Friday, 13th December 2024

ಕಡಿಮೆ ಬೆಲೆಯ ಸ್ಮಾರ್ಟ್‌‌ಫೋನ್‌

ಟೆಕ್ ಮಾತು

ಇಂದುಧರ ಹಳೆಯಂಗಡಿ

ಜಿಯೋ ಕಂಪೆನಿಯು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದು, ಇದು ಜನಸಾಮಾನ್ಯರ ಕೈಗೆ ಎಟಕುವ
ಬೆಲೆಯಲ್ಲಿರುತ್ತದೆ ಎನ್ನಲಾಗಿದೆ. 

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿಯು ಕಳೆದ ಗುರುವಾರ. ಜಿಯೋ ಫೋನ್ ನೆಕ್ಸ್ಟ್ ಎಂಬ ಹೊಸ ಸ್ಮಾರ್ಟ್ಫೋನ್ ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ ಎಂದು ಹೇಳಿದರು. ಜತೆಗೆ ಈ ಹೊಸ ಫೋನ್ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಎಂದರು. ಇದಕ್ಕೆ ಪೂರಕವಾಗಿ ‘ಈ ಫೋನಿಗಾಗಿಯೇ ಅಂದ್ರೋಯಿಡ್ ವಿಶೇಷ ಆವೃತ್ತಿಯನ್ನು ಅಭಿವೃದ್ಧಿಪಡಿಸಿದೆ. ಇದನ್ನು ನಿರ್ದಿಷ್ಟವಾಗಿ ಭಾರತಕ್ಕಾಗಿ, ಅದರಲ್ಲೂ ಮೊದಲ ಬಾರಿಗೆ ಸ್ಮಾರ್ಟ್ ಫೋನ್ ಅನುಭವ ಪಡೆಯಲಿರುವ ಬಳಕೆದಾರರಿಗಾಗಿ ನಿರ್ಮಿಸಲಾಗಿದೆ’ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಜಿಯೋ ಫೋನ್ ನೆಕ್ಸ್ಟ್

ಅಂದ್ರೋಯಿಡ್‌ನ ಆಪ್ಟಿಮೈಸ್ಡ್ ಆವೃತ್ತಿಯನ್ನು ಚಾಲನೆ ಮಾಡುವ ನಿಟ್ಟಿನಲ್ಲಿ ಕೈಗೆಟುಕುವ ದರದಲ್ಲಿ ಜಿ ಸಾಮರ್ಥ್ಯದ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬರಲಿದೆ. ಜಿಯೋ ಮತ್ತು ಗೂಗಲ್‌, ಎರಡೂ ಕಂಪನಿಗಳು ಒಟ್ಟಿಗೆ ಸೇರಿ ಇದನ್ನು ಅಭಿವೃದ್ಧಿಪಡಿಸುತ್ತಿದ್ದು, ಹೊಸದಾಗಿ ಆನ್‌ಲೈನ್ ಬಳಸಲು ಆರಂಭಿಸಿರು ವವರನ್ನು ಗುರಿಯಾಗಿರಿಸಿಕೊಂಡು ಇದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದು ಸೆಪ್ಟೆಂಬರ್ ೧೦ ರಂದು (ಗಣೇಶ ಚತುರ್ಥಿ) ಮಾರುಕಟ್ಟೆ ಪ್ರವೇಶಿಸಲಿದೆ.
ಇದರಲ್ಲಿ ಗೂಗಲ್ ಪ್ಲೇ ಸ್ಟೋರ್ ಕ್ಯಾಮೆರಾ, ಗೂಗಲ್ ಅಸಿಸ್ಟೆಂಟ್, ಟ್ರಾನ್ಸ್ಲೇಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಇದು ಆಗಲಿದೆ.

ಮಾರುಕಟ್ಟೆ ಬೆಲೆ ಎಷ್ಟು?
ಇದರ ಬೆಲೆಯನ್ನು ಬಹಿರಂಗಪಡಿಸಿಲ್ಲ. ಮೊದಲ ಬಾರಿಗೆ ಇಂಟರ್ನೆಟ್ ಸೇವೆ ಇರುವ ಮೊಬೈಲ್ ಕೊಳ್ಳಲು ಬಯಸುವವರಿಗೂ ಇದು ಕೈಗೆಟುಕುವ ದರದಲ್ಲಿ
ಲಭ್ಯವಾಗಲಿದೆ ಮತ್ತು ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಫೋನ್‌ಗಳಲ್ಲಿ ಇದು ಒಂದಾಗಿ ಹೊರಬರಲಿದೆ ಎಂಬ ಘೋಷಣೆಯಾಗಿದೆ. ಜತೆಗೆ ಜಿಯೋ ಕಂಪನಿಯಿಂದ
ಕೆಲವು ವಿಶೇಷ ಡೇಟಾಗಳೂ ಇದಕ್ಕೆ ಲಭ್ಯ. ಮತ್ತೊಂದು ವೈಶಿಷ್ಟ್ಯವೆಂದರೆ ಜಿಯೋ ಅಪ್ಲಿಕೇಶನ್‌ನೊಂದಿಗೆ ಗೂಗಲ್ ಅಸಿಸ್ಟೆಂಟ್ ಕಾರ್ಯನಿರ್ವಹಿಸಲಿದೆ. ಆದ್ದರಿಂದ, ಯಾವುದೇ ಪಂದ್ಯದ ಸ್ಕೋರ್ ಕೇಳಲು ಇದು ಸಹಾಯಕ.

ಕ್ಯಾಮೆರಾ
ಇದರಲ್ಲಿ ಕಸ್ಟಮ್ ಕ್ಯಾಮೆರಾ ಸಾಫ್ಟ್ವೇರ್ ಇರಲಿದೆ. ಗೂಗಲ್ ಹೇಳಿಕೆಯಂತೆ, ವೇಗದ ಮತ್ತು ಉತ್ತಮ-ಗುಣಮಟ್ಟದ ಕ್ಯಾಮೆರಾ ಇರಲಿದ್ದು, ಕಡಿಮೆ ಬೆಳಕಿನಲ್ಲಿ ಮತ್ತು ರಾತ್ರಿಯ ಸಮಯದಲ್ಲೂ ಫೋಟೋಗಳನ್ನು ಚಿತ್ರಿಸಬಹುದು. ಫೋನ್‌ನ ಮುಂಭಾಗದಲ್ಲಿ ಒಂದು ಕ್ಯಾಮೆರಾ ಇರಲಿದ್ದು, ಹಿಂಭಾಗದಲ್ಲಿ ಒಂದು ಸೆನ್ಸರ್ ಇರಲಿದೆ. ಆದರೆ, ಇದರಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇರುವುದಿಲ್ಲ.

ಬೆಲೆ ಸಮರಕ್ಕೆ ನಾಂದಿ?
ಸದ್ಯ ಜಿಯೋ ಉತ್ಪನ್ನಗಳು ಮತ್ತು ಪ್ಯಾಕೇಜ್‌ಗಳು ಸಾಕಷ್ಟು ಕಡಿಮೆ ಬೆಲೆಗೆ ದೊರೆಯುತ್ತಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ರು. ೫,೦೦೦ ಕ್ಕೂ ಕಡಿಮೆ ಬೆಲೆಗೆ ಯಾವುದೇ ೪ ಜಿ ಸ್ಮಾರ್ಟ್ ಫೋನ್‌ಗಳಿಲ್ಲ. ಹಾಗಾಗಿ, ಜಿಯೋನೆಕ್ಸ್ಟ್ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂದಾಗ, ಅದರ ಕಡಿಮೆ ಬೆಲೆಯು ಹೊಸ ಬೆಲೆ ಸಮರಕ್ಕೆ ನಾಂದಿ ಹಾಡಬಹುದು. ಜತೆಗೆ ಜಿಯೋ ಸಿಮ್ ಮೂಲಕ ಡೇಟಾ ಪ್ಯಾಕ್‌ಗಳು ಲಭ್ಯವಾಗಲಿದ್ದು, ಇದೂ ಸಹ ಇತರ ಸಂಸ್ಥೆಗಳ ಬೆಲೆ ಸಮರಕ್ಕೆ ನಾಂದಿ ಹಾಡಲಿವೆ.
ಈ ಹಿಂದೆ ಜಿಯೋ ತನ್ನ ಹೊಸ ಹೊಸ ಯೋಜನೆಗಳನ್ನು ಕಡಿಮೆ ಬೆಲೆಗೆ ನೀಡಿದಾಗ ಜನರು ಮುಗಿಬಿದ್ದು ಖರೀದಿಸಿ ದಂತೆ, ಈ ಹೊಸ ಸ್ಮಾರ್ಟ್ ಫೋನ್‌ನನ್ನೂ ಖರೀದಿಸುವ ನಿರೀಕ್ಷೆ ಇದೆ.