Sunday, 3rd November 2024

ವಾಹನದ ನೋಟ, ಬಣ್ಣಗಳ ಆಯ್ಕೆ!

ಬೈಕೋಬೇಡಿ

ಅಶೋಕ್‌ ನಾಯಕ್‌

ಇಂದಿನ ದಿನಗಳಲ್ಲಿ ವಾಹನ ಖರೀದಿ ಈಗ ದೊಡ್ಡ ವಿಷಯವೇ ಅಲ್ಲ ಎಂಬಂತಾಗಿದೆ. ಕೈಯಲ್ಲಿ ಹಣ ಇರಬೇಕು, ಮೇಂಟನೆನ್ಸ್ ಮಾಡಬೇಕು. ಹಾಗೆಯೇ, ವಾಹನ ಓಡಿಸಲು ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಲು ಸಿದ್ಧರಿರಬೇಕು! ಅಲ್ಲವೆ? ಏನೇ ಆಗಲಿ, ವಾಹನ ಮಾಡೆಲ್ ಆಯ್ಕೆ ವಿಚಾರ ಬಂದಾಗ, ಆರಂಭದಲ್ಲಿ ಇದೊಂದು ಟ್ರೆಂಡ್ ಎಂಬುದಾಗಿತ್ತು.

ಇಲ್ಲಿ ಬಣ್ಣ ಕೂಡ ಆಯ್ಕೆಯ ವಿಷಯವಾಗಿತ್ತು. ಆದರೆ, ಈಗ ವಿಚಿತ್ರವಾದ, ವಿಶಿಷ್ಟವಾದ ಬಣ್ಣಗಳು! ಈ ಹಿಂದೆ ನಾವು ಕಲ್ಪಿಸಿ ಕೊಳ್ಳದೇ ಇರುವಂತಹ ಬಣ್ಣಗಳನ್ನು ಬಳಿದುಕೊಂಡು, ವಾಹನಗಳು ಮಾರುಕಟ್ಟೆಗೆ ಬರುತ್ತಿವೆ! ಹೀಗಾಗಿ, ಬಣ್ಣದ ಆಯ್ಕೆ ಕೂಡ ಈಗ ಸವಾಲಾಗಿದೆ. ಬಣ್ಣದ ಆಯ್ಕೆ ಮಾಡುವವರು ಈ ಕುರಿತು ಆಳ ಜ್ಞಾನ ಹೊಂದಿರಲೇಬೇಕು. ಉದಾಹರಣೆಗೆ, ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಎಂದು ನಾವು ಹೇಳಿದರೆ, ಅದರ ಬಗ್ಗೆ ಗೊತ್ತೇ ಇಲ್ಲದವ ತಲೆ ಕೆರೆದುಕೊಳ್ಳದೇ ವಿಧಿಯಿಲ್ಲ. ಹಾಗಂತ, ಅದರ ಬಗ್ಗೆ ತಿಳಿದಿಲ್ಲ ಎಂದು ಕೂಡ ಹೇಳುವಂತಿಲ್ಲ. ಪ್ರೇಸ್ಟೀಜ್ ಪ್ರಶ್ನೆ ಬರುತ್ತೆ!

ಟಿವಿಎಸ್ ಐಕ್ಯೂಬ್
ಪ್ರತೀ ಗಂಟೆಗೆ ೫೦ ಕ್ಕಿಂತ ಹೆಚ್ಚು ಕಿ.ಮೀ. ವೇಗದಲ್ಲಿ ಚಲಿಸುವ ಟಿವಿಎಸ್ ಕಂಪನಿಯ ಐಕ್ಯೂಬ್ ಮಾಡೆಲ್ ವಾಹನ ಹದಿ ಹರೆಯದವರನ್ನು ಆಕರ್ಷಿಸುವುದು. ಎಲೆಕ್ಟ್ರಿಕ್ ವಾಹನವಾದ ಕಾರಣ, ಪರಿಸರ ಸ್ನೇಹಿ ವಾಹನವಿದು. ಪೂರ್ಣ ಚಾರ್ಜಿಂಗ್‌ಗೆ ಸುಮಾರು ಐದು ಗಂಟೆ ಸಮಯ ಚಾರ್ಜಿಂಗ್ ಅಗತ್ಯವಿದ್ದು, ೩೦೦೦ ವ್ಯಾಟ್ ತುಂಬುವುದು.

ಒಂದು ಹಂತದಲ್ಲಿ ಒಂದು ಲಕ್ಷ ಅಂದುಕೊಂಡರೂ, ಸರಿ ಸುಮಾರು ೯೩ ಸಾವಿರ ರೂಪಾಯಿಗೆ ಈ ವಾಹನ ಮಾರಾಟಕ್ಕೆ ಲಭ್ಯವಿದೆ. ಇದಕ್ಕೆ ವಿಶೇಷವಾಗಿ ಫ್ರಂಟ್ ಡಿಸ್ಕ್ ಮತ್ತು ರೀರ್ ಡ್ರಮ್ ಬ್ರೇಕ್ಸ್ ಲಭ್ಯವಿದೆ. ಇತರೆ ವಾಹನ ತಯಾರಿಕಾ ಕಂಪೆನಿ ಗಳಂತೆ ಟಿವಿಎಸ್ ಕೂಡ ಹಸಿರು ಕ್ರಾಂತಿಯ ಯಶಸ್ಸಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಭವಿಷ್ಯದಲ್ಲೂ ತನ್ನ ಅಸ್ತಿತ್ವಕ್ಕೆ ಕುತ್ತು ಬರದಂತೆ, ಐಕ್ಯೂಬ್ ಮಾಡೆಲ್ ವಾಹನಕ್ಕೆ ಸಾಂಪ್ರದಾಯಿಕ ಟಚ್ ನೀಡಲಾಗಿದೆ. ಸ್ಲೀಕ್ ಹೆಡ್ ಲ್ಯಾಂಪ್, ಟೇಲ್ ಲ್ಯಾಂಪ್ ಜತೆಗೆ ‘ಯು’ಶೇಪ್’ನ ಎಲ್ಇಡಿ ಡಿಆರ್‌ಎಲ್ (ಹ್ಯಾಂಡಲ್ ಬಾರ್ ಕಾಲ್).

ಉತ್ತಮವಾದ ಫುಟ್ ಬೋರ್ಟ್, ಅಗಲವಾದ ಸೀಟ್, ಸೀಟು ಕೆಳಗಿನ ವಿಶಾಲವಾದ ಸಂಗ್ರಹ ಜಾಗ ಇತ್ಯಾದಿ ಸವಲತ್ತುಗಳಿವೆ. ಸೀಟಿನ ಕೆಳಗೆ ಯುಎಸ್‌ಬಿ ಚಾರ್ಜರ್ ಇದೆ. ಪರ್ಲ್‌ವೈಟ್, ಟೈಟಾನಿಯಂ ಗ್ರೇ ಗ್ಲಾಸಿ, ಮರ್ಕ್ಯುರಿ ಗ್ರೇ ಗ್ಲಾಸಿ, ಮಿಂಟ್ ಬ್ಲೂ, ಸ್ಟಾರ್
ಲೈಟ್ ಬ್ಲೂ ಗ್ಲಾಸಿ ಶೈನಿಂಗ್ ರೆಡ್, ಲ್ಯುಸಿಡ್ ಎಲ್ಲೋ, ಕೋರಲ್ ಸ್ಯಾಂಡ್ ಗ್ಲಾಸ್ ಮೊದಲಾದ ಹನ್ನೊಂದು ಬಣ್ಣಗಳಲ್ಲಿ ಈ ವಾಹನ ಲಭ್ಯ.

ಹೋಂಡಾ ಲಿವೋ
೧೦೯ ಸಿಸಿ ಎಂಜಿನ್ ಕೆಪಾಸಿಟಿ, ಪ್ರತೀ ಲಿಟರ್ ಪೆಟ್ರೋಲಿಗೆ ೬೦ ಕಿ.ಮೀ. ದೂರ ಸಾಗುವ ಈ ಮಾಡೆಲ್ ವಾಹನದಲ್ಲಿ ಕೇವಲ ೯ ಲೀಟರ್ ಪೆಟ್ರೋಲ್ ಸಂಗ್ರಹವಾಗುವುದು. ೭೫ ಸಾವಿರ ರುಪಾಯಿ ಆಸುಪಾಸು ದರದಲ್ಲಿ ವಾಹನ ಮಾರಾಟಕ್ಕಿದೆ. ಎರಡು
ವೇರಿಯಂಟ್ ಹಾಗೂ ೪ ಬಣ್ಣಗಳಲ್ಲಿ ಸಿಗುವ ವಾಹನದ ದರ ೮೦ ಸಾವಿರ ಆಸುಪಾಸು. ಈ ವಾಹನಕ್ಕೆ ಎರಡೂ ಚಕ್ರಗಳಲ್ಲಿ ಬ್ರೇಕಿಂಗ್ ಸಿಸ್ಟಮ್ ಕಂಬೈನ್ಡ್ ಆಗಿದೆ.

ಟ್ಯೂಬ್ಲೆಸ್ ಟೈರ್, ಮತ್ತು ಅಲೊಯ್ ಚಕ್ರಗಳು ಆಯ್ಕೆಯzಗಿವೆ. ಅಥ್ಲೆಟಿಕ್ ಬ್ಲೂ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಇಂಪೀರಿಯಲ್ ರೆಡ್ ಮೆಟಾಲಿಕ್ ಮತ್ತು ಬ್ಲಾಕ್ ಮುಂತಾದ ಬಣ್ಣಗಳಲ್ಲಿ ಲಭ್ಯವಿದೆ. ಈ ಮಾಡೆಲ್ ವಾಹನ ಹೀರೋ ಪ್ಯಾಶನ್ ಎಕ್ಸ್ ಪ್ರೊ ಮತ್ತು ಟಿವಿಎಸ್ ವಿಕ್ಚರ್ ಜತೆ ಸ್ಪರ್ಧಿಸಬಲ್ಲವು.