Saturday, 23rd November 2024

ಮರೆತು ಹೋದ ಮಹಾನ್ ಚಿಂತಕ ಕಾವ್ಯಕಂಠ ಗಣಪತಿ ಮುನಿ

ಗುರುಪ್ರಸಾದ ಹಾಲ್ಕುರಿಕೆ

ಮಹಾತಪಸ್ವಿ ಕೃತಿಯ ಆಯ್ದ ಭಾಗಗಳು

ಅರುಣಾಚಲದ ರಮಣ ಮಹರ್ಷಿಗಳಿಗೆ ಆ ಹೆಸರನ್ನಿತ್ತ ಅವರ ಶಿಷ್ಯ ಕಾವ್ಯಕಂಠ ಗಣಪತಿ ಮುನಿ ಯವರದು ಅಧ್ಯಾತ್ಮ ಮತ್ತು ಪಾಂಡಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಅಸ್ಪೃಶ್ಯತೆಯ ಆಚರಣೆ ತಪ್ಪು ಎಂದು ಬಹಿರಂಗವಾಗಿ ಪ್ರತಿಪಾದಿಸಿ, ನಮ್ಮ ದೇಶವು ಬ್ರಿಟಿಷರ ದಾಸ್ಯದಿಂದ ಹೊರಬರಬೇಕು ಎಂದು ಹೇಳುತ್ತಿದ್ದ ಗಣಪತಿ ಮುನಿಗಳು, ಕರ್ನಾಟಕದ ಗೋಕರ್ಣದಲ್ಲೂ ಕೆಲವು ಕಾಲ ನೆಲೆಸಿದ್ದರು. ಹಲವು ಸಂಪೂರ್ಣ ಕಾವ್ಯಗಳನ್ನು ನೆನಪಿನ ಶಕ್ತಿಯಿಂದಲೇ ಹೇಳಬಲ್ಲವರಾಗಿದ್ದ ಗಣಪತಿ ಮುನಿಗಳು, ಪಾಂಡಿತ್ಯಕ್ಕಿಂತ ಅಧ್ಯಾತ್ಮಕ್ಕೆ ಹೆಚ್ಚು ಒತ್ತು ನೀಡಿದರು. ಮೌನಿ ಸ್ವಾಮಿ ಎಂದೇ ಹೆಸರಾಗಿದ್ದ ರಮಣ ಮಹರ್ಷಿಗಳಿಗೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡು ಅವರ ಶಿಷ್ಯರಾದ ಗಣಪತಿ ಮುನಿಗಳ ಸಾಧನೆ ಯನ್ನು ನಮ್ಮ ನಾಡು ಸೂಕ್ತವಾಗಿ ಸ್ಮರಿಸಿಕೊಳ್ಳುತ್ತಿಲ್ಲ. ಅವರ ಮೊಮ್ಮಗ ಎ.ವಿ.ರಮಣ ಅವರು ಬರೆದಿರುವ ಮುನಿಗಳ ಜೀವನ ಚರಿತ್ರೆ ‘ಮಹಾತಪಸ್ವಿ’ಯ ಕನ್ನಡ ಅನುವಾದ ಕಳೆದ ವಾರ ಪ್ರಕಟಗೊಂಡಿದೆ. ಆ ಪುಸ್ತಕದ ಆಯ್ದ ಭಾಗ ಗಳನ್ನು ‘ವಿಶ್ವವಾಣಿ’ಯ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

ಗಣಪತಿ ಮುನಿಗಳು ವಸಿಷ್ಠಗೋತ್ರದ ಶ್ರೀವಿದ್ಯಾ ದೀಕ್ಷೆಗೆ ಸೇರಿದ ಒಂದು ಕುಟುಂಬಕ್ಕೆ ಸೇರಿದವರು. ಈ ಕುಟುಂಬವು ತಮಿಳುನಾಡಿನ ಕುಂಭಕೋಣಮ್ ಪ್ರಾಂತ್ಯದ ಬಳಿಯಲ್ಲಿನ ವಲಂಗೈಮನ್ ಹಳ್ಳಿಯಿಂದ ಕ್ರಿ.ಶ 16ನೇ ಶತಮಾನದ ಅಂತ್ಯದಲ್ಲಿ ಅಥವ 17ನೇ ಶತಮಾನದ ಆದಿಯಲ್ಲಿ ಆಂಧ್ರಪ್ರದೇಶಕ್ಕೆ ವಲಸೆ ಬಂದು ಗೋದಾವರೀ ತೀರದಲ್ಲಿ ನೆಲೆಸಿದ ಗುಂಪಿಗೆ ಸೇರಿದವರು.

ಈ ಕುಟುಂಬಕ್ಕೆ ಸೇರಿದ ಅಯ್ಯಾಲ ಸೋಮಯಾಜುಲ ನೃಸಿಂಹಶಾಸಿ ಮತ್ತು ನರಸಾಂಬ ಅವರ ಪುತ್ರನೇ ಗಣಪತಿ. ಪತ್ನಿ ಗರ್ಭಿಣಿ ಯಾಗಿದ್ದಾಗ ಯಾತ್ರೆ ಹೋಗಿದ್ದ ನೃಸಿಂಹ ಶಾಸ್ತ್ರಿ ಗಳು ಕಾಶಿಯಲ್ಲಿನ ವಿಶ್ವೇಶ್ವರ ಮಂದಿರದ ಬಳಿ ದುಮ್ಟಿ ಗಣಪತಿ ವಿಗ್ರಹದೆದುರಿಗೆ ಸೂರ್ಯೋದಯವಾದ ಎರಡು ಘಳಿಗೆಯ ಸಮಯದಲ್ಲಿ ಕುಳಿತು ನವಾಕ್ಷರ ಗಣಪತಿ ಮಂತ್ರವನ್ನು ಜಪಿಸುತ್ತಾ ತದೇಕ ಚಿತ್ತ ದಿಂದ ವಿಗ್ರಹವನ್ನೇ ವೀಕ್ಷಿಸುತ್ತಿರುವಾಗ ಅವರಿಗೆ ವಿಗ್ರಹದಿಂದ ಒಂದು ಸಣ್ಣ ಮಗುವು ಅಂಬೆಗಾಲನ್ನು ಇಟ್ಟುಕೊಂಡು ಹೊರಬಂದು ಇವರ ತೊಡೆಯ ಮೇಲೆ ಕುಳಿತಂತೆ ಅನುಭವವಾಯಿತು.

ಅದೇ ಸಮಯದಲ್ಲಿ ಊರಿನಲ್ಲಿ ಮಗು ಜನಿಸಿತ್ತು. ಹೀಗೆ ನೃಸಿಂಹಶಾಸ್ತ್ರಿಯವರಿಗೆ 17-11-1878 ರಂದು ಜನಿಸಿದ ದೈವೀ ಶಿಶುವು ಸೂರ್ಯದೇವನ ಹಾಗೂ ಗಣಪತಿಯ ಅನುಗ್ರಹ ದಿಂದ ಜನಿಸಿದವನಾದ್ದರಿಂದ ಮಗುವಿಗೆ ಸೂರ್ಯ ಗಣಪತಿ ಎಂದು ನಾಮಕರಣ ಮಾಡ ಲಾಯಿತು.

ಅಸಾಧಾರಣ ನೆನಪಿನ ಶಕ್ತಿ

ಗಣಪತಿಯನ್ನು ಅವನ ಚಿಕ್ಕಪ್ಪನಾದ ಪ್ರಕಾಶ ಶಾಸ್ತ್ರಿಯ ಬಳಿ ತೆಲುಗು ಹಾಗೂ ಸಂಸ್ಕೃತ ಭಾಷೆಗಳನ್ನು ಕಲಿತು ಕೊಳ್ಳಲು ಕಳಿಸಿದರು. ಗಣಪತಿಗೆ ಛಾಯಾಚಿತ್ರ ಸ್ವರೂಪದ ಜ್ಞಾಪಕ ಶಕ್ತಿ. ಒಮ್ಮೆ ಹೇಳಿದರೆ ಅದು ಮನದಲ್ಲಿ ಅಚ್ಚೊತ್ತಾಗಿರುತ್ತಿತ್ತು. ಗಣಪತಿಯು ಸಂಸ್ಕೃತ, ತೆಲುಗು ಕಲಿತು ತನ್ನ ಎಂಟನೇ ವರ್ಷದ ಅಮರಮ, ಬಾಲರಾಮಾಯಣಮ್ ಮತ್ತು ಶಿವಸಹಸ್ರಮ್ ‌ಗಳನ್ನು ಕರತಲಾಮಲಕ ವಾಗಿಸಿಕೊಂಡನು.

ಬಾಲಕ ಗಣಪತಿಗೆ ಮುಂದೆ ನಡೆಯುವುದನ್ನು ನಿಖರವಾಗಿ ಹೇಳುವ ಶಕ್ತಿ ಇತ್ತು. ಗಣಪತಿಯು ತನ್ನ ಹದಿನೈದನೇ ವರ್ಷದ ಸಂಸ್ಕೃತದ ಐದು ಮಹಾಕಾವ್ಯಗಳ ಅಧ್ಯಯನವನ್ನು ಮುಗಿಸಿದನು. ನೃಸಿಂಹ ಶಾಸ್ತ್ರಿಗಳು ತಮ್ಮ ಮಗನಿಗೆ ಮಹಾ ಗಣಪತಿ ಮಂತ್ರವನ್ನು ಉಪದೇಶಿಸಿದರು. ತಂದೆಯವರ ಸಲಹೆಯಂತೆ ಗಣಪತಿಯು ಶ್ರೀಚಕ್ರ ಪೂಜೆಯನ್ನು ಪ್ರಾರಂಭಿಸಿದನು. ಈ ಮಹಾನ್ ಕಾರ್ಯವು ಮುಂದೆ ಗಣಪತಿಯ ಜೀವನದಲ್ಲಿ ತಪಸ್ಸಿನ ಮಹಾನ್ ವೃಕ್ಷಕ್ಕೆ ಮೊಳಕೆಯಾಯಿತು.

ಗಣಪತಿ ಮುನಿಗಳು ಉತ್ತರಭಾರತ ಪ್ರವಾಸ ಕೈಗೊಂಡರು. ನಾಸಿಕ ಕ್ಷೇತ್ರದಲ್ಲಿ ಗಣಪತಿ ಮುನಿಗಳು ಶಂಕರ ಭಗವಾನನನ್ನು ಕುರಿತು 40 ದಿನಗಳ ದೀರ್ಘ ತಪಸ್ಸನ್ನಾಚರಿಸಿದರು. ವಾರಣಾಸಿಯನ್ನು ತಲುಪಿದ ಗಣಪತಿ ಮುನಿಗಳಿಗೆ ಅಲ್ಲಿನ ವಿದ್ವತ್ ಶಿರೋಮಣಿ ಶಿವಕುಮಾರ ದತ್ತರವರಿಂದ ಬೆಂಗಾಲ ಪ್ರಾಂತ್ಯದ ನವದ್ವೀಪದಲ್ಲಿ ನಡೆಯುವ ವಿದ್ವತ್ ಸಭೆಯಲ್ಲಿ ಭಾಗವಹಿಸಲು ಅನುಮತಿಯನ್ನು ಪಡೆದರು. ಅನಂತರ ಗಣಪತಿ ಮುನಿಗಳು ಭುವನೇಶ್ವರದಲ್ಲಿನ ಮಾತೆ ಭುವನೇಶ್ವರಿಯನ್ನು ಕುರಿತು 21 ದಿನಗಳ ದೀರ್ಘ ತಪಸ್ಸನ್ನಾಚರಿಸಿದರು. ಅವರ ಮೇರು ಕೃತಿಯಾದ ಸಾವಿರ ಶ್ಲೋಕಗಳಿಂದ ಕೂಡಿದ ‘ಉಮಾ ಸಹಸ್ರಮ್’ ಸ್ತೋತ್ರದಲ್ಲಿ ಮಾತೆಯ ಮಂದಹಾಸವನ್ನು ಕುರಿತು ಅನೇಕ ಶ್ಲೋಕಗಳನ್ನು ರಚಿಸಿದ.

ಕಾವ್ಯಕಂಠ ಬಿರುದು
ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತದಲ್ಲಿ ಎರಡು ಸುಪ್ರಸಿದ್ಧ ಕಾಳಿ ಮಂದಿರಗಳಿವೆ. ಗಣಪತಿಯು ನವದ್ವೀಪಕ್ಕೆ ಹೋಗುವ ಮೊದಲು ಕೊಲ್ಕತ್ತ ನಗರಕ್ಕೆ ಭೇಟಿಕೊಟ್ಟನು. ಈ ನಗರವು ದಶ ಮಹಾವಿದ್ಯೆಯ ಪ್ರಮುಖ ಕೇಂದ್ರ. ಗಣಪತಿ ಮುನಿಗಳು ನವ ದ್ವೀಪದಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಸಭೆಯ ಅಧ್ಯಕ್ಷರಾದ ಅಂಬಿಕಾ ದತ್ತರೊಂದಿಗೆ ಸಂಸ್ಕೃತದಲ್ಲಿ ದೀರ್ಘ ವಾದವನ್ನು ಮಾಡಿ ವಿಜಯಿಯಾದರು ಹಾಗೂ ಅವರು ನೀಡಿದ ಅನೇಕ ವಿದ್ವತ್ ಪರೀಕ್ಷೆಯನ್ನು ಎದುರಿಸಿದರು.

ನಂತರ ಸಭೆಯಲ್ಲಿನ ಸಮಸ್ತ ವಿದ್ವಾಂಸರುಗಳು ಒಮ್ಮತದಿಂದ ಗಣಪತಿ ಮುನಿಗಳಿಗೆ ‘ಕಾವ್ಯಕಂಠ’ ಎಂಬ ಬಿರುದನ್ನು ನೀಡಿ ಗೌರವಿಸಿ ಬಿರುದು ಪತ್ರವನ್ನು ನೀಡಿದರು. ಅಂದಿನಿಂದ ಸೂರ್ಯ ಗಣಪತಿಯು ‘ಕಾವ್ಯಕಂಠ ಗಣಪತಿ’ ಎಂದು ಪ್ರಖ್ಯಾತರಾದರು. ನಂತರ ಗಣಪತಿ ಮುನಿಗಳು ನವದ್ವೀಪದಿಂದ ಕಾಂಚಿಪುರಮ್ ಪಟ್ಟಣವನ್ನು ತಲುಪಿದರು. ಅಲ್ಲಿ ಒಬ್ಬ ಬ್ರಾಹ್ಮಣನು ಅವರಿಗೆ ಅರುಣಾಚಲ ಕ್ಷೇತ್ರವನ್ನು ಸಂದರ್ಶಿಸುವಂತೆ ಸಲಹೆ ನೀಡಿದನು.

ಅರುಣಾಚಲ ರಮಣ ಮಹರ್ಷಿಗಳ ವಾಸಸ್ಥಾನ, ಹಾಗಾಗಿ ಇದನ್ನು ಪವಿತ್ರ ಪ್ರದೇಶವೆಂದು ಪರಿಗಣಿಸುತ್ತಾರೆ. ಗಣಪತಿಯ ಪತ್ನಿ ಹಾಗೂ ಮಗನು ಗಣಪತಿಯೊಂದಿಗೆ ತಿರುವಣ್ಣಾಮಲೈಯಲ್ಲಿ ವಾಸಿಸಲು ಬಂದ ಕೆಲವೇ ದಿನಗಳಲ್ಲಿ ಗಣಪತಿಯು ತನ್ನ ಸಂಸಾರ ದೊಂದಿಗೆ ಅರುಣಾಚಲ ಬೆಟ್ಟವನ್ನು ಹತ್ತಿ ಅಲ್ಲಿದ್ದ ಮೌನಿ ಸ್ವಾಮಿಗಳ (ಆಗ ರಮಣ ಭಗವಾನರನ್ನು ಆ ರೀತಿ ಸಂಬೋಧಿಸು ತ್ತಿದ್ದರು) ದರ್ಶನವನ್ನು ಮಾಡಲು ಬಂದರು.

ಸ್ವಾಮಿಗಳಿಗೆ ಶರಣಾದ ಕಾವ್ಯಕಂಠ
ಗಣಪತಿ ಮುನಿಗಳು ನವೆಂಬರ್ 1907ರಲ್ಲಿ ಅರುಣಾಚಲ ಕ್ಷೇತ್ರಕ್ಕೆ ಬಂದಾಗ ಅಲ್ಲಿ ಕಾರ್ತಿಕ ದೀಪೋತ್ಸವಗಳು ಜರುಗುತ್ತಿದ್ದವು. ರಥೋತ್ಸವದ ಸಮಯದಲ್ಲಿ, ನಿಂತು ಹೋದ ರಥ ಚಲಿಸುವಂತೆ ಮಾಡಿದ ಮಾಡಿದ ಗಣಪತಿ ಮುನಿಗಳು ಪ್ರಖ್ಯಾತರಾದರು. ಅವರು ಬೆಟ್ಟ ಹತ್ತಿ ವಿರೂಪಾಕ್ಷ ಗುಹೆಯನ್ನು ತಲುಪಿದರು. ಗುಹೆಯ ಹೊರಭಾಗದಲ್ಲಿ ಮೌನ ಸ್ವಾಮಿಯು (ರಮಣ ಮಹರ್ಷಿ) ನಗುತ್ತಾ ಗಣಪತಿಯ ಬರವನ್ನು ನಿರೀಕ್ಷಿಸುತ್ತಿದ್ದರೋ ಎಂಬಂತೆ ಕುಳಿತಿದ್ದರು. ಮೌನಸ್ವಾಮಿಗೆ ನಮಸ್ಕರಿಸಿ ಅವರ ಪಾದ ಗಳೆರಡನ್ನೂ ಹಿಡಿದು, ಸಂಪೂರ್ಣ ಶರಣಾಗತಿಯಿಂದ, ‘ನಾನು ಎಲ್ಲ ಶಾಸ್ತ್ರಗಳನ್ನೂ ಅಧ್ಯಯನ ಮಾಡಿರುವೆ, ಪ್ರಸಿದ್ಧ ಮಂತ್ರ ವನ್ನು ನನ್ನ ಹೃದಯ ತೃಪ್ತಿಯಾಗುವವರೆಗೂ ಜಪಿಸಿರುವೆ, ನೂರಾರು ಬಾರಿ ತಪಸ್ಸನ್ನಾಚರಿಸಿರುವೆ ಮತ್ತು ಸಂಯಮವನ್ನು ಪಾಲಿಸಿರುವೆ.

ಆದರೂ ನನಗೆ ಜ್ಞಾನೋದಯವಾಗಲಿಲ್ಲ. ನನ್ನ ತಪಸ್ಸು ಕಳಂಕದಿಂದ ಕೂಡಿತ್ತೇ, ಏನಾದರೂ ತಪ್ಪಾಗಿದೆಯೇ ಅಥವಾ ನನಗೆ ಆಚರಿಸುವ ರೀತಿಯು ಗೊತ್ತಿಲ್ಲದೇ ಇರಬಹುದು. ನನ್ನನ್ನು ವಿದ್ವಾಂಸ ನೆಂದು ಕರೆಯುವರು, ಆದರೂ ನನಗೇನು ಅರಿವಾಗದು. ನಾನು ನಿಮ್ಮಲ್ಲಿ ಶರಣು ಬಂದಿರುವೆ. ದಯವಿಟ್ಟು ತಪಸ್ಸು ಎಂದರೆ ಏನೆಂದು ತಿಳಿಸಿ. ಸಹಾಯ ಮಾಡಿ’ ಎಂದರು.

ಗುರುವಿಗೇ ಹೆಸರಿಟ್ಟ ಶಿಷ್ಯ!
ಮೌನ ಸ್ವಾಮಿಗಳು ಕಾವ್ಯಕಂಠರನ್ನು ಅನುಗ್ರಹಿಸಿ ಅವರಿಗೆ ತಪಸ್ಸಿನ ಎಲ್ಲ ರೀತಿ ನೀತಿಗಳನ್ನು ಮೃದುವಾದ ಮಾತುಗಳಲ್ಲಿ ವಿವರಿಸಿದರು. ಗಣಪತಿಯ ಹೃದಯವು ಅಸಾಮಾನ್ಯವಾದ ಆನಂದದಿಂದ ತುಂಬಿಕೊಂಡಿತ್ತು. ವಿರೂಪಾಕ್ಷ ಗುಹೆಯಲ್ಲಿ ಕುಳಿತು ಅವರು ಗುರುಗಳ ಈ ಮಹತ್ತರವಾದ ಬೋಧನೆಯ ಕುರಿತಾಗಿ ಆಳವಾಗಿ ಧ್ಯಾನಿಸಿದರು. ಗಣಪತಿಗೆ ರೋಮಾಂಚನವಾಯಿತು. ಅವರ ಶರೀರವನ್ನು ಒಂದಾದರೊಂದಂತೆ ಆನಂದದ ಅಲೆಗಳೆದ್ದು ತೋಯಿಸಿತು.

ಅವರು ಅ ರಮಣ ಮಹರ್ಷಿಗಳ ಪಾದದಡಿಯಲ್ಲಿ ಕುಳಿತು ಸಂಜೆಯವರೆಗೂ ಧ್ಯಾನ ಮಾಡಿದರು. ಬೇರೆ ಯಾರೇ ಸಾಮಾನ್ಯ ವಿದ್ವಾಂಸನೂ ತನಗೆ ಈ ರೀತಿಯಾಗಿ ಅಂತಹ ಸಂದೇಶವನ್ನು ಕಲಿಸುವುದಕ್ಕಾಗು ತ್ತಿರಲಿಲ್ಲ ಎಂಬುದರ ಬಗ್ಗೆ ಅವರಿಗೆ ಸಂಪೂರ್ಣವಾಗಿ ಮನವರಿಕೆಯಾಯಿತು. ಅವರು ಅಲ್ಲಿಯ ಸೇವಕರಿಂದ ಮೌನಿ ಸ್ವಾಮಿಯ ಹಿಂದಿನ ಹೆಸರನ್ನು ಕೇಳಿ ಅವರ ಹೆಸರು ವೆಂಕಟರಾಮನ್ ಎಂಬುದನ್ನರಿತು, ಅದನ್ನು ಸಂಕ್ಷಿಪ್ತವಾಗಿ ರಮಣ ಎಂದು ಕರೆದು, ಮೌನ ಸ್ವಾಮಿಗಳನ್ನು ಮಹರ್ಷಿ (ಮಹಾನ್ ಋಷಿ) ಎಂಬುದಾಗಿ ಕರೆದರು.

ಉಮಾ ಸಹಸ್ರಮ್ ರಚನೆ
ದೈವೀ ಮಾತೆಗೆ ಹಲವಾರು ಹೆಸರುಗಳಿವೆ. ಆದರೆ ಗಣಪತಿ ಮುನಿಗಳು, ಸಾವಿರ ಶ್ಲೋಕಗಳನ್ನೊಳಗೊಂಡ ತಮ್ಮ ಮೇರು ಕೃತಿ ಯಾದ ‘ಉಮಾ ಸಹಸ್ರಮ’ಗೆ ದೇವಿಯ ಹೆಸರನ್ನು ಉಮ ಎಂಬ ಹೆಸರನ್ನೇ ಆರಿಸಿ ಕೊಂಡರು. ಗಣಪತಿ ಮುನಿಗಳು ಈ ಕೃತಿ ಯನ್ನು ಕೇವಲ ಇಪ್ಪತ್ತು ದಿನಗಳಲ್ಲಿ ರಚಿಸಲು ಉದ್ದೇಶಿಸಿದ್ದರು. ಮಂಗಳವಾರ, ನವೆಂಬರ್, 26, 1907, ರಮಣ ಮಹರ್ಷಿ ಗಳ ಸಮ್ಮುಖದಲ್ಲಿ ಕೃತಿ ರಚನೆಯನ್ನು ಪ್ರಾರಂಭಿಸಿ ದರು. ಪ್ರತಿ ದಿನದ ಕೊನೆಯಲ್ಲಿ ಗಣಪತಿ ಮುನಿಗಳು ಭಗವಾನರ ಮುಂದೆ ಆ ದಿನ ಬರೆದ ಶ್ಲೋಕಗಳನ್ನು ಓದುತ್ತಿದ್ದರು.

15-02-1907, ಭಾನುವಾರ ಸ್ತೋತ್ರವನ್ನು ಮುಗಿಸುವ ಇಪ್ಪತ್ತನೇ ಕೊನೆಯ ದಿನ. ರಮಣ ಮಹರ್ಷಿಗಳು ಹತ್ತಿರ ದಲ್ಲಿದ್ದ ಎತ್ತರದ ಕುರ್ಚಿಯ ಮೇಲೆ ಸಮಾಧಿ ಸ್ಥಿತಿಯಲ್ಲಿ ಕುಳಿತಿದ್ದರು. ಗಣಪತಿ ಮುನಿಗಳು ಅವರ ಪಾದದಡಿಯಲ್ಲಿ ಕುಳಿತರು. ಅವರ ಶಿಷ್ಯರು ಪೆನ್ನು ಹಾಗೂ ಪೇಪರಿನೊಂದಿಗೆ ಸುತ್ತಲೂ ಕುಳಿತಿದ್ದರು. ಮುನಿಗಳು ಐದು ಶ್ಲೋಕಗಳನ್ನು ಏಕಕಾಲದಲ್ಲಿ ಪ್ರತಿಯೊಬ್ಬ ಶಿಷ್ಯನಿಗೂ ಒಂದೊಂದು ಸಾಲನ್ನು ಹೇಳಲು ತೊಡಗಿದರು. ಐದೂ ಶಿಷ್ಯರಿಗೆ ಕ್ರಮವಾಗಿ ಬೇರೆ ಬೇರೆ ಶ್ಲೋಕಗಳ ಮೊದಲನೇ ಸಾಲನ್ನು ಹೇಳಿದ ನಂತರ ಮೊದಲನೇ ಶಿಷ್ಯನ ಕಡೆ ತಿರುಗಿ ಆ ಶ್ಲೋಕದ ಎರಡನೇ ಸಾಲನ್ನು ಹೇಳತೊಡಗಿದರು.

ಇದೇ ರೀತಿ ಎಲ್ಲರಿಗೂ ಹೇಳುವುದನ್ನು ಮುಂದುವರೆಸಿದರು. ಪ್ರತಿಶ್ಲೋಕವೂ ವಿವಿಧ ಛಂದಸ್ಸಿನಿಂದ ಕೂಡಿದ್ದು, ಐದು ಶ್ಲೋಕ ಗಳು ಐದು ಛಂದಸ್ಸಿನಿಂದ ಕೂಡಿದ್ದು ಏಕಕಾಲದಲ್ಲಿ ಹೇಳುತ್ತಿದ್ದರು. ಕಾವ್ಯ ರಚನೆಯ ವಲಯದಲ್ಲಿ ಇಂತಹ ಅದ್ಭುತ ಕಾರ್ಯ ವನ್ನು ಗಣಪತಿ ಮುನಿಗಳಿಂದ ಮಾತ್ರ ಸಾಧ್ಯ. 1908ರ ಮಾರ್ಚ್ ತಿಂಗಳಿನಲ್ಲಿ ನಾಯನರು (ಗಣಪತಿ ಮುನಿಗಳು) ಭಗವಾನ್ ರಮಣರನ್ನು ವಿಶ್ವಗುರು ವೆಂದು ಘೋಷಿಸಿದರು.

ಗೋಕರ್ಣಕ ಯಾತ್ರೆ
1912ರಲ್ಲಿ ನಾಯನರು ಪತ್ನಿ ಪುತ್ರ ಸಮೇತವಾಗಿ ಗೋಕರ್ಣದೆಡೆಗೆ ತೀರ್ಥ ಯಾತ್ರೆಯನ್ನು ಪ್ರಾರಂಭಿಸಿ ದರು. ಮೊದಲಿಗೆ ಶಂಕರಾಚಾರ್ಯರ ಜನ್ಮಸ್ಥಳವಾದ ಕಾಲಡಿಗೆ ಭೇಟಿಕೊಟ್ಟು ಅಲ್ಲಿಂದ ಗೋಕರ್ಣಕ್ಕೆ ಹೋಗಲು ದೋಣಿಯನ್ನು ಹತ್ತಿದರು. ನಾಯನರು ಗೃಹಸ್ಥರಾದರೂ ಅವರು ತಮ್ಮ ವಾಸಕ್ಕೆ ಹಾಗೂ ತಪಸ್ಸಿಗೆ ಗುಹೆ ಮತ್ತು ಬೆಟ್ಟಗುಡ್ಡಗಳನ್ನು ಅರಸುತ್ತಿದ್ದರು. ಗೋಕರ್ಣದಲ್ಲಿ ಒಂದು ಪಾಳು ಬಿದ್ದ ಕೃಷ್ಣ ಮಂದಿರವನ್ನು ಕಂಡು ಅ ಮೂವರೂ ಇರಲು ನಿರ್ಧರಿಸಿದರು. ಮಗ ಮಹಾ ದೇವನು ಊರೊಳಗೆ ಹೋಗಿ, ಭಿಕ್ಷೆಯನ್ನು ನೀಡುವ ಕೇವಲ ಮೂರು ಮನೆಗಳಿಂದ ಆಹಾರ ಭಿಕ್ಷೆ ತಂದು ಕೊಡುತ್ತಿದ್ದನು.

ಗೋಕರ್ಣದಲ್ಲಿ ಅನಂತ ಶಾಸ್ತ್ರಿಯು ಹೆಸರಾಂತ ವಿದ್ವಾಂಸರು ಹಾಗೂ ವಿಷ್ಣುವಿನ ಪರಮ ಭಕ್ತ. ಒಂದು ದಿನ ಅವರು ನಾಯನ ರೊಂದಿಗೆ ಚರ್ಚಿಸುತ್ತಿದ್ದಾಗ ಇಂದ್ರತತ್ತ್ವದ ಬಗ್ಗೆ ನಾಯನರು ವಿವರಿಸುತ್ತಿರುವಾಗ ಅನಂತ ಶಾಸ್ತ್ರಿಗಳಿಗೆ ನಾಯನರ ವಿದ್ವತ್ತಿನ ಹಾಗೂ ಪ್ರವಾಹದೋಪಾದಿಯಲ್ಲಿ ಅವರ ಬಾಯಿಯಿಂದ ಹೊರಬರುತ್ತಿದ್ದ ವಾಗ್ಝರಿಯನ್ನು ಕಂಡು, ನಾಯನರು ವೇದ ವಾಸಿಷ್ಠರಂತೆ ಮಹಾನ್ ಋಷಿಗಳೆಂದು ಅರಿವಾಗಿ, ಅವರ ಶಿಷ್ಯರಾದರು.

ಗೋಕರ್ಣದ ವಿದ್ವಾಂಸರಿಗೆ ನಾಯನರು ಜ್ಯೋತಿಷ್ಯ ಶಾಸ ಪ್ರವೀಣರೆಂದು ಅರಿವಾಗಿ ಅವರಲ್ಲಿ ಬಂದು ತಮಗೆ ಜ್ಯೋತಿಷ್ಯ ಶಾಸ್ತ್ರದ ಸೂಕ್ಷ್ಮಗಳನ್ನು ಕಲಿಸುವಂತೆ ಕೇಳಿಕೊಂಡರು. ಗೋಕರ್ಣದ ಒಂದು ತುದಿಯಲ್ಲಿ ಉಮಾಮಹೇಶ್ವರ ಎಂದು ಕರೆಯುವ ಬೆಟ್ಟವೊಂದಿದೆ. ಇಲ್ಲಿ ಅವರು ವೇದಕೋಶ ಮಂಥನ ಎಂಬ ಯಜ್ಞವನ್ನು ಪ್ರಾರಂಭಿಸಿದರು. ಈ ಯಜ್ಞದ ಪ್ರಕ್ರಿಯೆಗಳೆಂದರೆ ವೇದಗಳ ವಿಶ್ಲೇಷಣೆ, ದೇವತೆಗಳಿಗೆ ನಮ್ಮ ಋಣವನ್ನು ಖಾತರಿಪಡಿಸುವುದು ಹಾಗೂ ಅಗ್ನಿಯ ಅನೇಕ ಅಂಶಗಳನ್ನು ವಿವರಿಸು ವುದು.

ನಾಯನರು ಹಾಗೂ ಅವರ ಪತ್ನಿ ವಿಶಾಲಾಕ್ಷಮ್ಮ (ಅಮ್ಮ) ಹಗಲು ವೇಳೆ ಧ್ಯಾನದಲ್ಲಿರುತ್ತಿದ್ದರು. ಸಂಜೆಯ ಹೊತ್ತು ವಿದ್ವಾಂಸ ರು ಸೇರಿ ಚರ್ಚಾಕೂಟವನ್ನೇರ್ಪಡಿಸುತ್ತಿದ್ದರು. ಗೋಕರ್ಣ ವಿದ್ಯಾಪೀಠವನ್ನು ಗಣೇಶ ಶಾಸ್ತ್ರಿ ಎಂಬುವವರು ಪ್ರಾರಂಭಿಸಿದ್ದರು. ಅವರಿಗೆ ಹೊಸ್ಮನ ಎಂಬ ಬಿರುದನ್ನು ನೀಡಲಾಗಿತ್ತು.

ವಿಘ್ನೇಶ್ವರ ಭಡತಿ ಎಂಬುವರು ಅವರ ಅಳಿಯ. ಅವರು ಮೇಧಾವಿ, ಬುದ್ಧಿವಂತ ಹಾಗೂ ನಮ್ರ ಯುವಕ ಮತ್ತು ಅವರನ್ನು ಗಣೇಶ ಭಟ್ ಎಂದೂ ಕರೆಯುತ್ತಿದ್ದರು. ಅವನು ಮೊದಲಿಗೆ ವೇದಾಧ್ಯಯನವನ್ನು ಮುಗಿಸಿ ನಂತರ ಕಾವ್ಯವನ್ನು ಅಧ್ಯಯನ ಮಾಡಿದನು. ಆಗಾಗ್ಗೆ ಧ್ಯಾನವನ್ನೂ ಮಾಡುತ್ತಿದ್ದನು. ನಾಯನರ ಆಗಮನದ ನಂತರ ಗಣೇಶಭಟ್ಟನ ಈ ಕ್ಷೇತ್ರದಲ್ಲಿನ ಬೆಳವ ಣಿಗೆಯು ಕ್ಷಿಪ್ರಗತಿಯಲ್ಲಿ ಮುಂದುವರೆಯ ತೊಡಗಿತು.

ರಮಣ ಮಹರ್ಷಿಗಳು ಯಾವಾಗಲೂ, ‘ಮೊದಲು ನೀನು ಧ್ಯಾನ ಮಾಡು. ಅನಂತರ ಸೂಕ್ತ ಸಮಯದಲ್ಲಿ ಗುರುವು ತಾನಾಗಿಯೇ ನಿನ್ನನ್ನು ಹರಸಲು ನಿನ್ನ ಬಳಿ ಬರುವರು. ಅವರನ್ನು ಹುಡುಕಿಕೊಂಡು ಅಲ್ಲಿಲ್ಲಿ ಅಲೆಯ ಬೇಕಿಲ್ಲ’ ಎಂಬುದಾಗಿ ಹೇಳುತ್ತಿದ್ದರು. ಗಣೇಶಭಟ್ಟನ ವಿಷಯದ ಹಾಗೇ ಆಯಿತು. ಇದು ಆಗುವುದಕ್ಕೆ ವಿಶಾಲಾಕ್ಷಿಯ(ಅಮ್ಮನ) ಸಲಹೆಯು ಪ್ರೇರಣೆಯಾಯಿತು.

ಅಮ್ಮ ಹಾಗೂ ನಾಯನರು 1913 ರಲ್ಲಿ ಉಡುಪಿಗೆ ಬಂದರು. ಅಲ್ಲಿ ಅವರು ಕೃಷ್ಣನ ದರ್ಶನವಾಗುತ್ತಿದ್ದಂತೆ ನಿಂತ ಭಂಗಿ ಯ ಅಶುಕವಿತೆಯ ರೀತಿಯಲ್ಲಿ ವಿಷ್ಣುವಿನ ದಶಾವತಾರಗಳ ಬಗ್ಗೆ ಹತ್ತು ಶ್ಲೋಕಗಳನ್ನೊಳ ಗೊಂಡ ಸ್ತೋತ್ರ ವನ್ನು ರಚಿಸಿದರು. ದೇವಸ್ಥಾನದ ಅಧಿಕಾರಿಗಳು ಈ ಅದ್ಭುತವಾದ, ವೈಭವವಾದ ಸ್ತೋತ್ರವನ್ನು ಅಲಿಸಿ ಅತ್ಯಾಶ್ಚರ್ಯವನ್ನುಪಟ್ಟರು. ಈ ಶ್ಲೋಕ ಗಳನ್ನು ಗೀತಮಾಲಾ ಪುಸ್ತಕದಲ್ಲಿ, ‘ದಶಾವತಾರ ಗೀತಮ್’ ಎಂದು ಪ್ರಕಟಿಸಲಾಯಿತು.

ಮಹಾ ನಿರ್ವಾಣ
ಈ ಮಧ್ಯೆ ಖರಗಪುರದಲ್ಲಿ ನಾಯನರ ಶಿಷ್ಯರು ನಾಯನರಿಗಾಗಿ ಆಶ್ರಮವೊಂದನ್ನು ನಿರ್ಮಿಸಲು ಒಂದು ವಿಶಾಲವಾದ ಸ್ಥಳ ವನ್ನು ಖರೀದಿಸಿ, ನಾಯನರನ್ನು ಖರಗಪುರಕ್ಕೆ ಬರುವಂತೆ ಒತ್ತಾಯಪಡಿಸತೊಡಗಿದರು. ಅದರಂತೆ 21-09-1935ರಂದು ಖರಗಪುರದೆಡೆಗೆ ಹೊರಟರು. ಅಲ್ಲೇ 25.7.1936 ರಂದು ಗಣಪತಿ ಮುನಿಗಳು ದೇಹ ತೊರೆದರು. ಆಗ ಜತೆಯಲ್ಲಿದ್ದ ಮಗ ಮಹಾ ದೇವನು ದುಃಖದಿಂದ, ‘ಅಪ್ಪಾ, ನನಗೆ ನಿಮ್ಮ ಸಂದೇಶವೇನು?’ ಎಂದು ಗದ್ಗದಿತನಾಗಿ ಕೇಳಿದನು. ನಾಯನರು ಶರೀರ ವನ್ನು ತೊರೆಯುವ ಮೊದಲು ಒಂದು ಕ್ಷಣ ತಡೆದು, ‘ಜಪಧ್ಯಾನಾ ಧಿಕಂ ದೈವತಾರಾಧನಂ ಮಹಾಮನೀಃ (ಜಪ, ಧ್ಯಾನ ಹಾಗೂ ದೇವರ ಪೂಜೆಯು ಅತಿ ಮುಖ್ಯ, ಮತ್ತು ಅವುಗಳನ್ನು ನಿತ್ಯವೂ ಆಚರಿಸಬೇಕು)’ ಎಂದರು. ಅನಂತರ ನಾಯನರ ಜೀವಾತ್ಮವು ಶಿರದ ಮೂಲಕ ವಿಶ್ವವನ್ನು ಸೇರಿಕೊಂಡಿತು.

ಎಲ್ಲಿ ನಾಯನ?
ದೂರದ ಖರಗಪುರದಲ್ಲಿ 25.7.1936ರಂದು ಗಣಪತಿ ಮುನಿಗಳು ದೇಹ ತೊರೆದರು. ಇತ್ತ ಅರುಣಾಚಲದಲ್ಲಿ ರಮಣ ಮಹರ್ಷಿ ಗಳು ಗಹನವಾದ ಮೌನದಲ್ಲೇ ಕುಳಿತಿದ್ದರು. ಮಾರನೇ ದಿನ ಅವರಿಗೆ ಗಣಪತಿ ಮುನಿಗಳ (ನಾಯನ) ನಿರ್ವಾಣದ ಸಂದೇಶವು
ಟೆಲಿಗ್ರಾಮ್ ಮೂಲಕ ತಲುಪಿತು. ‘ನಾಯನರು ಹೋದರೆ! ನಾಯನರು ಹೋದರು! ಅವರೆಲ್ಲಿಗೆ ಹೋಗುವರು? ಅವರು ಇಲ್ಲಿಗೆ ಬಂದಿರುವರು!’ ಎಂದು ಹೇಳಿ ತಮ್ಮ ಕಣ್ಣುಗಳಲ್ಲಿನ ನೀರನ್ನು ಒರೆಸಿಕೊಳ್ಳಲು ಪಕ್ಕಕ್ಕೆ ತಿರುಗಿದರು.

ಮಾತೇ ಬಾರದ ಬಾಲಕ
ಸೂರ್ಯ ಗಣಪತಿಯು ಆರು ವರ್ಷಗಳ ತನಕ ಸಾಮಾನ್ಯ ಮಗುವಾಗಿ ಬೆಳೆದನು. ಒಂದೇ ಕೊರತೆಯೆಂದರೆ ಅವನಿಗೆ ಮಾತೇ ಬರಲಿಲ್ಲ. ಎಲ್ಲವೂ ಅರ್ಥವಾಗುತ್ತಿದ್ದರೂ ಉತ್ತರಿಸಲು ಮಾತು ಬಾಯಿಂದ ಹೊರಡುತ್ತಿರಲಿಲ್ಲ. ‘ಅಮ್ಮಾ’ ಎಂದು ಕರೆಯಲೂ ಆಗುತ್ತಿರಲಿಲ್ಲ. ಸದಾ ಒಂದೆಡೆ ಕಣ್ಣು ಮುಚ್ಚಿ ಕುಳಿತಿರುತ್ತಿದ್ದನು. ಇದರಿಂದ ತಂದೆ ತಾಯಿಗಳಿಗೆ ಅಪಾರವಾದ ವೇದನೆ ಯಾಗುತ್ತಿತ್ತು. ಅವನಲ್ಲಿ ಯಾವುದೇ ರೋಗ ಲಕ್ಷಣಗಳು ಇರಲಿಲ್ಲವಾದ್ದರಿಂದ ನೃಸಿಂಹ ಶಾಸ್ತ್ರಿಯು ನರಗಳ ಶುದ್ಧೀಕರಣ ಚಿಕಿತ್ಸೆಯ ಭಾಗವಾಗಿ, ಒಂದು ಅರಿಶಿನದ ಕೊಂಬನ್ನು ಬೆಂಕಿಯಲ್ಲಿ ಕಾಯಿಸಿ ಅದನ್ನು ಮಗುವಿನ ತಲೆಯ ಮೇಲೆ ಅಮೃತ ನಾಡಿಯು ಇರುವ ಜಾಗದಲ್ಲಿ ಇಟ್ಟರು. ತಕ್ಷಣ ಮಗುವು ‘ಅಮ್ಮಾ’ ಎಂದು ಮೊಟ್ಟ ಮೊದಲಿಗೆ ಚೀರಿತು.

ಅಲ್ಲಿಂದ ಶುದ್ಧವಾದ ರೀತಿಯಲ್ಲಿ ಮಾತನಾಡುವುದು, ಸುಂದರ ಮತ್ತು ಕಾವ್ಯಾಾತ್ಮಕ ಮಾತುಗಳು ಗಣಪತಿಯ ಬಾಯಿಂದ ಹೊರಬರತೊಡಗಿತು.

ಬಾಲಕ ನುಡಿದ ದುರಂತ ಭವಿಷ್ಯ
ಅಕ್ಟೋಬರ್, 1888, 12ನೇ ತಾರೀಖಿನಂದು ತುಂಬು ಗರ್ಭಿಣಿಯಾದ ಗಣಪತಿಯ ತಾಯಿ ನರಸಾಂಬಳು ಮುತ್ತುಗದ ಎಲೆಗಳಿಂದ ಊಟದ ಎಲೆಗಳನ್ನು ಜೋಡಿಸುತ್ತಾ ಮನೆಯ ವರಾಂಡದಲ್ಲಿ ಕುಳಿತಿದ್ದರು. ಹತ್ತು ವರ್ಷದ ಬಾಲಕ ಗಣಪತಿಯು ಅಲ್ಲೇ
ಹತ್ತಿರ ದಲ್ಲಿನ ಒಂದು ಕಂಭವನ್ನೊೊರಗಿಕೊಂಡು ಯಾವುದೋ ಪುಸ್ತಕವನ್ನು ಓದುತ್ತಿದ್ದನು. ಇದ್ದಕ್ಕಿದ್ದಂತೆ ತಾಯಿಯು ‘ಸೂರ್ಯಮ್!’ ಎಂದು ಕೂಗಿದರು.

ಗಣಪತಿಯು ತಲೆಯನ್ನೆತ್ತದೆ ಕೂಗಿಗೆ ಸ್ಪಂದಿಸಿದನು. ಆಗ ತಾಯಿಯು ‘ಹೆರಿಗೆಗೆ ಈ ದಿನವು ಪ್ರಶಸ್ತವೇ?’ ಎಂದು ಕೇಳಿದರು. ತಾಯಿಯ ಈ ಆತಂಕದ ಪ್ರಶ್ನೆಯ ತಲೆ ಬುಡ ಅರಿಯದೆ ಗಣಪತಿಯು, ಅನುದ್ದೇಶಿತವಾಗಿ ‘ಈ ದಿನ ಹೆರಿಗೆಯಾದಲ್ಲಿ ಅವಳಿ ಮಕ್ಕಳಾಗುವುದು ಹಾಗೂ ತಾಯಿ ಮತ್ತು ಮಕ್ಕಳು ಉಳಿಯುವುದಿಲ್ಲ’ ಎಂದನು. ಗಣಪತಿಯ ಬಾಯಿಂದ ಹೊರಬಂದ
ಮಾತು ದೈವ ವಾಕ್ಯವೇ ಆಗಿತ್ತು. ಅವನ ತಾಯಿಯು ಅವಳಿ ಮಕ್ಕಳಿಗೆ ಜನ್ಮ ನೀಡಿ, ಅವುಗಳೊಂದಿಗೆ ತಾನೂ ಇಹ ಯಾತ್ರೆ ಯನ್ನು ಮುಗಿಸಿದಳು.

ರಮಣ ಮಹರ್ಷಿಗಳ ಶಿಷ್ಯ
ಗಣಪತಿ ಸೂಕ್ತದಲ್ಲಿ ಈಶಪುತ್ರ ಗಣಪತಿಯನ್ನು ಕಾವ್ಯದ ದೈವ ಮತ್ತು ಸಮಸ್ತ ಜ್ಞಾನದ ದೈವ (ಬ್ರಹ್ಮಣಸ್ಪತಿ ಮತ್ತು
ಬೃಹಸ್ಪತಿ)ವೆಂದು ವರ್ಣಿಸಲಾಗಿದೆ. ಗಣಪತಿಯೇ ವ್ಯಾಾಸಮಹರ್ಷಿಗಳು ವೇದವನ್ನು ವಿಭಾಗಿಸಿ ಹೇಳಿದ್ದನ್ನು ಸ್ಫುಟವಾಗಿ ಬರೆದವನು. ಅದೇ ಗಣಪತಿಯೇ ಸ್ವಯಂ ನೃಸಿಂಹಶಾಸ್ತ್ರಿಗಳ ಪುತ್ರ ಸೂರ್ಯ ಗಣಪತಿಯಾಗಿ ಅವತರಿಸಿ ನಂತರ ವಿಶ್ವಗುರುಗಳಾದ, ಅರುಣಾಚಲದ ಶ್ರೀ ರಮಣ ಮಹರ್ಷಿಗಳ ಶಿಷ್ಯರಾದವರು.

ಗಣಪತಿಯು ಯುವ ಮುನಿಗೆ ಮಹರ್ಷಿ ಎಂದು ಘೋಷಿಸಿ ಮತ್ತು ರಮಣ ಎಂಬ ಹೆಸರನ್ನಿಟ್ಟನು. ಈ ಸಮಯದಲ್ಲಿ ಗಣಪತಿ ಭಗವಾನನು ಗಣಪತಿ ಮುನಿಯ ರೂಪದಲ್ಲಿ ಬಂದು ರಮಣರಿಗೆ ಲಿಪಿಕಾರ (ಬರಹಗಾರ)ರಾದರು. ಅವರು ಶ್ರೀ ರಮಣ ಗೀತ
ಮತ್ತು ಅನೇಕ ಗ್ರಂಥಗಳನ್ನು ರಚಿಸಿದರು.

ಕಪಾಲ ಭೇದ ಸಿದ್ಧಿ
ಕುಂಡಲಿನೀ ಶಕ್ತಿಯನ್ನು ಮೂಲಾಧಾರ ಚಕ್ರದಲ್ಲಿ ಜಾಗೃತಿಗೊಳಿಸಬೇಕು ಮತ್ತು  ಅದನ್ನು ಮೂಲಾಧಾರ ಹಾಗೂ
ಸಹಸ್ರಾರ ಚಕ್ರಗಳ ನಡುವೆ ಇರುವ ಆರು ಚಕ್ರಗಳನ್ನು ದಾಟಿ ಸಹಸ್ರಾರ ಚಕ್ರದಲ್ಲಿ ಕುಂಡಲಿನೀ ಶಕ್ತಿಯನ್ನು ಸೇರಿಸಬೇಕು. ಈ ಸಾಧನೆಯ ಮೂಲಕ ಕಟ್ಟ ಕಡೆಗೆ ಗಣಪತಿ ಮುನಿಗಳು ಕಪಾಲ ಭೇದ ಸಿದ್ಧಿಯನ್ನು ಸಾಧಿಸಿದರು. (ಮೆದುಳಿನ ಹೊರಭಾಗದ
ಹೊದಿಕೆಯನ್ನು ಭೇದಿಸಿ ಅದರೊಳಗಿರುವ ಬಂಧನ ಶಕ್ತಿಯನ್ನು ವಿಮೋಚನೆಗೊಳಿಸುವ ಶಕ್ತಿಯೇ ಕಪಾಲ ಭೇದ).
ಕುಂಡಲಿನಿಯಿಂದ ಸಹಸ್ರಾರದೆಡೆಗಿನ ಆರೋಹದ ವಿಧಾನವನ್ನು ಗಣಪತಿ ಮುನಿಗಳು ‘ಗುರು ಗೀತಮ್’ ಕೃತಿಯಲ್ಲಿ
ವಿವರಿಸಿದ್ದಾರೆ.