ಬಾಹ್ಯಾಕಾಶ ವಾಸಕ್ಕೆ ಮಾನವನ ಮುನ್ನುಡಿ
ಅಜಯ್ ಅಂಚೆಪಾಳ್ಯ
ಮಂಗಳ ಗ್ರಹಕ್ಕೆ ತಲುಪುವ ಮಾನವನ ಅಭಿಯಾನದಲ್ಲಿ ಮೊನ್ನೆ ಶುಕ್ರವಾರ ಹೊಸದೊಂದು ಹೆಜ್ಜೆಯನ್ನು ಊರಿದಂತಾಗಿದೆ. ನಾಸಾ ಕಳುಹಿಸಿರುವ ಪರ್ಸಿವರೆನ್ಸ್ ಹೆಸರಿನ ರೋವರ್ ವಾಹನವು ಸುರಕ್ಷಿತವಾಗಿ ಮಂಗಳನ ಅಂಗಳದಲ್ಲಿ ಕಾಲೂರಿದ್ದು ಮಾತ್ರವಲ್ಲ, ಹಲವು ಉತ್ತಮ ಗುಣಮಟ್ಟದ ಫೊಟೋಗಳನ್ನು ಸಹ ಕಳುಹಿಸಿದೆ.
ಮಂಗಳನ ಅಂಗಳಕೆ ಇಳಿಯುವ ಮುನ್ನ, ಆ ಆರುಚಕ್ರ ವಾಹನದ ಸೆಲ್ಫಿಯನ್ನು ಸಹ ತೆಗೆದಿರುವುದು ವಿಶೇಷ. ರಾಕೆಟ್ ಚಾಲಿತ ಕ್ರೇನ್ ಒಂದರ ಸಹಾಯದಿಂದ ಆ ರೋವರ್ ವಾಹನವು, ನಿಧಾನವಾಗಿ ತೂಗಾಡುತ್ತಾ, ಕೆಳಗಿಳಿಯುವ ಆ ಛಾಯಾಚಿತ್ರವು ಬಾಹ್ಯಾಕಾಶ ಯಾನದ ಒಂದು ಐತಿಹಾಸಿಕ ಕ್ಷಣವಾಗಿ ದಾಖಲಾಗಿದೆ. ಈ ರೀತಿ ತೇಲಾಡುತ್ತಾ ಕೆಳಗಿಳಿದ ಆ ರೋವರ್, ಕೆಲವೇ ಕ್ಷಣಗಳಲ್ಲಿ ಮಂಗಳನ ನೆಲದ ಮೇಲೆ ಕಾಲೂರಿತು ಮಾತ್ರವಲ್ಲ ಉತ್ತಮ ಗುಣಮಟ್ಟದ ಹಲವು ಫೋಟೋಗಳನ್ನು ಭೂಮಿಗೆ ಕಳುಹಿಸಿ, ಅಲ್ಲಿನ ಹೊಸ ಮಾಹಿತಿಯನ್ನು ರವಾನಿಸಿತು.
ಬೇರೊಂದು ಲೋಕಕ್ಕೆ ಇಳಿಯುತ್ತಿರುವ ರೋವರ್‌ನ ಈ ಫೋಟೋ, ನಾಸಾ ವಿಜ್ಞಾನಿಗಳಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಏಕೆಂದರೆ, ಈ ರೀತಿ ಒಂದು ಅತ್ಯಾಧುನಿಕ ಪ್ರಯೋಗಾಲಯವನ್ನು ಹೊಂದಿರುವ ರೋವರ್ ನಿಧಾನವಾಗಿ ಕೆಳಗಿಳಿಯುವ ಛಾಯಾಚಿತ್ರ ದೊರಕಿದ್ದು ಇದೇ ಮೊದಲು.
ಉತ್ತಮ ಗುಣಮಟ್ಟದ ಕ್ಯಾಮೆರಾ ಮತ್ತು ಇತರ ಸೂಕ್ಷ್ಮಸಂವೇದಿ ಉಪಕರಣಗಳನ್ನು ಹೊಂದಿರುವ ರೋವರ್‌ನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ ಆ ಕ್ರೇನ್, ಕೆಲವೇ ಕ್ಷಣಗಳಲ್ಲಿ ತನ್ನಲ್ಲಿರುವ ಪುಟಾಣಿ ರಾಕೆಟ್‌ಗಳ ಸಹಾಯದಿಂದ ತುಸುದೂರ ಚಲಿಸಿ, ಮಂಗಳನ
ಅಂಗಳದಲ್ಲಿ ಬಿದ್ದು ನಾಶವಾಯಿತು. ಈ ಪ್ರಕ್ರಿಯೆಯಲ್ಲಿ ರೋವರ್‌ನ ಯಾವುದೇ ಭಾಗಗಳಿಗೆ ಹಾನಿಯುಂಟು ಮಾಡದೇ ಇದ್ದುದು ವಿಶೇಷ. ಈ ನಡುವೆ, ಬಾಹ್ಯಾಕಾಶ ನೌಕೆಯಿಂದ ಕೆಳಗಿಳಿಯುವ ಆ ಏಳು ನಿಮಿಷಗಳ ಸಮಯವು ವಿಜ್ಞಾನಿಗಳಿಗೆ ಆತಂಕವನ್ನೂ ಉಂಟುಮಾಡಿತ್ತು. ಏಕೆಂದರೆ, ಭೂಮಿಯಿಂದ ಅಷ್ಟು ದೂರ ಚಲಿಸಿದ ರೋವರ್, ಮಾತೃನೌಕೆಯಿಂದ ಹೊರಗೆ ಬಂದು, ಮಂಗಳನ ಅಂಗಳದ ಮೇಲೆ ಇಳಿಯುವ ಕೆಲಸವು ಕ್ಲಿಷ್ಟ . .
ಅದರಲ್ಲಿ ಯಶಸ್ಸನ್ನು ಪಡೆದ ನಾಸಾ ವಿಜ್ಞಾನಿಗಳು, ಮುಂದಿನ ದಿನಗಳಲ್ಲಿ ಮಂಗಳನಿಂದ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಕಲೆಹಾಕುವ ನಿರೀಕ್ಷೆಯಲ್ಲಿದ್ದಾರೆ. ರೋವರ್ ವಾಹನದಲ್ಲಿರುವ ಆರು ಕ್ಯಾಮೆರಾಗಳು ಉತ್ತಮ ಫೋಟೋಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದ್ದು, ಈಗಾಗಲೇ ಕೆಲವು ಅಪರೂಪದ ಚಿತ್ರಗಳನ್ನು ಕಳುಹಿಸಿವೆ. ಈ ವಾಹನವು ಮಂಗಳನ ಅಂಗಳಕ್ಕೆೆ ತೂತು ಮಾಡಿ, ಕಲ್ಲಿನ ಚೂರುಗಳನ್ನು ರಾಶಿ ಹಾಕಲಿದ್ದು,2031ರಲ್ಲಿ ಮಂಗಳ ಗ್ರಹವನ್ನು ತಲುಪುವ ಇನ್ನೊಂದು ರೋವರ್ ಆ
ಕಲ್ಲುಗಳನ್ನು ಭೂಮಿಗೆ ತರಲು ಪ್ರಯತ್ನ ನಡೆಸಲಿವೆ!
ಈ ನಡುವೆ, ರೋವರ್‌ನ ಜತೆಗಾರನಾಗಿ ಪುಟಾಣಿ ಹೆಲಿಕಾಪ್ಟರ್ ಸಹ ಮಂಗಳನನ್ನು ತಲುಪಿದ್ದು, ಅಲ್ಲಿ ಅದು ಹಾರಾಟ ನಡೆಸ ಲಿದೆ. ಇದು ಪ್ರಮುಖ ಚಟುವಟಿಕೆ ಎನಿಸಿದೆ. ಜತೆಗೆ, ಮಂಗಳನಲ್ಲಿ ಹಿಂದೆ ಇದ್ದ ಸೂಕ್ಷ್ಮ ಜೀವಿಗಳ ಪಳೆಯುಳಿಕೆಗಳ ಹುಡುಕಾಟ ವೂ ನಡೆಯಲಿದೆ. ಇವೆಲ್ಲವೂ ಮುಂದೊಂದು ದಿನ ಮಾನವನು ಮಂಗಳನ ಮೇಲೆ ವಾಸ ಮಾಡುವ ಸಾಹಸಕ್ಕೆ ಪೂರಕ ಎನಿಸ ಬಲ್ಲವು.