Friday, 13th December 2024

Sensex: ಸೆನ್ಸೆಕ್ಸ್‌ 759 ಅಂಕ ಜಿಗಿತ, ಲಾಭದ ಹಳಿಗೆ ಅದಾನಿ ಸ್ಟಾಕ್ಸ್‌, ನಿಫ್ಟಿ 24,100

Sensex: Sensex rallies 700 points, Nifty above 24,000; Adani stocks surge

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಇಂದು (ಶುಕ್ರವಾರ) ಸೆನ್ಸೆಕ್ಸ್‌ (Sensex) ಮತ್ತು ನಿಫ್ಟಿ ಎರಡೂ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್‌ 759 ಅಂಕ ಏರಿಕೆಯಾಗಿ 79,802 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 216 ಅಂಕ ಏರಿಕೆಯಾಗಿ 24,138ಕ್ಕೆ ಸ್ಥಿರವಾಯಿತು. ರಿಲಯನ್ಸ್‌ ಇಂಡಸ್ಟ್ರೀಸ್‌, ಭಾರ್ತಿ ಏರ್‌ಟೆಲ್‌ ಮತ್ತು ಫಾರ್ಮಾ ಸ್ಟಾಕ್ಸ್‌ಗಳು ಏರಿಕೆ ದಾಖಲಿಸಿತು.

ಸೆನ್ಸೆಕ್ಸ್‌ ಸ್ಟಾಕ್ಸ್‌ಗಳ ಪೈಕಿ ಸನ್‌ ಫಾರ್ಮಾ ಮತ್ತು ಭಾರ್ತಿ ಏರ್‌ಟೆಲ್‌ ಏರಿಕೆ ದಾಖಲಿಸಿತು. ಐಸಿಐಸಿಐ ಸೆಕ್ಯುರಿಟೀಸ್‌ ಷೇರಿನ ರೇಟಿಂಗ್‌ ಅನ್ನು ಮೇಲ್ದರ್ಜೆಗೆ ಏರಿಸಿದ್ದರಿಂದ ಷೇರಿನ ದರ ಹೆಚ್ಚಳವಾಗಿದೆ. ಏರ್‌ಟೆಲ್‌ ಷೇರು ದರದಲ್ಲಿ ಶೇ 7% ಹೆಚ್ಚಳವಾಯಿತು. ಮಹೀಂದ್ರಾ ಆಂಡ್‌ ಮಹೀಂದ್ರಾ, ರಿಲಯನ್ಸ್‌ ಇಂಡಸ್ಟ್ರೀಸ್‌, ಎಲ್‌ ಆಂಡ್‌ಟಿ, ಅದಾನಿ ಪೋರ್ಟ್ಸ್‌ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್‌ ಷೇರುಗಳು 2% ಏರಿಕೆಯಾಯಿತು. ಪವರ್‌ ಗ್ರಿಡ್‌, ಇಂಡಸ್‌ಲ್ಯಾಂಡ್‌ ಬ್ಯಾಂಕ್‌ ಮತ್ತು ಎಸ್‌ಬಿಐ ಷೇರುಗಳು ಇಳಿಕೆ ದಾಖಲಿಸಿತು.

ಅಮೆರಿಕದಲ್ಲಿ ಲಂಚದ ಆರೋಪ ಎದುರಿಸುತ್ತಿದ್ದ ಅದಾನಿ ಗ್ರೂಪ್‌ನ ಷೇರುಗಳು ಕಳೆದ ಮೂರು ದಿನಗಳಿಂದ ಚೇತರಿಸುತ್ತಿವೆ. ಒಂದೇ ವಾರದಲ್ಲಿ ಲಾಭದ ಹಳಿಗೆ ಬಹುತೇಕ ಸಮೀಪಿಸಿದೆ. ಶುಕ್ರವಾರ ಅದಾನಿ ಸ್ಟಾಕ್ಸ್‌ಗಳು ಶೇ 9% ಏರಿಕೆ ದಾಖಲಿಸಿತು. ಅದಾನಿ ಗ್ರೀನ್‌ ಎನರ್ಜಿ ಮತ್ತು ಅದಾನಿ ಎನರ್ಜಿ ಸಲ್ಯೂಷನ್ಸ್‌ 9% ಏರಿಕೆಯಾಯಿತು. ಅದಾನಿ ಪವರ್‌ ಮತ್ತು ಅದಾನಿ ಟೋಟಲ್‌ ಗ್ಯಾಸ್‌ ಶೇ 5% ಹೆಚ್ಚಳವಾಯಿತು. ಅದಾನಿ ಪೋರ್ಟ್ಸ್‌, ಅದಾನಿ ವಿಲ್ಮರ್‌, ಅಂಬುಜಾ ಸಿಮೆಂಟ್‌, ಎಸಿಸಿ ಷೇರುಗಳ ದರದಲ್ಲೂ ಶೇ 2% ಹೆಚ್ಚಳವಾಯಿತು.

ಅದಾನಿ ಕಂಪನಿಗಳ ಒಟ್ಟು ಷೇರು ಮಾರುಕಟ್ಟೆ ಮೌಲ್ಯ ಒಂದು ಲಕ್ಷದ 37 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನು 60,000 ಕೋಟಿ ರೂ. ಸೇರಿದರೆ, ನವೆಂಬರ್‌ 21ರಿಂದ ಉಂಟಾಗಿದ್ದ ಎಲ್ಲ ನಷ್ಟ ಭರ್ತಿಯಾಗಲಿದೆ. ನವೆಂಬರ್‌ 20ರಂದು ಅಮೆರಿಕದ ಕೋರ್ಟ್‌, ಅದಾನಿ ಗ್ರೂಪ್‌ ವಿರುದ್ಧ ಲಂಚದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಇದರ ಬೆನ್ನಲ್ಲೇ ಅದಾನಿ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 2 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟವಾಗಿತ್ತು. ಆದರೆ ಅದಾನಿ ಗ್ರೂಪ್‌ ತನ್ನ ವಿರುದ್ಧದ ಆರೋಪಗಳನ್ನು ಬಲವಾಗಿ ನಿರಾಕರಿಸಿತ್ತು. ಇನ್ನೂ 12 ತಿಂಗಳುಗಳ ಕಾಲ ಸಾಲದ ಮರು ಪಾವತಿಗೆ ಬೇಕಾದಷ್ಟು ಫಂಡ್‌ಗೆ ಕೊರತೆ ಇಲ್ಲ ಎಂದು ತನ್ನ ಆರ್ಥಿಕ ಶಕ್ತಿ ಪ್ರದರ್ಶನ ಮಾಡಿತ್ತು.

ಎರಡನೆಯದಾಗಿ ಜಪಾನ್‌ ಮೂಲದ ಪ್ರಮುಖ ಬ್ಯಾಂಕ್‌ಗಳು, ಅಮೆರಿಕದ ಲಂಚದ ಆರೋಪದ ಹೊರತಾಗಿಯೂ, ಅದಾನಿ ಗ್ರೂಪ್‌ ಜತೆಗಿನ ಒಪ್ಪಂದಗಳನ್ನು ಮುಂದುವರಿಸಲು ನಿರ್ಧರಿಸಿವೆ. ಇದರಿಂದ ಷೇರು ಹೂಡಿಕೆದಾರರಲ್ಲಿ ವಿಶ್ವಾಸ ಮರುಕಳಿಸಿದೆ. ಷೇರುಗಳು ಗಣನೀಯವಾಗಿ ಚೇತರಿಸಿವೆ.

2025ರಲ್ಲಿ ಎಂಟಿಆರ್‌ ಫುಡ್ಸ್‌ ಪ್ರವರ್ತಕರ ಐಪಿಒ ಸಂಭವ

ಎಂಟಿಆರ್‌ ಫುಡ್ಸ್‌ನ ಮಾಲೀಕ ಸಂಸ್ಥೆಯಾದ, ನಾರ್ವೆ ಮೂಲದ ಒರ್‌ಕಲ್ ಎಎಸ್‌ಎ ಕಂಪನಿಯು 2025ರಲ್ಲಿ ಎಂಟಿಆರ್‌ ಫುಡ್ಸ್‌ನ ಐಪಿಒ ನಡೆಸಲು ಉದ್ದೇಶಿಸಿದೆ. ಈ ಐಪಿಒ ಗಾತ್ರ ಸುಮಾರು 3,320 ಕೋಟಿ ರೂ.ಗಳಷ್ಟಿರುವ ನಿರೀಕ್ಷೆ ಇದೆ.‌ ಪತಂಪಲ್ಲಿ ಯಜ್ಞ ನಾರಾಯಣ ಮಯ್ಯ ಮತ್ತು ಸೋದರರು ಆರಂಭಿಸಿದ್ದ ಮಾವಳ್ಳಿ ಟಿಫಿನ್‌ ರೂಮ್‌ ಎಂದು ಪ್ರಸಿದ್ಧವಾಗಿದ್ದ ಎಂಟಿಆರ್‌ ರೆಸ್ಟೊರೆಂಟ್‌ 1924ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಿತ್ತು. ಆದರೆ ಬಳಿಕ ಇನ್‌ಸ್ಟಂಟ್‌ ಫುಡ್‌ ಬಿಸಿನೆಸ್‌ಗೆ ಎಂಟಿಆರ್‌ ಬದಲಾಗಿತ್ತು. 2007ರಲ್ಲಿ ನಾರ್ವೆಯ ಕಂಪನಿಯು ಎಂಟಿಆರ್‌ ಫುಡ್ಸ್ ಅನ್ನು ಖರೀದಿಸಿತ್ತು.

ಐಟಿ ಷೇರುಗಳ ಜಿಗಿತ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಾಹಿತಿ ತಂತ್ರಜ್ಞಾನ ಷೇರುಗಳು ಕೆಲ ದಿನಗಳಿಂದ ಏರಿಕೆಯಾಗುತ್ತಿವೆ. ಇನ್ಫೋಸಿಸ್‌ ಮತ್ತು ಟಿಸಿಎಸ್‌ ಷೇರು ದರದಲ್ಲಿ ನವೆಂಬರ್‌ನಲ್ಲಿ ಇದುವರೆಗೆ ಶೇ 7% ಏರಿಕೆಯಾಗಿದೆ. ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಆಯ್ಕೆಯಾದ ಬಳಿಕ, ಡಾಲರ್‌ ಪ್ರಬಲವಾಗುವ ಹಾಗೂ ಸರ್ಕಾರದ ವೆಚ್ಚ ಹೆಚ್ಚಳವಾಗುವ ನಿರೀಕ್ಷೆ ಇರುವುದರಿಂದ ಐಟಿ ಷೇರುಗಳು ಚೇತರಿಸಿವೆ.