Wednesday, 11th December 2024

ಸ್ಮಾರ್ಟ್‌ ಫೋನ್‌ ಆರೋಗ್ಯ ನಿಮ್ಮ ಕೈಯಲ್ಲಿ !

ಟೆಕ್ ನೋಟ

ಶಶಿಧರ ಹಾಲಾಡಿ

ಸ್ಮಾರ್ಟ್ ಫೋನ್‌ಗಳನ್ನು ಇಂದು ಎಲ್ಲರೂ ಉಪಯೋಗಿಸುತ್ತಿದ್ದಾರೆ. ಆದರೆ, ಅದಕ್ಕೆ ಆಗಬಹುದಾದ ವೈರಸ್‌ದಾಳಿಯ ಕುರಿತು ಹೆಚ್ಚಿನವರಿಗೆ ತಿಳಿದಿಲ್ಲ! ಸ್ಮಾರ್ಟ್ ಫೋನ್‌ಗೆ ವೈರಸ್ ದಾಳಿಯಾಗದಂತೆ ಮಾಡಲು ಏನು ಮಾಡಬಹುದು?

ಹಳ್ಳಿಯಿಂದ ದಿಲ್ಲಿಯ ತನಕ ಈಗ ಬಹುಪಾಲು ಎಲ್ಲರ ಕೈಲೂ ಸ್ಮಾರ್ಟ್ ಫೋನ್. ಫೋಟೋ ತೆಗೆಯುವುದೇನು, ಸೆಲಿ ತೆಗೆಯುವುದೇನು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದೇನು, ವಿಡಿಯೋ ಮಾಡುವುದೇನು, ಅದನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವುದೇನು –
ಸ್ಮಾರ್ಟ್-ನ್ ಬಂದು ಜಗತ್ತೇ ಬದಲಾಗಿದೆ. ಜತೆಗೆ, ಆನ್ ಲೈನ್ ಖರೀದಿ, ಪಾವತಿ, ಹಣ ವರ್ಗಾವಣೆಗೂ ಸ್ಮಾರ್ಟ್ ಫೋನ್ ಸಹಕಾರಿ.

ಆನ್‌ಲೈನ್ ಪಾವತಿ, ಆನ್‌ಲೈನ್ ಮೂಲಕ ನಾನಾ ರೀತಿಯ ಸೇವೆಯನ್ನು ಪಡೆಯಲು ಸರಕಾರವೇ ಪ್ರೋತ್ಸಾಹಿಸುತ್ತಿರುವುದರಿಂದಾಗಿ, ಸ್ಮಾರ್ಟ್ ಫೋನ್‌ನ ಜನಪ್ರಿಯತೆಯನ್ನು ಟೀಕಿಸುವಂತೆಯೂ ಇಲ್ಲ, ಜರಿಯುವಂತೆಯೂ ಇಲ್ಲ. ಆನ್‌ಲೈನ್ ಕ್ಲಾಸ್, ರೈಲ್ವೆ ಟಿಕೀಟು ಬುಕಿಂಗ್, ಜನಸಾಮಾನ್ಯರಿಗೆ ಸರಕಾರದ ಸೇವೆ ಪಡೆಯಲು ವೆಬ್‌ಸೈಟ್‌ನಲ್ಲಿ ನೋಂದಣಿ ಹೀಗೆ ಸ್ಮಾರ್ಟ್ ಫೋನ್ ಇಂದು ಎಲ್ಲರ ಬದುಕಿನ ಅವಿಭಾಜ್ಯ ಅಂಗ ಎನಿಸಿದೆ.

ಒಂದು ಅಂದಾಜಿನ ಪ್ರಕಾರ ಜಗತ್ತಿನ ಜನಸಂಖ್ಯೆಯ ಶೇ.೮೪ರಷ್ಟು ಜನ ಸ್ಮಾರ್ಟ್ ಫೋನ್ ಬಳಸು ತ್ತಾರೆ! ನಮ್ಮ ನಿಮ್ಮೆಲ್ಲರ ಕೈಯಲ್ಲಿರುವ ಸ್ಮಾರ್ಟ್ ಫೋನ್ ಉತ್ತಮ ಸ್ಥಿತಿಯಲ್ಲಿ ಇರುವುದು ತೀರಾ ಮುಖ್ಯ. ಬದುಕಿನ ಹಲವು ಮಜಲುಗಳಲ್ಲಿ ಪ್ರಮುಖ ಪಾತ್ರವಹಿಸುವ ಸ್ಮಾರ್ಟ್ ಫೋನ್ ಗೆ ವೈರಸ್ ದಾಳಿಯಾದರೆ? ಅಂತಹ ವೈರಸ್‌ಗಳಿಂದ ಸ್ಮಾರ್ಟ್ ಫೋನ್ ಕೆಟ್ಟು ಹೋದರೆ? ಇಂತಹ ಸಾಧ್ಯತೆ ಇದೆಯೆ? ಖಂಡಿತ ಇದೆ. ಜನಸಾಮಾನ್ಯರು ಹೆಚ್ಚು ಹೆಚ್ಚು ಸ್ಮಾರ್ಟ್ ಫೋನ್ ಉಪಯೋಗಿಸಿದಂತೆಲ್ಲಾ, ಅದರ ಮಾಹಿತಿ ಕದಿಯುವವರು, ಅದಕ್ಕೆ ವೈರಸ್ ಎಂಬ ಪ್ರೋಗ್ರಾಂ ಹಬ್ಬಿಸುವವರು ಹೆಚ್ಚು ಹೆಚ್ಚು ಕ್ರಿಯಾಶೀಲರಾಗುತ್ತಿದ್ದಾರೆ. ಅಮಾಯಕ ಬಳಕೆದಾರರಿಗೆ ಗೊತ್ತೇ ಆಗದಂತೆ ಒಂದು ಸ್ಮಾರ್ಟ್ ಫೋನ್ ಒಳಗೆ ವೈರಸ್ ತೂರಿಸಬಹುದು ಎಂಬ ವಿಚಾರವೇ ದಿಗಿಲು ಹುಟ್ಟಿಸುವಂತಹದ್ದು. ಮತ್ತು ಇಂತಹ ಕುಕೃತ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಸೈಬರ್ ಸೆಕ್ಯುರಿಟಿ ಸಂಸ್ಥೆ ಕ್ಯಾಪೆರಸ್ಕಿಯು ೨೦೨೧ರಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ೩.೫ ಮಿಲಿಯ ಮೊಬೈಲ್ ಫೋನ್‌ಗಳಿಗೆ ವೈರಸ್ ದಾಳಿ ನಡೆದಿದೆ!

ಬಳಕೆದಾರರಿಗೆ ಗೊತ್ತೇ ಆಗದಂತೆ ಸ್ಮಾರ್ಟ್ ಫೋನ್‌ಗಳು ವೈರಸ್ ದಾಳಿಗೆ ಗುರಿಯಾಗಬಹುದು. ನಮ್ಮ ಸ್ಮಾರ್ಟ್ ಫೋನ್‌ಗಳಿಗೆ ಸ್ಪಾಮ್ ರೂಪದಲ್ಲಿ ಬರುವ ಟೆಕ್ಸ್ಟ್ ಮೆಸೇಜ್, ಕೆಲವು ಇ ಮೇಲ್‌ಗಳಲ್ಲಿ ವೈರಸ್ ಇರುತ್ತದೆ. ಅಂದರೆ, ಕುತಂತ್ರಾಶ ಇರುತ್ತದೆ. (ಮಾಲ್‌ವೇರ್). ಅಕಸ್ಮಾತ್ ಆ ಇಮೇಲ್‌ಗಳನ್ನು ಅಥವಾ ಅವುಗಳ ಅಟ್ಯಾಚ್‌ಮೆಂಟ್‌ಗಳನ್ನು ತೆರೆದಾಗ ಕುತಂತ್ರಾಂಶಗಳು ಸ್ಮಾರ್ಟ್ ಫೋನ್ ಒಳಗೆ ಪ್ರವೇಶಿಸುತ್ತವೆ.

ಇನ್ನೂ ವಿಶೇಷವೆಂದರೆ, ಸಾಕಷ್ಟು ಜನರ ಸ್ಮಾರ್ಟ್ ಫೋನ್ ನಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಕುತಂತ್ರಾಂಶ ಅಥವಾ ಮಾಲ್‌ವೇರ್ ನುಸುಳಿದೆ! ಸೈಬರ್ ಸೆಕ್ಯುರಿಟಿ ಸಂಸ್ಥೆ ಜಿಂಪಿರಿಯಂ ನೆಡೆಸಿದ ಸಮೀಕ್ಷೆಯಂತೆ, ಜಗತ್ತಿನ ಸುಮಾರು ಶೇ.೨೦ರಷ್ಟು ಮೊಬೈಲ್‌ಗಳಲ್ಲಿ ಮಾಲ್‌ವೇರ್ ಪ್ರವೇಶಿಸಿದೆ. ಮತ್ತು ಶೇ.೪೦ರಷ್ಟು ಮೊಬೈಲ್‌ಗಳಿಗೆ ಮಾಲ್‌ವೇರ್ ದಾಳಿಯ ಸಾಧ್ಯತೆ ಸದಾ ಕಾಡುತ್ತಲೇ ಇರುತ್ತದೆ.

ಹಮ್ಮಿಂಗ್‌ಬರ್ಡ್ ವೈರಸ್
೨೦೧೬ರಲ್ಲಿ ಇಂತಹ ಒಂದು ಮಾಲ್‌ವೇರ್ ಅಥವಾ ಕುತಂತ್ರಾಂಶ ವಿಶ್ವದ ಎಲ್ಲಾ ಕಡೆ ಹಾವಳಿ ನಡೆಸಿತ್ತು. ಹಮ್ಮಿಂಗ್ ಬರ್ಡ್ ಎಂಬ ಹೆಸರಿನ ವೈರಸ್, ಜಗತ್ತಿನ ಹತ್ತು ಮಿಲಿಯ ಸ್ಮಾರ್ಟ್ ಫೋನ್‌ಗಳಲ್ಲಿ ಸೇರಿಕೊಂಡಿತ್ತು. ಜತೆಗೆ ೮೫ ಮಿಲಿಯ ಉಪಕರಣಗಳನ್ನು ಅಪಾಯಸಂಭಾವ್ಯತೆಗೆ ತಳ್ಳಿತ್ತು. ಕುತಂತ್ರಾಂಶ, ವೈರಸ್‌ಗಳು ಸ್ಮಾರ್ಟ್ ಫೋನ್ ಮೇಲೆ ಹೇಗೆ ದಾಳಿ ಮಾಡುತ್ತವೆ? ಎಲ್ಲರಿಗೂ ತಿಳಿದಂತೆ, ಇಂದು ಸ್ಮಾರ್ಟ್ ಫೋನ್‌ಗಳಲ್ಲಿ  ಕಂಪ್ಯೂಟರ್‌ ನಲ್ಲಿರುವಂತೆಯೇ ಒ.ಎಸ್. ಇರುತ್ತದೆ. ಕಂಪ್ಯೂಟರ್‌ನ ಹಲವು ಕೆಲಸಗಳನ್ನು ಸ್ಮಾರ್ಟ್ ಫೋನ್ ಮೂಲಕವೇ ಮಾಡಬಹುದು.

ಸಹಜವಾಗಿ, ಒಂದು ವೈರಸ್ ಕಂಪ್ಯೂಟರ್‌ನ್ನು ಪ್ರವೇಶಿಸುವಂತೆಯೇ, ಸ್ಮಾರ್ಟ್ ಫೋನ್‌ನ್ನೂ ಪ್ರವೇಶಿಸಬಲ್ಲದು. ಕೆಲವು ವೈರಸ್‌ಗಳು ಸ್ಮಾರ್ಟ್ ಫೋನ್‌ನ್ನು ಪ್ರವೇಶಿಸಿದ ತಕ್ಷಣ, ನಿರಂತರವಾಗಿ ದ್ವಿಗುಣಗೊಳ್ಳುತ್ತಾ ಹೋಗುತ್ತವೆ. ವೈರಸ್ ಎಂಬುದು ಸಹ ಒಂದು ಪ್ರೋಗ್ರಾಮ್ ಆಗಿದ್ದು, ಅವು
ನಿರಂತರವಾಗಿ ದ್ವಿಗುಣಗೊಳ್ಳುತ್ತಾ ಹೋದಂತೆ, ಸ್ಮಾರ್ಟ್ ಫೋನ್‌ನಲ್ಲಿರುವ ಮೆಮೊರಿಯು ಖರ್ಚಾಗುತ್ತದೆ. ಮೆಮೊರಿ ತುಂಬಾ ವೈರಸ್ ತುಂಬಿ ಕೊಳ್ಳುತ್ತವೆ.

ಮಾಹಿತಿ ಕಳವು
ಇನ್ನು ಕೆಲವು ವೈರಸ್‌ಗಳು ಸ್ಮಾರ್ಟ್ ಫೋನ್‌ನಲ್ಲಿರುವ ಮಾಹಿತಿಯನ್ನು ಸಹ ಕದಿಯಬಲ್ಲವು. ವೈಯಕ್ತಿಕ ಮಾಹಿತಿ, ಕಾಂಟಾಕ್ಟ್ ಲಿಸ್ಟ್, ಬ್ಯಾಂಕ್ ಯೂಸರ್ ಐಡಿ ಮೊದಲಾದವುಗಳನ್ನು ಸಂಗ್ರಹಿಸಿ, ಲೀಕ್ ಮಾಡುವ ವೈರಸ್‌ಗಳು ಸಹ ಇವೆ. ಇನ್ನು ಕೆಲವು ವೈರಸ್‌ಗಳು ಗೂಢಚಾರಿಕೆಯನ್ನೂ
ಮಾಡಬಲ್ಲವು – ಸ್ಮಾರ್ಟ್ ಫೋನ್‌ನ ಲೊಕೇಶನ್‌ನ್ನು ದಾಖಲೆ ಮಾಡುತ್ತಾ, ಅದನ್ನು ಲೀಕ್ ಮಾಡಬಲ್ಲವು.

ಫ್ಲುಬೋಟ್ ವೈರಸ್

೨೦೨೧ರಲ್ಲಿ ಆಸ್ಟ್ರೇಲಿಯಾದಲ್ಲಿ ಮೊದಲು ಹರಡಿದ ಫ್ಲುಬೋಟ್ ವೈರಸ್ ಒಂದು ರೀತಿಯಲ್ಲಿ ಗೂಢಚಾರಿಕೆ ಮಾಡುವ ವೈರಸ್ ಎನ್ನಬಹುದು. ವೈರಸ್ ರೂಪದ ಆ ಪ್ರೋಗ್ರಾಮ್ ಬಿಡುಗಡೆ ಗೊಂಡ ಎಂಟು ವಾರಗಳಲ್ಲಿ ೧೬,೦೦೦ ಸ್ಮಾರ್ಟ್ ಫೋನ್‌ನಲ್ಲಿ ಅಡಗಿ ಕುಳಿತಿತ್ತು. ಟೆಕ್ಸ್ಟ್ ಮೆಸೇಜ್ ಮೂಲಕ ಅಂದ್ರೋಯ್ದ್ ಮತ್ತು ಐಫೋನ್ ಸ್ಮಾರ್ಟ್ ಫೋನ್‌ಗಳಿಗೆ ಬರುವ ಈ ವೈರಸ್, ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ ಹ್ಯಾಕರ್‌ಗಳಿಗೆ ಲಭ್ಯವಾಗುವಂತೆ ಮಾಡಬಲ್ಲದು.

ವೈರಸ್‌ನ ಚಿಹ್ನೆಗಳು
ಸ್ಮಾರ್ಟ್ ಫೋನ್ ಒಂದಕ್ಕೆ ವೈರಸ್ ದಾಳಿಯಾಗಿದೆ ಎಂಬುದರ ಸೂಚನೆ ಸಿಗುತ್ತದೆಯೆ? ಸ್ಮಾರ್ಟ್ ಫೋನ್ ವರ್ತಿಸುವ ರೀತಿಯನ್ನು ಗಮನಿಸಿ, ವೈರಸ್ ದಾಳಿಯನ್ನು ಊಹಿಸಲು ಸಾಧ್ಯ. ವೈರಸ್ ದಾಳಿಗೆ ಒಳಗಾದ ಸ್ಮಾರ್ಟ್‌ಪೋನ್ ಕೆಲವು ಬಾರಿ ವಿಚಿತ್ರವಾಗಿ ವರ್ತಿಸುತ್ತದೆ.

? ಆಪ್‌ಗಳು, ಸೌಲಭ್ಯಗಳು ನಿಧಾನವಾಗಿ ತೆರೆಯುತ್ತವೆ.

? ಕುತಂತ್ರಾಂಶವು ಹಿನ್ನೆಲೆಯಲ್ಲಿ ಕೆಲಸಮಾಡುವುದರಿಂದ,
ಬೇಗನೆ ಬ್ಯಾಟರಿ ಖಾಲಿಯಾಗಬಹುದು.
? ಡಾಟಾ ಜಾಸ್ತಿ ಖರ್ಚಾಗುತ್ತದೆ
? ಅನವಶ್ಯಕ ಪಾಪ್‌ಅಪ್‌ಗಳು ಕಂಡುಬರುವಿಕೆ
? ಸ್ಮಾರ್ಟ್ ಫೋನ್ ಒಮ್ಮೊಮ್ಮೆ ವಿನಾಕಾರಣ ಬಿಸಿಯಾಗಲೂ ಬಹುದು.

ಪರಿಹಾರಗಳು
? ಅಕಸ್ಮಾತ್ ದಾಳಿಗೊಳಗಾದಾಗ, ಸೂಕ್ತ ಆಂಟಿ ವೈರಸ್‌ನಿಂದ ಅದನ್ನು ತೆಗೆದುಹಾಕಬೇಕು. ಅವಾಸ್ಟ್, ಮೆಕ್‌ಕೆಫೀ, ಎವಿಜಿ ಮೊದಲಾದ ಆಂಟಿವೈರಸ್‌ನ್ನು ಹಾಕಿಸಿ, ಸ್ಕಾನ್ ಮಾಡಿದಾಗ, ವೈರಸ್‌ನ್ನು ತೆಗೆದುಹಾಕಬಹುದು.

? ಡೌನ್‌ಲೋಡ್‌ಗಳಲ್ಲಿ ಪರಿಶೀಲಿಸಿ, ಅನುಮಾನಾಸ್ಪದ ಆಪ್ ಗಳಿದ್ದರೆ ಅವುಗಳನ್ನು ಡಿಲೀಟ್ ಮಾಡಬೇಕು.
? ಕ್ಲಿಷ್ಟ ಪರಿಸ್ಥಿತಿಗಳಲ್ಲಿ, ಎಲ್ಲಾ ಡಾಟಾವನ್ನು ಬೇರೆಡೆಯಲ್ಲಿ ಸಂಗ್ರಹಿಸಿ, ಸ್ಮಾರ್ಟ್ ಫೋನ್‌ನ್ನು ಫ್ಯಾಕ್ಟರಿ ರಿಸೆಟ್
ಮಾಡಬೇಕು. ಆಗ ಅಕಸ್ಮಾತ್ ಸೇರಿಕೊಂಡಿರುವ ಮಾಲ್ ವೇರ್ ಮತ್ತು ಕುತಂತ್ರಾಂಶಗಳು ಡಿಲೀಟ್ ಆಗುತ್ತವೆ.

ಮುನ್ನೆಚ್ಚರಿಕೆ
? ಅಪರಿಚಿತ ಸಂಖ್ಯೆಯಿಂದ ಬರುವ ಮೆಸೇಜ್‌ಗಳನ್ನು ತೆರೆಯಲೇಬಾರದು.
? ವಿಚಿತ್ರ ಎನಿಸುವ ಮೆಸೇಜ್, ಪಾಪ್‌ಅಪ್‌ಗಳನ್ನು ತೆರೆದು ನೋಡಬಾರದು.
? ಹೊಸ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವಾಗ, ಅದು ಕೇಳುವ ಎಲ್ಲಾ ಪರ್ಮಿಶನ್‌ಗಳನ್ನು ಓದಿದ ನಂತರವೇ ಒಕೆ ಕೊಡಬೇಕು. ಕಣ್ಣು ಮುಚ್ಚಿಕೊಂಡು ಒಕೆ ಒಕೆ ಕೊಡುತ್ತಾ ಹೋದರೆ, ಕೆಲವು ಆಪ್‌ಗಳು ಅನಗತ್ಯ ಪ್ರೋಗ್ರಾಂಗಳನ್ನು ಇನ್‌ಸ್ಟಾಲ್ ಮಾಡಬಹುದು.
? ಡಾಟಾವನ್ನು ಆಗಾಗ ಬ್ಯಾಕ್‌ಅಪ್ ಮಾಡಿ.
? ಆಗಾಗ ಫೋನ್ ಸಾಫ್ಟ್ವೇರ್‌ನ್ನು ಅಪ್‌ಡೇಟ್ ಮಾಡಬೇಕು. ಇದರಿಂದಾಗಿ, ಇತ್ತೀಚೆಗಿನ ಸೆಕ್ಯುರಿಟಿ ಪ್ಯಾಚ್ ಗಳು ಸ್ಮಾರ್ಟ್ ಫೋನ್‌ಗೆ ಇನ್‌ಸ್ಟಾಲ್ ಆಗುತ್ತದೆ.
? ಉಚಿತವಾಗಿ ಸಿಗುವ ಆಪ್‌ಗಳನ್ನು, ಗೇಮ್‌ಗಳನ್ನು ಡೌನ್ ಲೋಡ್ ಮಾಡುವಾಗ ಹತ್ತಾರು ಬಾರಿ ಯೋಚಿಸಿ, ಇನ್ಸ್ಟಾಲ್ ಮಾಡಬೇಕು. ಏಕೆಂದರೆ, ಇಂದಿನ ಜಗತ್ತಿನಲ್ಲಿ, ಉಚಿತವಾಗಿ ಯಾವುದೂ ದೊರೆಯುವುದಿಲ್ಲ, ಅಕಸ್ಮಾತ್ ದೊರೆತರೆ ಅದನ್ನು ಸಂಶಯದಿಂದಲೇ ನೋಡಬೇಕು.ಸ