Friday, 13th December 2024

ಎಲ್ಲೆಲ್ಲೂ ಈಗ ಕ್ಲಬ್‌ಹೌಸ್‌ನದ್ದೇ ಮಾತು !

ಟೆಕ್‌ ಮಾತು

ಇಂದುಧರ ಹಳೆಯಂಗಡಿ

ತಂತ್ರಜ್ಞಾನ ಉತ್ತುಂಗಕ್ಕೇರಿದಂತೆಲ್ಲಾ ವಿಡಿಯೋ ಚಾಟ್, ವಿಡಿಯೋ ಆಪ್‌ಗಳು ಜನರನ್ನು ಮೋಡಿ ಮಾಡಿದ್ದು ಇತಿಹಾಸ. ಈಗ ವಿಡಿಯೋ ಸೌಲಭ್ಯವಿಲ್ಲದ ಒಂದು ಆಪ್ ಬಹಳಷ್ಟು ಜನಪ್ರಿಯತೆ ಗಳಿಸುತ್ತಿದೆ. ಅಲ್ಲಿನ ಚ್ಯಾಟ್‌ರೂಮ್ ಗಳು ಕಿಕ್ಕಿರಿದು ನೆರೆದಿದ್ದು, ಗಾಳಿಸುದ್ದಿ ಹರಡಲು ಸಹ ಅವಕಾಶವಾಗುತ್ತಿದೆ. ಈ ಹೊಸ ಆಪ್ ಕ್ಲಬ್‌ಹೌಸ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿವೆ? ನೋಡೋಣ ಬನ್ನಿ.

ನೀವು ಹೀಗೇ ಒಮ್ಮೆ ನಡೆದಾಡಿಕೊಂಡು ಹೋಗುತ್ತಿರುವಾಗ, ಒಂದಷ್ಟು ಜನರ ಗುಂಪು ಮಾತನಾಡುತ್ತಾ ಇರುತ್ತಾರೆ ಎಂದು ಅಂದುಕೊಳ್ಳಿ. ಅದನ್ನು ಕೇಳಿಸಿಕೊಳ್ಳುವ ಕುತೂಹಲ ನಿಮ್ಮಲ್ಲಿ. ಅದಕ್ಕೆ ಒಂದು ಕ್ಷಣ ಅಲ್ಲಿ ನಿಂತುಕೊಂಡು, ಅದನ್ನು ಕೇಳಿಸಿ ಕೊಳ್ಳುತ್ತೀರಿ. ಅವರ ಮಾತು-ಸಂಭಾಷಣೆ ಇಷ್ಟವಾದರೆ, ವಿಷಯದ ಬಗ್ಗೆ ಒಂದಷ್ಟು ಜ್ಞಾನವನ್ನು ನೀವು ಪಡೆಯಬೇಕು
ಎಂದಿದ್ದರೆ, ನಡುವಿನಲ್ಲಿ ನೀವೂ ಮಾತನಾಡುತ್ತೀರಿ. ಇಷ್ಟವಾಗದೇ ಹೋದರೆ, ನೇರವಾಗಿ ಮುನ್ನಡೆಯುತ್ತೀರಿ! ಇದೇ ವೈಶಿಷ್ಟ್ಯ ಒಂದು ಅಪ್ಲಿಕೇಶನ್ ರೂಪ ತಾಳಿದೆ. ಅದುವೇ ಕ್ಲಬ್ ಹೌಸ್.

ಪ್ರಸ್ತುತ ಬಹಳ ಸುದ್ದಿಯಲ್ಲಿರುವ ಹೊಸ ಮಾದರಿಯ ಸಾಮಾಜಿಕ ಮಾಧ್ಯಮವೇ ಕ್ಲಬ್‌ಹೌಸ್. ಇನ್ನಿತರ ಆಪ್ ಗಳಂತೆ ಇದರಲ್ಲಿ ಟೆಕ್ಸ್ಟ್‌ಚ್ಯಾಟ್ ಮಾಡಲು ಆಗುವುದಿಲ್ಲ ಅಥವಾ ಫೋಟೋ, ವೀಡಿಯೋಗಳನ್ನೂ ಕಳುಹಿಸಲು ಆಗುವುದಿಲ್ಲ. ಕೇವಲ ವಾಯ್ಸ್ ಚ್ಯಾಟ್ ಮೂಲಕ ಒಂದಷ್ಟು ಜನರು ಸೇರಿ ಸಂಭಾಷಣೆ ನಡೆಸುವುದೇ ಈ ಅಪ್ಲಿಕೇಶನ್ ಮುಖ್ಯ ವೈಶಿಷ್ಟ್ಯ.

೨೦೨೦ರ ಮಾರ್ಚ್ ತಿಂಗಳಿನಲ್ಲಿ ಈ ಆಡಿಯೋ ಚ್ಯಾಟ್ ಸಾಮಾಜಿಕ ಮಾಧ್ಯಮವು ಅಮೆರಿಕದಲ್ಲಿ ಹುಟ್ಟಿಕೊಂಡಿತು. ಇದರಲ್ಲಿ ನಿಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿ ಮುಂದುವರಿಯಲು, ಯಾರಾದರೊಬ್ಬ ಸ್ನೇಹಿತರು ಒಳಗೆ ಪ್ರವೇಶಿಸಲು ಆಹ್ವಾನ ನೀಡಬೇಕು. ಈ ಇನ್ವೈಟ್ ಓನ್ಲಿ ವೈಶಿಷ್ಟ್ಯವು ಕ್ಲಬ್ ಹೌಸ್‌ಅನ್ನು ಮತ್ತಷ್ಟು ವಿಶೇಷಗೊಳಿಸುತ್ತದೆ. ಆರಂಭದಲ್ಲಿ ಐಫೋನ್ ಬಳಕೆ ದಾರರಿಗೆ ಮಾತ್ರ ಇದ್ದ ಕ್ಲಬ್‌ಹೌಸ್, ಒಂದು ವರ್ಷದ ಬಳಿಕ, ಮೇ ೨೦೨೧ ರಲ್ಲಿ ಆಂಡ್ರಾಯ್ಡ ಬಳಕೆದಾರರಿಗೂ ಅವಕಾಶ ದೊರಕಿತು. ಕ್ಲಬ್‌ಹೌಸ್ ಆಂಡ್ರಾಯ್ಡ ಅಪ್ಲಿಕೇಶನ್ ಕೇವಲ ಒಂದು ತಿಂಗಳಿನಲ್ಲಿ ೫೦ ಲಕ್ಷ ಡೌನ್ ಕಂಡಿದೆ.

ಸೈನ್ ಅಪ್ ಆಗುವುದು ಹೇಗೆ?
ಇತರ ಸಾಮಾಜಿಕ ಮಾಧ್ಯಮಗಳಂತೆ ಮೊಬೈಲ್ ನಂಬರ್ ಮೂಲಕ ನಾವು ಸೈನ್‌ಅಪ್ ಆಗಬಹುದು. ಆದರೆ, ಅಲ್ಲಿಂದ
ಮುಂದುವರಿಯಬೇಕಾದರೆ, ನಮ್ಮ ಸಂಪರ್ಕದಲ್ಲಿರುವ ಯಾರಾದರು ಕ್ಲಬ್‌ಹೌಸ್ ಒಳಗೆ ಇದ್ದರೆ ಮಾತ್ರ ನಮ್ಮನ್ನು ಪ್ರವೇಶಿಸಲು ಅನುಮತಿಸಬಹುದು. ಇನ್ವೈಟ್ ಓನ್ಲಿ ಫೀಚರ್ ಇದರ ವಿಶೇಷತೆ. ಒಮ್ಮೆ ಯಾರಾದರೂ ಒಬ್ಬರು ನಿಮ್ಮನ್ನು ಒಳಗೆ ಬಿಟ್ಟರೆ, ನಂತರ ನಿಮ್ಮ ಆಸಕ್ತಿಯ ವಿಷಯಗಳನ್ನು ಆಯ್ಕೆ ಮಾಡಲು ಹಾಗೂ ಪ್ರೊಫೈಲ್ ಸೆಟ್ ಮಾಡಬಹುದು. ಪ್ರೊಫೈಲ್‌ನಲ್ಲಿ, ನಿಮ್ಮ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂ ಖಾತೆಯನ್ನೂ ಲಿಂಕ್ ಮಾಡಬಹುದು. ಮೊಬೈಲ್ ಸಂಖ್ಯೆ ಗೌಪ್ಯವಾಗಿಯೇ ಇರುತ್ತದೆ. ಯಾರಿಗೂ ಕಾಣುವುದಿಲ್ಲ.

ಕ್ಲಬ್‌ಹೌಸ್‌ನಲ್ಲಿ ಏನೆಲ್ಲಾ ಮಾಡಬಹುದು?
ಒಮ್ಮೆ ಪ್ರೊಫೈಲ್ ಸೆಟ್ ಆದ ಬಳಿಕ, ಸಕ್ರಿಯವಾಗಿರುವ ಚ್ಯಾಟ್ ರೂಮ್‌ಗಳು ಕಾಣುತ್ತದೆ. ನಿಮಗೆ ಬೇಕಾದ ರೂಮ್ ಒಳಗೆ ಹೋಗಿ, ಒಳಗಿರುವ ಸದಸ್ಯರ ಸಂಭಾಷಣೆಗಳನ್ನು ಕೇಳಬಹುದು. ವಿಷಯದಲ್ಲಿ ನಿಮ್ಮದೇನಾದರೂ ಅಭಿಪ್ರಾಯಗಳನ್ನು
ಸೇರಿಸಲು ಅಥವಾ ಅವರೊಂದಿಗೆ ನೀವೂ ಸ್ಪೀಕರ್ ಆಗಬೇಕಾದರೆ, ಮೋಡರೇಟರ್ ಬಳಿ ಅನುಮತಿ ಕೇಳಬೇಕು.

ಇದಕ್ಕಾಗಿ, ಚ್ಯಾಟ್ ರೂಮ್‌ನ ಕೆಳಭಾಗದಲ್ಲಿ ಇರುವ + ಚಿಹ್ನೆಯನ್ನು ಒತ್ತಬೇಕು. ಚ್ಯಾಟ್ ರೂಮ್ ತೆರೆಯಲು, ಯಾವುದೇ ಸಮಯ ನಿಗದಿ ಮಾಡದೇ ತತ್ ಕ್ಷಣದ ‘+ ಸ್ಟಾರ್ಟ್ ಅ ರೂಮ’ ಅನ್ನು ಆಯ್ಕೆ ಮಾಡಬಹುದು ಅಥವಾ ಯಾವುದೇ ರೂಮ್‌ ಅನ್ನು ಮುಂದೆ ಯಾವುದಾದರೂ ಸಮಯಕ್ಕೆ ನಿಗದಿ ಮಾಡಬೇಕಾದರೆ, ಕ್ಯಾಲೆಂಡರ್ ಚಿಹ್ನೆಯಲ್ಲಿರುವ ಆಯ್ಕೆಗೆ ಹೋಗಿ, ನ್ಯೂ
ಇವೆಂಟ್‌ಅನ್ನು ನಿಗದಿಪಡಿಸಬಹುದು.

ಹೀಗೆ ನಿಗದಿಪಡಿಸಿದರೆ, ಆ ಕ್ಯಾಲೆಂಡರ್‌ನಲ್ಲಿ ಅದು ಸಾರ್ವಜನಿಕವಾಗಿ ಎಲ್ಲರಿಗೂ ಕಾಣುವುದು. ಒಂದು ಚ್ಯಾಟ್‌ರೂಮಿನಲ್ಲಿ ಎಷ್ಟು ಮಂದಿ ಸಹ ಸೇರಬಹುದಾದರೂ. ಇದುವರೆಗೆ ೪-೫ ಸಾವಿರ ಮಂದಿ ಒಂದು ಚ್ಯಾಟ್‌ರೂಮಿನಲ್ಲಿ ಸೇರಿದ ದಾಖಲೆಗಳು ಇವೆ. ಸೆಲೆಬ್ರಿಟಿಗಳ ಚಾಟ್‌ರೂಮ್‌ನಲ್ಲಿ ಈ ರೀತಿಯ ವಿದ್ಯಮಾನವಾಗುತ್ತದೆ. ಏನೂ ಬೇಡ, ಕೇವಲ ಒಬ್ಬ ಕೇಳುಗನಾಗಿ ಇರುತ್ತೇನೆ ಎಂದರೂ ಇರಬಹುದು. ಮುಖಪುಟದಲ್ಲಿ ಕಾಣುವ ಯಾವುದೇ ಚ್ಯಾಟ್ರೂಮ್ ಒಳಗೆ ಹೋಗಿ ಮೂಕ ಪ್ರೇಕ್ಷಕರಾಗಿ ಇತರರ ಸಂಭಾಷಣೆಗೆ ಕಿವಿಗೊಡಬಹುದು.

ರೆಕಾರ್ಡಿಂಗ್ ಅವಕಾಶ ಇಲ್ಲ!
ಇದರಲ್ಲಿ ಎಲ್ಲವೂ ಲೈವ್. ನಂತರ ಕೇಳೋಣ ಎಂದು ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ಇಡಲು ಆಗುವುದಿಲ್ಲ. ಹೀಗಿದ್ದರೂ, ಅದನ್ನು ಸೇವ್ ಮಾಡಲೇಬೇಕು ಎಂದಿದ್ದರೆ, ಇನ್ನೊಂದು ಡಿವೈಸ್ ಮೂಲಕ ಆಡಿಯೋ ರೆಕಾರ್ಡ್ ಮಾಡಬಹುದು.

ಕ್ಲಬ್‌ಹೌಸ್‌ನ್ನು ಸರಳವಾಗಿ ಹೇಳಬೇಕೆಂದರೆ ಇದು ವೀಡಿಯೋ ಸೌಲಭ್ಯ ಇಲ್ಲದ ಜೂಮ್ ಮೀಟಿಂಗ್. ಆದರೆ ಯಾರೂ ಸೇರ ಬಹುದು. ಆದರೆ ಜೂಮ/ಮೀಟ್‌ನಂತೆ ಲಿಂಕ್ ಹಂಚಿಕೊಂಡು ಸೇರಿಕೊಳ್ಳುವ ಫೀಚರ್ ಮಾತ್ರವಲ್ಲದೆ, ಕ್ಲಬ್ ಹೌಸಿನಲ್ಲಿ
ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡುತ್ತದೆ. ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವುದೇ ಇದರ ಮುಖ್ಯ ಉದ್ದೇಶ. ಆಪ್ ಒಳಗೆ ಟೆಕ್ಸ್ಟ್‌ಚ್ಯಾಟ್ ಮಾಡುವ ಆಯ್ಕೆ ಇಲ್ಲದಿರುವುದು ಕ್ಲಬ್‌ಹೌಸ್‌ನ ಒಂದು ಕೊರತೆ ಎಂದು ಕೆಲವರು ಗುರುತಿಸಿದ್ದಾರೆ.
ಇಲ್ಲೂ ಬಂದಿವೆ ಪ್ರೈವೆಸಿ ಪ್ರಶ್ನೆಗಳು!

ಕೇವಲ ಆಡಿಯೋ ಫೀಚರ್ ಇದ್ದರೂ, ಕ್ಲಬ್‌ಹೌಸ್ ಅಪ್ಲಿಕೇಶನ್ ಬಳಕೆದಾರರ ಮಾಹಿತಿ , ಖಾಸಗೀತನ ಹಾಗೂ ಭದ್ರತೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯಿತು ಎಂಬ ಮಾತಿನಂತೆ, ನಾವು ಅಕ್ಷರ ರೂಪದಲ್ಲಿ ಸಂದೇಶ ರವಾನಿಸುವುದಕ್ಕಿಂತ, ಬಾಯಿಮಾತಿನಲ್ಲಿ ಹೇಳುವುದು ಬಹಳ ವೇಗವಾಗಿ ತಲುಪುತ್ತದೆ ಹಾಗೂ ಮನಸ್ಸಿಗೂ ಬಹಳ ಹತ್ತಿರದಲ್ಲಿಯೇ ತಾಗುತ್ತದೆ.

ಕ್ಲಬ್‌ಹೌಸ್ ಆಪ್ ಒಳಗೆ ನಾವು ಯಾವುದೇ ಚ್ಯಾಟ್ ರೂಮಿನೊಳಗೆ ಪ್ರವೇಶ ಪಡೆಯಬಹುದು. ಆರಂಭದಲ್ಲಿಯೇ ಉಲ್ಲೇಖಿಸಿ ದಂತೆ, ಇತರರು ಮಾತನಾಡುವುದನ್ನು ಅಧಿಕೃತವಾಗಿ ನಾವು ಕೇಳಬಹುದು. ಮಾತನಾಡುವಾಗ ನಮಗೆ ಹಿಡಿತ ಇಲ್ಲದಿದ್ದರೆ, ಮುಂದೆ ಅದುವೇ ನಮಗೆ ಮುಳ್ಳಾಗಬಹುದು. ಅದಲ್ಲದೆ, ನೀವು ಯಾವ ಚ್ಯಾಟ್ ರೂಮ್ ಒಳಗೆ ಪ್ರವೇಶಿಸುತ್ತಿದ್ದೀರಿ ಎಂಬುವುದು ನಿಮ್ಮ ಫಾಲೋವರ್ಸ್ ಗಳಿಗೆ ನೋಟಿಫಿಕೇಶನ್ ಮೂಲಕವೂ ಗೊತ್ತಾಗುತ್ತದೆ.

ಇದರಿಂದ ಒಳ್ಳೆಯದೂ ಆಗಬಹುದು, ಕೆಟ್ಟದ್ದೂ ಆಗಬಹುದು. ನೀವು ಯಾವ ಚ್ಯಾಟ್ ರೂಮ್ ಒಳಗೆ ಹೋಗುವಿರಾ ಎಂಬು ವುದು ಮುಖ್ಯ. ವಿವಿಧ ಚ್ಯಾಟ್‌ರೂಮ್ ಗಳ ಪ್ರವೇಶವನ್ನು ಆಧರಿಸಿ, ಅವರ ಚಟುವಟಿಕೆಗಳ ವಿಶ್ಲೇಷಣೆಯೂ ನಡೆಯುತ್ತದೆ!

ಇದರೊಂದಿಗೆ, ಚ್ಯಾಟ್ ರೂಮ್ ಆಕ್ಟಿವ್ ಆಗಿರುವಷ್ಟು ಹೊತ್ತು ಕ್ಲಬ್‌ಹೌಸ್ ಅಪ್ಲಿಕೇಶನ್ ಎಲ್ಲಾ ಸಂಭಾಷಣೆಯನ್ನೂ ರೆಕಾರ್ಡ್ ಮಾಡಿಡುತ್ತದೆ. ತನ್ನ ನಿಯಮಾವಳಿಗಳಲ್ಲಿ ಉಲ್ಲೇಖಿಸಿದಂತೆ, ಯಾರಾದರೂ ಕೇಸ್  ಫೈಲ್ ಮಾಡಿದರೆ, ಅದರ ಕುರಿತು ವಿಚಾರಣೆ ನಡೆಸಲು ಒಂದು ದಾಖಲೆ ಆಗುವ ಉದ್ದೇಶದಿಂದ ತಾತ್ಕಾಲಿಕವಾಗಿ ರೆಕಾರ್ಡ್ ಮಾಡಲಾಗುವುದು ಎಂದಿದೆ.

ಇದು ಅಪ್ಲಿಕೇಶನ್ ಡೆವಲಪರ್ಸ್ ಹಿಡಿತದಲ್ಲಿಯೇ ಇರುವುದರಿಂದ, ಎಷ್ಟು ಕಾಲ ಬೇಕಾದರೂ ಅವರು ಹಿಡಿತದಲ್ಲಿ ಇಟ್ಟುಕೊಳ್ಳ ಬಹುದು. ಹೊರತು ಸಾಮಾನ್ಯವಾಗಿ ಇತರರಿಗೆ ಅದನ್ನು ಪಡೆಯುವ ಅವಕಾಶ ಇಲ್ಲ. ನಾವು ಕೇವಲ ಪ್ರೊಫೈಲ್ ಫೋಟೋ ಹಾಕಲು ಅವಕಾಶ ಇದ್ದರೂ ಸಹ, ಅಪ್ಲಿಕೇಶನ್ನಲ್ಲಿ ನಮ್ಮ ಗ್ಯಾಲರಿಯಲ್ಲಿ ಇರುವ ಎ ಫೋಟೊ-ವೀಡಿಯೋಗಳನ್ನು ಎಕ್ಸೆಸ್ ಮಾಡಲು ಅದು ಅನುಮತಿಯನ್ನು ಕೇಳುತ್ತದೆ. ಇತರ ಸಾಮಾಜಿಕ ಮಾಧ್ಯಮಗಳೂ ಸಹ ಅನುಮತಿಯನ್ನು ಕೇಳಿದರೂ, ಅಲ್ಲಿ ಚ್ಯಾಟಿಂಗ್ ನಲ್ಲಿ ಮೀಡಿಯಾ ಶೇರಿಂಗ್ ಸಹ ಆಗುತ್ತದೆ. ಆದರೆ ಇಲ್ಲಿ ಕೇವಲ ಮಾತನಾಡಲು, ಇಡೀ ಗ್ಯಾಲರಿಗೆ ಅನುಮತಿ ನೀಡುತ್ತೇವೆ. ಅದರೊಂದಿಗೆ, ಇಡೀ ಸಂಪರ್ಕ ಪಟ್ಟಿಗೂ ಅನುಮತಿ ನೀಡುತ್ತೇವೆ. ಹಲವರು ಕ್ಲಬ್‌ಹೌಸ್‌ಗೆ ಬರದೇ ಇದ್ದರೂ, ಅವರ ಮೊಬೈಲ್ ಸಂಖ್ಯೆ ನಮ್ಮೊಂದಿಗೆ ಇದ್ದು, ನಾವು ಎಕ್ಸೆಸ್ ಕೊಟ್ಟಾಗ, ಅವರ ಸಂಪರ್ಕ ಸಂಖ್ಯೆಯೂ ಕ್ಲಬ್‌ಹೌಸ್ ಅಪ್ಲಿ ಕೇಶನ್‌ಗೆ ಸಿಗುತ್ತದೆ.

ಜನಪ್ರಿಯ ಆಪ್
ಕ್ಲಬ್‌ಹೌಸ್ ಆಪ್ ಜನಬಳಕೆಗೆ ದೊರೆತು ಇದೀಗ ಕೇವಲ ಒಂದು ವರ್ಷ. ಇಷ್ಟರಲ್ಲೇ ಬಹಳಷ್ಟು ಜನಪ್ರಿಯತೆಯನ್ನು ಕಂಡಿರುವ ಕ್ಲಬ್‌ಹೌಸ್, ಈಗಾಗಲೇ ಇತರ ಸಾಮಾಜಿಕ ಮಾಧ್ಯಮಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದೆ. ಕ್ಲಬ್‌ಹೌಸ್ ನ್ನು ಹೋಲುವ ಇತರ ಮಾಧ್ಯಮಗಳು ಹೊರಬಂದಿವೆ.

ಟ್ವಿಟ್ಟರ್ ಅಪ್ಲಿಕೇಶನ್, ಸ್ಪೇಸ್ ಫೀಚರ್‌ಅನ್ನು ಪರಿಚಯಿಸಿದೆ. ಹಾಗೆಯೇ ಫೇಸ್ಬುಕ್, ಲಿಂಕ್ಡ್‌ಇನ್, ಸ್ಪೊಟಿಫೈ ಇತ್ಯಾದಿ ಆಪ್  ಸಹ ಇನ್ಬಿಲ್ಟ ಆಗಿ ಆಡಿಯೋ ಚಾಟ್ ಫೀಚರ್‌ಗಳನ್ನು ಪರಿಚಯಿಸಿ, ಕ್ಲಬ್‌ಹೌಸ್‌ಗೆ ಸವಾಲು ಒಡ್ಡುತ್ತಿದೆ. ಈಗಾಗಲೇ ಬೇರೆ ಬೇರೆ ಸಾಮಾಜಿಕ ಮಾಧ್ಯಮಗಳಲ್ಲಿ ಒಳ್ಳೆಯ ಫಾಲೋರ್ಸ್ ಅನ್ನು ಸಂಪಾದಿಸಿರುವವರು, ಅದರ ಮುಂದುವರಿಯಲು ಬಯಸುತ್ತಾರೆ.

ಕೇವಲ ಮಾತುಗಳನ್ನು ಆಡುವ ಅವಕಾಶವಿರುವ ಕ್ಲಬ್ ಹೌಸ್ ತನ್ನ ಹೊಸ ವೈಶಿಷ್ಟ್ಯದೊಂದಿಗೆ ಹೊಸ ಜನಪ್ರಿಯ ಸಾಮಾಜಿಕ ಮಾಧ್ಯಮವಾಗಿ ರೂಪುಗೊಳ್ಳುತ್ತಿದೆ. ಬೀದಿಯಲ್ಲಿ ಮಾತನಾಡುವ ಹಳೆಯ ಕಾಲದ ಹರಟೆಕಟ್ಟೆಯನ್ನು ಹೋಲುವ ಕ್ಲಬ್‌ಹೌಸ್, ಇಂದಿನ ಆಧುನಿಕ ತಲೆಮಾರನ್ನು ಆಕರ್ಷಿಸಿರುವುದು ವಿಶೇಷ. ಅಮಿತಾಭ್ ಬಚ್ಚನ್‌ರಂತಹ ಜನಪ್ರಿಯ ವ್ಯಕ್ತಿಗಳು ಇಲ್ಲಿ ಚಾಟ್‌ರೂಮ್ ಹೊಂದಿದ್ದು, ಅದು ಯಾವಾಗಲೂ ಕಿಕ್ಕಿರಿದಿರುತ್ತದೆ!

ಮಾತುಗಳನ್ನು ಕೇಳಲು ಎಷ್ಟೊಂದು ಜನಕ್ಕೆ ಕುತೂಹಲ! ಅದು ಒಂದು ರೀತಿಯಲ್ಲಿ ಕೆಟ್ಟ ಕುತೂಹಲ ಎಂದರು ಅಡ್ಡಿಲ್ಲ.
ಕ್ಲಬ್‌ಹೌಸ್ ಜನಪ್ರಿಯತೆಯು ರೇಡಿಯೋ ಕಾಲದ ನೆನಪುಗಳನ್ನು ಮರುಕಳಿಸುತ್ತಿದೆ. ವಿಡಿಯೋ ಅವಕಾಶವಿಲ್ಲದ,
ಕೇವಲ ಮಾತುಗಳನ್ನು ಮಾತ್ರ ಆಡಲು ಅವಕಾಶವಿರುವ ಹೊಸತೊಂದು ಅಪ್ಲಿಕೇಶನ್ ಭಾರಿ ಜನಮನ್ನಣೆಯನ್ನು
ಗಳಿಸುತ್ತಿರುವುದು ಇಂದಿನ ಟ್ರೆಂಡ್!

ನಿಮ್ಮದೇ ಚಾಟ್ ರೂಮ್
ಕ್ಲಬ್‌ಹೌಸ್‌ನಲ್ಲಿ ನಿಮ್ಮದೇ ಆದ ಚ್ಯಾಟ್ ರೂಮ್‌ಗಳನ್ನು ತೆರೆಯುವ ಅವಕಾಶವೂ ಇದೆ. ಮೂರು ರೀತಿಯ ರೂಮ್ ಗಳನ್ನು ತೆರೆಯಬಹುದು. ಒಂದು ಓಪನ್, ಅದರಲ್ಲಿ ನಿಮ್ಮ ಫಾಲೋವರ್ಸ್ ಜೊತೆಗೆ ಯಾರೂ ಪ್ರವೇಶ ಪಡೆಯಬಹುದು. ಎರಡನೇಯದು, ಸೋಶಿಯಲ್‌ ಇದನ್ನು ಮಾಡಿದರೆ, ನೀವು ಫಾಲೋ ಮಾಡುವ ಬಳಕೆದಾರರ ಜೊತೆ ಮಾತನಾಡಬಹುದು.
ಮೂರನೆಯದು ಪ್ರೈವೇಟ್‌. ಇದು ಹೆಸರೇ ಸೂಚಿಸುವಂತೆ, ಯಾರೊಂದಿಗೆ ನೀವು ಯಾರೊಂದಿಗಾದರೂ ಚ್ಯಾಟ್ ರೂಮ್ ಲಿಂಕ್ ಹಂಚಿಕೊಂಡರೆ, ಕೇವಲ ಅವರು ಇಲ್ಲಿ ಸೇರಬಹುದು.

ಚೀನಾ ಲಿಂಕ್?
ಇಲ್ಲೊಂದು ಸೂಕ್ಷ್ಮ ಪ್ರಶ್ನೆಯೂ ಎದುರಾಗಿದೆ. ಸ್ಟ್ಯಾನಾರ್ಡ್ ಇಂಟರ್ನೆಟ್ ಒಬ್ಸರ್ವೇಟರಿ ಅವರ ಅಧ್ಯಯನದ ಪ್ರಕಾರ, ಕ್ಲಬ್‌ ಹೌಸ್ ಅಪ್ಲಿಕೇಶನ್ ಬ್ಯಾಕ್ ಎಂಡ್‌ನಲ್ಲಿ ಚೀನಾ ಮೂಲದ ಸ್ಟಾರ್ಟ್‌ಅಪ್ ಕಂಪನಿ ಅಗೋರಾ ಕೆಲಸ ಮಾಡುತ್ತಿದೆ. ಚ್ಯಾಟ್‌ ರೂಮ್‌ನಲ್ಲಿ ನಡೆಯುವ ಎಲ್ಲಾ ಸಂಭಾಷಣೆಗಳ ರಾ ರೆಕಾರ್ಡೆಡ್ ಫಾಲ್ ಗಳು ಚೀನಾ ಸರ್ಕಾರವನ್ನೂ ತಲುಪುವ ಸಾಧ್ಯತೆ ಯಿದೆ. ಇದರೊಂದಿಗೆ, ಭಾರತದಲ್ಲಿ ಇನ್ನೂ ಸಹ ಸರಿಯಾದ ಡೇಟಾ ಸೆಕ್ಯುರಿಟಿ ಕುರಿತಾದ ಕಾನೂನು ಇಲ್ಲ. ೨೦೨೧ರಲ್ಲಿ ಕೇಂದ್ರ ಸರ್ಕಾರ ನೂತನ ಐಟಿ ರೂಲ್ಸ ಜಾರಿಗೆ ತಂದರೂ, ಅದು ಇನ್ನೂ ಹಲವಾರು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಇಲ್ಲೂ ಟ್ರೋಲಿಂಗ್!
ಕ್ಲಬ್‌ಹೌಸ್ ಬಳಕೆದಾರರೂ ಟ್ರೋಲಿಂಗ್‌ನಿಂದ ಹೊರತಾಗಿಲ್ಲ. ಬೇರೆ ದೇಶಗಳಲ್ಲಿ ಈಗಾಗಲೇ ಸೈಬರ್ ಬೆದರಿಕೆ, ಟ್ರೋಲಿಂಗ್, ಲಿಂಗ-ವರ್ಣ ಭೇದ ಇತ್ಯಾದಿ ಪ್ರಕರಣಗಳು ದಾಖಲಾಗಿವೆ. ತಮಾಷೆಯೆಂದರೆ ಚೀನಾ ದೇಶವು ಈಗಾಗಲೇ ಕ್ಲಬ್‌ಹೌಸ್‌ಗೆ ನಿಷೇಧ ಹೇರಿದೆ. ಆದರೆ, ಚೀನಾದ ಕೆಲವು ಸಂಸ್ಥೆಗಳು ಈ ಅಪ್ಲಿಕೇಷನ್‌ಗೆ ತಾಂತ್ರಿಕ ಬೆಂಬಲ, ಬ್ಯಾಕ್ ಎಂಡ್ ಸಪೋರ್ಟ್ ನೀಡುತ್ತಿವೆ!