ಟೆಕ್ ಮಾತು
ಇಂದುಧರ ಹಳೆಯಂಗಡಿ
ಗೊತ್ತಿಲ್ಲದ ಭಾಷೆ ಕೇಳಿದಾಗ ಕಕ್ಕಾಬಿಕ್ಕಿ ಆಗುತ್ತಿದ್ದೀರಾ? ಇಗೋ ಬಂದಿದೆ ಗೂಗಲ್ ಪಿಕ್ಸೆಲ್ ಇಯರ್ ಬಡ್. ಇದು ನಿಮ್ಮ ಕಿವಿಯಲ್ಲೇ ಅನುವಾದಿಸುತ್ತದೆ!
ಇಂಟರ್ನೆಟ್ ಯುಗದಲ್ಲಿ ವಿಶಾಲ ಜಗತ್ತನ್ನು ಗ್ಲೋಬಲ್ ವಿಲೇಜ್ ಎಂದು ಕರೆಯಲಾಗುತ್ತದೆ. ಈಗಿನ ಕಾಲದಲ್ಲಿ ಬೆಂಗಳೂರಿನಲ್ಲಿ ಕುಳಿತುಕೊಂಡು ದೂರದ ಆಫ್ರಿಕಾದಲ್ಲಿರುವವರ ಜತೆ ಸುಲಭವಾಗಿ ಸಂಪರ್ಕವನ್ನು ಸಾಧಿಸಬಹುದು. ಎಲ್ಲಿ ಹೋದರೂ ಜೀವಿಸಬಹುದು.
ಇದೆಲ್ಲವುದರ ಕೊಂಡಿಯಾಗಿ ಎಲ್ಲರ ಮನೆ ಮನಗಳಲ್ಲಿ ಇಂಗ್ಲಿಷ್ ಭಾಷೆ ಬೆಸೆದುಕೊಂಡಿದೆ. ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಹೇಗೆ ಹರಡಿಕೊಂಡಿದೆ ಎಂದರೆ, ಒಂದು ವೇಳೆ ಇಂಗ್ಲಿಷ್ ಭಾಷೆ ನಿಮಗೆ ಬರದಿದ್ದರೆ, ಹೊರ ಜಗತ್ತಿನೊಂದಿಗೆ ಸಂವಹನ ನಡೆಸುವುದು ಕಷ್ಟವೇ ಸರಿ. ಆದರೆ, ಇದೆಲ್ಲದಕ್ಕೂ ಪೂರ್ಣವಿರಾಮ ಎಂಬಂತೆ, ಹೊಸ ತಂತ್ರಜ್ಞಾನವೊಂದು ನಮ್ಮ ಮುಂದೆ ಬಂದಿದೆ.
ವೆಬ್ ದೈತ್ಯ ಗೂಗಲ್ ಸಂಸ್ಥೆಯು ಈಗ ಹೊಸತೊಂದು ತಂತ್ರಜ್ಞಾನವನ್ನು ನಮ್ಮ ಮುಂದೆ ಇಟ್ಟಿದೆ. ಅದುವೇ ಗೂಗಲ್ ಪಿಕ್ಸೆಲ್ ಬಡ್ಸ್ – ಟ್ರಾನ್ಸ್ಲೇಟ. ಇದೊಂದು ಸ್ಮಾರ್ಟ್ ಗೆಜೆಟ್ ಆಗಿದ್ದು, ಗೂಗಲ್ ಅಸಿಸ್ಟೆಂಟ್ ಅಪ್ಲಿಕೇಶನ್ ಬಳಸಿ, ಇತರ ಭಾಷೆಗಳನ್ನು ಸ್ವಯಂ ಆಗಿ ಅನುವಾದಿಸಬಲ್ಲ ವೈಯರ್ಲೆಸ್ ಇಯರ್ ಬಡ್ ಎನಿಸಿದೆ.
ಅದು ಹೇಗೆ ಕೆಲಸ ಮಾಡುತ್ತದೆ?
ಯಾರದೇ ಸಂಭಾಷಣೆ-ಭಾಷಣವನ್ನು ರಿಯಲ್ ಟೈಮ್ ನಲ್ಲಿ ಅನುವಾದ ಮಾಡುವ ಇಯರ್ ಬಡ್ ಇದಾಗಿದ್ದು, ಬೇರೆ ಬೇರೆ ತಂತ್ರಜ್ಞಾನ ಸರಪಳಿಯನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಹಲವು ಸುಧಾರಣೆಗಳನ್ನು ಕಾಣುತ್ತಿರುವ ಪಿಕ್ಸೆಲ್ ಬಡ್ಸ್, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳನ್ನು ಸೇರಿಸಿ, ನಿಖರವಾಗಿ ಅನುವಾದಿಸುವ ಸಾಮರ್ಥ್ಯ ಪಡೆಯಲಿದೆ ಎಂದು ಗೂಗಲ್ ಹೇಳೀದೆ.
ಮೊದಲಿಗೆ ಇನ್ಪುಟ್ ಕಂಡೀಷನಿಂಗ್ ಮೂಲಕ ಹಿನ್ನೆಲೆ ಧ್ವನಿಗಳನ್ನು ತೆಗೆದು, ಸ್ಪೀಚ್ ರೆಕಗ್ನೈಸ್ ಮಾಡುತ್ತದೆ. ಓಕೆ ಗೂಗಲ್ ಮೂಲಕ ಸ್ವಯಂ ಆಗಿ ನಾವೂ ಚಾಲನೆ ನೀಡಬಹುದು ಅಥವಾ, ಅದು ತನ್ನಿಂತಾನೆ ಆಡಿಯೋ ಆಕ್ಟಿವಿಟಿ ಡಿಟೆಕ್ಟರ್‌ನಲ್ಲಿ ಡಿನಾಯ್ಸಿಂಗ್ ಮೂಲಕ ಹಿನ್ನೆಲೆ, ಅನಗತ್ಯ ಸದ್ದುಗಳನ್ನು ತೆಗೆದು ಹಾಕುತ್ತದೆ. ಬಳಿಕ, ಎಲಐಡಿ ಸಿಸ್ಟಮ್ ಮೂಲಕ ಒಂದೆರಡು ಸೆಕೆಂಡುಗಳಲ್ಲಿ ಭಾಷೆಯನ್ನು ಗುರುತಿಸುತ್ತದೆ. ಇದು ಬಹಳ ಮುಖ್ಯ ಹೆಜ್ಜೆ. ಏಕೆಂದರೆ, ಕೇವಲ ಫೊನೆಟಿಕ್ ಮಾತ್ರ ಅರ್ಥೈಸಿದರೆ ಭಾಷೆ ಗೊತ್ತಾಗುವುದಿಲ್ಲ (ಉಕ್ರೇನಿಯನ್ ಹಾಗೂ ರಷ್ಯನ್, ಉರ್ದು ಹಾಗೂ ಹಿಂದಿ ಭಾಷೆಗಳಲ್ಲಿ ಬಹಳಷ್ಟು ಸಾಮ್ಯತೆ ಇದೆ).
ಭಾಷೆಯನ್ನು ಡಿಟೆಕ್ಟ್ ಮಾಡಿದ ಬಳಿಕ, ಮುಖ್ಯ ಭಾಷಣವನ್ನು ಗುರುತಿಸುತ್ತದೆ.
ಸ್ವಯಂಚಾಲಿತವಾಗಿ, ಎಎಎಸ್‌ಆರ್ ತಂತ್ರಜ್ಞಾನದ ಮೂಲಕ, ಮಾತನಾಡುವ ವ್ಯಾಕರಣ, ಸಂದರ್ಭ ಹಾಗೂ ಉಚ್ಚಾರಣಾ ನಿಘಂಟನ್ನು ಬಳಸಿ, ಇನ್ನೊಂದು ಭಾಷೆಗೆ ಭಾಷಾಂತರಿಸುತ್ತದೆ. ಎನ್‌ಎಲ್‌ಪಿ ತಂತ್ರಜ್ಞಾನವು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಯಂತ್ರಾನುವಾದವನ್ನು ಮಾಡುತ್ತದೆ. ಇನ್‌ಪುಟ್ ಭಾಷಣದ ಅರ್ಥವನ್ನು ಡಿಕೋಡಿಂಗ್ ಮಾಡಿ, ತದನಂತರ ಆ ಅರ್ಥವನ್ನು ಬೇರೆ ಭಾಷೆಯಲ್ಲಿ ಔಟ್‌ಪುಟ್ ಭಾಷಣವಾಗಿ ಮರು-ಎನ್ಕೋಡಿಂಗ್ ಮಾಡುತ್ತದೆ.
ಈ ಪ್ರಕ್ರಿಯೆಯನ್ನು ಫೈವ್ ಬ್ಲಾಕ್ ಟೆಕ್ನಾಲಜಿ ಎಂದು ಕರೆಯಲಾಗುತ್ತದೆ. ಗೂಗಲ್ ಸರ್ವರ್ಗಳು ಕ್ಲೌಡ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದ್ದು, ಧ್ವನಿಯನ್ನು ಸ್ವೀಕರಿಸಿ, ಅದರ ಗಾತ್ರವನ್ನೂ ಕುಗ್ಗಿಸಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಹಕಾರದಿಂದ ಭಾಷಾಂತರಿಸುತ್ತದೆ. ಒಟ್ಟು ಪ್ರಕ್ರಿಯೆಯು ವಿವಿಧ ಹಂತಗಳು ಇರುವಂತೆ ಕಂಡರೂ, ಕೆಲವೇ ಸೆಕೆಂಡುಗಳಲ್ಲಿ ಎಲ್ಲಾ ಹಂತ ಗಳನ್ನು ಪೂರೈಸಿ ಅನುವಾದ ನಡೆಯುತ್ತದೆ.
ಒಂದು ಸಾಮಾನ್ಯ ಇಯರ್ ಬಡ್‌ಗಳಲ್ಲಿರುವ ಪ್ರೊಸೆಸರ್ ಸ್ವಯಂ ಅನುವಾದವನ್ನು ಮಾಡುವಷ್ಟು ಶಕ್ತಿಯುತವಾಗಿ ಇರದಿರುವು ದರಿಂದ, ಪಿಕ್ಸೆಲ್ ಬಡ್ಸ್ ಒಳಗೆ ಈ ಎ ತಂತ್ರಗಳೂ ಅವಶ್ಯಕವಾಗಿದೆ. ಅದಲ್ಲದೆ, ಭಾಷೆ ಮತ್ತು ಅಟೌಸ್ಟಿಕ್ಸ್ ಮಾದರಿಗಳನ್ನು ಸಂಗ್ರಹಿಸಿ ಇಡುವಷ್ಟು ಸ್ಟೋರೇಜ್ ಅದರೊಳಗೆ ಇಲ್ಲ. ಸಾಕಷ್ಟು ಮೆಮೊರಿ ಇರುವ ಪ್ರೊಸೆಸರ್ ಅಳವಡಿಸಿದರೆ, ಇಯರ್‌ಬಡ್ ಬ್ಯಾಟರಿ ಒಂದೆರಡು ಸೆಕೆಂಡುಗಳಲ್ಲಿ ಡ್ರೈನ್ ಆಗುವುದರಲ್ಲಿ ಸಂಶಯವಿಲ್ಲ. ಗೂಗಲ್ ಜತೆಯಲ್ಲೇ, ಐಫ್ಲೈಟೆಕ್ ಮತ್ತು ಐಬಿಎಂ ಸಂಸ್ಥೆಯು ಅನುವಾದ ಮಾಡಬಲ್ಲ ಇಯರ್ ಬಡ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಮೂರು ಭಾರತೀಯ ಭಾಷೆ ಲಭ್ಯ
ಪಿಕ್ಸೆಲ್ ಬಡ್‌ಗೆ 40 ಭಾಷೆಗಳನ್ನು ಅನುವಾದಿಸುವ ಸಾಮರ್ಥ್ಯ ಇದೆ. ಭಾರತೀಯ ಭಾಷೆಗಳ ಪೈಕಿ ಹಿಂದಿ, ಬಂಗಾಳಿ ಹಾಗೂ ತಮಿಳು ಭಾಷೆಗಳು ಸೇರಿವೆ. ಮುಂದಿನ ದಿನಗಳಲ್ಲಿ ಇತರ ಭಾಷೆಗಳು ಸೇರಬಹುದು.
ಅನುವಾದಿಸಲು ಏನೆಲ್ಲಾ ಬೇಕು?
1. ಗೂಗಲ್ ಅಸಿಸ್ಟೆಂಟ್ ಅಪ್ಲಿಕೇಶನ್
2. ಗೂಗಲ್ ಆಪ್
3. ಗೂಗಲ್ ಟ್ರಾನ್ಸ್ಲೇಟರ್ – ಅಪ್ಡೇಟೆಡ್ ಅಪ್ಲಿಕೇಶನ್
4. ಇಂಟರ್ನೆಟ್ ಸೇವೆ
1ಭಾಷೆಯನ್ನು ಆಯ್ಕೆ ಮಾಡುವುದು: ಗೂಗಲ್ ಅಸಿಸ್ಟೆಂಟ್ ಬಳಸಿ ಹೆಲ್ಪ್ ಮಿ ಸ್ಪೀಕ್ …. ಎಂದು ನಿಮ್ಮ ಸಂಭಾಷಣೆಯ ಎರಡು ಭಾಷೆಯನ್ನು ಆಯ್ಕೆ ಮಾಡಬಹುದು ಅಥವಾ ಗೂಗಲ್ ಟ್ರಾನ್ಸ್ಲೇಟರ್ ಆಪ್ ಬಳಸಿ ನೀವು ಮಾತನಾಡುವ ಭಾಷೆ ಹಾಗೂ ಇನ್ನೊಬ್ಬರು ಮಾತನಾಡುವ ಭಾಷೆ ಆಯ್ಕೆ ಮಾಡಬಹುದು.
2ಮಾತನಾಡಲು ಪ್ರಾರಂಭಿಸುವುದು: ನಿಮ್ಮ ಇಯರ್ ಬಡ್‌ಗಳನ್ನು ಬೆರಳಿನಲ್ಲಿ ಒತ್ತಿಟ್ಟು ನಿಮ್ಮ ಭಾಷೆಯಲ್ಲಿ ಮಾತನಾಡಿ. ಮಾತು ಅಂತ್ಯವಾದ ಬಳಿಕ ಇಯರ್ ಬಡ್ ನಿಂದ ಬೆರಳನ್ನು ಬಿಡುವುದು. ಆಗ ನೀವು ಮಾತನಾಡಿರುವುದು ನೀವು ಮೊದಲೇ ಆಯ್ಕೆ ಮಾಡಿದ ಮತ್ತೊಂದು ಭಾಷೆಗೆ ಅದು ಅನುವಾದವಾಗುತ್ತದೆ.
೩ಅನುವಾದ ಆದ ಬಳಿಕ, ನಿಮಗೆ ಪ್ರತ್ಯುತ್ತರ ಲಭಿಸುತ್ತದೆ. ಇದಕ್ಕಾಗಿ, ಗೂಗಲ್ ಟ್ರಾನ್ಸ್ಲೇಟರ್ ಬಲಗಡೆ ಇರುವ ಮೈಕ್ರೋ-ನ್‌ನ್ನು ಆಯ್ಕೆ ಮಾಡುವುದು. ಆಗ, ನಿಮ್ಮ ಮಾತಿಗೆ ಪ್ರತ್ಯುತ್ತರ ಸಿಗುತ್ತದೆ. ಅವರು ಮಾತು ನಿಲ್ಲಿಸಿದಾಗ, ಅವರು ಮಾತನಾಡಿರುವುದು ನಿಮ್ಮ ಭಾಷೆಗೆ ಅನುವಾದಗೊಳ್ಳುತ್ತದೆ.
೪ಇಂಗ್ಲಿಷ್ ಭಾಷೆಯಿಂದ ಫ್ರೆಂಚ್, ಇಟಾಲಿಕ, ಜರ್ಮನ್ ಅಥವಾ ಸ್ಪಾನಿಷ್ ಭಾಷೆಗೆ ಟ್ರಾನ್ಸ್ಕ್ರೈಬ್ ಮಾಡಬಹುದು. ನೀವು ಇಂಗ್ಲೀಷಿನಲ್ಲಿ ಹೇಳುತ್ತಾ ಹೋದರೆ, ರಿಯಲ್ ಟೈಮ್‌ನಲ್ಲಿ ಅದು ಅನುವಾದಗೊಳ್ಳುತ್ತಾ ಹೋಗುತ್ತದೆ. ಗೂಗಲ್ ಪಿಕ್ಸೆಲ್ ಇಯರ್ ಬಡ್ ಕನೆಕ್ಟ್ ಆಗಿದ್ದರೆ ಅನುವಾದಿತ ಪಠ್ಯವು ನಿಮ್ಮ ಕಿವಿಗೆ ಕೇಳಿಸುತ್ತದೆ.
ಇಡೀ ಜಗತ್ತೇ ಒಂದು ಗ್ರಾಮದ ಸ್ವರೂಪ ಪಡೆಯುತ್ತಿದೆ ಎಂಬ ಮಾತು ಒಂದು ಕ್ಲೀಷೆ. ಒಂದು ಅಪರಿಚಿತ ಭಾಷೆಯಲ್ಲಿ ಬೇರೆಯ ವರು ಮಾತನಾಡಿದರೂ, ಅದು ನಮ್ಮ ಸ್ವಂತ ಭಾಷೆಯಲ್ಲಿ ಕಿವಿಗೆ ಬಂದು ಬೀಳುತ್ತದೆ ಎಂದಾದರೆ, ಈ ಕ್ಲೀಷೆಯು ಕ್ಲೀಷೆ ಎನಿಸುವು ದಿಲ್ಲ, ಅಲ್ಲವೆ!