Wednesday, 11th December 2024

ಮಂಡೂಕ ಪುರಾಣ

ಕೆ.ಜನಾರ್ದನ ತುಂಗ

ಕಪ್ಪೆಯನ್ನು ಹಿಡಿದು, ಜೀವಶಾಸ್ತ್ರದ ತರಗತಿಯಲ್ಲಿ ಡಿಸೆಕ್ಷನ್ ಮಾಡಲು ತೊಡಗಿದಾಗ, ಕ್ಲೋರೋಫಾರಂ ಪ್ರಭಾವ ಕಡಿಮೆಯಾಗಿ, ಕಾಲಿಗೆ ಬಡಿದ ಮೊಳೆಯನ್ನು ಕಿತ್ತುಹಾಕಿ ಕಪ್ಪೆ ಎಗರತೊಡಗಿತು!

ಮಂಡೂಕೋಪನಿಷತ್ತಿನ ಕುರಿತು ಮಹನೀಯರೊಬ್ಬರು ಲೇಖನವನ್ನು ಓದಿದೊಡನೆ ನನ್ನ ಮನ ಎತ್ತೆತ್ತಲೋ ಸುಳಿಯ ತೊಡಗಿತು. ಏಕಸಂಬಂಧಿ ಜ್ಞಾನ;
ಅಪರಸಂಬಂಧಿ ಸ್ಮರಣ! ಮನಸ್ಸು ಬಾಲ್ಯಕ್ಕೆ ನುಗ್ಗುತ್ತದೆ. ಕಪ್ಪೆಗಳು ಪುಟಿಪುಟಿದು ನೆನಪಿನಂಗಳಕ್ಕೆ ಲಗ್ಗೆಯಿಡುತ್ತಿವೆ. ನಾನು ನನ್ನ ಬಾಲ್ಯದ ಹದಿನಾರು ವರ್ಷಗಳನ್ನು ಉಡುಪಿ ಜಿಲ್ಲೆಯ ಕೋಟದಲ್ಲಿ ಕಳೆದವನು. ಮಳೆಗಾಲದ ಆರಂಭದಲ್ಲಿಯೇ ಅದೆಲ್ಲಿಂದಲೋ ಉದ್ಭವಿಸಿ ಬರುವ ಲೆಕ್ಕವಿಲ್ಲದಷ್ಟು ಕಪ್ಪೆಗಳು ನಮಗೆ ಮಳೆಗಾಲದ ಹವಾಮಾನ ತಜ್ಞರಂತೆ ನೆರವಾಗುತ್ತಿದ್ದವು.

ಮಳೆ ಶುರುವಾಗಲು ಕೆಲವು ನಿಮಿಷಗಳ ಮೊದಲೇ ಲಯಬದ್ಧವಾಗಿ ಶುರುವಿಟ್ಟುಕ್ಕೊಳ್ಳುವ ಕಪ್ಪೆಗಳ ವಟರು, ಬೇಗ ಮನೆ ಸೇರಿಕೊಳ್ಳಿ ಎಂಬ ಸೂಚನೆ ನೀಡು ತ್ತಿದ್ದವು. ಕಪ್ಪೆಗಳಲ್ಲಿ ಹಲವಾರು ಪ್ರಭೇದಗಳಿವೆ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ನಮ್ಮ ಕಣ್ಣಿಗೆ ಸುಲಭವಾಗಿ ಕಾಣಿಸುವುದು ಗೋಂಕರು (ಗೋಂಟರು) ಕಪ್ಪೆ ಮತ್ತು ಮರಗಪ್ಪೆಗಳು. ಮನೆಯ ಸುತ್ತ ಠಳಾಯಿಸುವ ಗೋಂಕರು ಕಪ್ಪೆಗಳ ದೊಡ್ಡ ಧ್ವನಿ ಪೆಟ್ಟಿಗೆ ಅವು ಕೂಗುವಾಗ ಪುಗ್ಗೆಗಳಂತೆ ಉಬ್ಬಿಕೊಂಡು ಸುಟವಾಗಿ ಕಾಣಿಸುತ್ತದೆ. ಕೋಟಗನ್ನಡದಲ್ಲಿ ‘ಗೋಂಕಿ’ ಎಂದರೆ ಕುತ್ತಿಗೆ ಎಂದೂ ಅರ್ಥ.

ಕುತ್ತಿಗೆಯೇ ಪ್ರಧಾನವಾಗಿರುವ ಈ ಕಪ್ಪೆಗಳಿಗೆ ಆ ಹೆಸರು ಬಂದಿತೇನೋ. ಮಕ್ಕಳಾಗಿದ್ದ ನಮಗೆ ಮರಗಳ ಮೇಲೆ ಪ್ರೀತಿ, ಹೀಗಾಗಿ ಮರಗಪ್ಪೆಗಳೂ ಸಹಜ ವಾಗಿಯೇ ಕಣ್ಣಿಗೆ ಬೀಳುತ್ತಿದ್ದವು. ಆಕಾರ, ಗುಣಗಳಲ್ಲಿ ಇವು ಗೋಂಕರು ಕಪ್ಪೆಗಳಿಗೆ ತದ್ವಿರುದ್ಧ. ಇನ್ನುಳಿದಂತೆ ಸಾವಿರಾರು ಬೇರೆ ಬೇರೆ ಗಾತ್ರದ ಕಪ್ಪೆಗಳ ಲೆಕ್ಕವಿಟ್ಟವರಿಲ್ಲ. ಕಪ್ಪೆಗಳಿರುವಲ್ಲಿ ಹಾವುಗಳೂ ಸಹಜ. ಅದರಲ್ಲೂ ಮಳೆ ಪ್ರಾರಂಭವಾದೊಡನೆ ಘಟ್ಟದ ಹಾವುಗಳೆಲ್ಲ ನೀರಿನ ವಯಿಲಿಗೆ ಬಳಿದುಕೊಂಡು ಬಂದು ಸಪಾಟು ನೆಲ ಸಿಕ್ಕಿದೊಡನೆ ದಡ ಹತ್ತಿಕೊಳ್ಳುತ್ತವೆ. ಮಳೆಯಿಂದ ತಪ್ಪಿಸಿಕೊಳ್ಳಲು ಮತ್ತು ಆಹಾರ ಹುಡುಕಿಕೊಂಡು ಮನೆಯೊಳಗೆ ನುಗ್ಗುತ್ತವೆ. ತೆಂಗಿನಕಾಯಿ
ರಾಶಿಯಲ್ಲಿ, ಸೌದೆ ರಾಶಿಯಲ್ಲಿ, ಮನೆಯ ಜಂತಿಗಳ ಮೇಲೆ, ಹೀಗೆ ಎಲ್ಲಿ ನೋಡಿದರಲ್ಲಿ ಹಾವುಗಳು.

ಹಾವಿನ ಜೊತೆ ಸಹಜೀವನ ಅನಿವಾರ್ಯ. ಅನೇಕ ಬಾರಿ ಈ ಹಾವಿನ ಇರುವಿಕೆಯನ್ನು ಸೂಚಿಸುವುದು ಈ ಕಪ್ಪೆಗಳೇ. ಹಾವು ಕಪ್ಪೆಯೊಂದನ್ನು ಬಾಯಿಯಲ್ಲಿ ಕಚ್ಚಿದ ನಂತರ ಅದು ಬಾಯಿಯೊಳಗೆ ಸಂಪೂರ್ಣವಾಗಿ ಹೋಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಅದು ವಿಚಿತ್ರವಾದ ರೀತಿಯಲ್ಲಿ ಭಯ ಹುಟ್ಟಿಸುವಂತೆ ಆರ್ತನಾದ ಹೊರಡಿಸುತ್ತದೆ. ಅಲ್ಲಿಗೆ ಹಾವು ಇದೆಯೆಂಬ ಸಿಗ್ನಲ್ ನಮಗೆ ರವಾನೆಯಾಗುತ್ತದೆ.

ಕಾಲು ಹಾಕಿದಲ್ಲಿ ಕಪ್ಪೆಗಳು
ಕಪ್ಪೆಗಳು ದಾರಿಯ ಮೇಲೆ ಅನೇಕ ಬಾರಿ ನಮ್ಮ ಕಾಲತುಳಿತಕ್ಕೆ ಪಕ್ಕಾಗಿ ಭಗ್ನವಾಗಿ ಜಾರಿಕೊಳ್ಳುವುದುಂಟು. ನಾವೇ ಕಪ್ಪೆಗಳನ್ನು ಹಿಡಿಯುವ ಪ್ರಯತ್ನ ಮಾಡುವುದೂ ಉಂಟು. ಅಂತಹ ಸಂದರ್ಭಗಳಲ್ಲಿ ಕಪ್ಪೆಗಳು ರಕ್ಷಣಾತಂತ್ರವೊಂದನ್ನು ಪ್ರಯೋಗಿಸುತ್ತವೆ. ತಮ್ಮ ಮೂತ್ರವನ್ನು ಪಿಚಕಾರಿಯಂತೆ ಚಿಮ್ಮಿಸುತ್ತವೆ. ಅದು ಆಳೆತ್ತರಕ್ಕೆ ಅಂದರೆ ನಮ್ಮ ಕಣ್ಣಿನ ವರೆಗೂ ಚಿಮ್ಮುವುದುಂಟು. ಕಪ್ಪೆ ಉಚ್ಚೆ ಕಣ್ಣಿಗೆ ಬಿದ್ದರೆ ಕಣ್ಣು ಕುರುಡಾಗುತ್ತದೆ ಎಂದು ಹಿರಿಯರು ಎಚ್ಚರಿಸುತ್ತಾರೆ. ಇದರ
ಜೊತೆ ಕಪ್ಪೆಯ ಮೈ ತುಂಬ ಥಂಡಿ. ಹೀಗಾಗಿ ಹಿಡಿದ ಕಪ್ಪೆ ಸುಲಭವಾಗಿ ಜಾರಿ ಹೋಗುತ್ತದೆ.

ಕೆಲವೊಮ್ಮೆ ಕಪ್ಪೆ ಹಿಡಿಯಲೇ ಬೇಕಾಗುತ್ತದೆ. ಪಿಯೂಸಿ ಓದುತ್ತಿದ್ದಾಗ, ಪಠ್ಯಕ್ರಮದ ಭಾಗವಾಗಿ ಅಂಗಛೇದಕ್ಕೆ ನಾವೇ ಕಪ್ಪೆಗಳನ್ನು ತರಬೇಕಾಗಿತ್ತು. ಸರಿ, ಶಾಲೆಯಿಂದ ಮನೆಗೆ ಬಂದೊಡನೆ ನನ್ನ ಕಪ್ಪೆಬೇಟೆ ಪ್ರಾರಂಭವಾಯಿತು. ಅಂಗಛೇದಕ್ಕೆ ದೊಡ್ಡಕಪ್ಪೆ ಇದ್ದರೇ ಒಳ್ಳೆಯದು ಎಂದು ಭಾವಿಸಿಕೊಂಡಿದ್ದ ನನಗೆ ಗೋಂಕರು ಕಪ್ಪೆಯೇ ಎದುರು ಕಾಣಿಸಿತು. ಸರಿ, ಒಂದು ದೊಡ್ಡ ಬೋಗುಣಿ ಅದರ ಮೇಲೆ ಕವುಚಿ ಹಾಕಿದೆ. ನಾಲ್ಕಾರು ಗಂಟೆ ಬೋಗುಣಿಯ ಅಡಿಯಲ್ಲಿಯೇ ಇದ್ದರೆ ಅದಕ್ಕೆ ಗಾಳಿಯ ಅಭಾವವಾಗಿ ಪ್ರe ತಪ್ಪಬಹುದು ಎಂದು ನನ್ನ ಎಣಿಕೆ. ಬೆಳಿಗ್ಗೆ ಎದ್ದು ನೋಡಿದರೆ ಕಪ್ಪೆ ಅಷ್ಟೇ ಲವಲವಿಕೆಯಿಂದ ಇತ್ತು.

ಅದನ್ನು ಬಂಧಿಸಿ ಕೊಟ್ಟೆಗೆ ತುಂಬುವುದು ಅನಿವಾರ್ಯವಾಗಿತ್ತು. ಅಂತೂ ಇಂದೂ ಅದನ್ನು ಸೆರೆಹಿಡಿಯುವಲ್ಲಿಗೆ ಹರಸಾಹಸ ಎಂಬ ಶಬ್ದ ಅರ್ಥವಾಗಿತ್ತು.
ಸರಿ, ಅದನ್ನು ಶಾಲೆಯ ಪ್ರಯೋಗಾಲಯದವರೆಗೆ ಕೊಂಡೊಯ್ದzಯಿತು. ಬಯಾಲಜಿಯ ಉಪನ್ಯಾಸಕರು ಎಲ್ಲ ವಿದ್ಯಾರ್ಥಿಗಳು ತಂದ ಕಪ್ಪೆ ಗಳನ್ನೂ ಒಂದೇ ಜಾರಿನಲ್ಲಿ ಹಾಕಿ ಅವುಗಳ ಮೇಲೆ ಕ್ಲೋರೋಪಾರ್ಮ್ ಸಿಂಪಡಿಸಿದರು. ಎಲ್ಲ ಕಪ್ಪೆಗಳೂ ನಿಶ್ಚೇಷ್ಟಿತವಾದವು. ನಮಗೆಲ್ಲರಿಗೂ ಒಂದೊಂದು ಕಪ್ಪೆ ವಿತರಿಸಿದರು. ಆಶ್ಚರ್ಯವೆಂದರೆ ನಾನು ತಂದಿದ್ದ ಕಪ್ಪೆಯೇ ಅತಿ ದೊಡ್ಡದಾಗಿತ್ತು. ಅದು ನನ್ನ ತಟ್ಟೆಗೇ, ಅಲ್ಲಲ್ಲ, ಹಲಗೆಗೆ ಬಂದಿತ್ತು. ಮಾಡಿದ್ದುಣ್ಣೋ ಮಹಾರಾಯ!

ನೆಗೆಯತೊಡಗಿದ ಕಪ್ಪೆ 
ಡಿಸೆಕ್ಷನ್ ಹಲಗೆಯ ಮೇಲೆ ಕಪ್ಪೆಯನ್ನು ಅಂಗಾತ ಮಲಗಿಸಿ ಅದರ ನಾಲ್ಕೂ ಕಾಲುಗಳನ್ನು ಮೊಳೆ ಹೊಡೆದು ಹಲಗೆಗೆ ಬಂಧಿಸಿದೆ. ಹೊಟ್ಟೆಯ ಚರ್ಮ, ಅದರ ಕೆಳಗಿನ ಮಾಂಸಖಂಡವನ್ನು ಛೇದಿಸಿದೆ. ಹೃದಯಕ್ಕೆ ಲಗ್ಗೆಯಿಡಲು ಒಂದು ಬಲವಾದ ಮೂಳೆ ಅಡ್ಡವಿತ್ತು ಅದನ್ನು ಒಂದು ಉಪಕರಣದ ಸಹಾಯದಿಂದ ಕತ್ತರಿಸಲು ಮೂಳೆಗೆ ತಾಕಿಸಿ ಒತ್ತಿದ್ದೇ ತಡ, ಕಪ್ಪೆ ನೆಗೆಯಲು ಪ್ರಯತ್ನಿಸಿತು. ಅದರ ಹೋರಾಟಕ್ಕೆ ಒಂದು ಮೊಳೆ ಕಿತ್ತು ಬಂದಿತು. ದೊಡ್ಡ ಕಪ್ಪೆಗೆ
ಸಾಮೂಹಿಕ ಕ್ಲೋರೋಫಾರ್ಮ್ ಪ್ರಾಶನ ಸಾಕಾಗಿರಲಿಲ್ಲ.

ಅಂದಿನಿಂದ ಇಂದಿನ ವರೆಗೂ ಈ ಪ್ರಸಂಗ ನನ್ನ ಕಣ್ಣಿಗೆ ಕಟ್ಟಿದಂತಿದೆ. ಜೊತೆಗೆ ಆ ಕಪ್ಪೆ ನಮ್ಮದೇ ಜಾತಿಯದ್ದು! ಈ ಪಾಪವೂ ನನಗೆ ಅಂಟಿಕೊಂಡಿತು.
‘ಕಪ್ಪೆ ಕೊಂದರೆ ಪಾಪ’ ಎಂಬುದು ನಮ್ಮೂರಿನ ಹೆಚ್ಚಿನವರ ನಂಬುಗೆ. ಆದರೆ ಇದನ್ನು ನಂಬದೇ ಇದ್ದ ಕೆಲವು ಪಂಗಡಗಳು ನಮ್ಮೂರಿನಲ್ಲಿದ್ದವು. ಹೀಗಾಗಿ ಮಳೆಗಾಲದಲ್ಲಿ ಕಪ್ಪೆ ಹಿಡಿಯುವವರ ಕಾಟ. ಪೆಟ್ರೋಮ್ಯಾಕ್ಸ್ ದೀಪ, ಚಿಕ್ಕ ಬಲೆ, ಗೋಣಿ ಚೀಲ ಹಿಡಿದುಕೊಂಡಿರುವ ಎರಡು ಮೂರು ಜನರು ಗದ್ದೆಯ
ಬದಿಗಳಲ್ಲಿ ತಿರುಗಾಡುತ್ತಿದ್ದರೆ ನಮಗೆ ಆತಂಕ. ಕಪ್ಪೆಗಳ ಸಾಮೂಹಿಕ ಹತ್ಯೆ ತಡೆಯಲೂ ನಮಗೆ ಹೆದರಿಕೆ. ಎಷ್ಟೆಂದರೂ ತಂಗಳನ್ನ, ಗಂಜಿ ಗಿರಾಕಿಗಳು (ಈಗಿನ ಅರ್ಥದಲ್ಲಿ ಅಲ್ಲ) ನಾವು!

ಒಮ್ಮೆ ನಮ್ಮ ಹೈಸ್ಕೂಲಿನ ಸ್ಕೂಲ್ ಡೇ ಮುಗಿಸಿಕೊಂಡು ತಡ ರಾತ್ರಿ ಮನೆಗೆ ಕೆಲವು ಸ್ನೇಹಿತರು ಮರಳುತ್ತಿದ್ದೆವು. ನಮ್ಮ ಹಿಂದಿನಿಂದ ನಮ್ಮ ಮಯ್ಯರು ಬೈಕಿನಲ್ಲಿ ಬರುತ್ತಿದ್ದರು. ಬಹುಶಃ ಅಂದಿಗೆ ನಮ್ಮೂರಿನಲ್ಲಿ ಬೈಕ್ ಇಟ್ಟುಕೊಂಡವರು ಅವರೊಬ್ಬರೇ ಇದ್ದಿರಬೇಕು. ಬೈಕಿನ ಪ್ರಖರ ಬೆಳಕಿನಲ್ಲಿ ರಸ್ತೆಯಗುಂಟ ನೂರಾರು ಮೀಟರುಗಳವರೆಗೆ ನಿಚ್ಚಳವಾಗಿ ಕಾಣಿಸುತ್ತಿತ್ತು. ಕೋಟ ಶಾಲೆಯ ಎದುರುಗಡೆ ಸೋಮಯಾಜಿಯವರ ಮನೆಗೆ ಹೋಗುವ ದಾರಿಯಲ್ಲಿ ಒಂದು ಚಿಕ್ಕ
ಮೈದಾನವಿತ್ತು. ನಾವು ಅಲ್ಲಿ ಕ್ರಿಕೆಟ್ ಆಡುತ್ತಿದ್ದೆವು. ಮಯ್ಯರು ತಮ್ಮ ಬೈಕನ್ನು ಸರಕ್ಕನೆ ಮೈದಾನದೆಡೆಗೆ ತಿರುಗಿಸಿದರು. ಕುತೂಹಲಗೊಂಡ ನಾವೂ ಅಲ್ಲಿಗೆ ಧಾವಿಸಿದೆವು.

ಕಪ್ಪೆಗಳ ಮಾರಣಹೋಮ
ನಮಗೆ ಒಂದು ರೀತಿಯ ಆಘಾತ ಕಾದಿತ್ತು. ಅಲ್ಲಿ ಮೂರು ನಾಲ್ಕು ಜನ ನಾಲ್ಕು ಗೋಣಿಚೀಲಗಳ ತುಂಬ ಕಪ್ಪೆಗಳನ್ನು ತುಂಬಿಕೊಂಡಿದ್ದರು. ಒಂದು ಹೊಂಡ ತೋಡಿಕೊಂಡಿದ್ದರು. ತಾವು ಹಿಡಿದಿದ್ದ ಒಂದೊಂದೇ ಕಪ್ಪೆಯ ಹಿಂಗಾಲುಗಳನ್ನು ಎಳೆದು ಒಂದು ಹಲಗೆಯ ಮೇಲಿರಿಸಿಕೊಂಡು ಖಚಕ್ಕನೆ ಕತ್ತರಿಸಿ ದೇಹವನ್ನು ಮಾತ್ರ ಹೊಂಡಕ್ಕೆ ಬಿಡುತ್ತಿದ್ದರು. ಅದೊಂದು ಭೀಭತ್ಸ ದೃಶ್ಯ. ಅವರು ಕಪ್ಪೆಯ ಕಾಲುಗಳನ್ನು ಚೀನಾದೇಶಕ್ಕೆ ರಫ್ತು ಮಾಡುತ್ತಿದ್ದರಂತೆ.

ಇಲ್ಲಿಗೆ ಕೋಟದ ಕಪ್ಪೆ ಪುರಾಣಕ್ಕೆ ಜಾಗತಿಕ ಆಯಾಮ ದೊರೆಯಿತು. ಮಂಗಳೂರಿನ ಕೆಲವು ಜನಾಂಗದವರು, ಕೋಟದ ಕಪ್ಪೆ ಹಿಡಿದು ಕೇರಳದ ಕಾಸರಗೋಡಿ ನಿಂದ ದುಬೈಗೆ ಬೋಟುಗಳ ಮೂಲಕ ಸಾಗಣೆ ಮಾಡಿ ಅಲ್ಲಿಂದ ಚೀನಾದೇಶಕ್ಕೆ ರವಾನೆ ಮಾಡುತ್ತಿದ್ದಾರೆಂದು ತಿಳಿಯಿತು. ಮಯ್ಯರು ಯಾರನ್ನೋ ಮಣೂರು ಪೋಲೀಸ್ ಸ್ಟೇಶನ್ನಿಗೆ ಕಳಿಸಿ ಪೋಲೀಸರನ್ನು ಕರೆಸಿ ಮಂಡೂಕಹಂತಕರನ್ನು ಅವರಿಗೊಪ್ಪಿಸಿದರು. ಪೋಲೀಸರು ಅವರನ್ನು ಒಂದು ದಿನ ಇರಿಸಿಕೊಂಡು, ನಂತರ ಬಿಟ್ಟು ಬಿಟ್ಟರು ಎಂದು ತಿಳಿದು ಬಂತು. ಇಂದು ಕಪ್ಪೆ ಹಿಡಿಯುವವರೇನೋ ಇಲ್ಲ, ಆದರೆ ಕೀಟನಾಶಕಗಳ ಹಾವಳಿಯಿಂದ ಕಪ್ಪೆಗಳ ಸಂತತಿ ಕ್ಷಯಿಸುತ್ತಿದೆ.

ಮಲೆನಾಡಿನ ಕಾಡು ನಾಶವಾದದ್ದರಿಂದ ಹಾವುಗಳೆಲ್ಲ ಊರು ಸೇರಿಕೊಂಡವು. ಹಾವು ಹೆಚ್ಚಾದುದರಿಂದ ನವಿಲುಗಳ ಸಂತತಿಯೂ ಇಲ್ಲಿ ಕಾಣಿಸಿಕೊಂಡಿದೆ. ಕಪ್ಪೆಗಳ ಸಂತತಿ ಕಡಿಮೆಯಾಗಿ ಕೀಟಬಾಧೆ ಅತಿಯಾಗಿ ಬೆಳೆ ಕುಂಠಿತವಾಗಿದೆ. ರಾಸಾಯನಿಕ ಗೊಬ್ಬರದ ಬಳಕೆಯಿಂದ ಭೂಮಿ ನಿಸ್ಸಾರವಾಗಿದೆ. ರೈತ ಬೆಳೆ
ಬೆಳೆಯುವುದನ್ನು ಕಡಿಮೆ ಮಾಡಿದ್ದಾನೆ. ಆದರೆ ಎಲ್ಲೂ ನವಿಲುಗಳ ನರ್ತನಕ್ಕೇನೂ ಕೊರತೆಯಿಲ್ಲ. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ, ನೋಟಕ್ಕೆ ಮಯೂರ
ನರ್ತನ! ಇನ್ನೇನು ಬೇಕು. ನವಿಲು ಕುಣಿಯುತಿದೆ ನೋಡಾ. ಎಂದು ಯಕ್ಷರೂ ಕುಣಿಯತೊಡಗಿದ್ದಾರೆ, ವೇದಿಕೆಯ ಸಂಭ್ರಮಕ್ಕಾಗಿ.