ಅಜಯ್ ಅಂಚೆಪಾಳ್ಯ
ಇಂದು ಬಹುಪಾಲು ಜನರ ಅವಶ್ಯಕತೆ ಎಂದೇ ತಿಳಿಯಲಾಗಿರುವ ಮತ್ತು ಉಚಿತವಾಗಿ ಲಭ್ಯವಿರುವ ವಾಟ್ಸಾಪ್‌ನಲ್ಲಿ, ಹೊಸ ಅವತರಣಿಕೆ ಯೊಂದು ಸಿದ್ಧವಾಗುತ್ತಿದ್ದು, ಅದನ್ನು ಪಡೆಯಲು ಚಂದಾ ಹಣವನ್ನು ನೀಡಬೇಕಾಗಬಹುದು!
ಇಂದು ನಮ್ಮ ದೇಶದ ಬಹುಪಾಲು ಜನಸಾಮಾನ್ಯರಿಗೆ ವಾಟ್ಸಾಪ್ ಇಲ್ಲದೆ ಜೀವನವೇ ಇಲ್ಲ ಎಂಬ ಸ್ಥಿತಿ ಇದೆ. ಬೆಳಗ್ಗೆ ಎದ್ದ ಕೂಡಲೆ ದೇವರಿಗೆ ನಮಸ್ಕರಿಸುವ ಮುಂಚೆ, ‘ವಾಟ್ಸಾಪ್ಪಾಯನಮಃ’ ಎನ್ನುತ್ತಾ, ವಾಟ್ಸಾಪ್ ಚಾಲೂ ಮಾಡಿ, ಮೆಸೇಜ್‌ಗಳನ್ನು, ವಿಡಿಯೋಗಳನ್ನು ನೋಡುವುದು ಮುಖ್ಯ ಕೆಲಸ! ಇದರಲ್ಲಿ ಅತಿಶಯೋಕ್ತಿಯೂ ಇಲ್ಲ, ವ್ಯಂಗ್ಯವೂ ಇಲ್ಲ, ಇದು ವಾಸ್ತವ.
ಇದಕ್ಕೆ ಮುಖ್ಯ ಕಾರಣ ಕಡಿಮೆ ಬೆಲೆಯ ಡಾಟಾ ಮತ್ತು ಉಚಿತವಾಗಿ ಸಿಗುವ ವಾಟ್ಸಾಪ್ ಆಪ್. ಆದ್ದರಿಂದಲೇ ಇಂದು ವಾಟ್ಸಾಪ್ ಗ್ರಾಹಕರ ಸಂಖ್ಯೆ ಅಗಾಧ! ನಮ್ಮ ದೇಶದಲ್ಲಿ ಸುಮಾರು ೩೯೦ ಮಿಲಿಯ ಜನರು ವಾಟ್ಸಾಪ್ ಉಪಯೋಗಿಸುತ್ತಿದ್ದಾರೆ. ಆದರೆ ಎಷ್ಟು ದಿನ ಎಲ್ಲವೂ ಉಚಿತ ಎನಿಸೀತು? ವಾಟ್ಸಾಪ್‌ನಲ್ಲಿ ಪ್ರೀಮಿಯಂ ಸೇವೆ ಎಂಬ ಹೊಸ ಸೌಲಭ್ಯವನ್ನು ನಿಧಾನವಾಗಿ ಜಾರಿಗೊಳಿಸಲು ಪ್ರಯೋಗಗಳು ಟೆಸ್ಟ್‌ಗಳು ನಡೆಯುತ್ತಿವೆ! ಮಾಮೂಲಿ ವಾಟ್ಸಾಪ್‌ಗಿಂತಲೂ ಹೆಚ್ಚಿನ ಸೌಕರ್ಯ ಹೊಂದಿರುವ ಈ ಆಪ್ ಪಡೆಯಲು ಸಣ್ಣ ಮೊತ್ತದ ಹಣವನ್ನು ವಾಟ್ಸಾಪ್ ಸಂಸ್ಥೆಗೆ ನೀಡಬೇಕಾದೀತು!
ಸದ್ಯ ವಾಟ್ಸಾಪ್‌ನ ಬೇಟಾ ಗ್ರಾಹಕರು ಈ ಪ್ರೀಮಿಯಂ ಸೌಲಭ್ಯವನ್ನು ಉಪಯೋಗಿಸಿ, ಟೆಸ್ಟ್ ಮಾಡುತ್ತಿದ್ದಾರೆ. ಇದು ಸಂಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ನಂತರ, ವ್ಯವಹಾರಕ್ಕಾಗಿ ವಾಟ್ಸಾಪ್ ಉಪಯೋಗಿಸುವವರು ಇದನ್ನು ಖರೀದಿಸುವ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಟೆಕ್ ಪಂಡಿತರು ಲೆಕ್ಕ ಹಾಕಿದ್ದಾರೆ. ತಮ್ಮ ವ್ಯಾಪಾರ ಮತ್ತು ವ್ಯವಹಾರವನ್ನು ಅಭಿವೃದ್ಧಿಪಡಿಸುವವರ, ಬ್ಯುಸಿನೆಸ್ ಅಕೌಂಟ್ ಹೊಂದಿ, ವಾಟ್ಸಾಪ್ ಪ್ರೀಮಿಯಂ ಸೇವೆಯ ಮೂಲಕ, ಹೆಚ್ಚು ಹೆಚ್ಚು ಪರಿಣಾಮಕಾರಿ ಮೆಸೇಜ್‌ಗಳನ್ನು ಕಳುಹಿಸಲು ಅವಕಾಶ ಕಲ್ಪಿಸಬಹುದು ಎಂದು ಹೇಳಲಾಗಿದೆ. ಜತೆಗೆ, ಪ್ರೀಮಿಯಂ ಸೌಲಭ್ಯದಲ್ಲಿ ಒದಗಿಸಬಹುದಾದ ಹೆಚ್ಚಿನ ಫೀಚರ್‌ಗಳು ಸಾಮಾನ್ಯ ಗ್ರಾಹಕರಿಗೆ ಉಪಯೋಗಕ್ಕೆ ಬಾರದಿರುವ ಸಂದರ್ಭವೇ ಅಧಿಕ.
ಚಂದಾ ಹಣವನ್ನು ನೀಡಿ ಪಡೆಯಬಹುದಾದ ವಾಟ್ಸಾಪ್ ಪ್ರೀಮಿಯಂ ಸೌಲಭ್ಯದಲ್ಲಿ, ಒಮ್ಮೆಗೇ ೧೦ ಡಿವೈಸ್‌ಗಳಲ್ಲಿ ಉಪಯೋಗಿಸುವ ಅವಕಾಶ ಕಲ್ಪಿಸಲಾಗುವುದು ಮತ್ತು ಒಮ್ಮೆಗೇ ೩೨ ಗ್ರಾಹಕ ರೊಂದಿಗೆ ವಿಡಿಯೋ ಕಾಲ್ ಮಾಡುವ ಅವಕಾಶ ಇರಬಹುದು ಎನ್ನಲಾಗಿದ್ದು, ಟೆಸ್ಟಿಂಗ್
ಸಂಪೂರ್ಣಗೊಂಡ ನಂತರ ಸ್ಪಷ್ಟ ಚಿತ್ರಣ ದೊರಕಬಹುದು.
ವಾಟ್ಸಾಪ್‌ಗೆ ಸಮೀಪದ ಪ್ರತಿಸ್ಪರ್ಧಿ ಎನಿಸಿದ ಟೆಲಿಗ್ರಾಂನಲ್ಲಿ ಇಂತಹ ಹಲವು ಸೌಲಭ್ಯಗಳನ್ನು ಒದಗಿಸಲಾಗಿದ್ದು, ಅದನ್ನು ಸರಿಹೋಲುವಂತಹ ಸೌಲಭ್ಯಗಳನ್ನು ವಾಟ್ಸಾಪ್ ಪ್ರೀಮಿಯಂನಲ್ಲೂ ನೀಡಲು ಸಿದ್ಧತರೆ ನಡೆದಿದೆ. ವಾಟ್ಸಾಪ್‌ನಲ್ಲಿ ಕಾಲ್ ಲಿಂಕ್ ಫೀಚರ್‌ನ್ನು ಸದ್ಯದಲ್ಲೇ ಒದಗಿಸ ಲಾಗುವುದು ಮತ್ತು ಲಿಂಕ್ ಮೂಲಕ ತಮ್ಮ ಗೆಳೆಯರು ಮತ್ತು ಕುಟುಂಬದ ಸದಸ್ಯರೊಂದಿಗೆ ಸಂಪರ್ಕ ಹೊಂದಲು ಅವಕಾಶ ನೀಡಲಾಗುವುದು ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. ವಾಟ್ಸಾಪ್ ಪ್ರೀಮಿಯಂ ಸೌಲಭ್ಯವು ಇನ್ನೂ ಟೆಸ್ಟಿಂಗ್ ಹಂತದಲ್ಲಿರುವುದರಿಂದ, ಯಾವಾಗ ದೊರಕಬಹುದು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಬ್ರೆಜಿಲ್‌ನಲ್ಲಿ ಕ್ರಿಪ್ಟೊ ಜನಪ್ರಿಯ!
ಕ್ರಿಪ್ಟೊಕರೆನ್ಸಿಯ ಡಿಜಿಟಲ್ ಲೋಕ ತನ್ನ ಶಕ್ತಿಯನ್ನು ಜಗತ್ತಿನಾದ್ಯಂತ ತೋರಿಸುತ್ತಿದೆ. ಯಾರು ಎಷ್ಟೇ ಹೇಳಿದರೂ, ಇಂದಿನ ಆಧುನಿಕ ತಲೆಮಾರು ಕ್ರಿಪ್ಟೊ ಕರೆನ್ಸಿಗೆ ಮಾರು ಹೋಗಿರುವುದು ಸತ್ಯ. ಕ್ರಿಪ್ಟೊದಲ್ಲಿ ಹಣ ಹೂಡಿಕೆ ಮಾಡುವುದು ಈ ಶತಮಾನದ ಹೊಸ ಫ್ಯಾನ್ಸಿ ಮತ್ತು ಹವ್ಯಾಸ ಎನಿಸಿದೆ.
ಜಗತ್ತಿನ ಹಲವು ದೇಶಗಳಲ್ಲಿ ಕ್ರಿಪ್ಟೊಕರೆನ್ಸಿ ಕುರಿತು ಸ್ಪಷ್ಟ ಕಾನೂನು ಇಲ್ಲ, ಆದರೂ, ಕ್ರಿಪ್ಟೊ ವ್ಯವಹಾರ ನಿಂತಿಲ್ಲ, ಬದಲಿಗೆ ಹೆಚ್ಚು ಹೆಚ್ಚು ನಡೆಯುತ್ತಿದೆ. ನಮ್ಮ ದೇಶದಲ್ಲಿ ಕ್ರಿಪ್ಟೊಕರೆನ್ಸಿ ಕುರಿತು ಸ್ಪಷ್ಟವಾದ ಕಾನೂನನ್ನು ಇನ್ನೂ ಮಾಡದೇ ಇರುವುದರಿಂದ, ಈ ಡಿಜಿಟಲ್ ಕರೆನ್ಸಿಯಲ್ಲಿ ಹಣ ಹೂಡುವಲ್ಲಿ ತುಸು ಹಿಂಜರಿಕೆ ಕಂಡುಬಂದಿದೆ.
ಆದರೆ ಬ್ರೆಜಿಲ್‌ನಲ್ಲಿ ಹಾಗೇನಿಲ್ಲ! ಈಚಿನ ವಾರಗಳಲ್ಲಿ, ಬ್ರೆಜಿಲ್‌ನ ಹೂಡಿಕೆದಾರರು ಕ್ರಿಪ್ಟೊ ಕರೆನ್ಸಿಯ ಬೆನ್ನು ಹತ್ತಿದ್ದು ಸ್ಪಷ್ಟವಾಗಿದೆ ಎಂದು ಅಲ್ಲಿನ ತೆರಿಗೆ ಪ್ರಾಧಿಕಾರ ಕಂಡುಕೊಂಡಿದೆ. ಸದ್ಯ, ಬ್ರೆಜಿಲ್‌ನ ಸುಮಾರು ೧೨,೦೫೩ ಸಂಸ್ಥೆಗಳು ತಾವು ಕ್ರಿಪ್ಟೊಕರೆನ್ಸಿಯನ್ನು ಹೊಂದಿದ್ದೇವೆ ಎಂದು ಘೋಷಿಸಿ ಕೊಂಡಿವೆ. ಈ ವರ್ಷದ ಜುಲೈನಲ್ಲಿ ೧೧,೩೬೦ ಸಂಸ್ಥೆಗಳು ಕ್ರಿಪ್ಟೊ ಹೊಂದಿದ್ದವು. ಈಗ ಅದು ಸುಮಾರು ಶೇ.೬ ಏರಿಕೆ ಕಂಡಿದೆ. ಬ್ರೆಜಿಲ್‌ನಲ್ಲಿ ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುವ ಸಂಸ್ಥೆಗಳ ನೆಚ್ಚಿನ ಕ್ರಿಪ್ಟೊಕರೆನ್ಸಿ ಎಂದರೆ ಬಿಟ್‌ಕಾಯಿನ್ ಮತ್ತು ಟೆದರ್.
ಒಟ್ಟು ಸಂಸ್ಥೆಗಳ ಸಂಖ್ಯೆ ಹೆಚ್ಚಳಗೊಂಡಿದ್ದರೂ, ಅವು ಹೊಂದಿರುವ ಕ್ರಿಪ್ಟೊಕರೆನ್ಸಿಯ ಮೊತ್ತ ಕಡಿಮೆಯಾಗಿರುವುದು ವಿಶೇಷ. ಕಳೆದ ಜುಲೈನಲ್ಲಿ ಬ್ರೆಜಿಲ್‌ನಲ್ಲಿ ಒಟ್ಟು ಸುಮಾರು ೩.೪ ಬಿಲಿಯ ಡಾಲರ್ ಹೂಡಿಕೆಯಾಗಿತ್ತು, ಈಗ ಸುಮಾರು ೨.೧ ಬಿಲಿಯನ್ ಡಾಲರ್ ಹೂಡಿಕೆಯಾಗಿದೆ. ಸದ್ಯ ಬ್ರೆಜಿಲ್‌ನಲ್ಲಿ ಹಣದುಬ್ಬರ ಜಾಸ್ತಿಯಾಗಿದ್ದು, ಕಳೆದ ಎಪ್ರಿಲ್‌ನಲ್ಲಿ ಅದು ಶೇ. ೧೨.೧ ಇತ್ತು. ಈ ಮಟ್ಟವು ಕಳೆದ ೨೬ ವರ್ಷಗಳಲ್ಲಿ ಅತ್ಯಧಿಕ ಎನಿಸಿದೆ. ಈ ಹಣದುಬ್ಬರಕ್ಕೂ, ಕ್ರಿಪ್ಟೊ ಹೂಡಿಕೆಗೂ ಇರುವ ಸಂಬಂಧವಿದೆಯೇ ಎಂದು ಅಲ್ಲಿನ ತಜ್ಞರು ಲೆಕ್ಕಹಾಕುತ್ತಿದ್ದಾರೆ!
ಜಗತ್ತಿನ ಹಲವು ದೇಶಗಳಿಗೆ ಹೋಲಿಸಿದರೆ, ಬ್ರೆಜಿಲ್‌ನ ಜನಸಮಾನ್ಯರು ಕ್ರಿಪ್ಟೊಕರೆನ್ಸಿಯ ಮೂಲಕ ವ್ಯವಹಾರ ಮಾಡಲು ಹೆಚ್ಚು ಆಸಕ್ತಿ ತೋರಿಸಿದ್ದು, ಅಲ್ಲಿನ ವ್ಯವಹಾರದ ಅಂಕಿ ಅಂಶಗಳ ತುಲನೆಯಲ್ಲಿ ಗೋಚರವಾಗಿದೆ. ಬ್ರೆಜಿಲ್‌ನ ಶೇ.೭೭ರಷ್ಟು ಜನರು ಡಿಜಿಟಲ್ ಕರೆನ್ಸಿಯ ಮೇಲೆ ವಿಶ್ವಾಸ ಇರಿಸಿ ದ್ದಾರೆ ಎಂದು ಬಿಟ್‌ಸ್ಟಾಂಪ್ ಸಂಸ್ಥೆ ತಿಳಿಸಿದೆ. ಬ್ರೆಜಿಲ್‌ನ ಅತಿ ದೊಡ್ಡ ಡಿಜಿಟಲ್ ಬ್ಯಾಂಕ್ ಎನಿಸಿರುವ ‘ನುಬ್ಯಾಂಕ್’ ಮೂಲಕ ಅಧಿಕೃತವಾಗಿ ಬಿಟ್‌ಕಾಯಿನ್ ಮತ್ತು ಇಥರ್‌ಗಳನ್ನು ಖರೀದಿಸಬಹುದು ಅಥವಾ ಮಾರಲೂಬಹುದು.
ಜತೆಗೆ, ಅಲ್ಲಿನ ನುಬ್ಯಾಂಕ್‌ನ ಬ್ರಾಂಡ್ ಸೇವೆ ಅನುಕೂಲ ಎನಿಸೀತು. ಜನಸಾಮಾನ್ಯರು ಡಿಜಿಟಲ್ ಕರೆನ್ಸಿ ಉಪಯೋಗಿಸಲು ಆರಂಭಿಸಿದಾಗ, ಸಹಜ ವಾಗಿ ಹ್ಯಾಕರ್‌ಗಳು ಮತ್ತು ಮೋಸಗಾರರು ತಮ್ಮ ಕೈಚಳಕ ತೋರಿಸುವ ಸಾಧ್ಯತೆ ಅಧಿಕ. ಇದನ್ನು ತಡೆಯಲು ಬ್ರೆಜಿಲ್‌ನ ಕಾನೂನು ಪಾಲಕರು, ಕ್ರಿಪ್ಟೊ ಹೂಡಿಕೆದಾರರ ಹಿತಕಾಯಲೆಂದೇ ವಿಶೇಷ ತನಿಖಾ ದಳವನ್ನು ರೂಪಿಸಿದ್ದು, ಕ್ರಿಪ್ಟೊ ಕರೆನ್ಸಿಯಲ್ಲಿ ನಡೆಯುವ ಮೋಸವನ್ನು ಶೀಘ್ರ ಪತ್ತೆ ಹಚ್ಚುವಂತೆ ವ್ಯವಸ್ಥೆ ರೂಪಿಸಿದ್ದಾರೆ.
ಆನರ್ ಹೊಸ ಸ್ಮಾರ್ಟ್ ಫೋನ್
ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್‌ಗಳನ್ನು ಒದಗಿಸುವಲ್ಲಿ ಚೀನಾದ ವಿವಿಧ ಸಂಸ್ಥೆಗಳು ಸದಾ ಮುಂದು. ತಂತ್ರಜ್ಞಾನದ ಔನ್ನತ್ಯದಲ್ಲಿ ಆ ದೇಶದ ಹಲವು ಸಂಸ್ಥೆಗಳಲ್ಲೇ ಪೈಪೋಟಿ ಇದ್ದು, ಕಡಿಮೆ ಬೆಲೆ ಉತ್ತಮ ಸೌಲಭ್ಯ ಇರುವ ಸ್ಮಾರ್ಟ್ ಫೋನ್‌ಗಳನ್ನು ಒದಗಿಸುತ್ತಲೇ ಇವೆ. ಚೀನಾದ ಹೆಚ್ಚಿನ ಗೆಜೆಟ್‌ಗಳು ಗ್ರಾಹಕರ ಡಾಟಾ ಕದಿಯುತ್ತವೆ ಎಂಬ ಕುಹಕ ಇದ್ದದ್ದೇ, ಆದರೂ, ಆ ದೇಶ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್ ಫೋ ನ್ ಮತ್ತು ಗೆಜೆಟ್‌ಗಳ ಸಂಖ್ಯೆ ಅಧಿಕವೆನ್ನಲೇಬೇಕು.
ಚೀನಾದಲ್ಲಿ ತಯಾರಾಗುವ ಆನರ್ ಸ್ಮಾರ್ಟ್ ಫೋನ್‌ನ ಹೊಸ ಅವರತಣಿಕೆ ಇದೇ ಅಕ್ಟೋಬರ್ ೧೩ರಂದು ಬಿಡುಗಡೆಯಾಗಲಿದೆ. ಶೆಂಜೆನ್ ಮೂಲದ ಸಂಸ್ಥೆ ತಯಾರಿಸಿರುವ ‘ಆನರ್ ಎಕ್ಸ್೪೦ ಜಿಟಿ’ ಸ್ಮಾರ್ಟ್ ಫೋನ್, ಚೀನಾದಲ್ಲಿ ಬಿಡುಗಡೆಯಾಗಲಿದ್ದು, ನಂತರದ ಕೆಲವು ಸಮಯದಲ್ಲಿ ಜಗತ್ತಿನ ಇತರ ಭಾಗಗಳಲ್ಲೂ ದೊರಕಲಿದೆ.
ಈ ಸ್ಮಾರ್ಟ್ ಫೋನಿನ ಹಿಂದಿನ ಅವತರಣಿಕೆಯಾಗಿದ್ದ ಆನರ್ ಎಕ್ಸ್ ೪೦ಯ ಬೆಲೆಯು ಸುಮಾರು ರು.೧೭,೧೦೦ ಇದ್ದು, ಈಗಿನ ಹೊಸ ಅವತರಣಿಕೆಯು ಇದಕ್ಕಿಂತ ಹೆಚ್ಚು ಬೆಲೆ ಹೊಂದಿರುವುದರಲ್ಲಿ ಅನುಮಾನವಿಲ್ಲ. ಆನರ್ ಎಕ್ಸ್ ೪೦ ಮೊಬೈಲ್ ೬ ಜಿಬಿ ರ‍್ಯಾಮ್ ಹೊಂದಿದ್ದು, ೧೨೮ ಜಿಬಿ ಮೆಮೊರಿ
ಹೊಂದಿದೆ. ೬.೭ ಇಂಚು ಡಿಸ್ಪ್ಲೇ, ಎರಡು ರೇರ್ ಕ್ಯಾಮೆರಾ, ಅದರಲ್ಲಿ ಒಂದು ೫೦ ಎಂಪಿ ಕ್ಯಾಮೆರಾ, ೫೧೦೦ ಎಂಎಎಚ್ ಬ್ಯಾಟರಿ, ೪೦ಡಬ್ಲ್ಯು ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿತ್ತು. ಇದೇ ೧೩ರಂದು ಬಿಡುಗಡೆಯಾಗಲಿರುವ ಹೊಸ ಆನರ್ ಎಕ್ಸ್೪೦ ಜಿಟಿ ಸ್ಮಾರ್ಟ್-ನ್‌ನ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಸೂರ್ಯನ ಅಧ್ಯಯನ
ಸೂರ್ಯನೆಂದರೆ ಬೆಂಕಿ. ಆ ಬೆಂಕಿಯ ಅಂತರಾಳವನ್ನು ಅರಿಯುವುದು ಸುಲಭದ ಕೆಲಸವೇನಲ್ಲ. ಚೀನಾ ದೇಶವು ಸೂರ್ಯನನ್ನು ಅಧ್ಯಯನಕ್ಕೆ ಒಳಪಡಿಸಲು, ಸೋಲಾರ್ ಅಬ್ಸರ್ವೇಟರಿಯನ್ನು ಬಾಹ್ಯಾಕಾಶಕ್ಕೆ ಹಾರಿಬಿಟ್ಟಿದೆ. ಕೌಫು -೧ ಎಂಬ ಹೆಸರಿನ ಈ ಬಾಹ್ಯಾಕಾಶ ನೌಕೆಯು ಸೂರ್ಯನ ಅತಿ
ಶಾಖದ ರಹಸ್ಯವನ್ನು ಅರಿಯಲು ತನ್ನ ಪ್ರಯತ್ನ ನಡೆಸಲಿದೆ. ಸೂರ್ಯನ ಅಯಸ್ಕಾಂತೀಯ ಕ್ಷೇತ್ರದಿಂದಾಗಿ, ಭಾರೀ ಸೋಲಾರ್ ಬೆಂಕಿಯು ಅಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು, ಅವೆರಡರ ನಡುವಿನ ಸಂಬಂಧವನ್ನು ಅಧ್ಯಯನ ಮಾಡುವುದು ಸಹ ಈ ಬಾಹ್ಯಾಕಾಶ ಸಂಶೋಧನೆಯ ಒಂದು ಉದ್ದೇಶ.