Tuesday, 12th November 2024

BSNL: ಸಿಮ್ ಇಲ್ಲದೇ ಫೋನ್‌ ಕಾಲ್‌! ಬಿಎಸ್‌ಎನ್‌ಎಲ್‌ ತಂತ್ರಜ್ಞಾನಕ್ಕೆ ರಿಲಯನ್ಸ್, ಏರ್ಟೆಲ್‌ ಥಂಡಾ!

BSNL

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಈಗ ರಿಲಯನ್ಸ್ (Reliance) ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani), ಏರ್ಟೆಲ್ (Airtel) ಕಂಪನಿ ಮಾಲೀಕ ಭಾರತಿ ಮಿತ್ತಲ್‌ಗೆ (Bharti Mittal) ದೊಡ್ಡ ಹೊಡೆತ ನೀಡಲು ಸಜ್ಜಾಗಿದೆ. ಬಿಎಸ್‌ಎನ್‌ಎಲ್‌ ಈಗ ಸಿಮ್ (Sim) ಇಲ್ಲದೆ ಕರೆ ಮಾಡಲು ಬಳಕೆದಾರರಿಗೆ ಅನುಮತಿಸುವ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿದೆ. ಇದು ಅಂಬಾನಿ, ಮಿತ್ತಲ್ ಸೇರಿದಂತೆ ಹಲವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸಿಮ್ ಇಲ್ಲದೆ ಕರೆ ಮಾಡಲು ಅನುಮತಿಸುವ ಬಿಎಸ್‌ಎನ್‌ಎಲ್‌ ತಂತ್ರಜ್ಞಾನದ ಅಭಿವೃದ್ಧಿಯು ಬಳಕೆದಾರರಿಗೆ ಅದರಲ್ಲೂ ವಿಶೇಷವಾಗಿ ನೆಟ್ವರ್ಕ್ ಸಮಸ್ಯೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ವ್ಯಾಪ್ತಿ ಮತ್ತು ವಿಶ್ವಾಸಾರ್ಹ ಸಂವಹನಕ್ಕೆ ಅವಕಾಶ ನೀಡುವ ನಿರೀಕ್ಷೆ ಇದೆ. ಬಿಎಸ್‌ಎನ್‌ಎಲ್‌ ಪರಿಚಯಿಸಲಿರುವ ಸಿಮ್ ಇಲ್ಲದೆ ಕರೆ ಮಾಡಲು ಅನುಮತಿಸುವ ನೇರ ಡಿವೈಸ್ ಅನ್ನು ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಕಾರು ಬಳಕೆದಾರರು ನೇರವಾಗಿ ಉಪಗ್ರಹ ನೆಟ್‌ವರ್ಕ್‌ನ ಸಹಾಯದಿಂದ ಸಂಪರ್ಕಿಸಬಹುದು. ಈ ತಂತ್ರಜ್ಞಾನವನ್ನು ವೈಯಕ್ತಿಕ ಮತ್ತು ಸಾಧನ ಸಂವಹನವನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಇದು ಎಲ್ಲ ಸ್ಥಳದಲ್ಲೂ ಅತ್ಯುತ್ತಮ ಸಂಪರ್ಕವನ್ನು ಒದಗಿಸಬಲ್ಲದು.

BSNL

ಉಪಗ್ರಹ ಸಂವಹನದ ಆಧಾರದ ಮೇಲೆ ನೇರವಾಗಿ ಡಿವೈಸ್ ಸೇವೆಗೆ ಮೊಬೈಲ್ ಟವರ್‌ಗಳ ಅಗತ್ಯವಿಲ್ಲ. ಅದು ನೇರವಾಗಿ ಸಂಪರ್ಕಿಸಲು ಸಾಧನಗಳನ್ನು ಸಕ್ರಿಯಗೊಳಿಸುತ್ತದೆ. ಟವರ್‌ ನೆಟ್ವವರ್ಕ್‌ನಿಂದ ಕಾರ್ಯ ನಿರ್ವಹಿಸುವ ಫೋನ್‌ಗಳಂತೆಯೇ ಈ ಹೊಸ ತಂತ್ರಜ್ಞಾನವು ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌ ಮತ್ತು ಇತರ ಸ್ಮಾರ್ಟ್‌ಗ್ಯಾಜೆಟ್‌ಗಳ ನಡುವೆ ಸಂವಹನವನ್ನು ಸುಗಮಗೊಳಿಸುತ್ತದೆ.

WhatsApp Update: ಕಡಿಮೆ ಬೆಳಕಲ್ಲೂ ಉತ್ತಮ ಗುಣಮಟ್ಟದ ವಿಡಿಯೊ ಕಾಲ್‌ ಮಾಡುವುದು ಹೇಗೆ? ಬಂದಿದೆ ಹೊಸ ಫೀಚರ್‌

ಬಿಎಸ್‌ಎನ್‌ಎಲ್‌ ಮತ್ತು ವಿಯಾಸತ್ (Viasat) ಈ ನಿಟ್ಟಿನಲ್ಲಿ ಪ್ರಯೋಗ ನಡೆಸಿದ್ದು, ಇದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ನಾನ್-ಟೆರೆಸ್ಟ್ರಿಯಲ್ ನೆಟ್‌ವರ್ಕ್ (NTN) ಸಂಪರ್ಕವನ್ನು ಬಳಸಿಕೊಂಡು ಕರೆ, ಮೆಸೇಜ್‌ ಮೂಲಕ ಯಶಸ್ವಿಯಾಗಿ ಸಂದೇಶಗಳನ್ನು ಕಳುಹಿಸಿದೆ. ಈ ಪ್ರಯೋಗವು 36,000 ಕಿಲೋ ಮೀಟರ್ ದೂರದಲ್ಲಿರುವ ಉಪಗ್ರಹವನ್ನು ಬಳಸಿಕೊಂಡು ಮಾಡಲಾಗಿತ್ತು. ಇದು ತಡೆರಹಿತ ಸಂವಹನದ ಕಡೆಗೆ ಮಹತ್ವದ ಹೆಜ್ಜೆಯಾಗಿದೆ.