Saturday, 14th December 2024

ಕ್ಸೆನೋಬಾಟ್ ಎಂಬ ಜೀವಂತ ರೋಬಾಟ್

ಟೆಕ್ ಸೈನ್ಸ್

ಎಲ್.ಪಿ.ಕುಲಕರ್ಣಿ

ಇತ್ತೀಚೆಗೆ ಕಪ್ಪೆಯ ಚರ್ಮದಿಂದ ತೆಗೆದ ಜೀವಕೋಶವೊಂದು ಹೊಸ ಜೀವಿಯಾಗಿ ರೂಪುಗೊಂಡಿದೆ. ಆದರೆ ಅದು ಬೆಳೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ತಂತಾನೇ ಬೆಳೆಯುವ ಹೊಸ ಜೀವಿಯನ್ನು ಮಾನವ ಸೃಷ್ಟಿಸಿದರೆ, ಅದು ಹುಟ್ಟುಹಾಕುವ ಸಮಸ್ಯೆಗಳಾದರೂ ಎಂತಹವು! ಅದಕ್ಕೆ ಉತ್ತರ ಎಲ್ಲಿದೆ?

ಇಂದು ಬಯೋ ಟೆಕ್ನಾಲಜಿ (ಜೈವಿಕ ತಂತ್ರಜ್ಞಾನ) ಆಗಾಧವಾಗಿ ಬೆಳೆಯುತ್ತಿದೆ. ಆ ಕ್ಷೇತ್ರದಲ್ಲಿ ನವನವೀನ ಸಂಶೋಧನೆಗಳು ನಡೆಯುತ್ತಿವೆ. ಕೃತಕ ಅಂಗಾಂಗ ಗಳ ಜೋಡಣೆಯಿಂದ ಹಿಡಿದು ಆಕರ ಕೋಶಗಳ (ಸ್ಟೆಮ್ ಸೆಲ್ಸ್) ನ್ನು ಬಳಸಿಕೊಂಡು ಮನುಷ್ಯನ ಅಂಗಾಂಗಗಳನ್ನು ಬೆಳೆಸುವ ಮಟ್ಟಿಗೆ ಬಂದುನಿಂತಿದೆ.

ಈ ರೀತಿ ಅಂಗಾಂಗಗಳನ್ನು ಬೆಳೆಯಬಹುದಾದರೆ, ಸವೆದು ಹೋಗುವ ಮೂಳೆಗಳನ್ನೋ, ದೃಷ್ಟಿಹೀನ ವಾಗಿರುವ ಕಣ್ಣುಗಳಲ್ಲೂ ಪುನಃ ದೃಷ್ಟಿ ಚುರುಕಾಗುವ ರೀತಿ ಮರುಸೃಷ್ಟಿಸಿ ಮುಪ್ಪನ್ನೂ ಸಹ ಮುಂದೂಡ ಬಹುದೆ? ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಈ ಹಿಂದೆ ‘ಡಾಲಿ’ ಎಂಬ ಹೆಸರಿನ ತದ್ರೂಪಿ ಕುರಿ ಸೃಷ್ಟಿ
ಯಾಗಿದ್ದನ್ನು ನೋಡಿದ್ದೇವೆ. ಇದರ ಹಿಂದೆಯೇ ತದ್ರೂಪಿ ಹಂದಿ, ನಾಯಿ, ಬೆಕ್ಕುಗಳೂ ಸಹ ಬಂದವು. ಮುಂದುವರಿದು ಪ್ರಯೋಗಾಲಯದಲ್ಲಿ ಒಂದು ಜೀವಂತ ಕೋಶವನ್ನೇ ಸೃಷ್ಟಿಸಿದರೆ ಹೇಗಿರುತ್ತದಲ್ಲವೇ?

ಸ್ವತಂತ್ರ ಜೀವಿ
ಈ ಕುರಿತು ‘ಸೈನ್ಸ್ ರೋಬೋಟಿಕ್ಸ್’ ಪತ್ರಿಕೆಯ ಇತ್ತೀಚಿನ ಸಂಚಿಕೆ ಸಂಗತಿಯೊಂದನ್ನು ಪ್ರಕಟಿಸಿದೆ. ಕಪ್ಪೆಗಳ ಭ್ರೂಣದ ಚರ್ಮದಿಂದ ತೆಗೆದ ಕೋಶಗಳನ್ನು ಪ್ರತ್ಯೇಕಿಸಿ ಪೋಷಿಸಿದಾಗ, ಒಂದೊಂದೂ ಕೋಶ ಸ್ವತಂತ್ರ ಜೀವಿಗಳಂತೆ ಈಜಲು ಪ್ರಾರಂಭಿಸಿದವು. ಅಷ್ಟೇ ಅಲ್ಲ, ತಮ್ಮ ಸುತ್ತಲ ಪರಿಸರವನ್ನು ಶುಚಿ ಗೊಳಿಸಲು ತೊಡಗಿದವು. ಇಂತಹ ವಿಸ್ಮಯವನ್ನು ಕಂಡು ವಿಜ್ಞಾನಿಗಳು ಆ ಜೀವಿಗಳಿಗೆ ಇಟ್ಟ ಹೆಸರೇ ‘ಕ್ಸೆನೊಬೋಟ್ಸ್’.

ಸಾಮಾನ್ಯವಾಗಿ ಕಪ್ಪೆಯ ಚರ್ಮದಲ್ಲಿರುವ ಸೂಕ್ಷ್ಮ ಕೂದಲು ರೂಪದ ಸಿಲಿಯ ಗುಚ್ಛ, ರೋಗಕಾರಕ ಜೀವಿ ಗಳನ್ನು ಹೊರದಬ್ಬುತ್ತದೆ. ಅವೇನಾದರೂ ಅನ್ಯ ಮಾರ್ಗ ಹುಡುಕಿ ದೇಹದೊಳಗೆ ನುಸುಳಲು ಪ್ರಯತ್ನಿಸಿ ದರೆ ಸಿಂಬಳದಂತಹ ಅಂಟು ಸುರಿಸಿ ಅ ತಟಸ್ಥಮಾಡಿಬಿಡುತ್ತವೆ. ಇದನ್ನು ಗಮನಿಸಿದ ನಂತರ ವಿಜ್ಞಾನಿಗಳಿಗೆ ಒಂದು ಸತ್ಯ ಮನವರಿಕೆಯಾಗಿದೆ. ವಿಕಾಸಕ್ಕಾಗಿ ನೂರಾರು ವರ್ಷ ವೀಕ್ಷಣೆ ಮಾಡಬೇಕಾಗಿಲ್ಲ. ಕಣ್ಣಮುಂದೆ ಕೆಲವೇ ಗಂಟೆಗಳಲ್ಲಿ ಇದನ್ನು ನೋಡಬಹುದು ಎನ್ನುತ್ತಿದ್ದಾರೆ.

ಜೀವಂತ ರೋಬಾಟ್?
ಈ ಕ್ಸೆನೊಬೋಟ್ಸಗಳು ಆಹಾರವಿಲ್ಲದೇ ಹತ್ತು ದಿನಗಳವರೆಗೆ ಬದುಕಬಲ್ಲವು! ಅಲ್ಲದೇ, ಇವುಗಳನ್ನೇನಾದರೂ ಸಕ್ಕರೆ ದ್ರಾವಣದಲ್ಲಿ ಹಾಕಿದರೆ ಇವುಗಳ ಆಯಸ್ಸು ಇನ್ನೂ ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಕ್ಸೆನೊಬೊಟ್‌ಗಳನ್ನು ಪ್ರಪಂಚದ ಮೊಟ್ಟಮೊದಲ ಜೀವಂತ ರೊಬಾಟ್‌ ಗಳೆಂದು ವಿಜ್ಞಾನಿಗಳು ಕರೆಯುತ್ತಿದ್ದಾರೆ!

ಕ್ಸೆನೊಬಾಟ್‌ಗಳ ಸಮೂಹ (ಪ್ರಕಾಶಮಾನವಾದ ತಾಣಗಳು) ಈಜುತ್ತವೆ ಮತ್ತು ಸಣ್ಣ ಕಣಗಳನ್ನು ತಳ್ಳುತ್ತವೆ ಎಂಬುದಾಗಿ, ಈ ಸಂಶೋಧನಾ ಲೇಖನವನ್ನು ಬರೆದ ಡೌಗ್ಲಾಸ್ ಬ್ಲಾಕಿಸ್ಟನ್ ಗುರುತಿಸಿದ್ದಾರೆ. ಈ ವಿಕಸನವು ನೂರಾರು ಸಾವಿರ ವರ್ಷಗಳಲ್ಲಿ ಹೊಸ ಬಳಕೆಯನ್ನು ಕಂಡು ಕೊಂಡ ಒಂದು ರೀತಿಯ ಪರಿಣಾಮ ವಲ್ಲ ಎಂದು ಸಂಶೋಧಕ ಲೆವಿನ್ ಹೇಳುತ್ತಾರೆ. ‘ಇದು ನಿಮ್ಮ ಕಣ್ಣುಗಳ ಮುಂದೆ ಎರಡು ಅಥವಾ ಮೂರು ದಿನಗಳಲ್ಲಿ ಸಂಭವಿಸುತ್ತದೆ.’ ಈ ಕ್ಸೆನೊಬಾಟ್ಸ್’ಗಳು ಯಾವುದೇ ನರ ಕೋಶಗಳನ್ನು ಮತ್ತು ಮಿದುಳನ್ನು ಹೊಂದಿಲ್ಲ. ಇವು ಪ್ರತಿಯೊಂದೂ ಅರ್ಧ ಮಿಲಿಮೀಟರ್ ಅಗಲ ಗಾತ್ರದೊಂದಿಗೆ- ಅತ್ಯಂತ ತೆಳುವಾದ ಟ್ಯೂಬ್‌ಗಳ ಮೂಲಕ ಈಜಬಲ್ಲವು. ಕಬ್ಬಿಣದ ಆಕ್ಸೈಡ್‌ನ ಸಣ್ಣ ಕಣಗಳಿಂದ ಕೂಡಿದ ಅಖಾಡಕ್ಕೆ ಹಾಕಿದಾಗ, ಕ್ಸೆನೊಬಾಟ್ ಗಳ ಅವಶೇಷಗಳನ್ನು ರಾಶಿಯಾಗಿ ಗುಡಿಸಬಹುದು.

ಈ ಕ್ಸೆನೊಬಾಟ್ಸ್ ತಮ್ಮನ್ನು ತಾವೇ ಗುಣಪಡಿಸಿಕೊಳ್ಳಬಲ್ಲವು; ಕತ್ತರಿಸಿದ ನಂತರ, ಬಾಟ್‌ಗಳು ಗೋಳಾಕಾರಕ್ಕೆ ಮರಳುತ್ತವೆ. ಅತಿ ಸೂಕ್ಷ್ಮ ಜೀವಿ ಕ್ಸೆನೋ ಬಾಟ್ ಜೀವನದ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ. ಪೋಷಕಾಂಶಗಳು ಸಿಕ್ಕರೂ ಇವು ಏಕೆ ಬೆಳೆಯುತ್ತಿಲ್ಲ ಎಂಬ ವಿಚಾರ ವಿಜ್ಞಾನಿಗಳಲ್ಲಿ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಕ್ಸೆನೊಬಾಟ್ ಸುಮಾರು ೫೦೦ ಮೈಕ್ರೊಮೀಟರ್‌ಗಳಷ್ಟು ಉದ್ದವಾಗಿದೆ ಮತ್ತು ಕಪ್ಪೆಗಳ ಕೋಶಗಳಿಂದ ಮಾಡಲ್ಪಟ್ಟಿದೆ, ಆದರೂ ಅದು ನಿಜವಾದ ಕಪ್ಪೆಯಂತೆ ಕಾಣುವುದಿಲ್ಲ, ಅದರಂತೆ ಕಾರ್ಯವನ್ನೂ ಸಹ ನಿರ್ವಹಿಸುವುದಿಲ್ಲ.

ಈ ಕ್ಸೆನೋಬಾಟ್‌ಗಳು ಯಾವ ರೀತಿಯ ಕೆಲಸಗಳನ್ನು ಮಾಡಬಹುದೆಂದು ಇನ್ನೂ ಸ್ಪಷ್ಟವಾಗಿಲ್ಲ. ಸೂಕ್ಷ್ಮ ಜಲಮಾರ್ಗಗಳು, ಅಪಧಮನಿಗಳು ಅಥವಾ ಇತರ ಸಣ್ಣ ಜಾಗಗಳನ್ನು ಇವು ಸ್ವಚ್ಛಗೊಳಿಸಬಹುದೆಂದು ಅಂದಾಜಿಸುತ್ತಿದ್ದಾರೆ. ಇಂತಹ ಹೊಸ ಜೀವಿಗಳ ಆಗಮನದೊಂದಿಗೆ ನೈತಿಕ ಸಮಸ್ಯೆಗಳು ಮುನ್ನೆಲೆಗೆ ಬರುತ್ತವೆ ಎಂಬುದಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯದ ಕೋಬಿ ಲೈನ್ಸ್ ಎಚ್ಚರಿಸಿದ್ದಾರೆ.

ಅಂತೆಯೇ ಈ ಕ್ಸೆನೊಬಾಟ್‌ಗಳು ಒಂದೊಂದಾಗಿ ಸೇರಿ ಬೃಹತ್ ಗಾತ್ರದ ಮತ್ತೊಂದು ಜೀವಿಯಾಗಿ ರೂಪುಗೊಂಡರೆ? ಕಪ್ಪೆಯಿಂದ ಸೃಷ್ಟಿಯಾದ ಇವು ಮುಂದೆ ಕಪ್ಪೆಯನ್ನೇ ಮೀರಿಸುವ ಬೃಹತ್ ಗಾತ್ರದ ಕಪ್ಪೆಗಳಾಗಿ ರೂಪಾಂತರಗೊಂಡರೆ? ಈಗ ಇವುಗಳಲ್ಲಿ ನರಕೋಶಗಳು ರಚನೆಯಾಗಿದ್ದು ಕಾಣುತ್ತಿಲ್ಲ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಒಂದು ವೇಳೆ ಇನ್ನಷ್ಟು ದಿನಗಳಲ್ಲಿ ನರಕೋಶಗಳು ಬೆಳೆದು ಬುದ್ಧಿಶಾಲಿ ಜೀವಿಯಾಗಿ ಮಾರ್ಪಟ್ಟರೆ? ಎಂಬ ಸಾವಿರಾರು ಪ್ರಶ್ನೆಗಳು ನೈತಿಕ ಸಮಸ್ಯೆಗಳ ಜತೆ ತಾಂತ್ರಿಕ ಪ್ರಶ್ನೆಗಳನ್ನೂ ಹುಟ್ಟುಹಾಕುತ್ತವೆ. ಈ ರೀತಿಯ ಹೊಸ ಜೀವಿಗಳ ಸೃಷ್ಟಿಯು ಮುಂದಿನ ದಿನಮಾನಗಳಲ್ಲಿ ಮಾನವರಲ್ಲಿ ಆದರೂ ಅಚ್ಚರಿ ಪಡಬೇಕಾಗಿಲ್ಲ.