೆ ಇರುವ ಈ ಬೃಹತ್ ಫ್ರೆಂಚ್ ರಾಮಾಯಣ, ಭಾರತೀಯ ಭಾಷೆಗಳ ಲ್ಲಿಯೂ ಲಭ್ಯವಾಗಲಿ ಎಂಬ ಆಶಯವಿದೆ.
ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ
ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ॥
ಎಲ್ಲಿಯವರೆಗೆ ಪರ್ವತಗಳು ಭೂಮಿಯ ಮೇಲೆ ನಿಂತಿರುವುದೋ ಹಾಗೂ ನದಿಗಳು ಹರಿಯುತ್ತಿರುವುದೋ ಅಲ್ಲಿಯವರೆಗೂ ರಾಮಾಯಣ ಕಥೆಯು ಲೋಕಗಳಲ್ಲಿ ಪ್ರಚಾರವಾಗುತ್ತಿರುತ್ತದೆ ಎನ್ನುವ ಆಶಯದಂತೆ, ಇಂದೂ ಕೂಡ ವಿಶ್ವದೆಲ್ಲೆಡೆ ಈ ಕಥೆಯ ಮರುಸೃಷ್ಟಿಗಳು, ಅನುವಾದಗಳು ನಡೆಯುತ್ತಲೇ ಇವೆ. ಜತೆಗೆ, ಪ್ರಪಂಚದಾದ್ಯಂತ ನಿರಂತರವಾಗಿ ನಡೆಯುತ್ತಿರುವ ಅಧ್ಯಯನ, ಸಂಶೋಧನೆ ಹಾಗೂ ವಿಚಾರ ವಿಮರ್ಶೆಗಳಿಂದ ಭಾರತದೊಂದಿಗೆ ಸಾಗರೋತ್ತರ ನಾಡುಗಳನ್ನು ಬೆಸೆಯುವ ಉದ್ಗ್ರಂಥ ರಾಮಾಯಣ ಭಾರತವನ್ನು ವಿಶ್ವಗುರು ಸ್ಥಾನದಲ್ಲಿಡುವ ಮಹೋನ್ನತ ಕೃತಿ.
ಸ್ವತಂತ್ರ ಭಾರತದ ಮಹತ್ವದ ತೀರ್ಪು
2019 ನವೆಂಬರ್ 9 ರಂದು ಒಂದು ಐತಿಹಾಸಿಕ ತೀರ್ಪು ಹೊರಬಿದ್ದಿದ್ದು, ಇದು ಸ್ವತಂತ್ರ ಭಾರತದ ಅತ ಪ್ರಮುಖ ತೀರ್ಪು ಎಂದೇ ಗುರುತಿಸಲ್ಪಟ್ಟಿದೆ. ಸುಪ್ರೀಮ್ ಕೋರ್ಟಿನ ಈ ತೀರ್ಪಿನಿಂದ, ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ಅಯೋಧ್ಯೆಯ ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತು, ಈಗ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸವೋಚ್ಚ
ನ್ಯಾಯಾಲಯದ ಈ ತೀರ್ಪು ಸ್ಪಷ್ಟವಿದೆ.
ಆದರೂ, ಕೆಲವರು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿರುವ ಪ್ರದೇಶ ಇನ್ನೂ ವಿವಾದದಲ್ಲಿದೆ ಎಂದೇ ಸಾಧಿಸು
ತ್ತಿರುವುದು ಅಚ್ಚರಿ ಎನಿಸುತ್ತದೆ. ಮೊಗಲರ ಕಾಲದಲ್ಲಿ ರಾಮಾಯಣದ ಅನುವಾದಗಳು ಮತ್ತು ಅವುಗಳಿಗೆ ಆಕರ್ಷಕ ಮಿನಿಯೇಚರ್ ಚಿತ್ರಗಳು ರಚನೆಗೊಂಡ ಪ್ರಕ್ರಿಯೆಯ ವಿವರವಾದ ವಿಸ್ತ್ರತ ಅಧ್ಯಯನ, ಈ ನಿಟ್ಟಿನಲ್ಲಿ ಹೊಸ ಬೆಳಕನ್ನು ಸಹ ಚೆಲ್ಲಬಹುದು.
ಹತ್ತು ವರ್ಷಗಳ ಪರಿಶ್ರಮ
ಪ್ಯಾರಿಸ್ಸಿನಲ್ಲಿ 28 ವರ್ಷಗಳ ಹಿಂದೆ ಪ್ರಾರಂಭವಾದ ಡಿಯಾನಾರವರ ಪ್ರಕಟಣಾ ಸಂಸ್ಥೆ ಇದುವರೆಗೂ 20 ಮೌಲಿಕ ಗ್ರಂಥಗಳನ್ನು ಪ್ರಕಟಣೆ ಮಾಡಿದೆ. ರಾಮಾಯಣವೇ (660 ಚಿತ್ರಗಳೊಂದಿಗೆ) ಅವರ ಅತ್ಯಂತ ದೊಡ್ಡ ಯೋಜನೆ. ಭಾರತ ಪ್ರವಾಸದಲ್ಲಿ, ತಾವು ದೇಶದ ಉದ್ದಗಲದಲ್ಲಿಯೂ ಕಂಡ ರಾಮಾಯಣದ ಪ್ರಭಾವದಿಂದಾಗಿ, ಈ ಬೃಹತ್ ಯೋಜನೆಗೆ ಪ್ರೇರಣೆ
ದೊರೆಯಿತು ಎಂದಿದ್ದಾರೆ ಡಿಯಾನ. ಹಲವು ವಿದ್ವಾಂಸರ ಹತ್ತು ವರ್ಷಗಳ ಪರಿಶ್ರಮದ ಫಲವಾಗಿ, ಯೂರೋಪ್ ಜನತೆಗೆ ಮಹಾಕವಿ ವಾಲ್ಮೀಕಿಗಳ ಕಾವ್ಯದ ಸೊಬಗನ್ನು ಕಟ್ಟಿಕೊಡುವ ಅಧಿಕೃತ ಅನುವಾದವನ್ನು ಕೊಟ್ಟಿರುವುದು ತಮಗೆ ಅತ್ಯಂತ
ಹೆಚ್ಚಿನ ತೃಪ್ತಿ ತಂದಿದೆ ಎನ್ನುತ್ತಾರೆ ಡಿಯಾನ.
ಸಾಗರದಾಚೆ ರಾಮಾಯಣ ಪರಂಪರೆ
ರಾಮಚಂದ್ರನ ಆದರ್ಶಗಳು ದೇಶ ಹಾಗೂ ಧಾರ್ಮಿಕ ಎಲ್ಲೆಗಳನ್ನೂ ಮೀರಿ ಹರಡಿರುವುದು ಈಗಲೂ ಕಂಡುಬರುತ್ತದೆ.
ಅನೇಕ ದೇಶಗಳಲ್ಲಿ, ಭಾಷೆಗಳಲ್ಲಿ ಸಾವಿರಾರು ರಾಮಕಥೆಗಳ ರಚನೆಯಾಗಿ ಇಂದು ವಿಶ್ವದಲ್ಲಿರುವ ರಾಮಾಯಣಗಳ ಒಟ್ಟು
ಸಂಖ್ಯೆ ಒಂದು ಲಕ್ಷವನ್ನೂ ಮೀರುತ್ತದೆ. ಹಲವಾರು ದೇಶಗಳಲ್ಲಿ ನಡೆದಿರುವ ರಾಮಾಯಣದ ಅನುವಾದ ಹಾಗೂ ಮರುಸೃಷ್ಟಿ
ಗಳ ಅಧ್ಯಯನ ರೋಚಕವಾದುದು.
ಭಾರತದ ಆಗ್ನೇಯ ರಾಷ್ಟ್ರಗಳಲ್ಲಿರುವ ದೇವಾಲಯಗಳಲ್ಲಿ, ಅವರ ಗೀತ – ನೃತ್ಯ – ಸಾಹಿತ್ಯಗಳಲ್ಲಿ ರಾಮಾಯಣ ವಿಜೃಂಭಿಸುತ್ತಿರುವುದನ್ನು ಈಗಲೂ ಕಾಣಬಹುದು. ಥಾಯ್‌ಲ್ಯಾಂಡಿನ ಚಕ್ರಿ ವಂಶದ ರಾಜರು ರಾಮನ ಅಂಕಿತ ಹೊಂದಿದ್ದಾರೆ. ಈಗ ಅಲ್ಲಿ ರಾಜನಾಗಿರುವ ಮಹಾ ವಾಜಿರಾಲಂಕಾರ 10ನೇ ರಾಮ. ಅದೇ ವಂಶದ 2ನೇ ರಾಮ ಥಾಯ್ ಭಾಷೆಯ ರಾಮಕಥೆ, ‘ರಾಮ್ ಕೀನ್’ – ರಾಮ ಕೀರ್ತಿಯನ್ನು ಗೀತ-ನೃತ್ಯಗಳಿಗೆ ಅನುಕೂಲವಾಗುವಂತೆ ಅಳವಡಿಸಿದ ದಾಖಲೆ ಅಲ್ಲಿದೆ.
ಈಗಿನ ರಾಜಧಾನಿ ಬ್ಯಾಂಕಾಕ್ ನಗರದಿಂದ 70 ಕಿಲೋಮೀಟರ್ ದೂರದಲ್ಲಿರುವ ‘ಅಯುಥಾಯ’ (ಅಯೋಧ್ಯಾ) ಆಗ, ‘ಸಯಾಂ ದೇಶ’ ವೆಂದು ಕರೆಯುತ್ತಿದ್ದ ಪ್ರದೇಶದ ರಾಜಧಾನಿಯಾಗಿತ್ತು. ಅಲ್ಲಿ ರಾಜ್ಯವಾಳಿದ ವಿವಿಧ ವಂಶಗಳ ರಾಜರ ಹೆಸರುಗಳು, ‘ರಾಮಾಧಿಬೋಧಿ, ರಾಮೇಶ್ವರ, ರಾಮರಾಜ, ರಾಮಾಧಿಪತಿ’ ಹೀಗೆ ಎಲ್ಲವೂ ರಾಮಮಯ. ಇದಕ್ಕೆ ಮುಖ್ಯವಾದ ಕಾರಣವೆಂದರೆ, ರಾಮನ ಆದರ್ಶಗುಣಗಳೊಂದಿಗೆ ರಾಮಕಥೆಯಲ್ಲಿರುವ ಸಾರ್ವತ್ರಿಕ ಗುಣ. ಇಂತಹ ಒಂದು ಕಥೆ ಎಲ್ಲಿ ಬೇಕಾದರೂ ನಡೆದಿರ ಬಹುದು ಅಥವಾ ಎಲ್ಲಿ ಬೇಕಾದರೂ ನಡೆಯಬಹುದು.
ಹಾಗಾಗಿ ರಾಮ – ಲಕ್ಷ್ಮಣ – ಸೀತೆ ಸಂಕೇತಿಸುವ ತತ್ತ್ವಗಳ ಆಳಕ್ಕಿಳಿದು ಹಲವಾರು ಹೊಸ ಆಯಾಮಗಳಲ್ಲಿ ರಾಮಾಯಣಗಳು
ಸೃಷ್ಟಿಯಾಗಿರುವುದನ್ನು ಗಮನಿಸಬಹುದು. ಥಾಯ್ ಲ್ಯಾಂಡಿನ ‘ರಾಮ್ ಕೀನ್’ (ರಾಮಕೀರ್ತಿ), ಮಯನ್ಮಾರಿನ (ಬರ್ಮಾ)
ರಾಮತ್ಯಾಗಿನ್ ಮತ್ತು ಮಹಾ ರಾಮ, ಕಾಂಬೋಡಿಯಾದ ರಾಮ್ ಖೇರ್, ಲಾವೋ ದೇಶದ ರಾಮಾಯಣ – ಫ್ರ ಲಕ್ ಫ್ರ
ಲಾಮ್ (ಲಕ್ಷ್ಮಣ – ರಾಮ) ‘ಪಲಕ್ ಪಲಂಗ್’, ‘ರಾಮಜಾತಕ’ , ಮಲಯಾದ ಹಿಕಾಯತ್, ಇಂಡೋನೇಷಿಯಾದ ‘ಕಾಕವಿನ್ ರಾಮಾಯಣ’ಗಳು ಪ್ರಖ್ಯಾತವಾಗಿವೆ.